ಅಮೆರಿಕ ಮಧ್ಯಂತರ ಚುನಾವಣೆ: ಟ್ರಂಪ್‌ರ ರಿಪಬ್ಲಿಕನ್ ಪಕ್ಷಕ್ಕಿಂತ ಡೆಮಾಕ್ರಟ್‌ಗಳು ಮುನ್ನಡೆ

0
202

ಸನ್ಮಾರ್ಗ ವಾರ್ತೆ

ಅಮೆರಿಕದ ಮಧ್ಯಂತರ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ನರಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ನಿಯಂತ್ರಣವನ್ನು ಡೆಮಾಕ್ರಟ್‌ಗಳು ಕೈವಶ ಮಾಡಿಕೊಳ್ಳುವ ನಿರೀಕ್ಷೆಯಿದೆ ಮತ್ತು ಸೆನೆಟ್ ಕಣದಲ್ಲೂ ಮುನ್ನಡೆ ಸಾಧಿಸಿದ್ದಾರೆ. ಮಂಗಳವಾರ ಮತದಾನ ನಡೆದಿತ್ತು.

ಮತದಾನಕ್ಕೂ ಮುನ್ನ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು 100 ಸದಸ್ಯರ ಸೆನೆಟ್‌ನಲ್ಲಿ 53:47 ರ ಬಹುಮತವನ್ನು ಹೊಂದಿತ್ತು. ಕಾಂಗ್ರೆಸ್‌ನ 435 ಸದಸ್ಯರ ಕೆಳಮನೆಯಲ್ಲಿ 219:214 ರ ಕ್ಷೀಣ ಬಹುಮತವನ್ನು ಹೊಂದಿತ್ತು.

ಬುಧವಾರ ಭಾರತೀಯ ಕಾಲಮಾನ ಬೆಳಿಗ್ಗೆ 9.30 ರ ವೇಳೆಗೆ, ಡೆಮಾಕ್ರಟ್‌ಗಳು ಕೆಳಮನೆಯಲ್ಲಿ ಕನಿಷ್ಠ 244 ಸ್ಥಾನಗಳ ಬಹುಮತವನ್ನು ಪಡೆಯಲಿದ್ದಾರೆ ಎಂದು ಹಲವಾರು ಅಮೆರಿಕನ್ ಸುದ್ದಿ ಸಂಸ್ಥೆಗಳು ಅಂದಾಜಿಸಿವೆ.

ಈ ಚುನಾವಣೆಯನ್ನು ಅಧ್ಯಕ್ಷರಾಗಿ ಟ್ರಂಪ್ ಅವರ ಎರಡನೇ ಅವಧಿಯ ಮೇಲಿನ ತೀರ್ಪು ಎಂದು ನೋಡಲಾಗುತ್ತಿದೆ. ಜೀವನ ವೆಚ್ಚದ ಏರಿಕೆ, ಸುಂಕಗಳಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತಿಕ ತೈಲ ಬೆಲೆಯನ್ನು ಹೆಚ್ಚಿಸಿದ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಜನಪ್ರಿಯತೆಯ ರೇಟಿಂಗ್‌ಗಳಿಗೆ ಧಕ್ಕೆಯಾಗಿದೆ.

ಐತಿಹಾಸಿಕವಾಗಿ, ಅಧಿಕಾರದಲ್ಲಿರುವ ಅಧ್ಯಕ್ಷರ ಪಕ್ಷವು ಎರಡನೇ ಅವಧಿಯಲ್ಲಿ ಎರಡೂ ಮನೆಗಳಲ್ಲಿ ಬಹುಮತವನ್ನು ಕಳೆದುಕೊಳ್ಳುತ್ತದೆ. ಸಂಸತ್ತಿನ ಮೇಲೆ ಡೆಮಾಕ್ರಟ್‌ಗಳ ನಿಯಂತ್ರಣವು ಟ್ರಂಪ್ ಆಡಳಿತದ ಉಳಿದ ಎರಡು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಪರಿಶೀಲನೆ ಮತ್ತು ನಿಗಾಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

ಪ್ರಚಾರದ ಸಮಯದಲ್ಲಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಬದಲಿಗೆ ತಾವೇ ಬ್ಯಾಲಟ್‌ನಲ್ಲಿ ಅಭ್ಯರ್ಥಿಯಾಗಿದ್ದೇವೆ ಎಂದು ಕಲ್ಪಿಸಿಕೊಂಡು ಮತ ಚಲಾಯಿಸುವಂತೆ ಟ್ರಂಪ್ ಮತದಾರರನ್ನು ಕೋರಿದ್ದರು.
ಬುಧವಾರದ ಟ್ರೆಂಡ್‌ಗಳು ವ್ಯತಿರಿಕ್ತ ಫಲಿತಾಂಶವನ್ನು ತೋರಿಸುತ್ತಿದ್ದಂತೆ, ತಾವು ಬ್ಯಾಲಟ್‌ನಲ್ಲಿ ಅಭ್ಯರ್ಥಿಯಾಗಿದ್ದರೆ ರಿಪಬ್ಲಿಕನ್ನರು “ಅದ್ಭುತ ಜಯ (Landslide) ಗಳಿಸುತ್ತಿದ್ದರು” ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

36 ರಾಜ್ಯಗಳು ಮತ್ತು ಮೂರು ಪ್ರದೇಶಗಳಲ್ಲಿ ಗವರ್ನರ್‌ಗಳನ್ನು ಆಯ್ಕೆ ಮಾಡುವ ಚುನಾವಣೆಯ ಎಣಿಕೆಯೂ ನಡೆಯುತ್ತಿತ್ತು. ಡೆಮಾಕ್ರಟ್ ನಾಯಕಿ ಕೀಶಾ ಲ್ಯಾನ್ಸ್ ಬಾಟಮ್ಸ್ ಜಾರ್ಜಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ ಯಾವುದೇ ರಾಜ್ಯದ ಗವರ್ನರ್ ಆಗಿ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಮಹಿಳೆ ಎನಿಸಿಕೊಂಡಿದ್ದಾರೆ.

ದೀರ್ಘಕಾಲದಿಂದ ರಿಪಬ್ಲಿಕನ್ ಕೋಟೆಯಾಗಿದ್ದ ಟೆಕ್ಸಾಸ್‌ನ ಗವರ್ನರ್ ಚುನಾವಣೆಯಲ್ಲೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರು. ರಾಜ್ಯದ ಎರಡು ಸೆನೆಟ್ ಸ್ಥಾನಗಳಲ್ಲಿ ಒಂದಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮತ್ತು ಅಲ್ಲಿನ ಬಹುಪಾಲು ಹೌಸ್ ಕ್ಷೇತ್ರಗಳಲ್ಲಿ ಡೆಮಾಕ್ರಟ್‌ಗಳು ಮುನ್ನಡೆ ಸಾಧಿಸಿದ್ದರು.