ಗಾಂಧಿ ಮುಸ್ಲಿಮ್ ವಿರೋಧಿಯಾಗಿದ್ದರೇ?

0
141

ಸನ್ಮಾರ್ಗ ವಾರ್ತೆ

✍️ಕೆ.ಟಿ. ಹುಸೈನ್

ಭಾರತ ಮಾತ್ರವಲ್ಲ, ವಿಶ್ವವನ್ನೇ ಆಕರ್ಷಿಸಿದ ಇಪ್ಪತ್ತನೇ ಶತಮಾನದ ಮಹಾ ಪ್ರತಿಭಾವಂತರೂ ರಾಜಕೀಯ ಚಿಂತಕರೂ ಸಾಮಾಜಿಕ ಸುಧಾರಕರೂ ಆಗಿದ್ದ ಮಹಾತ್ಮಾ ಗಾಂಧಿ ಎಂದು ಗುರುತಿಸಿಕೊಂಡ ಮೋಹನ್ ದಾಸ್ ಕರಮ್‌ಚಂದ್ ಗಾಂಧಿಯವರು ಓರ್ವ ಚತುರ ರಾಜಕಾರಣಿ ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಅವರು ಕೇವಲ ಓರ್ವ ರಾಜಕಾರಣಿ ಮಾತ್ರವಾಗಿರಲಿಲ್ಲ. ಕಾರಣವೇನೆಂದರೆ, ರಾಜಕಾರಣಿಗೆ ನೈತಿಕತೆ ಮತ್ತು ನ್ಯಾಯದಲ್ಲಿ ಬದ್ಧತೆಯಿರಬೇಕಾಗಿಲ್ಲ. ಹೇಗಾದರೂ ಜನರನ್ನು ತಮ್ಮೊಂದಿಗೆ ಇರಿಸಿಕೊಳ್ಳುವ ರಾಜಕೀಯ ತಂತ್ರ ತಿಳಿದಿರುವ ಯಾರು ಬೇಕಾದರೂ ಉತ್ತಮ ರಾಜಕಾರಣಿಯಾಗುತ್ತಾರೆ. ಆದರೆ ಗಾಂಧಿಯವರು ಜನರು ಮತ್ತು ಸಮುದಾಯಗಳನ್ನು ಒಂದಾಗಿಸಲು ಉತ್ತಮ ರಾಜಕೀಯ ತಂತ್ರವನ್ನು ಹೊರತೆಗೆಯುವಾಗಲೂ ಧಾರ್ಮಿಕ ನೈತಿಕ ಮೌಲ್ಯಗಳನ್ನು ನಿಷ್ಠೆಯಿಂದ ಪಾಲಿಸಿದರು. ಆ ವಿಷಯದಲ್ಲಿ ಉಂಟಾಗುವ ತಾತ್ಕಾಲಿಕ ಅಡಚಣೆಗಳಿಗೆ ಅವರು ಹೆದರುತ್ತಿರಲಿಲ್ಲ. ಅವರು ತಾನು ಪ್ರತಿಪಾದಿಸಿದ ನೈತಿಕ ಮೌಲ್ಯಗಳ ಮೂಲವಾಗಿ ಅವರು ಧರ್ಮವನ್ನು ಕಂಡರು.

ಗಾಂಧೀಜಿಯವರು ನಿಸ್ಸಂದೇಹವಾಗಿಯೂ ಓರ್ವ ಹಿಂದೂ ಆಗಿದ್ದರು. ವೇದಗಳು, ಉಪನಿಷತ್ತುಗಳು, ಪುರಾಣಗಳು, ಇತಿಹಾಸಗಳು ಹಾಗೂ ಗೀತೆಗಳನ್ನು ಒಳಗೊಂಡಿರುವ ಪ್ರಾಚೀನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತಾ, ಸ್ವಾತಂತ್ರ್ಯ ಹೋರಾಟದಲ್ಲೂ ಮತ್ತು ಅದರಿಂದ ರೂಪುಗೊಳ್ಳಲಿರುವ ಆಧುನಿಕ ಭಾರತದ ಆತ್ಮದಲ್ಲಿಯೂ ಪ್ರಸ್ತುತ ಸಂಸ್ಕೃತಿಯನ್ನು ಸೇರಿಸಿಕೊಳ್ಳಬೇಕೆಂದು ಬಯಸಿದರು.

