ಗುಪ್ತ ಬಹುದೇವಾರಾಧನೆ: ಈ ಬಗ್ಗೆ ನಿಮಗೆಷ್ಟು ಗೊತ್ತು? ವಾರದ ಕ್ಲಾಸ್

0
2292

ಮೌ| ಅಬುಲ್ ಆಲಾ ಮೌದೂದಿ

ಜನರನ್ನು ಮೆಚ್ಚಿಸಲಿಕ್ಕಾಗಿ ಕೆಲಸ ಮಾಡುವುದು ಕೇವಲ ಪ್ರಾಮಾಣಿಕತೆಗೆ ವಿರುದ್ಧವಾದುದು ಮಾತ್ರವಲ್ಲ ಸತ್ಯವಿಶ್ವಾಸಕ್ಕೂ ವಿರುದ್ಧವಾಗಿದೆ. ಆದ್ದರಿಂದಲೇ ಇದನ್ನು ‘ಗುಪ್ತ ಬಹುದೇವಾರಾಧನೆ’ ಎನ್ನಲಾಗಿದೆ. ಅಲ್ಲಾಹನ ಮತ್ತು ಪರಲೋಕದ ಮೇಲೆ ಲಕ್ಷ್ಯವಿಟ್ಟು ಕೆಲಸ ಮಾಡುವ ವ್ಯಕ್ತಿಯು ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಗಮನದಲ್ಲಿರಿಸಬೇಕು.

ತೋರಿಕೆ ಮತ್ತು ಪ್ರದರ್ಶನ ಪ್ರಿಯ ವ್ಯಕ್ತಿಯು ಜನರ ಮೆಚ್ಚುಗೆ ಪಡೆಯಲೆಂದೇ ಹಾತೊರೆಯುತ್ತಾನೆ . ಆತನು ಲೋಕದಲ್ಲಿ ಜನಪ್ರಿಯತೆ, ಕೀರ್ತಿ, ಪ್ರಭಾವ, ಸ್ಥಾನ-ಮಾನ ಪಡೆಯಬಯಸುತ್ತಾನೆ, ಅಲ್ಲಾಹನ ಜಾಗದಲ್ಲಿ ಜನರನ್ನು ಕೇಂದ್ರೀಕರಿಸಿಕೊಂಡಿರುತ್ತಾನೆ. ಇಂತಹ ಮನಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಎಷ್ಟೇ ಧರ್ಮದ ಸೇವೆಯನ್ನು ಮಾಡಿದರೂ ಅದು ದೈವಿಕ ಅಥವಾ ಧರ್ಮಕ್ಕಾಗಿ ಮಾಡಿದ ಸೇವೆ ಎಣಿಸಲಾರದು ಮತ್ತು ಅಲ್ಲಾಹನ ಬಳಿ ಒಳಿತಾಗಿ ಗಣಿಸಲ್ಪಡಲಾರದು.

