ಫೈಝಾಬಾದ್, ಜೂ. 27: ಉತ್ತರಪ್ರದೇಶದಲ್ಲಿ ಧಾರ್ಮಿಕ ಸೌಹಾರ್ದಕ್ಕೆ ಹಿಂದೂ ಸಮುದಾಯ ಮಾದರಿಯಾಗಿದೆ. ಫೈಝಾಬಾದ್ ಜಿಲ್ಲೆಯಲ್ಲಿ ಹಿಂದೂಗಳು ಮುಸ್ಲಿಮರಿಗೆ ಕಬರಸ್ಥಾನಕ್ಕಾಗಿ ಜಮೀನು ನೀಡಿ ಆದರ್ಶ ಮೆರೆದಿದ್ದಾರೆ. ಇಲ್ಲಿದ್ದ ಕಬರಸ್ಥಾನಕ್ಕೆ ಹತ್ತಿರವಿದ್ದ ಶ್ಮಶಾನದ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ.ಈ ಜಮೀನಿನ ಕುರಿತು ಇತ್ತೀಚೆಗೆ ಎರಡು ಸಮುದಾಯಗಳ ನಡುವೆ ವಿವಾದವಿತ್ತು. ಈಗ ಹಿಂದೂ ಸಮುದಾಯದವರು ಸೇರಿ ಅದನ್ನು ಬಗೆಹರಿಸಿದ್ದಾರೆ.
ಇಲ್ಲಿನ ಗೋಸಾಯ್ಗಂಜ್ ನ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ತಿವಾರಿಯವರ ನೇತೃತ್ವದಲ್ಲಿ 50 ಸೆಂಟ್ಸ್ ಗೂ ಅಧಿಕ ಸ್ಥಳವನ್ನು ಐಚ್ಛಿಕ ದಾನವಾಗಿ ಕಬರಸ್ಥಾನಕ್ಕೆ ನೀಡಲಾಗಿದೆ. ಸೂರ್ಯಕುಮಾರ್ ಜಿಂಗಲ್ ಮಹಾರಾಜ್ ಎನ್ನುವ ಆಧ್ಯಾತ್ಮಿಕ ನೇತಾರರನ್ನೊಳಗೊಂಡ ಒಂಬತ್ತು ಮಂದಿಯ ಟ್ರಸ್ಟ್ ನ ಅಧೀನದಲ್ಲಿ ಜಮೀನನ್ನು ಗೋಸಾಯ್ ಗಂಜ್ ಕಬರಸ್ಥಾನ ಸಮಿತಿಗೆ ರಿಜಿಸ್ಟರ್ ಮಾಡಿಕೊಡಲಾಗಿದೆ. ಜೂನ್ 20ಕ್ಕೆ ಸಬ್ ರಿಜಿಸ್ಟ್ರಾರ್ ಎಸ್. ಬಿ. ಸಿಂಗ್ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಕೊಟ್ಟಿದ್ದಾರೆ. ಎರಡು ಸಮುದಾಯಗಳು ಸೌಹಾರ್ದದಲ್ಲಿ ಜೊತೆಗೂಡಿ ಬದುಕು ನಡೆಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಇಂದ್ರಪ್ರತಾಪ್ ತಿವಾರಿ ಹೇಳಿದ್ದಾರೆ.