ಆದರೆ ಅವರು ಧಾರ್ಮಿಕ ಮೌಲ್ಯಗಳನ್ನು ಕೇವಲ ಹಿಂದೂ ಧರ್ಮದಿಂದ ಮಾತ್ರ ಸ್ವೀಕರಿಸಿರಲಿಲ್ಲ. ಬುದ್ಧ, ಜೀಸಸ್, ಪೈಗಂಬರರೂ ಅವರ ಮೌಲ್ಯಗಳ ಮೂಲವಾಗಿದ್ದರು. ಗಾಂಧೀಜಿಯವರ ಶ್ರೇಷ್ಠ ಆದರ್ಶವಾದ ಅಹಿಂಸೆಯು ಬುದ್ಧನಿಗಿಂತ ಬೈಬಲ್‌ನ ಹೊಸ ಒಡಂಬಡಿಕೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದೆಯೆಂದು ಗುರುತಿಸಲಾಗಿದೆ. ಅಂತೆಯೇ ಇಸ್ಲಾಮಿನ ಸರಳತೆ, ಸತ್ಯನಿಷ್ಠೆ, ನ್ಯಾಯಪ್ರಜ್ಞೆ ಮತ್ತು ಪ್ರಾಮಾಣಿಕತೆ ವಿಶ್ವಾಸ ಪ್ರೇರಿತವಾದ ಧೈರ್ಯವು ಗಾಂಧಿಯವರ ಮೇಲೆ ಬಹಳ ಪ್ರಭಾವ ಬೀರಿತು.

ಅದೇವೇಳೆ, ಹಿಂದಿನ ಮಹಾನುಭಾವರಂತೆ ವ್ಯವಸ್ಥೆಯೊಂದಿಗೆ ಜಗಳವಾಡಲಿಲ್ಲ. ಏಕೆಂದರೆ, ಗಾಂಧೀಜಿಗೆ ವ್ಯವಸ್ಥೆ ಮುಖ್ಯವಾಗಿರಲಿಲ್ಲ, ವ್ಯಕ್ತಿಗಳು ಮುಖ್ಯವಾಗಿದ್ದರು. ವ್ಯಕ್ತಿಗಳಲ್ಲಿ ಒಳಿತು ಬೆಳೆಸಿದರೆ ವ್ಯವಸ್ಥೆಯ ಸಮಸ್ಯೆಗಳನ್ನು ಸುಲಭದಲ್ಲಿ ಸರಿಪಡಿಸಬಹುದು ಎಂಬುದು ಅವರ ನಂಬಿಕೆಯಾಗಿತ್ತು.
ಗಾಂಧೀಜಿಯವರು ಹೆಮ್ಮೆಯಿಂದ ಎತ್ತಿ ಹಿಡಿದಿದ್ದ ಸನಾತನ ಹಿಂದೂ ಧರ್ಮದಲ್ಲಿ ಲೋಪ ಇರಲಿಲ್ಲವೆಂಬುದು ಅವರ ನಂಬಿಕೆಯಾಗಿರಲಿಲ್ಲ. ಗಾಂಧೀಜಿಯವರು ಸನಾತನ ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರು. ಆದರೆ ಅಸ್ಪೃಶ್ಯತೆಯಂತಹ ಕಲ್ಮಶಗಳನ್ನು ಮೇಲ್ವರ್ಗದವರ ಮನದಲ್ಲಿ ಒಳಿತು ಬೆಳೆಸುವ ಮೂಲಕ ಪರಿಹರಿಸಬಹುದೆಂದು ಗಾಂಧಿ ಭಾವಿಸಿದ್ದರು. ಇಲ್ಲಿ ಓರ್ವ ಹಿಂದೂ ಸುಧಾರಕರಾಗಿ ಗಾಂಧೀಜಿಯನ್ನು ನಮಗೆ ಕಾಣಬಹುದು.

ಗಾಂಧೀಜಿಯವರ ದೃಷ್ಟಿಯಲ್ಲಿ ಸ್ವಾತಂತ್ರ‍್ಯ ಹೋರಾಟವು ಯಶಸ್ವಿಯಾಗಬೇಕಾದರೆ ಮೊದಲು ಹಿಂದೂ ಏಕತೆ ನಡೆಯಬೇಕು. ನಂತರ ಮುಸ್ಲಿಮರನ್ನೂ ಅದರ ಭಾಗವಾಗಿಸಬೇಕು. ಇದು ಗಾಂಧೀಜಿಯವರ ರಾಜಕೀಯ ತಂತ್ರದ ಭಾಗವಾಗಿತ್ತು. ಈ ರಾಜಕೀಯ ತಂತ್ರವು ಗಾಂಧೀಜಿಯವರಿಗೆ ಏಕಕಾಲದಲ್ಲಿ ಬೆಂಬಲಿಗರು ಮತ್ತು ವಿರೋಧಿಗಳನ್ನೂ ಒದಗಿಸಿತು.

ಮುಸ್ಲಿಮರ ಆರ್ಥಿಕ ಮತ್ತು ಆರ್ಥಿಕೇತರ ಬೆಂಬಲದೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಜಾತಿ ತಾರತಮ್ಯದ ವಿರುದ್ಧ ಕಾರ್ಯನಿರತರಾದ ಮಹಾತ್ಮಾ ಗಾಂಧಿ 1915ರಿಂದ ಭಾರತದ ರಾಜಕೀಯದ ರಾಜಕಾರಣಿ ಎಂಬುದಕ್ಕಿಂತ ಹೆಚ್ಚಾಗಿ ಧಾರ್ಮಿಕ ನಾಯಕರಂತೆ ಕೆಲಸ ಮಾಡಿದರು. ಪ್ರಾರ್ಥನಾ ಸಭೆ, ಸತ್ಯಾಗ್ರಹ, ಉಪವಾಸವೂ ಸೇರಿದಂತೆ ಗಾಂಧೀಜಿಯವರ ಹೋರಾಟ ರೀತಿಗಳೆಲ್ಲವೂ ಧಾರ್ಮಿಕವಾಗಿತ್ತು. ಇದು ಹಿಂದೆಂದಿಗಿಂತಲೂ ಹೆಚ್ಚಾಗಿ ಮುಸ್ಲಿಮರಿಗೆ ಕಾಂಗ್ರೆಸ್‌ನ ಕುರಿತು ಹೆಚ್ಚಿನ ಆತಂಕ ಬೆಳೆಸಿತೆಂದು ಡೊಮಿನಿಕ್ ಲಾಪ್ಸಿಯರ್ ಮತ್ತು ಲಾರಿ ಕೋಲಿನ್ಸ್ರು ಅಂದಾಜಿಸಿದ್ದಾರೆ. ಮಾತ್ರವಲ್ಲ, ಗಾಂಧೀಜಿಯವರು ಭಾರತದ ರಾಜಕೀಯಕ್ಕೆ ಬರುವವರೆಗೆ ಕಾಂಗ್ರೆಸ್‌ನಲ್ಲಿ ಸ್ಪಷ್ಟವಾಗಿ 2 ಧೋರಣೆಗಳಿದ್ದವು.

ಗೋಪಾಲಕೃಷ್ಣ ಗೋಖಲೆಯವರ ನೇತೃತ್ವದ
ಮಿತವಾದಿ ಹಿಂದೂ ಧರ್ಮ ಮತ್ತು ಬಾಲ ಗಂಗಾಧರ ತಿಲಕ್ ನೇತೃತ್ವದ ತೀವ್ರ ಹಿಂದುತ್ವ. ಮುಹಮ್ಮದಲಿ ಜಿನ್ನಾ, ಬದ್ರುದ್ದೀನ್ ತಯ್ಯಿಬ್ಜಿ ಮುಂತಾದ ಕಾಂಗ್ರೆಸ್‌ನ ಮುಸ್ಲಿಮ್ ನಾಯಕರು ಗೋಖಲೆಯ ಪರವಾಗಿದ್ದರು.

