ಸನ್ಮಾರ್ಗ ವಾರ್ತೆ
ವಿಟ್ಲ: ಜಮಾಅತೆ ಇಸ್ಲಾಮೀ ಹಿಂದ್ ವಿಟ್ಲ, ರೋಟರಿ ಕ್ಲಬ್ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಹಾಗೂ ಜೆಸಿಐ ವಿಟ್ಲ ಸಹಯೋಗದಲ್ಲಿ ಸೀರತ್ ಸಂದೇಶ ಕಾರ್ಯಕ್ರಮ ವಿಟ್ಲದ ಬೊಬ್ಬೆಕೇರಿ ಗಜಾನನ ಸಭಾಂಗಣದಲ್ಲಿ ನಡೆಯಿತು.
ಸೀರತ್ ಸಂದೇಶ ನೀಡಿ ಮಾತನಾಡಿದ ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅವರು ಪ್ರವಾದಿ ಸಂದೇಶ ಮಾನವ ಕುಲಕ್ಕೆ ಸೇರಿದ್ದಾಗಿದೆ. ಅವರ ಸಂದೇಶದಲ್ಲಿ ಇಡೀ ಮಾನವ ಕುಲಕ್ಕೆ ಪಾಠವಿದೆ. ಪ್ರವಾದಿವರ್ಯರು(ಸ) ವ್ಯಕ್ತಿಗಳನ್ನು ಬದಲಾಯಿಸುವ ಕೆಲಸ ಮಾಡಿದ್ದಾರೆ. ವಿಪರ್ಯಾಸವೆಂದರೆ ಇಂದು ವಿದ್ಯಾವಂತರು ಹೆಚ್ಚಾಗುತ್ತಿದ್ದಂತೆ ವೃದ್ಧಾಶ್ರಮಗಳು ಹೆಚ್ಚಾಗುತ್ತಿದೆ. ಕೊರೋನಾ ಹಿನ್ನಲೆಯ ರೋಗಿಗಳನ್ನು ಅಪರಾಧಿಯಂತೆ ವರ್ತಿಸಲಾಗುತ್ತಿದೆ. ಜನರ ಶವಗಳನ್ನು ಪ್ರಾಣಿಗಳಂತೆ ನೋಡಲಾಗುತ್ತಿದೆ. ಇಂತಹ ಸಮಾಜಕ್ಕೆ ಮಾರ್ಗದರ್ಶನದ ಅಗತ್ಯವಿದೆ. ಪ್ರಬಲವಾದ ಆದರ್ಶ ಇದ್ದರೆ ಮಾತ್ರ ಬದುಕಲು ಸಾಧ್ಯ. ನಾವೆಲ್ಲ ಸಹೋದರರು ಎಂಬ ಸಿದ್ಧಾಂತದಲ್ಲಿ ಜೀವನ ನಡೆಸಿದಾಗ ಸಮಾಜದಲ್ಲಿರುವ ಕೆಡಕುಗಳನ್ನು ದೂರ ಮಾಡಬಹುದು ಎಂದು ತಿಳಿಸಿದರು.
ವಿಟ್ಲ ಜಮಾಅತೆ ಇಸ್ಲಾಮೀ ಹಿಂದ್ ನ ಅಧ್ಯಕ್ಷ ಹೈದರ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಗೀತಾಪ್ರಕಾಶ್, ರೋಟರಿ ವಲಯ ಸೇನಾಧಿಕಾರಿ ಜಯರಾಮ ರೈ, ಸರ್ವೋತ್ತಮ ರಾಜ್ಯ ಪ್ರಶಸ್ತಿ ಪುರಸ್ಕೃತ ಅಧಿಕಾರಿ ಹೆಚ್.ಜಿಎಫ್ ಹಸನ್ ವಿಟ್ಲ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಭಟ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜೆಸಿಂತಾ ಸೋಫಿಯಾ ಮಸ್ಕರೇಂಞಸ್, ವಿಟ್ಲ ಜೆಸಿಐ ಅಧ್ಯಕ್ಷ ದಿನೇಶ್ ಶೆಟ್ಟಿ, ಉಪಸ್ಥಿತರಿದ್ದರು.
ಅಬ್ದುಲ್ ಖಾದರ್ ಕುಕ್ಕಾಜೆ ಮತ್ತು ಇರ್ಷಾದ್ ಬೈರಿಕಟ್ಟೆ ನಿರೂಪಿಸಿದರು. ಹೈದರ್ ಅಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು, ಲಯನ್ಸ್ ಇಕ್ಬಾಲ್ ಹಾನೆಸ್ಟ್ ವಂದಿಸಿದರು.












