ಕೊರೋನ ಇದೊಂದು ಸಾಂಕ್ರಾಮಿಕ ಮಹಾಮಾರಿ. ಲೋಕವಿಡೀ ವ್ಯಾಪಿಸಿದ್ದೂ ಹೌದು. ಇದರ ಬಗ್ಗೆ ವರ್ತಕರು ಹೆಚ್ಚು ತಿಳುವಳಿಕೆ ಉಳ್ಳವರಾಗಿದ್ದಾರೆ .ಅವರೇನೂ ಅಜ್ಙಾನಿಗಳಲ್ಲ. ಈ ರೋಗವು ಹರಡಬಾರದೆಂಬ ಆಗ್ರಹವು ವ್ಯಾಪಾರಿಗಿದೆ. ಗ್ರಾಹಕರ ಬಗ್ಗೆ ತುಂಬಾ ಕಾಳಜಿ ಉಳ್ಳವರಾಗಿದ್ದಾರೆ. ಗ್ರಾಹಕರಿಗೆ ಜನಸಾಮಾನ್ಯರಿಗೆ ರೋಗ ತಗುಲಬಾರದೆಂಬ ಉದ್ದೇಶದಿಂದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಾರೆ. ಕೊರೋನದ ನಡುವೆಯೂ ಕಾಳಸಂತೆ ಮಾಡದೆ ಜನರಿಗೆ ಅಗತ್ಯ ವಸ್ತು ಪೂರೈಸುತ್ತಾರೆ.ಅವರನ್ನೂ ಕೊರೋನ ವಾರಿಯರ್ಸ್ ಎಂದರೆ ತಪ್ಪಾಗಲಾರದು.
ಬೆರಳೆಣಿಕೆಯಷ್ಟು ಮಂದಿ ನಿರ್ಲಕ್ಷಿಸುವವರೂ ಇದ್ದಾರೆ ಎಂಬುದು ಸುಳ್ಳಲ್ಲ. ಅದು ಅವರ ಜ್ಞಾನದ ಕೊರತೆ ಬಿಡಿ. ಅವರ ವೈಯಕ್ತಿಕ ವಿಚಾರ
ಇದರ ಹೊರತು ಕೊರೊನಾವನ್ನು ವ್ಯಾಪಾರಿಗಳೇ ಹಬ್ಬಿಸುತ್ತಾರೆ ಎಂಬಂತೆ ಸಮಾಜದಲ್ಲಿ ಬಿಂಬಿಸಲಾಗುತ್ತಿದೆ. ಅವರನ್ನು ಅಪರಾಧಿಗಳಂತೆ ಟ್ರೀಟ್ ಮಾಡುತ್ತಾರೆ. ಹತ್ತು ನಿಮಿಷ ಹೆಚ್ಚು ಅನಿವಾರ್ಯ ಕಾರಣಗಳಿಂದ ಬಾಗಿಲು ಓಪನ್ ಕಂಡಲ್ಲಿ ಬೈಗುಳ, ಷೆಟರ್ಗಳಿಗೆ ಲಾಠಿಯಿಂದ ಬಡಿಯುವುದೂ ಮಾಡುತ್ತಾರೆ. ಅಂಗಡಿಗಳನ್ನು ಮುಚ್ಚಿಸಿ ವ್ಯಾಪಾರಿಗಳನ್ನು ಮನೆಯಲ್ಲಿ ಕೂರಿಸಲಾಗುತ್ತದೆ.
…….
ಸರಕಾರಿ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಇಂತಹ ತೀರ್ಮಾನ ನೀಡುತ್ತಾರೆ. ಮಾರ್ಗಸೂಚಿ ಹೊರಡಿಸುತ್ತಾರೆ. ಈ ಎಲ್ಲಾ ಉದ್ಯೋಗಸ್ಥರಿಗೆ ಮನೆಯಲ್ಲಿದ್ದುಕೊಂಡೇ ಮಾಸಿಕ ವೇತನ ಇವರ ಖಾತೆಗೆ ಜಮೆಯಾಗುತ್ತದೆ. ವ್ಯಾಪಾರಿಗಳನ್ನು ಇವರೇ ನಿಯಂತ್ರಿಸುತ್ತಾ ಅಗತ್ಯ ವಸ್ತುಗಳು, ಅನಗತ್ಯ ವಸ್ತುಗಳು D ಕೆಟಗರಿ, B ಕೆಟಗರಿ ಹೀಗೆ ವಿಂಗಡಿಸುತ್ತಾರೆ. ಮತ್ತು ಪಾಸಿಟಿವ್ ನೆಗೆಟಿವ್ ಅಂಕಿ ಅಂಶಗಳನ್ನು ಮುಂದಿಟ್ಟು ಅಂಗಡಿ ಮುಂಗಟ್ಟು ತೆರೆಯದಂತೆ ನಿರ್ಬಂಧಿಸುತ್ತಾರೆ.