ಆದಾಗ್ಯೂ ಗಾಂಧೀಜಿಯವರು ಈ ಎರಡು ವಿಚಾರಧಾರೆಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಓರ್ವ ಹಿಂದೂವಾಗಿದ್ದುಕೊಂಡು ವಿಲೀನಗೊಳಿಸಿದರು. ಗಾಂಧೀಜಿಯವರು ಭಾರತದ ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಗೋಖಲೆ ಮತ್ತು ತಿಲಕರು ಹೆಚ್ಚು ಕಾಲ ಬದುಕಲಿಲ್ಲ. ಗಾಂಧೀಜಿಯವರ ಬರಹಗಳಲ್ಲಿ ಇವರಿಬ್ಬರನ್ನೂ ವಿಮರ್ಶಾ ರಹಿತವಾದ ನಿಲುವುಗಳೊಂದಿಗೆ ಸ್ವೀಕರಿಸಲಾಗಿದೆ. ಏಕೆಂದರೆ, ಇದನ್ನು ಗಾಂಧೀಜಿಯವರ ರಾಜಕೀಯ ತಂತ್ರವೆಂದು ಅರ್ಥ ಮಾಡಿಕೊಳ್ಳಬಹುದು.

ಹಾಗಿದ್ದರೂ ಗಾಂಧೀಜಿಯವರು ವೈಯಕ್ತಿಕವಾಗಿ ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿ ಹಿಡಿದಿದ್ದರೂ ಅವರು ಕಾಂಗ್ರೆಸ್‌ನ ಒಳಗೆ ಮತ್ತು ಹೊರಗೆ ಹಿಂದೂ ಸಭಾದೊಂದಿಗೂ ನಂತರ ಆರೆಸ್ಸೆಸ್‌ನ ಮೂಲಕವೂ ಪ್ರಾಬಲ್ಯ ಪಡೆದ ತೀವ್ರ ಹಿಂದುತ್ವದೊಂದಿಗೂ ಸಂಘರ್ಷ ನಡೆಸಿರುವುದನ್ನು ನಮಗೆ ಕಾಣಲು ಸಾಧ್ಯವಿಲ್ಲ. ಹಲವಾರು ಭಾಗಗಳಿರುವ ಗಾಂಧೀಜಿಯವರ ಸಾಹಿತ್ಯದಲ್ಲಿ ಎಲ್ಲಿಯೂ ಸಾವರ್ಕರ್‌ರ ಹಿಂದುತ್ವ ಎಂಬ ಕೃತಿಯೋ ಆರೆಸ್ಸೆಸ್‌ನ ಕೋಮುವಾದವೋ ಸಣ್ಣ ಪ್ರಮಾಣದಲ್ಲೂ ವಿಮರ್ಶಿಸಲ್ಪಡುವುದಿಲ್ಲ. ಸ್ವಾತಂತ್ರ‍್ಯ ಹೋರಾಟದ ಚಳವಳಿಗೆ ಹಿಂದೂ ಏಕತೆಯನ್ನು ಗಾಂಧೀಜಿಯವರು ಬಹಳ ಮುಖ್ಯವೆಂದು ಪರಿಗಣಿಸಿರುವುದೇ ಇದಕ್ಕೆ ಕಾರಣ ಎಂಬ ವಾದವನ್ನು ಮಾತ್ರ ನಮಗೆ ಮಾಡಲು ಸಾಧ್ಯ.

