ಟ್ರಂಪ್ ಏನು ಮಾಡಬಹುದು?

0
787

✍️ ಅರಫಾ ಮಂಚಿ

ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಅವರು ಇರಾನ್ ಮೇಲೆ ಅಮೆರಿಕದ ದಾಳಿ “ತಪ್ಪು” ಎಂದು ಎಚ್ಚರಿಸಿದ್ದಾರೆ, ವಾಷಿಂಗ್ಟನ್ ಮತ್ತು ಟೆಹ್ರಾನ್ ತಮ್ಮ ಸಮಸ್ಯೆಗಳನ್ನು ರಾಜತಾಂತ್ರಿಕವಾಗಿ ಬಗೆಹರಿಸಬೇಕೆಂದು ಸಲಹೆ ನೀಡಿದ್ದಾರೆ. ಸೌದಿ ಅರೇಬಿಯದ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅವರು ಇರಾನಿನ ವಿರುದ್ಧ ಅಮೆರಿಕಕ್ಕೆ ನಮ್ಮ ಭೂಮಿಯಿಂದ ಏನನ್ನು ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್‌ನ ಮೇಲೆ ದಾಳಿ ಮಾಡುವೆ, ಇರಾನನ್ನು ನಾಲ್ಕು ಸುತ್ತುಗಳಿಂದ ಸುತ್ತುವರಿದಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಗುಡುಗುವಾಗಲೇ ಮುಹಮ್ಮದ್ ಬಿನ್ ಸಲ್ಮಾನ್ ಉಲ್ಟಾ ಹೊಡೆದಿದ್ದಾರೆ. ಸರಿಯಾದ ನಿರ್ಧಾರ ಇದು. ಆಚೆ ಇರಾನಿನಲ್ಲಿ ಯುದ್ಧ ನಡೆದರೆ ಸೌದಿ ಅರೇಬಿಯ ಅಮೆರಿಕದಲ್ಲಿಲ್ಲ. ಅಲ್ಲಿನ ವ್ಯವಸ್ಥೆ ತಾರು ಮಾರು ಏರುಪೇರಾಗುತ್ತದೆ. ಸೌದಿಯಲ್ಲಿರುವ ಅಮೆರಿಕದ ಏರ್‌ಬೇಸ್‌ನಿಂದ ದಾಳಿ ಮಾಡುವೆ ಎಂದು ಯೋಚಿಸುತ್ತಿದ್ದ ಟ್ರಂಪ್ ಎಡವಿ ಬಿಟ್ಟರು. ಇರಾನ್ ಮತ್ತು ಸೌದಿ ಅರೇಬಿಯ ಒಂದೇ ದನಿಯಲ್ಲಿ ಮಾತಾಡಿದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕಕ್ಕೆ ಯಾವ ಗುನ್ನ ಹೊಡೆಯಲೂ ಸಾಧ್ಯವಿಲ್ಲ. ಜೊತೆಯಲ್ಲಿ ಪರಮಾಣುಯುಕ್ತ ಇಸ್ಲಾಮಾಬಾದಿನೊಂದಿಗೆ ಸೌದಿ ಅರೇಬಿಯ ಮಿಲಿಟರಿ ಮೈತ್ರಿಯಲ್ಲಿದೆ. ಇದು ಪಾಕಿಸ್ತಾನಕ್ಕೂ ಒಳ್ಳೇದೇ. ಅಮೆರಿಕದ ದೊಣ್ಣೆಗೆ ಸೊಳ್ಳೆ ಹೊಡೆಯಲು ಕಳುಹಿಸುವ ಅವಕಾಶ ಅದಕ್ಕೂ ಸಿಕ್ಕಿತು. ಇರಾನಿನ ಇಸ್ಲಾಮಿಕ್ ಸ್ಟೇಟ್‌ಗೆ ಬಲ ತುಂಬುವುದಕ್ಕೂ ಹೀಗಾಗಬೇಕಿತ್ತು. ಆಗಿದೆ.

