
ಮೀರತ್, ಡಿ. 28: ಪೊಲೀಸ್ ಉದ್ದೇಶ ಪೂರ್ವ ಗುಂಡು ಹಾರಿಸಿದರು. ಮುಸ್ಲಿಮರಾಗಿರುವುದು ಅದಕ್ಕೆ ಕಾರಣ. ಕೊಲ್ಲಲ್ಪಟ್ಟಿರುವವರಲ್ಲಿ ಮೂರು ಮಂದಿಯ ಎದೆಗೆ ಗುಂಡು ತಾಗಿದೆ. ಜನರ ಗುಂಪನ್ನು ಚದುರಿಸುವುದಕ್ಕಾದರೆ ಸೊಂಟದ ಕೆಳಗೆ ಗುಂಡು ಹಾರಿಸಬೇಕು. ಆದರೆ, ಇದು ಕೊಲ್ಲಲಿಕ್ಕಾಗಿಯೇ ಆಗಿತ್ತು ಎನ್ನುವುದು ಗೋಚರಿಸುತ್ತದೆ. ನಡುಗುವ ಮೀರತ್ನ ಉಸಿರು ಬಿಗಿ ಹಿಡಿದ ಮಾತುಗಳಿವು. ಯಾರೆಲ್ಲ ಕೊಲ್ಲಲ್ಪಟ್ಟರು ಎಂದು ಹೇಳುವುದಕ್ಕೂ ಸಂಬಂಧಿಕರು ಹೆದರುತ್ತಿದ್ದಾರೆ. ಇದೇ ನಗರ ವ್ಯಾಪ್ತಿಯಲ್ಲಿ 1987ರಲ್ಲಿ ಹಾಷಿಂ ಪುರ ಸಾಮೂಹಿಕ ಹತ್ಯೆ ಹಿರಿಯ ಮನಸ್ಸಿನಲ್ಲಿ ಈಗಲೂ ಜೀವಂತವಾಗಿದೆ. ಅಂದು 42 ಮುಸ್ಲಿಮರನ್ನು ಸಶಸ್ತ್ರ ಪೊಲೀಸ್ ವಿಭಾಗ ಕೋಮುಗಲಭೆಯ ನಡುವೆ ಗುಂಡು ಹಾರಿಸಿ ಕೊಂದು ಹಾಕಿತ್ತು. ಈ ತಿಂಗಳು 20ಕ್ಕೆ ಪೌರತ್ವತಿದ್ದು ಕಾನೂನು ವಿರುದ್ಧ ನಡೆದ ಹೋರಾಟದ ಮರೆಯಲ್ಲಿ ಈ ಬಾರಿ ಐವರು ಯುವಕರು ಜೀವ ಕಳಕೊಂಡರು. ಆದರೆ ಪೊಲೀಸರು ಗುಂಡು ಹಾರಿಸಿಲ್ಲ ಎಂದು ಉತ್ತರಪ್ರದೇಶ ಡಿಜಿಪಿ ಒ.ಪಿ. ಸಿಂಗ್ ಹೇಳುತ್ತಿದ್ದಾರೆ.
ಆಟೋ ಚಲಾಯಿಸಲು ಹೊರಟ: ಮರಳಿ ಬರಲಿಲ್ಲ:
20 ವರ್ಷದ ಮುಹಮ್ಮದ್ ಆಸಿಫ್ ಎಂದಿನಂತೆ ತನ್ನ ಆಟೋ ರಿಕ್ಷಾ ಓಡಿಸಲು ಕಳೆದ ಶುಕ್ರವಾರ ಮನೆಯಿಂದ ಹೊರಟರು. ಆದರೆ ಮರಳಿ ಬರಲಿಲ್ಲ. ಫಕ್ರುದ್ದೀನ್ ಅಲಿ ಅಹ್ಮದ್ ನಗರದ ತನ್ನ ಚಿಕ್ಕ ಮನೆಯಲ್ಲಿ ಕೂತು ತನ್ನ ಮಗನ ದಾರುಣ ಅಂತ್ಯದ ಕುರಿತು ಹೇಳಿದರು. ಹಾಪುರ್ ರಸ್ತೆಯಲ್ಲಿ ಎದೆಯ ಎಡಭಾಗಕ್ಕೆ ಗುಂಡು ತಾಗಿತ್ತು ಆಸಿಫ್ಗೆ ಮದುವೆಯಾಗಿಲ್ಲ. ಘಟನೆ ತಿಳಿದು ಪೊಲೀಸ್ ಠಾಣೆಗೆ ಹೋದರೂ ಕುಟುಂಬದವರನ್ನು ಹತ್ತಿರ ಬಿಡಲಿಲ್ಲ. ನಂತರ ಶನಿವಾರ ಸಂಜೆ ನಾಲ್ಕು ಗಂಟೆಗೆ ಮಗನ ಮೃತದೇಹ ಅವರಿಗೆ ಬಿಟ್ಟುಕೊಡಲಾಯಿತು. ತಮ್ಮ ಪರಿಸರದ ಇನ್ನೊಬ್ಬ ಯುವಕ ಕೂಡ ಕೊಲ್ಲಲ್ಪಟ್ಟದ್ದರಿಂದ ಮೃತದೇಹ ಮನೆಗೆ ಕೊಂಡು ಹೋಗಲು ಬಿಡಲಿಲ್ಲ. ಆದ್ದರಿಂದ ಪೊಲೀಸರು ಹೇಳಿದಂತೆ ಇನ್ನೊಂದು ಸ್ಥಳದಲ್ಲಿ ಮೃತದೇಹ ದಫನ ಮಾಡಲಾಯಿತು. ಆಸಿಫ್ ದಾಳಿಗೆ ನೇತೃತ್ವ ನೀಡಿದ್ದನೆಂದು ಪೊಲೀಸರು ಆರೋಪಿಸಿದ್ದಾರೆ. ಅವನ ಆಧಾರ್ ಕಾರ್ಡಿನ ದಿಲ್ಲಿ ವಿಳಾಸವನ್ನು ತೋರಿಸಿ ಈತ ದಿಲ್ಲಿಯಿಂದ 25-30 ಮಂದಿಯನ್ನು ಕರೆ ತಂದಿದ್ದಾನೆ ಎಂದು ಪೊಲೀಸರು ಹೇಳಿದರು. ಇದುವರೆಗೆ ಮಗನ ವಿರುದ್ಧ ಯಾವ ಕೇಸೂ ಇರಲಿಲ್ಲ ಎಂದು ಅಸಹಾಯಕತೆಯಿಂದ ಅವರು ಹೇಳಿದರು.
ತಲೆಸೀಳಿದ ಗುಂಡು:
ಹತ್ತಿರದ ಬೀದಿಯಲ್ಲಿ 80 ವರ್ಷದ ಹಸೀಬ್ ಅನ್ಸಾರಿಯವರದ್ದು, ಈದುಲ್ ಹಸನ್ರ ಅದೇ ನೋವು. ಅನ್ಸಾರಿಯ 24 ವರ್ಷದ ಪುತ್ರ ಅಲೀಂ ಅನ್ಸಾರಿ ತಲೆಯನ್ನು ಗುಂಡು ಸೀಳಿಹಾಕಿತು. ಅವರು ಮೃತಪಟ್ಟರು. ತಂದೂರಿ ರೊಟ್ಟಿ ಮಾಡುವ ಕೆಲಸ ಅಲೀಂರದ್ದಾಗಿತ್ತು. ಧಾಬದಿಂದ ಕೆಲಸ ಮುಗಿಸಿ ಮರಳುವಾಗ ಗುಂಡು ತಗಲಿತ್ತು. ಈತನಿಗೆ ಮದುವೆಯಾಗಿದೆ. ಪೌರತ್ವ ತಿದ್ದುಪಡಿ ಕಾನೂನು ಏನೆಂದೂ ತನಗೆ ಗೊತ್ತಿಲ್ಲ. ಅಲೀಮ್ನ ಹಣೆಗೆ ಗುಂಡು ಬಿತ್ತು ಎಂದು ಸಹೋದರ ಸಲಾವುದ್ದೀನ್ ಅನ್ಸಾರಿ ಹೇಳಿದರು. ಅಲೀಮ್ರ ಮೃತದೇಹವನ್ನು ತುಂಬ ತಡವಾಗಿ ಪೊಲೀಸರು ಬಿಟ್ಟುಕೊಟ್ಟರು.
ಕಂಡವರಿಗೆ ಗುಂಡು:
ಲಿಸಾದಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಶೀದ್ ನಗರದ ಬೀದಿಯಲ್ಲಿ ಪೊಲೀಸರು ಗುಂಡು ಹಾರಿಸಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದವರಿಗೂ ಗುಂಡು ಹಾರಿಸಲಾಯಿತು. ಕೂಲಿ ಕೆಲಸ ಮಾಡುತ್ತಿದ್ದ ಝಹೀರ್ ಅಹ್ಮದ್(55) ಇಲ್ಲಿ ಗುಂಡಿಗೆ ಬಲಿಯಾದರು. ಪತ್ನಿ ಮತ್ತು 22 ವರ್ಷದ ಮಗಳು ಮದುವೆಗೆಂದು ಬುಲಂದ್ ಶಹರ್ಗೆ ಹೋದ ಸಂದರ್ಭದಲ್ಲಿ ಝಹೀರ್ ಗುಂಡಿಗೆ ಬಲಿಯಾದರು. ಬೀಡಿ ಖರೀದಿಸಲು ಮನೆಯಿಂದ ಹೊರ ಬಂದಾಗ ಗುಂಡು ಬಂದು ಅಪ್ಪಳಿಸಿದೆ ಎಂದು ಘಟನೆಯನ್ನು ನೋಡಿದ ನೆರೆಮನೆಯ ಇಮ್ರಾನ್ ಹೇಳಿದರು.