ಏನಿದ್ದರೂ, ಮುಸ್ಲಿಮ್ ಸಮುದಾಯದ ನಡುವೆ ತಾನೋರ್ವ ಹಿಂದೂ ನಾಯಕ ಮಾತ್ರವೆಂಬ ಚಿತ್ರಣವನ್ನು ಬದಲಾಯಿಸಲು ಖಿಲಾಫತ್ ಚಳವಳಿಯು ಗಾಂಧೀಜಿಯವರಿಗೆ ಸುವರ್ಣಾವಕಾಶವಾಗಿತ್ತು. ಉಸ್ಮಾನಿಯಾ ಖಿಲಾಫತ್‌ನ ಸಂರಕ್ಷಣೆಯು ಮುಸ್ಲಿಮರಿಗೆ ರಾಜಕೀಯ ಎಂಬುದಕ್ಕಿಂತ ಹೆಚ್ಚಾಗಿ ಧಾರ್ಮಿಕವಾದುದಾಗಿತ್ತು. ಭಾರತದಲ್ಲಿ ಮೊಘಲ್ ಆಡಳಿತವು ಮೊದಲೇ ಕುಸಿದು ಬಿದ್ದುದರಿಂದ ಭಾರತೀಯ ಮುಸಲ್ಮಾನರಿಗೆ ಅವರ ಧಾರ್ಮಿಕ ಮತ್ತು ರಾಜಕೀಯವಾದ ಏಕಪ್ರೇರಕ ಶಕ್ತಿ ಉಸ್ಮಾನಿಯಾ ಖಿಲಾಫತ್ ಆಗಿತ್ತು. ಆದ್ದರಿಂದಲೇ, ಖಿಲಾಫತ್‌ನ ಸಂರಕ್ಷಣೆಗೆ ಒಂದು ಬಹುಜನ ಹೋರಾಟ ರೂಪುಗೊಂಡದ್ದು ಭಾರತದಲ್ಲಿ ಮಾತ್ರವಾಗಿತ್ತು. ಮುಸ್ಲಿಮ್ ದೇಶಗಳು ಅದಾಗಲೇ ಧರ್ಮದ ಆಧಾರದಲ್ಲಿ ವಿವಿಧ ರಾಷ್ಟ್ರೀಯತೆಯ ನಡುವೆ ವಿಭಜನೆಗೊಡಿದ್ದುದರಿಂದ ಖಿಲಾಫತ್‌ನ ಸಂರಕ್ಷಣೆ ಭಾರತದಂತೆ ಬೇರೆ ಯಾವ ಮುಸ್ಲಿಮ್ ದೇಶಗಳಲ್ಲೂ ಬಹುಜನ ಹೋರಾಟವಾಗಿ ಪರಿವರ್ತಿತಗೊಂಡಿಲ್ಲದಿರಬಹುದು.

ಏನಿದ್ದರೂ, ಅಲಿ ಸಹೋದರರು,
ಅಬುಲ್ ಕಲಾಮ್ ಆಝಾದ್, ದಯೂಬಂದ್ ಪಂಡಿತರು ನೇತೃತ್ವ ನೀಡಿದ ಖಿಲಾಫತ್ ಚಳವಳಿಯನ್ನು ಗಾಂಧೀಜಿಯವರು ಪಾರದರ್ಶಕವಾಗಿ ಬೆಂಬಲಿಸಿದ್ದು ಮಾತ್ರವಲ್ಲ, 1919 ನವೆಂಬರ್‌ನಲ್ಲಿ ನಡೆದ ಖಿಲಾಫತ್ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದವರೆಗೆ ಅಲಂಕರಿಸಿದ್ದರು.

ಖಿಲಾಫತ್‌ಗೆ ಸಂಬಂಧಿಸಿ ಬ್ರಿಟಿಷ್ ವೈಸ್‌ರಾಯ್‌ಗೆ ಕಳುಹಿಸಿದ ಪತ್ರದಲ್ಲಿ ಅವರು ಹೀಗೆ ಬರೆದರು, “ಓರ್ವ ಹಿಂದೂ ಎಂಬ ಕಾರಣಕ್ಕೆ ನನಗೆ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ದುಃಖ ನಮ್ಮ ದುಃಖವಾಗಿದೆ.”
ಭಾರತದ ಹಿಂದೂ ಮತ್ತು ಮುಸ್ಲಿಮರ ನಡುವೆ ಆಳವಾದ ಬಿರುಕುಗಳಿವೆ ಎಂಬುದು ಗಾಂಧೀಜಿಯವರಿಗೆ ಮನವರಿಕೆಯಾಗಿತ್ತು. ಎರಡು ಸಮುದಾಯಗಳ ನಡುವಿನ ಬಿರುಕು ಸರಿಪಡಿಸಲಾಗದ ರೀತಿಯಲ್ಲಿ ಮಾಡುವುದರಲ್ಲಿ ವಸಾಹತುಶಾಹಿ ವ್ಯವಸ್ಥೆಯ ಪಾತ್ರವನ್ನೂ ಗಾಂಧೀಜಿ ಅರ್ಥ ಮಾಡಿಕೊಂಡಿದ್ದರು.