ಹಾಗಿದ್ದರೆ ಟ್ರಂಪ್ ಏನು ಮಾಡಬಹುದು? ಈ ಹೊಸ ಬೆಳವಣಿಗೆಯಲ್ಲಿ ಇಸ್ರೇಲಂತೂ ತರತರ ನಡುಗುತ್ತಿದೆ. ತನ್ನ ದೇಶದ ಎಲ್ಲ ಸುರಕ್ಷಾ ಸನ್ನಾಹಗಳನ್ನು ಸಿದ್ಧಪಡಿಸಿಟ್ಟು ಅಪಾಯದಿಂದ ತಾನು ಸುರಕ್ಷಿತವಾಗಿರುವ ವ್ಯವಸ್ಥೆ ಮಾಡುತ್ತಿದೆ. ಆದರೆ ಅದು ಇರಾನಿನ ಮಿಸೈಲನ್ನು ತಡೆಯುವಷ್ಟು ಗಟ್ಟಿಯೂ ಇಲ್ಲ. ಫಾರಸ್ ಕೊಲ್ಲಿಗೆ ಯುದ್ಧ ಹಡಗು ಜಾರ್ಜ್ ಲಿಂಕನ್ ಅನ್ನು ಕಳುಹಿಸಿ ಅಲ್ಲಿಂದ ಬಿ2 ಬಾಂಬರ್ ಇರಾನಿಗೆ ಹಾಕಬಹುದು ಎಂದು ಸದ್ಯಕ್ಕೆ ಅಮೆರಿಕ ನೆನೆಸಿದೆ. ಆದರೆ ಆ ಹಡಗನ್ನೇ ಮುಳುಗಿಸಲು ನಾಲ್ಕು ಕಡೆಗಳಿಂದ ಇರಾನ್ ಸಿದ್ಧತೆ ಮಾಡುತ್ತಿದೆ. ಯಮನ್‌ನ ಹೂತಿಗಳು, ಹಿಝ್ಬುಲ್ಲ ಜಾರ್ಜ್ ಲಿಂಕನ್ ಪುಡಿಗಟ್ಟುತ್ತೇವೆ ಎಂದು ಘೋಷಿಸಿಯೂ ಆಗಿದೆ. ಸಾಲದ್ದಕ್ಕೆ ಲಿಂಕನ್ ಅನ್ನು ಪುಡಿ ಮಾಡುವ ಅಣಕು ದೃಶ್ಯಗಳನ್ನು ಇರಾನ್ ತನ್ನ ಸ್ಟೇಟ್ ಟಿವಿಯಲ್ಲಿ ಪ್ರಸಾರ ಮಾಡಿದೆ.

ಫಾರಸ್ ಕೊಲ್ಲಿಗೆ ಅಬ್ರಹಾಂ ಲಿಂಕನ್ ಬಂದದ್ದು ಯಾಕೆ?

ಇರಾನ್, ಆಡಳಿತ ವಿರೋಧಿ ಪ್ರತಿಭಟನಾಕಾರರಿಗೆ ಫಾಸಿ ಕೊಡುತ್ತದೆ. ಈ ಹತ್ಯೆಯನ್ನು ತಡೆಯುವ ಉದ್ದೇಶದಿಂದ ಜಾರ್ಜ್ ಅಬ್ರಹಾಂ ಲಿಂಕನ್ ನೌಕೆಯನ್ನು ಕಳುಹಿಸಿದ್ದು ಯಥಾರ್ಥವಾದ ವಿಷಯ. ಟ್ರಂಪ್, ಇಸ್ರೇಲ್ ಪ್ರಾಯೋಜಿತವಾಗಿದ್ದ ಆ ಪ್ರತಿಭಟನೆಯಲ್ಲಿ ಸಿಐಎ ಮತ್ತು ಮೊಸಾದ್ ಭಾಗಿಯಾಗಿತ್ತು. ಸಾವಿರಾರು ಪ್ರತಿಭಟನಾಕಾರರ ಜೊತೆ ಈ ಏಜೆಂಟುಗಳು ಇರಾನ್ ಕೈಗೆ ಸಿಕ್ಕಿ ಬಿದ್ದಿದ್ದರಿಂದ ಅವರನ್ನು ಉಳಿಸುವುದು ಟ್ರಂಪ್‌ಗೆ ಸವಾಲಾಗಿತ್ತು. ಹೀಗೆ ವೆನೆಜುವೇಲದಷ್ಟು ದೊಡ್ಡ ಯುದ್ಧನೌಕೆ ಕಳುಹಿಸಿದ್ದೇನೆ ಎನ್ನುತ್ತಾ ಟ್ರಂಪ್ ಗುಟುರು ಹಾಕುತ್ತಿದ್ದಾರೆ. ಇರಾನ್ ತನ್ನ ನೆಲದ ಕಾನೂನನ್ನು ಇಂದಲ್ಲದಿದ್ದರೆ ನಾಳೆ ಜಾರಿ ಮಾಡಿ ತೀರಿಸುತ್ತದೆ ಎಂಬ ಸತ್ಯ ಜಗತ್ತಿಗೆ ತಮ್ಮ ಅನುಭವಗಳಿಂದ ಗೊತ್ತಿದೆ.