ಪ್ರದರ್ಶನ ಪ್ರಿಯ ವ್ಯಕ್ತಿಯ ಸ್ವಭಾವವೇನೆಂದರೆ ಯಾವುದರ ಬಗ್ಗೆ ಲೋಕದಲ್ಲಿ ಸುದ್ದಿಯಾಗುತ್ತದೋ ಮತ್ತು ಯಾವುದೆಲ್ಲ ಅಭಿನಂದನೆಯ ಕಾಣಿಕೆ ತಂದು ಕೊಡುತ್ತದೋ ಅದನ್ನೇ ಅವನು ಕೆಲಸವೆಂದು ಭಾವಿಸುತ್ತಾನೆ. ಗದ್ದಲ – ಅಬ್ಬರಗಲಿಲ್ಲದ ಮೌನವಾದ ಕೆಲಸಗಳು ಇಂಥವರ ದೃಷ್ಟಿಯಲ್ಲಿ ಕೆಲಸವೇ ಅಲ್ಲ. ಹೀಗೆಯೇ ಒಬ್ಬ ವ್ಯಕ್ತಿಯ ಕಾರ್ಯಕ್ಷೇತ್ರವು ಕೇವಲ ಜನರ ಗಮನ ಸೆಳೆಯಳು ಮತ್ತು ಪ್ರಚಾರ ಬಯಸಲು ಮಾತ್ರ ಸೀಮಿತಗೊಳ್ಳುತ್ತದೆ. ಕೆಲಸದ ಆರಂಭ ಎಷ್ಟೇ ಪ್ರಾಮಾಣಿಕ ಚಿತ್ತದಿಂದ ಮಾಡಲಾಗಿದ್ದರೂ ಕೂಡ, ಈ ತೋರಿಕೆಯ ರೋಗ ಒಬ್ಬನಲ್ಲಿ ತಗಳುತ್ತಲೇ ಕ್ಷಯ ರೋಗವು ಹೇಗೆ ಜೀವದ ಶಕ್ತಿಯನ್ನು ನುಂಗುತ್ತಾ ಸಾಗುವಂತೆ, ಅವನ ಪ್ರಾಮಾಣಿಕತೆಯನ್ನು, ಸಜ್ಜನಿಕೆಯನ್ನು ಘಾಸಿಗೊಳಿಸುತ್ತಾ ಸಾಗುತ್ತದೆ.

ಒಂದು ಮೂಲೆಯಲ್ಲಿ ಕೂತು ಜಪ ಮಾಡುವ ಇತರೆ ಸತ್ಕಾರ್ಯ ಮಾಡುವ ಮಂದಿಗೆ ಈ ಪರೀಕ್ಷೆಯಿಂದ ದೂರವಿರುವುದು ತುಲನಾತ್ಮಕವಾಗಿ ಸುಲಭ. ಆದರೆ ಯಾರು ಸಾರ್ವಜನಿಕ ರಂಗದಲ್ಲಿ ಸುಧಾರಣೆ ಮತ್ತು ನಿರ್ಮಾಣದ ಸೇವೆಗೆಯ್ಯುತ್ತಾರೋ ಅಂತವರ ಪಾಲಿಗೆ ಈ ಪ್ರದರ್ಶನದ ಗೀಳು ಬೇಗನೆ ತಟ್ಟುತ್ತದೆ.

ಆದುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವವರು ತನ್ನೊಳಗೆ ಸೃಷ್ಟಿಯಾಗುವ ಇಂಥಹ ಮಾನಸಿಕತೆಯ ಕುರಿತು ಸ್ವಸಮೀಕ್ಷೆ ನಡೆಸುತ್ತಿರಬೇಕು. ಅಲ್ಲಾಹನೊಂದಿಗೆ ಕ್ಷಮೆ ಯಾಚಿಸುತ್ತಾ ಮನಸ್ಸಿನ ಸ್ಥಿತಿಯನ್ನು ತಕ್ಷಣ ಬದಲಿಸಬೇಕು. ತನ್ನ ಕೆಲಸಗಳನ್ನು ಪ್ರಕಟಿಸುವ ಮತ್ತು ಬಹಿರಂಗ ಪಡಿಸುವ ಪರಿಪಾಠವನ್ನು ಅವಶ್ಯಕತೆ ಎಷ್ಟಿದೆಯೋ ಅಷ್ಟಕ್ಕೇ ಸೀಮಿತಗೊಳಿಸಬೇಕು.ಜನರ ಹೊಗಳಿಕೆ-ತೆಗಳಿಕೆ ಬಗ್ಗೆ ನೀರಪೇಕ್ಷಕನಾಗಿ ಅಲ್ಲಾಹನಿಗಾಗಿ ಕರ್ಮಭೂಮಿಯಲ್ಲಿ ಕಾರ್ಯಪ್ರವರ್ತನಾಗಬೇಕು.