ಹೊಸದಿಲ್ಲಿ, ಜೂ.19: ಪ್ರಧಾನಿ ನರೇಂದ್ರ ಮೋದಿ ಕರೆದಿರುವ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ , ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯಿಡು, ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ತಿಳಿಸಿದ್ದಾರೆ. ಒಂದು ದೇಶ, ಒಂದು ಚುನಾವಣೆ ಎಂಬ ವಿಷಯವನ್ನು ಚರ್ಚಿಸಲು ಇಂದು ದಿಲ್ಲಿಯಲ್ಲಿ ಸರ್ವಪಕ್ಷಗಳ ಅಧ್ಯಕ್ಷರ ಸಭೆಯನ್ನು ಪ್ರಧಾನಿ ಕರೆದಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಾತಿನಿಧ್ಯವನ್ನು ಹೊಂದಿರುವ ರಾಜಕೀಯ ಪಕ್ಷ ಮತ್ತು ಅಧ್ಯಕ್ಷರನ್ನು ಸಭೆಗೆ ಕರೆಯಲಾಗಿದೆ. ಕೇಂದ್ರ ಸರಕಾರದೊಂದಿಗೆ ಸಂವಿಧಾನಾತ್ಮಕ ಸಂಬಂಧವನ್ನು ಮಾತ್ರ ನಾವು ಹೊಂದಿದ್ದೇವೆ. ರಾಜ್ಯಕ್ಕೆ ಅರ್ಹ ಸಹಾಯ ಕೇಂದ್ರ ಸರಕಾರದಿಂದ ಸಿಗದೆ ಸಭೆಯಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ ಎಂದು ಚಂದ್ರಶೇಖರ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟಿಡಿಪಿ ನಾಯಕ ಚಂದ್ರಬಾಬು ನಾಯಿಡು ವಿದೇಶಕ್ಕೆ ಹೋಗುವುದರಿಂದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಟಿಡಿಪಿಯನ್ನು ಪ್ರತಿನಿಧಿಸಿ ಗುಂಟೂರ್ ಸಂಸದ ಜೈದೇವ್ ಗಲ್ಲ ಸಭೆಯಲ್ಲಿ ಭಾಗವಹಿಸುತ್ತಾರೆ. ಮೋದಿಯ ನೀತಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಡಿಎಂಕೆ ಹೇಳಿದೆ. ಒಂದು ದೇಶ ಒಂದು ಚುನಾವಣೆ ನಮ್ಮ ದೇಶದ ಫೆಡರಲ್ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವಪರ ಹಕ್ಕುಗಳನ್ನು ಬುಡಮೇಲುಗೊಳಿಸುತ್ತದೆ. ಬೇರೆ ಆದ್ಯತೆಯ ವಿಷಯ ಇರುವುದರಿಂದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಟಾಲಿನ್ ಹೇಳಿದರು. ಪಕ್ಷ ಅಧ್ಯಕ್ಷರನ್ನು ಕರೆದ ಸಭೆಯಲ್ಲಿ ತಾನೂ ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿಯವರು ಈ ಹಿಂದೆಯೇ ತಿಳಿಸಿದ್ದರು. ತುಂಬ ಗಂಭೀರ ವಿಷಯದಲ್ಲಿ ದುಡುಕಿನ ತೀರ್ಮಾನ ಕೈಗೊಳ್ಳಲಾಗದು ಎಂದು ಅವರು ಪಾರ್ಲಿಮೆಂಟರಿ ವಿಷಯಗಳ ಸಚಿವ ಪ್ರಹ್ಲಾದ್ ಜೋಷಿಗೆ ಪತ್ರ ಬರೆದು ತಿಳಿಸಿದ್ದಾರೆ. ಪಕ್ಷ ಸ್ಥಾಪನೆಯ ದಿನಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿಬಿಡತೆಯಿರುವುದರಿಂದ ಸಭೆಗೆ ಬರುವುದಿಲ್ಲ ಎಂದು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಕೂಡ ಹೇಳಿದ್ದಾರೆ.