ಟ್ರಂಪ್‌ಗೆ ಯುದ್ಧದ ಹೊರತು ಅನ್ಯ ದಾರಿಯಿಲ್ಲ. ಈ ವಿಷಯ ಇರಾನಿಗೂ ಗೊತ್ತಿದೆ. ಅದು ಸಿಐಎ ಮೊಸಾದ್ ಏಜೆಂಟರನ್ನು ಕೈಚೆಲ್ಲಿ ಕೂರುವುದಕ್ಕೆ ಸಿದ್ಧವಿಲ್ಲ. ಖಾಸಿಂ ಸುಲೈಮಾನಿ, ಇಸ್ಮಾಯೀಲ್ ಹನಿಯ್ಯ ಮುಂತಾದ ಮುಖಂಡರನ್ನು ಮೊಸಾದ್ ಏಜಂಟರು ಹತ್ಯೆ ಮಾಡಿದ ಉರಿ ಅದಕ್ಕೂ ಇದೆ. ಮೊಸಾದ್ ಪ್ಲೇನ್ ಕ್ರಾಶ್ ಕೂಡ ಮಾಡಿಸಬಲ್ಲುದು. ಇರಾನಿನ ಮಾಜಿ ಅಧ್ಯಕ್ಷ ವಿದೇಶ ಸಚಿವರಿದ್ದ ವಿಮಾನ ಕ್ರಾಶ್ ಮಾಡಿಸಿದ ಬಗ್ಗೆ ಗುಪ್ತಚರ ವರದಿಗಳು ಇರಬಹುದು. ಅಷ್ಟು ಮಾತ್ರವಲ್ಲ ಮೊಸಾದ್ ಯಾವುದೇ ರಾಷ್ಟ್ರದಲ್ಲಿ ನುಗ್ಗಿ ಯಾವ ವಿಮಾನ ವನ್ನು ಪುಡಿಗುಟ್ಟಿಸುವಷ್ಟು ಅಪಾಯಕಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ಇರಾನ್ ತನ್ನ ಸೈನಿಕರನ್ನು ಯುದ್ಧಕ್ಕೆ ಸಜ್ಜಾದ ಸ್ಥಿತಿಯಲ್ಲಿರಿಸಿದೆ. ರಿವ್ಯೂಲೇಶನರಿ ಗಾರ್ಡ್‌ಗಳಿಗೆ ಯುದ್ಧದಲ್ಲಿ ಸತ್ತರೂ ವೈರಿಯನ್ನು ಸೋಲಿಸಿದರೂ ಅವರು ಗೆಲ್ಲುತ್ತಾರೆ. ಸಾವಿನಭಯವರಿಯದ ಆಧುನಿಕ ಸೈನಿಕ ಪಡೆಯಾಗಿದೆ ಅದು.

