ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದುಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ ವಾರಣಾಸಿ ನ್ಯಾಯಾಲಯ

0
322

ಸನ್ಮಾರ್ಗ ವಾರ್ತೆ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಬೆನ್ನಲ್ಲೇ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯವಯ ಇಂದು ಆದೇಶ ನೀಡಿರುವುದಾಗಿ ‘ದಿ ಲೈವ್ ಲಾ’ ವರದಿ ಮಾಡಿದೆ.

ಸದ್ಯ ಜ್ಞಾನವಾಪಿ ಮಸೀದಿಯಲ್ಲಿ ಬೀಗ ಮುದ್ರೆ ಹಾಕಿಡಲಾಗಿರುವ ನೆಲಮಹಡಿಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ವಾರಣಾಸಿಯ ನ್ಯಾಯಾಲಯವೊಂದು ಅವಕಾಶ ಕಲ್ಪಿಸಿದ್ದು, ವಾರದೊಳಗೆ ಇದಕ್ಕೆ ವ್ಯವಸ್ಥೆ ಕಲ್ಪಿಸುವಂತೆಯೂ ಆದೇಶದಲ್ಲಿ ನ್ಯಾಯಾಲಯವು ಉಲ್ಲೇಖಿಸಿರುವುದಾಗಿ ವರದಿ ಮಾಡಿದೆ.

ನ್ಯಾಯಾಲಯದ ಆದೇಶದ ಪ್ರಕಾರ, ವಾರಣಾಸಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲ ಮಹಡಿ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಇನ್ನು ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನ್ಯಾಯಾಲಯವು ತನ್ನ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಜಿದಾರರಾದ ಐವರು ಹಿಂದೂ ಮಹಿಳೆಯರ ಪರ ವಕೀಲ ವಿಷ್ಣು ಶಂಕರ್ ಜೈನ್, “ಇದೊಂದು ಮಹತ್ವದ ಆದೇಶವಾಗಿದೆ. ಆದೇಶದಂತೆಯೇ ವಾರದೊಳಗೆ ಅಲ್ಲಿ ನಾವು ಪೂಜೆ ಮಾಡಲಿದ್ದೇವೆ. ಎಲ್ಲರಿಗೂ ಪೂಜೆ ಮಾಡಲು ಹಕ್ಕಿದೆ” ಎಂದು ತಿಳಿಸಿದ್ದಾರೆ.

“ಮಸೀದಿಯಲ್ಲಿ ಒಟ್ಟು ನಾಲ್ಕು ನೆಲಮಾಳಿಗೆಗಳಿದೆ. ಅವುಗಳ ಪೈಕಿ ಒಂದು ಇಲ್ಲಿ ವಾಸಿಸುತ್ತಿದ್ದ ಹಿಂದೂ ಕುಟುಂಬವೊಂದರ ವಶದಲ್ಲಿದೆ. ಹಾಗಾಗಿ, ಇದರಲ್ಲಿರುವ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸಮೀಕ್ಷಾ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಇತ್ತೀಚೆಗೆ ಬಹಿರಂಗಪಡಿಸಿತ್ತು. ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಷಗಳ ಮೇಲೆಯೇ ಮಸೀದಿ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ ಬೆನ್ನಲ್ಲೇ ನ್ಯಾಯಾಲಯದಿಂದ ಈ ಆದೇಶ ಹೊರಬಿದ್ದಿದೆ.