ಏನಿದ್ದರೂ ಗಾಂಧೀಜಿಯವರ ನಿರೀಕ್ಷೆಯಂತೆ 1857ರ ಒಂದನೇ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ರೀತಿಯಲ್ಲಿ ಹಿಂದೂ- ಮುಸ್ಲಿಮ್ ಏಕತೆಯ ಒಂದು ದೊಡ್ಡ ಆಚರಣೆಯಾಗಿತ್ತು ಖಿಲಾಫತ್ ಚಳವಳಿ. ಯಾವುದೇ ಮುಸ್ಲಿಮ್ ವೇದಿಕೆಗೂ ಓರ್ವ ಹಿಂದೂ ಸನ್ಯಾಸಿಯಂತೆ ತೋರುತ್ತಿದ್ದ ಗಾಂಧೀಜಿಯವರಿಗೆ ಯಾವಾಗ ಬೇಕಾದರೂ ಹತ್ತುವ ರೀತಿಯಲ್ಲಿ ಭಾರತದ ಮುಸ್ಲಿಮರ ನಡುವೆ ಅವರು ಸ್ವೀಕಾರಾರ್ಹ ವ್ಯಕ್ತಿತ್ವವಾದರು. ಖಿಲಾಫತ್ ಚಳವಳಿಯ ಅರ್ಥಶೂನ್ಯತೆಯ ಕುರಿತು ಪ್ರಜ್ಞೆ ಹೊಂದಿದ್ದ ಅಲ್ಲಮಾ ಇಕ್ಬಾಲ್ ಹಾಗೂ ಮುಹಮ್ಮದಲಿ ಜಿನ್ನಾರಂತಹ ನಾಯಕರು ಕೂಡಾ ಈ ಚಳವಳಿಯನ್ನು ಬೆಂಬಲಿಸಬೇಕಾಯಿತು. ಸ್ವಲ್ಪ ಸಮಯಕ್ಕಾದರೂ ಹಿಂದೂ- ಮುಸ್ಲಿಮ್ ಐಕ್ಯತೆಯ ಪ್ರತೀಕವೆಂಬಂತೆ ಮೌಲಾನಾ ಮುಹಮ್ಮದಲಿ-ಗಾಂಧಿ ಸೌಹಾರ್ದವು ಮೂಡಿದ್ದು ಖಿಲಾಫತ್ ಚಳವಳಿಯಿಂದಾಗಿತ್ತು.

ಅಲೀಘಡ್ ವಿಶ್ವವಿದ್ಯಾನಿಲಯದ ವಸಾಹತುಶಾಹಿ ದಾಸ್ಯತನಕ್ಕೆ ಬದಲಿಯಾಗಿ ಸ್ಥಾಪಿಸಲ್ಪಟ್ಟ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಬೇಕಾಗಿ ಹಣ ಸಂಗ್ರಹಕ್ಕೆ ಗಾಂಧೀಜಿ ಮತ್ತು ಮುಹಮ್ಮದಲಿ ಜೊತೆ ಸೇರಲು ಮತ್ತು ಗಾಂಧೀಜಿಯವರು ಮೌಲಾನಾ ಮುಹಮ್ಮದಲಿಯವರ ಮನೆಯಲ್ಲಿ ಸತ್ಯಾಗ್ರಹ ಅಥವಾ ಉಪವಾಸ ಆಚರಿಸುವವರೆಗೆ ಈ ಗೆಳೆತನ ಬೆಳೆಯಿತು. ಮಾತ್ರವಲ್ಲ, ಖಿಲಾಫತ್ ಚಳವಳಿಯು ಮುಂದಿಟ್ಟ ‘ಅಸಹಕಾರ ಚಳವಳಿ’ ಎಂಬ ಆಶಯವನ್ನು ಗಾಂಧೀಜಿಯ ಮೂಲಕ ಕಾಂಗ್ರೆಸ್ ಕೈಗೆತ್ತಿಕೊಳ್ಳುವುದರೊಂದಿಗೆ ರಾಷ್ಟ್ರೀಯ ಆಂದೋಲನವು ಜನಾಂದೋಲನವಾಗಿ ಪರಿವರ್ತಿತವಾಯಿತು. (ಮುಂದುವರಿಯುವುದು)