ಆದ್ದರಿಂದ ಯಾವುದೇ ಮುಸ್ಲಿಮ್ ದೇಶಗಳು ಅಮೆರಿಕಕ್ಕೆ ಬೆಂಬಲಕ್ಕೆ ನಿಂತರೆ ಎಚ್ಚರ, ನೀವು ಕೂಡ ಇರಾನಿನ ಕ್ಷಿಪಣಿಯಿಂದ ಬಚಾವಾಗಲಾರಿರಿ ಎಂದು ಇರಾನಿನ ಸೈನಿಕ ಮುಖಂಡರು ದೊಡ್ಡ ಮಟ್ಟದ ಎಚ್ಚರಿಕೆಯನ್ನು ಕತರ್ ಯುಎಇ ಸೌದಿ, ಬಹ್ರೈನ್‌ ಮುಂತಾದ ದೇಶಗಳಿಗೆ ರವಾನಿಸಿದ್ದಾರೆ.

ಸದ್ಯಕ್ಕೆ ಇರಾನ್ ಸೈಸೈ:

ಟೆಹ್ರಾನ್‌ನ ಪುರಸಭೆಯು ರಾಜಧಾನಿಯ ಕೇಂದ್ರ ಪ್ರದೇಶದಲ್ಲಿರುವ ಇಂಕ್ವಿಲಾಬ್ (ಕ್ರಾಂತಿ) ಚೌಕದಲ್ಲಿ ದೈತ್ಯ ಜಾಹೀರಾತು ಫಲಕವನ್ನು ಅನಾವರಣಗೊಳಿಸಿತು. ಯುಎಸ್‌ಎಸ್ ಅಬ್ರಹಾಂ ಲಿಂಕನ್ ಸೂಪರ್‌ಕ್ಯಾರಿಯರ್ ಮತ್ತು ಯುದ್ಧ ವಿಮಾನಗಳನ್ನು ಇರಾನಿನ ಡ್ರೋನ್‌ಗಳು ಪುಡಿ ಪುಡಿ ಮಾಡುವ ದೃಶ್ಯ ಈ ಜಾಹಿರಾತಿನಲ್ಲಿ ಹರಿದಾಡುತ್ತಿತ್ತು. ಸಮುದ್ರದಲ್ಲಿ ರಕ್ತದ ಹೊಳೆ ಹರಿಯುತ್ತಿತ್ತು.

ಅತ್ತ ಇರಾಕಿನ ಅರೆಸೈನಿಕ ಪಡೆ ಕತೀಬ್ ಹಿಝ್ಬುಲ್ಲ ಯಾರಾದರೂ ಇರಾನಿಗೆ ದಾಳಿ ಮಾಡಿದರೆ ಟೆಹ್ರಾನ್‌ಗೆ ಸಂಪೂರ್ಣ ಮಿಲಿಟರಿ ಸಹಾಯ ನೀಡುತ್ತೇವೆ. ತಮ್ಮ ಯೋಧರು ರೆಡಿಯಾಗಿದ್ದಾರೆ ಎಂದು ಈಗಾಗಲೇ ಘೋಷಿಸಿದೆ. ಇತ್ತ ಅಬ್ರಾಹಾಂ ಲಿಂಕನ್ ಬಂದಾಗ ಇರಾನಿಗೆ ಚೀನ, ರಷ್ಯಗಳು ಕೂಡ ನೈತಿಕ ಬೆಂಬಲ ಕೊಡುತ್ತಿವೆ. ಟ್ರಂಪ್ ರಷ್ಯಕ್ಕೂ ಆಗಲ್ಲ. ಚೀನಕ್ಕೂ ಆಗಲ್ಲ. ಮತ್ತೆ ಯಾರಿಗೆ ಬೇಕು? ದಾವೋಸ್ ಆರ್ಥಿಕ ಶೃಂಗದಲ್ಲಿ ಟ್ರಂಪ್ ಗ್ರೀನ್ ಲೆಂಡ್‌ನ ಕುರಿತು ಡೆನ್ಮಾರ್ಕ್‌ನ್ನು ಬೈದಾಗಲೇ ಯುರೋಪಿಯನ್ನರಿಗೂ ಬೇಡ ಅಂತನ್ನಿಸಿತು. ಇವೆಲ್ಲವೂ ಇರಾನಿಗೆ ಸಹಕಾರಿಯಾದ ಪರಿಸ್ಥಿತಿಯಾಗಿದೆ. ಟ್ರಂಪ್ ಬಗೆದ್ದೊಂದು ಆದರೆ ಆಗಿದ್ದು ಇನ್ನೊಂದು. ಈಗ ಟ್ರಂಪ್ ಏನು ಮಾಡುತ್ತಾರೆ.

