ಸನ್ಮಾರ್ಗ ವಾರ್ತೆ
ವಿಜಯಪುರ: ಅವಾಚ್ಯ ಪದಗಳಿಂದ ನಿಂದಿಸಿದ್ದಾನೆಂದು ಆರೋಪಿಸಿ 12 ವರ್ಷದ ಬಾಲಕನೋರ್ವನನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ, ಮೈಯೆಲ್ಲಾ ಬಣ್ಣ ಹಾಕಿಸಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಡವಡಗಿ ಎಂಬ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯ ವೀಡಿಯೋ ಹೊರಬಂದ ಬಳಿಕ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಬಾಲಕನ ತಾಯಿ ಮಗನೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಸ್ಥಳೀಯ ನಿವಾಸಿ ಮಲಕಮ್ಮ ಹಿರೇಕುರುಬ ಎಂಬವರ 12 ವರ್ಷದ ಪುತ್ರನನ್ನು ಕಂಬಕ್ಕೆ ಕಟ್ಟಿ ಚಿತ್ರಹಿಂಸೆ ನೀಡಲಾಗಿದೆ. ಅದೇ ಗ್ರಾಮದ ಕಿರಾಣಿ ಅಂಗಡಿ ನಡೆಸುತ್ತಿದ್ದ ಹನುಮಂತ ಮಡಿಕೇಶ್ವರ(54) ಎಂಬಾತ ಈ ಕೃತ್ಯ ಎಸಗಿದ್ದು, ಬಾಲಕನ ತಾಯಿಯ ದೂರಿದ ಆಧಾರದ ಮೇಲೆ ಆತನ ಮೇಲೆ ಎಫ್ ಐ ಆರ್ ದಾಖಲಿಸಿ, ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅವಾಚ್ಯ ಪದಗಳಿಂದ ನಿಂದಿಸಿದ್ದಾನೆಂದು ಆರೋಪಿಸಿ ಮಾ.18 ರಂದು ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಮಾಹಿತಿ ನೀಡಿರುವ ಪೊಲೀಸರು, ಘಟನೆ ಸಂಬಂಧ ಬಾಲಕನ ತಾಯಿ ದೂರು ನೀಡಿದ ಕೂಡಲೇ ಪ್ರಕರಣ ದಾಖಲಿಸಿದ್ದೇವೆ. ಇದರ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೋ ಮಾಡಿದವರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದೇವೆ. ಐಪಿಸಿ 323, 342, 355, 504, 506 ಹಾಗೂ ಬಾಲ ನ್ಯಾಯ ಕಾಯ್ಡೆಯ 75 ನೇ ಕಲಂನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಜೊತೆಗೆ ಈ ಸಂಬಂಧ ಮಕ್ಕಳ ಹಕ್ಕುಗಳ ಅಧಿಕಾರಿಗಳಿಗೂ ಮಾಹಿತಿ ನೀಡಿರುವುದಾಗಿ ಬಸವನಬಾಗೇವಾಡಿ ಪಿಎಸ್ಐ ಬಸವರಾಜ ಪಾಟೀಲ್ ತಿಳಿಸಿದ್ದಾರೆ.
ಮಗ ಏನು ತಪ್ಪು ಮಾಡಿದ್ದಾನೆಂದು ಗೊತ್ತಿಲ್ಲ. ಮಗ ಬೈದಿದ್ದಾನೆಂದು ಮನೆಗೆ ಬಂದು ಕರೆದುಕೊಂಡು ಹೋದರು. ಕಂಬಕ್ಕೆ ಕಟ್ಟಿ ಬಣ್ಣ ಚೆಲ್ಲಿದ್ದಲ್ಲದೇ ವಿಡಿಯೋ ಮಾಡಿ ಹರಿಯ ಬಿಟ್ಟಿದ್ದಾರೆ. ಮುಂದೆ ಮಗ ದೊಡ್ಡವನಾದ ಮೇಲೆ ಈ ದೃಶ್ಯ ಕಂಡು ಜನ ಏನಂದಾರು ಎಂದು ಓಣಿಯ ಕೆಲವು ಜನ ಕೇಳಿದರು. ಆದರೆ ಅವರನ್ನು ಕೇಳಲು ನಮ್ಮ ಮನೆಯಲ್ಲಿ ಹಿರಿಯರಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಬಾಲಕನ ತಾಯಿ ಮಲಕಮ್ಮ ಹಿರೇಕುರುಬರ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.












