ಅಡ್ಯನಡ್ಕ: ವಿದ್ಯಾರ್ಥಿಗಳನ್ನು ಮುಂದಿರಿಸಿ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ: ವೆಲ್ಫೇರ್ ಪಾರ್ಟಿ ಜಿಲ್ಲಾ ಸತ್ಯಶೋಧನಾ ಸಮಿತಿ

0
544
ಸರ್ಫರಾಝ್

ಸನ್ಮಾರ್ಗ ವಾರ್ತೆ 

ಮಂಗಳೂರು: ನುಸ್ರತುಲ್ ಇಸ್ಲಾಮ್  ಎಂಬ  ಸಾಮಾಜಿಕ ಸಂಘಟನೆಯೊಂದು ಹಮ್ಮಿಕೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಬಹುದಾದ ಮಾರ್ಗದರ್ಶಿ ಎಂಬ ಶೈಕ್ಷಣಿಕ ತರಬೇತಿ ಕಾರ್ಯಾಗಾರದಲ್ಲಿ ಮತೀಯ ದಾಂಧಲೆ ನಡೆದ ಅಡ್ಯನಡ್ಕಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಕ ಜಿಲ್ಲಾ ಸಮಿತಿ ಸದಸ್ಯ ಸುಲೈಮಾನ್ ಕಲ್ಲರ್ಪೆ ನೇತೃತ್ವದಲ್ಲಿ  ಜಿಲ್ಲಾ ಸತ್ಯಶೋಧನಾ ಸಮಿತಿ ಭೇಟಿ ನೀಡಿತು.

ನುಸ್ರತುಲ್ ಇಸ್ಲಾಮ್ ಸಂಘಟನೆ ಈ ಕಾರ್ಯಾಗಾರಕ್ಕೆ ಹತ್ತಿರದ ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನು ಆಹ್ವಾನಿಸಿತ್ತು. ಅದರಂತೆ ಸಂಘಟಕರು ಪರಿಸರದ ಶಾಲೆಗಳಿಗೆ ಈ ತರಬೇತಿ ಕಾರ್ಯಾಗಾರದ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಳುಹಿಸಿಕೊಡುವ ವಿನಂತಿ ಮಾಡಿದ್ದರು ಕೂಡಾ. ಈ ಬಗ್ಗೆ ಮೊದಲೇ ತಿಳಿದಿದ್ದ ಸ್ಥಳೀಯ ಸಮಾಜಘಾತುಕ ವ್ಯಕ್ತಿಗಳಾದ ಗಣೇಶ್, ಜಯರಾಮ, ಅಕ್ಷಯ್, ಮತ್ತು ಶೇಕರ್ ಭಟ್ ದಾಂಧಲೆಯನ್ನು ನಡೆಸಿ ಸಾರ್ವಜನಿಕರಲ್ಲಿ ಕೋಮು ಪ್ರಚೋದನೆಯನ್ನು ನಡೆಸಲು ಪ್ರಯತ್ನಿಸಿದ್ದು, ಅಡ್ಯನಡ್ಕದ ಶಾಂತಿಪ್ರಿಯ ಜನತೆ ವಿಫಲಗೊಳಿಸಿದ್ದಾರೆ‌.

ಈ ದಾಂಧಲೆಕೋರರು ಜಿಲ್ಲೆಯ ಬೇಜವಾಬ್ದಾರಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೋಮು ಪ್ರಚೋದನೆಗೆ ಕುಖ್ಯಾತರಾದ ಶರಣ್ ಪಂಪ್‌ವೆಲ್‌ರ ದ್ವೇಷ ಭಾಷಣದಿಂದ ಪ್ರಚೋದಿತರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಕ್ರಮ ಪ್ರವೇಶ ನಡೆಸಿ ದಾಂಧಲೆ ನಡೆಸಿದ ಸಮಾಜಘಾತುಕ ವ್ಯಕ್ತಿಗಳ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸರು ಕಾರ್ಯಕ್ರಮ ನಿರೂಪಕರ ಮೇಲೆ ಪ್ರಕರಣ ದಾಖಲಿಸಿರುವುದು ಈ ಕೋಮು ಕ್ರಿಮಿಗಳಿಗೆ ಸರಕಾರವೇ ರಕ್ಷಣೆ ನೀಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಅಭಿವೃಧ್ಧಿಯನ್ನು ತೋರಿಸಿ ಮತ ಕೇಳಲು ಸಾಧ್ಯವಿಲ್ಲದ ಬಿಜೆಪಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶೈಕ್ಷಣಿಕ ತರಬೇತಿ ಶಿಬಿರದಲ್ಲೂ ಕೋಮು ವಿಷ ಬಿತ್ತುವ ಮೂಲಕ ಮತಬ್ಯಾಂಕ್ ಮಾಡಲು ಹೊರಟಿರುವುದು ನಾಚಿಕೆಗೇಡು. ಈ ಪ್ರಕರಣ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯನ್ನು ಕೋಮು ಘಾತುಕ ಶಕ್ತಿಗಳು ನಿಯಂತ್ರಿಸುತ್ತಿದೆ ಎಂದು  ಮತ್ತೊಮ್ಮೆ ಸಾಬೀತಾಗಿದೆ. ವಿದ್ಯಾರ್ಥಿಗಳಲ್ಲಿ ಕೋಮು ವಿಷ ಬಿತ್ತುವ ಈ ಮೂಲಕ ಜಾತ್ಯತೀತ ಮನಸ್ಥಿತಿಯ ಶಿಕ್ಷಕರನ್ನು ಬೆದರಿಸುವ ಕಾರ್ಯ ಸಮಾಜ ಘಾತುಕ ಶಕ್ತಿಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ.

ಅಡ್ಯನಡ್ಕದಲ್ಲಿ ದಾಂಧಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿ ತಕ್ಷಣ ಬಂಧಿಸಬೇಕು ಮತ್ತು ಸ್ಥಳದಲ್ಲಿದ್ದೂ ಮೂಕಸಮ್ಮತಿಯನ್ನು ಸೂಚಿಸಿದ ಪೊಲೀಸರನ್ನು ತಕ್ಷಣ ಅಮಾನತು ಮಾಡಬೇಕು; ತಪ್ಪಿದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾನೂನು ಹೋರಾಟವನ್ನು ನಡೆಸಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫರಾಝ್ ತಿಳಿಸಿದ್ದಾರೆ.