ಕಳೆದ ವರ್ಷ ಜೂನ್‌ನಲ್ಲಿ ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡುವ ಮೂಲಕ ಇರಾನ್‌ನ ಮೂರು ಪ್ರಮುಖ ಪರಮಾಣು ಸೌಲಭ್ಯಗಳನ್ನು “ನಾಶಗೊಳಿಸಿದೆ ಎನ್ನುತ್ತಾ ಟ್ರಂಪ್ ತಿರುಗಾಡುತ್ತಿದ್ದಾರೆ. ಇದು ಯಾತಕ್ಕೆ ಮಾಡಿದ್ದು? ಇಸ್ರೇಲಿಗಾಗಿ ಮಾಡಿದ್ದೆಂದು ಜಗತ್ತಿಗೆ ಗೊತ್ತಿತ್ತು. ಆದರೆ ಇರಾನ್ ಇಸ್ರೇಲಿನ ಮೇಲೆ ದಾಳಿ ಮಾಡಿ ಅಂತಹ ನಾಶ ನಷ್ಟವನ್ನು ಸೃಷ್ಟಿಸಿತ್ತು. ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ. ಇರಾನಿನ ಪರಮಾಣು ಕಾರ್ಯಕ್ರಮ ಮುಂದುವರಿದಿದೆ. ಇರಾನ್ ಈಗ ಸಂಪೂರ್ಣ ಪರಮಾಣು ರಾಷ್ಟ್ರ ಆಗಿದೆ ಎಂಬ ವರದಿಗಳು ಇವೆ. ಏನಿದ್ದರೂ ಟ್ರಂಪ್ ಮತ್ತು ಇಸ್ರೇಲ್ ಮೇಲೆ ಜನ ನಂಬಿಕೆ ಕಳಕೊಂಡಿದ್ದಾರೆ ಎಂಬುದನ್ನು ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ತೋರಿಸುತ್ತಿವೆ. ಹಾಗಿದ್ದರೆ ಟ್ರಂಪ್ ಏನು ಮಾಡಬಹುದು?

ಅಮೆರಿಕದ ಪತನಕ್ಕೆ ಕಾರಣವಾಗಬಹುದು. ಕನಿಷ್ಠ ಡಾಲರ್ ಪತನಕ್ಕೆ ಅವರು ಕಾರಣರಾಗುತ್ತಾರೆ. ಅಂದರೆ ಅಮೆರಿಕದ ಆರ್ಥಿಕ ಪತನ ಗ್ಯಾರಂಟಿ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಹೆಚ್ಚುತ್ತಿರುವೆ ಹೇರಿ ಅಮೆರಿಕಕ್ಕೆ ಲಾಭ ಮಾಡುತ್ತಿದ್ದೇವೆ ಎಂಬ ಟ್ರಂಪ್‌ರ ಹೇಳಿಕೆಗಳೇ ಈ ಮಾತಿಗೆ ನೀವು ಆಧಾರವಾಗಿ ನೋಡಬಹುದು. ಜೊತೆಗೆ ಯುರೋಪ್ ದೇಶಗಳು ಬದಲಿ ಆರ್ಥಿಕ ಶಕ್ತಿ ಚೀನದತ್ತ ಒಲವು ತೋರಿಸುವುದನ್ನು ಕೂಡ ಆಧಾರವಾಗಿ ಪರಿಗಣಿಸಬಹುದು. ಒಟ್ಟಿನಲ್ಲಿ ಚೀನ ಅಮೆರಿಕದ ವಿರುದ್ಧ ಸುವ್ಯಸ್ಥಿತವಾದ ಬುದ್ಧಿವಂತಿಕೆಯ ಹೋರಾಟವನ್ನು ಕಟ್ಟುತ್ತಿದೆ ಎಂಬುದು ಇಲ್ಲಿ ಖಚಿತವಾಗುತ್ತಿದೆ. ಹಾವು ಮುಂಗುಸಿ ಯಂತಿದ್ದ ಸೌದಿ ಮತ್ತು ಇರಾನಿನ ನಡುವೆ ಮಿತೃತ್ವ ಕುದುರಿಸಿದ್ದು ಚೀನ ಮತ್ತು ರಷ್ಯ ದೇಶಗಳು ಎಂಬುದು ಕೂಡ ಗಮನಾರ್ಹವಾಗಿದೆ.

