ಸನ್ಮಾರ್ಗ ವಾರ್ತೆ
ನವದೆಹಲಿ, ಜ. 17— ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ)ಪ್ರಶ್ನಿಸಿ ವೆಲ್ಫೇರ್ ಪಾರ್ಟಿಯು ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಸಿಎಎಯನ್ನು ರದ್ದುಪಡಿಸುವಂತೆ ಒತ್ತಾಯಿಸಿದೆ.
ಸಿಎಎಯನ್ನು ಡಿಸೆಂಬರ್ 11 ರಂದು ಸಂಸತ್ತು ಅಂಗೀಕರಿಸಿದಾಗಿನಿಂದ, ಸಿಎಎ ವಿರುದ್ಧ 60 ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್ನಲ್ಲಿ ದಾಖಲಿಸಲಾಗಿದೆ. ಈ ಅರ್ಜಿಗಳನ್ನು ಉನ್ನತ ನ್ಯಾಯಾಲಯ ಜನವರಿ 22 ರಂದು ಆಲಿಸುವ ಸಾಧ್ಯತೆ ಇದೆ. ಪಕ್ಷದ ಅಧ್ಯಕ್ಷ ಡಾ. ಎಸ್ಕ್ಯೂಆರ್ ಇಲ್ಯಾಸ್ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಸಿಎಎಯನ್ನು ಅಸಂವಿಧಾನಿಕ ಮತ್ತು ತಾರತಮ್ಯದ್ದು ಎಂದು ಕರೆಯಲಾಗಿದೆ.
ಅರ್ಜಿಯ ಮುಖ್ಯ ಅಂಶಗಳು:
1. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನದ 14 ನೇ ವಿಧಿಗೆ ವಿರುದ್ಧವಾಗಿದೆ.
2. ಜನರನ್ನು ವರ್ಗೀಕರಣಗೊಳಿಸುವುದನ್ನು ಸಂವಿಧಾನದ ವಿಧಿ 15 ನಿಷೇಧಿಸುತ್ತದೆ. ಆದ್ದರಿಂದ ಸಿಎಎನಲ್ಲಿರುವ ಈ ವರ್ಗೀಕರಣವು ಅಸಮಂಜಸವಾಗಿದೆ ಮತ್ತು ದೇಶದ ನಾಗರಿಕರನ್ನು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ.
3. ಆಗಸ್ಟ್ 31, 2019 ರಂದು ಪ್ರಕಟವಾದ ಅಸ್ಸಾಂ ಎನ್ಆರ್ಸಿ ಪಟ್ಟಿಯಿಂದ ಹೊರಗುಳಿದ ಹಿಂದೂ ವಲಸಿಗರಿಗೆ ಸಿಎಎ ಸೆಕ್ಷನ್ 6 ಬಿ ಅಡಿಯಲ್ಲಿ ಲಾಭ ಪಡೆಯಲು ಅರ್ಹತೆ ಇರುತ್ತದೆ. ಆದರೆ, ಮುಸ್ಲಿಂ ವಲಸಿಗರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ. ಸಿಎಎ ಅಸ್ಸಾಂ 1985 ರ ಒಪ್ಪಂದವನ್ನು ಉಲ್ಲಂಘಿಸುತ್ತದೆ ಮತ್ತು ಇದು ಸ್ಥಳೀಯ ಜನರ ಜನಾಂಗೀಯತೆಗೆ ಅಪಾಯಕಾರಿಯಾಗಿದೆ.
4. ಭಾರತ ಸರ್ಕಾರವು ದೇಶದ ಉದ್ದಕ್ಕೂ ಎನ್ಆರ್ಸಿಯನ್ನು ಘೋಷಿಸಿದೆ ಮತ್ತು ದಾಖಲೆ ಪತ್ರಗಳ ಕೊರತೆಯಿಂದಾಗಿ ಜನರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿಫಲವಾದರೆ ಅಂತಹ ನಾಗರಿಕರನ್ನು ಹೊರಗಿಡಲಾಗುತ್ತದೆ. ಆದಾಗ್ಯೂ, ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಈ ಕಾಯ್ದೆಯ ಸೆಕ್ಷನ್ 6 ಬಿ ಅಡಿಯಲ್ಲಿ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ, ಆದರೆ ಮುಸ್ಲಿಮರಿಗೆ ಈ ಅವಕಾಶ ಇಲ್ಲ. ಇದರಿಂದ ಅದು ಸಂವಿಧಾನದ 14 ಮತ್ತು 15 ನೇ ವಿಧಿಯ ಸಂಪೂರ್ಣ ಉಲ್ಲಂಘನೆಯಾಗುತ್ತದೆ. .
5. ಸಿಎಎಯು ಅಂತಾರಾಷ್ಟ್ರೀಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ (ಯುಡಿಹೆಚ್ಆರ್) 15 ನೇ ವಿಧಿಯನ್ನು ಸಹ ಉಲ್ಲಂಘಿಸುತ್ತದೆ. ಯುಡಿಹೆಚ್ಆರ್- ಪ್ರತಿಯೊಬ್ಬ ನಾಗರಿಕನಿಗೆ ರಾಷ್ಟ್ರೀಯತೆಯ ಹಕ್ಕನ್ನು ಖಾತರಿಪಡಿಸುತ್ತದೆ ಮತ್ತು ಈ ಸಂಹಿತೆಗೆ ಭಾರತ ಸಹಿ ಹಾಕಿರುವ ದೇಶವಾಗಿದೆ.