…….
ಇಷ್ಟೆಲ್ಲಾ ಆಗುವಾಗ ವರ್ತಕರ ಸಂಘದ ಅಥವಾ ವ್ಯಾಪಾರಿ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಎಲ್ಲಿದೆ ? ಎಷ್ಟಿದೆ ? ಎಂಬುದು ಚಿಂತಿಸಬೇಕಾಗಿದೆ.
ವ್ಯಾಪಾರಿಗಳ ನಿಯೋಗವು ಜಿಲ್ಲಾಡಳಿತಗಳೊಂದಿಗೆ ಇಂಥಹ ತಲೆ-ಬುಡವಿಲ್ಲದ ನಿಯಮಗಳಿಗೆ ಆಕ್ಷೇಪಿಸಬೇಕು.
…,.
ಇದು ಹಾಗಲ್ಲ. ಕೆಲವರು ತಮ್ಮಿಚ್ಛೆಯಂತೆ ಅವರಿಗೆ ಯಾವ ತೊಂದರೆಯೂ ಆಗದಂತೆ ತೀರ್ಮಾನಿಸ್ತಾರೆ. ಇದರಿಂದ ವ್ಯಾಪಾರಿಗಳು ಸಂಕಷ್ಟಕ್ಕೀಡಾಗ್ತಾರೆ. ಬಾಡಿಗೆ ಚಾಲ್ತಿಯಲ್ಲಿರ್ತದೆ, ಕೆಲಸದವರಿಗೆ ಸಂಬಳ ನೀಡಬೇಕಾಗ್ತದೆ, ಕರೆಂಟ್ ಬಿಲ್ ಕಟ್ಟಬೇಕು. ಇದರಲ್ಲಿ ರಿಯಾಯಿತಿ ಇಲ್ಲ. ಕಳೆದ ಲಾಕ್ಡೌನ್ ನಲ್ಲಿ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದವರು ಕೂಡ ಈ ಬಾರಿ ಒಪ್ಪುವುದಿಲ್ಲ. ಇದರಿಂದ ವ್ಯಾಪಾರಿಗಳ ಸಂಕಷ್ಟ ಹೇಳ ತೀರದು.
ಇನ್ನು ಮೂರನೇ ಅಲೆ ನಾಲ್ಕನೇ ಅಲೆ ಅದಕ್ಕಿಂತ ದೊಡ್ಡ ಅಲೆ ಬಂದರೂ ವ್ಯಾಪಾರವನ್ನು ಮುಚ್ಚಿಸುವಾಗ
ವರ್ತಕರ ಒಗ್ಗಟ್ಟಿನ ಅಗತ್ಯವಿದೆ.
ಸರಕಾರಿ ನೌಕರರಿಗೆ, ಅಧಿಕಾರಿಗಳಿಗೆ, DC, AC, ಸಂಸದ , ಶಾಸಕರಿಗೆ ಇಂತಹ ಸಂದರ್ಭಗಳಲ್ಲಿ ವೇತನ ಕಡಿತಗೊಳಿಸಲಿ. ಆಗ ವರ್ತಕರ , ಜನಸಾಮಾನ್ಯರ ಬವಣೆ ಅವರಿಗೂ ಅರ್ಥವಾಗುತ್ತದೆ.
……
ವೈರಸ್ ಹರಡುವುದು ವ್ಯಾಪಾರಿಗಳಾ ? ಅಂಗಡಿಗಳಿಂದಲೇ ರೋಗ ವ್ಯಾಪಕವಾಗುವುದಾ ? ವ್ಯಾಪಾರಿಗಳ ಅಭಿಪ್ರಾಯ ಸಲಹೆಗಳನ್ನು ಸ್ವಲ್ಪ ಮಟ್ಟಿಗೆ ಕೇಳಬಾರದಾ ?