ಇಸ್ರೇಲ್‌ನ ದುಂಡಾವರ್ತಿ:

ಅಮೆರಿಕದ ಮಧ್ಯಪ್ರಾಚ್ಯದ ಪ್ರಾಕ್ಸಿ ಇಸ್ರೇಲಿಗೂ ಮುಂದೇನು ಎಂಬ ಭಯದ ಪರಿಸ್ಥಿತಿ ನೆಲಸಿದ್ದಂತೂ ಸತ್ಯವಾಗಿದೆ. ಆದರೆ ಅಡಿಗೆ ಬಿದ್ದರೂ ಮೂಗು ಮೇಲೆ ಇರುವಂತಿರುವ ಇಸ್ರೇಲ್ ಮಧ್ಯಪ್ರಾಚ್ಯದ ಇತ್ತೀಚೆಗಿನ ಬೆಳವಣಿಗೆಗಳನ್ನು ನಿರ್ಲಕ್ಷಿಸಿರುವಂತೆ ವರ್ತಿಸುತ್ತಿದೆ. ಗಾಝದ ಮೇಲೆ ಬಾಂಬಿಂಗ್ ಮುಂದುವರಿಸುತ್ತಿದೆ. ಇಸ್ರೇಲಿನ ಪರಿಸ್ಥಿತಿಯಂತೂ ಕನಿಕರ ಪಡುವಂತಹದ್ದು. ನೋಡಿ ಇತ್ತೀಚೆಗೆ ಇಸ್ರೇಲಿ ಇನ್‌ಫ್ಲೆಯೆನ್ಸರ್ ಸಾಮಿ ಯಾಹುದ್‌ರ ವೀಸಾವನ್ನು ಆಸ್ಟ್ರೇಲಿಯ ರದ್ದುಪಡಿಸಿತು. ಆಸ್ಟ್ರೇಲಿಯದಲ್ಲಿ ದ್ವೇಷ ಹರಡುವವರಿಗೆ ಸ್ವಾಗತವಿಲ್ಲವೆಂದು ಆಸ್ಟ್ರೇಲಿಯ ಸರಕಾರ ಕಾರಣವನ್ನೂ ನೀಡಿತ್ತು. ಈ ಸಾಮಿ ಯಾಹುದ್ ಇಸ್ಲಾಮ್ ವಿರೋಧಿ ಪ್ರಚಾರಕ್ಕೆ ಕುಖ್ಯಾತಿ ಗಳಿಸಿದ್ದ ವ್ಯಕ್ತಿಯಾಗಿದ್ದಾರೆ. ಆದರೆ ಕಳೆದ ಡಿಸೆಂಬರ್ ಹದಿನಾಲ್ಕಕ್ಕೆ ಸಿಡ್ನಿಯ ಬಾಂಡಿ ಬೀಚಿನಲ್ಲಿ ಹನುಕ್ ಆಚರಣೆಯ ಸಮಯದಲ್ಲಿ ನಡೆದಿದ್ದ ಗುಂಡು ಹಾರಾಟದಲ್ಲಿ ಹದಿನೈದು ಮಂದಿ ಕೊಲ್ಲಲ್ಪಟ್ಟ ನಂತರ ಈ ಝಿಯೊನಿಸ್ಟ್ ದೇಶದ ಮೇಲೆ ಆಸ್ಟ್ರೇಲಿಯದಲ್ಲಿ ಅನುಮಾನಗಳು ದಟ್ಟವಾಗುತ್ತಿದೆ.