ಅವರು ಅನಾಥರು:
ಫಿರೋಝ್ ನಗರದ ಮುಹಮ್ಮದ್ ಆಸಿಫ್(33) ಮೃತಪಟ್ಟದ್ದು ಅನಿರೀಕ್ಷಿತವಾಗಿತ್ತು. ಕೆಲಸ ಮಾಡುವ ಅಂಗಡಿಯಿಂದ ಮರಳುವಾಗ ಎದೆಗೆ ಗುಂಡು ತಾಗಿತು. ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು. ಪತ್ನಿ ಮೂರು ಮಕ್ಕಳು ಆಸಿಫ್ಗಿದ್ದಾರೆ. ಒಂದು ಮಗುವಿಗೆ ಹತ್ತು ವರ್ಷ. ಇನ್ನೊಂದಕ್ಕೆ ಮೂರು, ಕೊನೆಯ ಮಗುವಿಗೆ ಆರು ತಿಂಗಳು. ಪ್ರತಿಭಟನೆ ನಡೆಯದಿದ್ದ ಟ್ಯೂಬ್ವೆಲ್ ತಿರಾಹ ರಸ್ತೆಯಲ್ಲಿ ಹಳೆ ವಸ್ತುಗಳು ಮಾರುವ ಮುಹ್ಸಿನ್(28) ಕೊಲ್ಲಲ್ಪಟ್ಟರು. ಸಂಜೆ ನಾಲ್ಕು ಗಂಟೆಗೆ ಪಶುಗೆ ಆಹಾರ ತರಲು ಸಂತೆಗೆ ಹೋಗಿದ್ದ ಮುಹ್ಸಿನ್ರ ಎದೆಗೆ ಗುಂಡು ಬಿದ್ದಿತ್ತು ಎಂದು ಅವರ ಅಣ್ಣ ಮುಹಮ್ಮದ್ ಇಮ್ರಾನ್ ಹೇಳಿದರು.
ಸುತ್ತುವರಿದ ಪೊಲೀಸರು:
ಇದೇ ವೇಳೆ 253 ಮಂದಿಯ ವಿರುದ್ಧ ಪೊಲೀಸರು 15 ಎಫ್ಐಆರ್ ದಾಖಲಿಸಿದರು. ಗಲಭೆಕೋರರು ಎಂದು ಹೇಳಿ ಹಲವರ ಫೋಟೊಗಳನ್ನು ಬೀದಿಗಳಲ್ಲಿ ಅಂಟಿಸಲಾಗಿದೆ. ರಾತ್ರೆ ಪೊಲೀಸರು ಬಲಪ್ರಯೋಗಿಸಿ ಕರೆದುಕೊಂಡು ಹೋಗುವ ಹೆದರಿಕೆಯಲ್ಲಿ ನಾವು ದಿನದೂಡುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಪೌರತ್ವ ಪಟ್ಟಿ ತಿದ್ದುಪಡಿ ಕಾನೂನು ವಿರುದ್ಧ ದೇಶ ವ್ಯಾಪಕ ಪ್ರತಿಭಟನೆ ಹರಡುವಾಗಲೂ ಅತಿಹೆಚ್ಚು ಮಂದಿ ಉತ್ತರ ಪ್ರದೇಶದಲ್ಲಿ ಕೊಲ್ಲಲ್ಪಟ್ಟರು. 19 ಮಂದಿ ಎನ್ನಲಾಗುತ್ತಿದೆ. 21 ಮಂದಿ ಎಂದೂ ಹೇಳಲಾಗುತ್ತಿದೆ. 800 ಮಂದಿಯನ್ನು ಬಂಧಿಸಲಾಗಿದೆ, ಸಾವಿರಾರು ಮಂದಿಯ ವಿರುದ್ದ ಕೇಸು ದರ್ಜು ಮಾಡಲಾಗಿದೆ. ಕಾನ್ಪುರದಲ್ಲಿ 21,500 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.