ವ್ಯಾಪಾರಿಗಳು ತಮ್ಮ ಪತ್ನಿ ಮಕ್ಕಳು ಕುಟುಂಬವನ್ನು ಸಾಕಬೇಕು, ಸಾಲದ ಕಂತು ಕಟ್ಟಬೇಕು, ಲೋನ್ ಕಟ್ಟಬೇಕು, ಮಕ್ಕಳ ಫೀಸ್ ಪಾವತಿಸಬೇಕು. ಇಷ್ಟೆಲ್ಲಾ ಹಕ್ಕು ಬಾಧ್ಯತೆಗಳಿರುವಾಗ ವ್ಯಾಪಾರಿಗಳ ಮೇಲೆ ಗೂಬೆ ಕೂರಿಸಿ ಏಕೆ ಟಾರ್ಗೆಟ್ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ.
…..
ರಾಜಕಾರಣಿಗಳ, ಶ್ರೀಮಂತರ ಸಭೆ ಸಮಾರಂಭ, ಮದುವೆ, ಮರಣ, ಗೃಹ ಪ್ರವೇಶ, ಪೂಜೆ, ನೇಮ, ಕೋಲ ಇವುಗಳು ಸಾಂಗವಾಗಿ ವಿಜೃಂಭಣೆಯಿಂದ ನಡೆಯುತ್ತದೆ. ಅಂತರವೂ ಇಲ್ಲ,ಮಾಸ್ಕೂ ಇಲ್ಲ.
ಅಂಗಡಿಯಲ್ಲಿ ನಾಲ್ಕು ಜನ ನಿಂತ ಕೂಡಲೇ ಲಾಠೀ ಹಿಡಿದು ಬರುತ್ತಾರೆ.ದೇಶಕ್ಕೆ ಕೊರೋನ ಹರಡಿಸಿದ್ದೇ ವ್ಯಾಪಾರಿಗಳು ಅಂತ ಅನಿಸುತ್ತದೆ. ಲಕ್ಷ ಗಟ್ಟಲೆ ಬಂಡವಾಳ ಹಾಕಿ ವ್ಯಾಪಾರ ಮಾಡುವವ ತನ್ನ ಸಂಸ್ಥೆಯನ್ನು ಪಂಚಾಯತಿನ ಪಿಯೋನ್, ಬಂದು ಜೋರು ಮಾಡಿ ಬಂದ್ ಮಾಡಿಸುವ ಹಂತಕ್ಕೆ ಪರಿಸ್ಥಿತಿ ಬಂದಿದೆ ಎಂದರೆ ವರ್ತಕರಿಗೆ ಎಲ್ಲಿದೆ ಗೌರವ. ವರ್ತಕರು ಕಟ್ಟುವ GST ಯಿಂದಲೇ ತಮಗೆ ಸಂಬಳ ಬರುತ್ತದೆ, ತಮ್ಮ ಮನೆಯ ಒಲೆ ಉರಿಯುತ್ತದೆ ಎಂಬುದನ್ನು ಮರೆಯಬಾರದು.
ವರ್ತಕರೆಂದರೆ ಕೆಟ್ಟವರು, ಇವರ ಅಗತ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ವರ್ತಕರನ್ನು ಸರಕಾರ , ನೋಡುತ್ತಿದೆ. ವರ್ತಕರು ಒಗ್ಗಟ್ಟಾಗ ಬೇಕಾಗಿದೆ.
ವ್ಯಾಪಾರಿಗಳು ಖಂಡಿತಾ ಕಳ್ಳರಲ್ಲ. ಕೊರೋನ ವ್ಯಾಪಕವಾಗಲು ವರ್ತಕರು ಕಾರಣವಲ್ಲ. ಅಸಂಬಧ್ಧ ಮಾರ್ಗಸೂಚಿ, ಅನಗತ್ಯ ಕಾನೂನು ಕಾರಣವಾಗಿದೆ.
ಕಾನೂನು, ಬೈಗುಳ, ಲಾಠಿ, ಪೆನಾಲ್ಟಿಯಿಂದ ಕೊರೋನ ಹೋಗಲಾಡಿಸಬಹುದೆಂಬುದು ಕೇವಲ ಭ್ರಮೆ. ಪರಸ್ಪರ ಸಹಕಾರ, ಸೌಹಾರ್ದ, ಮಾನವೀಯತೆಯಿಂದ ಮಾತ್ರ ಕೊರೋನ ಗೆಲ್ಲಬಹುದು. ದೇವನ ರಕ್ಷೆಯೂ ಸಿಗಬಹುದು.

~ಸಿದ್ದೀಕ್ ಕಲ್ಲಡ್ಕ