ಯಾಕೆಂದರೆ ಈ ಹತ್ಯಾಕಾಂಡದ ತನಿಖೆಯಲ್ಲಿ ಇಸ್ರೇಲ್ ಕನೆಕ್ಷನ್ ಇದೆ ಎಂದು ಗೊತ್ತಾದ ನಂತರ ಇಸ್ರೇಲಿನ ಪ್ರವಾಸಿಗರನ್ನು ಕೂಡ ಕಟ್ಟುನಿಟ್ಟಾದ ತಪಾಸಣೆಯ ನಂತರವೇ ದೇಶದೊಳಗೆ ಪ್ರವೇಶ ನೀಡಲು ನಿರ್ಧರಿಸಿದೆ. ಆಸ್ಟ್ರೇಲಿಯ ಈ ಹಿಂದೆಯೂ ಇಸ್ರೇಲಿನ ರಾಜಕಾರಣಿ ಸಿಂಚ ರಾಟ್ಮನ್‌ರಿಗೂ ವೀಸಾ ನಿರಾಕರಿಸಿತ್ತು. ರಾಟ್ಮನ್ ಇಸ್ರೇಲಿನ ತೀವ್ರ ಬಲಪಂಥೀಯ ರಾಜಕಾರಣಿ. ಆಸ್ಟ್ರೇಲಿಯದಲ್ಲಿ ಇಸ್ಲಾಮೊಫೋಬಿಯ ಹರಡಲು ಈ ವ್ಯಕ್ತಿ ಸಿಡ್ನಿಯ ಬಾಂಡಿ ಘಟನೆಯನ್ನು ಬಳಸಬಹುದು ಎಂಬ ಕಾರಣದಿಂದ ಆಸ್ಟ್ರೇಲಿಯವನ್ನು ಪ್ರವೇಶಿಸದಂತೆ ತಡೆಯಲಾಗಿದೆ. ಆಗ ರಾಟ್ಮನ್ ಈಗ ಸಾಮಿ ಯಾಹುದ್.

ಒಟ್ಟಿನಲ್ಲಿ ಆಸ್ಟ್ರೇಲಿಯ ಸಹಿತ ಬೇರೆ ದೇಶದಲ್ಲಿ ದೊಂಬಿ, ಕ್ಷೋಭೆಗಳನ್ನು ಎಬ್ಬಿಸಿ ಹಾಕುವ ಕೆಲಸವನ್ನು ಇಸ್ರೇಲ್ ಮಾಡುತ್ತಿದೆ ಎಂದು ಜಗತ್ತಿನ ಹಲವು ದೇಶಗಳು ಖಚಿತಪಡಿಸಿಕೊಂಡಿವೆ. ಅಮೆರಿಕಕ್ಕೆ ಬೇಕಿದ್ದಲ್ಲೆಲ್ಲ ದೊಡ್ಡಣ್ಣನಿಗಾಗಿ ಕೆಲಸ ಮಾಡುವ ಏಜೆಂಟ್ ಇಸ್ರೇಲ್.

ಜಗತ್ತಿಗೆ ದಂಡೆತ್ತಿ ಬರುತ್ತಿರುವ ಅಲೆಗ್ಸಾಂಡರ್:

