ಸನ್ಮಾರ್ಗ ವಾರ್ತೆ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಜೆಎನ್ಯು ಪ್ರಾಧ್ಯಾಪಕಿ ಝೋಯಾ ಹಸನ್ ಅವರ ಭಾಷಣವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಆಗಸ್ಟ್ 14ರಂದು ಬೆಳಿಗ್ಗೆ 10 ಗಂಟೆಗೆ ಲೋಧಿ ಎಸ್ಟೇಟ್ ನಲ್ಲಿ ಇರುವ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು . ಇದರಲ್ಲಿ ಝೋಯಾ ಹಸನ್ ಮುಖ್ಯ ಅತಿಥಿಯಾಗಿದ್ದರು. ಅವರು ರಾಷ್ಟ್ರಧ್ವಜವನ್ನು ಹಾರಿಸಿ ಬಹುತ್ವ ಏಕೆ ಮುಖ್ಯ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು.
ಕಾರ್ಯಕ್ರಮಕ್ಕೆ ಸ್ವಲ್ಪ ಮೊದಲು ಸುಮಾರು 15 ವಿ ಎಚ್ ಪಿ ಕಾರ್ಯಕರ್ತರು ಶಾಲೆಯ ದ್ವಾರದ ಬಳಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ನಂತರ ದೆಹಲಿ ಪೊಲೀಸರು ಸ್ಥಳದಲ್ಲಿ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಿದರು. ಝೋಯಾ ಹಸನ್ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದರು. ಪ್ರತಿಭಟನೆಯ ನಂತರ ಶಾಲಾ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಿದರು.
ಶಾಲೆಯ ಅಧಿಕಾರಿಗಳು ಝೋಯಾ ಅವರ ಮನೆಗೆ ಭೇಟಿ ನೀಡಿ ಭದ್ರತಾ ಬೆದರಿಕೆಗಳಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಹಲವಾರು ಶಿಕ್ಷಣ ತಜ್ಞರು ಮತ್ತು ಬರಹಗಾರರು ಘಟನೆಯನ್ನು ಟೀಕಿಸಿದ್ದಾರೆ.