ಅಥವಾ ಫರೋವ ಅನ್ನಿ, ಅದು ಅವರವರ ಭಾವಕ್ಕೆ ಬಿಟ್ಟದ್ದು. ಯಾಕೆಂದರೆ ಇದೇ ವೇಳೆ ಟ್ರಂಪ್ ಇಡೀ ವಿಶ್ವವನ್ನೇ ತನ್ನ ವಸಾಹತು ಮಾಡಲು ಹೊರಟದ್ದೆಂದು ಯುರೋಪಿಗೂ ಗೊತ್ತಾಗಿದೆ. ಇಂಗ್ಲೆಂಡ್ ಈಗ ಚೀನಕ್ಕೆ ಹತ್ತಿರ ಆಗಲು ಹೊರಟಿದೆ. ವಿಶ್ವಕ್ಕೆ ಅಲೆಗ್ಸಾಂಡರ್ ಆಗಲು ಹೊರಟು ಟ್ರಂಪ್ ದಂಡೆತ್ತಿ ಬರುತ್ತಾರೆ ಎಂದು ಯುಕೆಗೆ ಅರ್ಥವಾಗುತ್ತಿದೆ. ನೆನಪಿರಲಿ, ಇಂತಹ ದಾಹಿಗಳಿಗೆ ಸ್ವಂತದವರೂಂತ ಯಾರೂ ಇಲ್ಲ. ವೆನೆಜುವೇಲದ ಪ್ರೆಸಿಡೆಂಟ್‌ರನ್ನೇ ಹೊತ್ತುಕೊಂಡು ಹೋದ ಮೇಲೆ ಗ್ರೀನ್‌ಲೆಂಡ್ ವಶಪಡಿಸಲು ಅಮೆರಿಕ ಹೊರಟದ್ದು. ಡೆನ್ಮಾರ್ಕ್ ಕೋಪದಿಂದ ಕೂಗಾಡುತ್ತಿರುವುದು ಇವೆಲ್ಲ ಟ್ರಂಪ್‌ರ ಕತೆಗಳು ಇಂಗ್ಲೆಂಡನ್ನು ಬದಲಿ ಚಿಂತನೆಗಳತ್ತ ಕರೆತಂದಿತು ಅಂತ ವಿಶ್ಲೇಷಕರ ಅಭಿಪ್ರಾಯ.

ದಾವೋಸ್‌ನ ವಿಶ್ವ ಆರ್ಥಿಕ ಮೇಳದಲ್ಲಿ ಬೆಲ್ಜಿಯಂ ವಿರುದ್ಧ ಟ್ರಂಪ್ ಆಕ್ರೋಶ ಕೇಳಿಸಿಕೊಂಡು ಜರ್ಮನಿಯ ಚಾನ್ಸಲರ್ ನ್ಯಾಟೋದ ತಮ್ಮ ದೇಶದಲ್ಲಿರುವ ಏರ್‌ಬೇಸ್ ಅನ್ನು ಅಮೆರಿಕ್ಕಕ್ಕೆ ಮರಳಿ ಸುತ್ತೇವೆ ಎಂದು ಹೇಳಿದ್ದರು. ಅಂದರೆ ಅಮೆರಿಕ ಹೊರತಾಗಿ ನ್ಯಾಟೋವೇ ಇಲ್ಲ ಎಂದು ಟ್ರಂಪ್ ಅಲ್ಲಿ ಹೇಳಿದ್ದಕ್ಕೆ ಪ್ರತಿಯಾಗಿ ಈ ಮಾತು ಆಡಿದ್ದು. ಅಂದರೆ ಜರ್ಮನಿ ಕೂಡ ಟ್ರಂಪ್‌ರ ವಿಶ್ವದಾಹಕ್ಕೆ ಕೋಪದಿಂದ ಕುದಿಯು ತ್ತಿದೆ. ಹಾಗಿದ್ದರೆ ಟ್ರಂಪ್ ಏನು ಮಾಡಬಹುದು?

ಜರ್ಮನಿಗೂ ಟ್ರಂಪ್ ಸಹವಾಸ ಬೇಡ:

ಜರ್ಮನಿ ಕೂಡ ಟ್ರಂಪ್‌ನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಈ ಅಪನಂಬಿಕೆಯಿಂದಲೇ ಜರ್ಮನಿ ಈಗ ಅಮೆರಿಕದಲ್ಲಿ ತೆಗೆದಿರಿಸಲು ಕೊಟ್ಟಿರುವ ತಮ್ಮ 1,236 ಟನ್ ಚಿನ್ನವನ್ನು ಮರಳಿಸಬೇಕೆಂದು ಹೇಳುತ್ತಿದೆ. ಇಂತಹ ಒಬ್ಬ ವಿಕ್ಷಿಪ್ತ ಮತಿ ಟ್ರಂಪ್ ಅಮೆರಿಕದಲ್ಲಿ ಅಧ್ಯಕ್ಷರಾಗಿ ಬರುತ್ತಾರೆ ಎಂದು ಜರ್ಮನಿಗೆ ಮೊದಲು ಗೊತ್ತಿರಲಿಲ್ಲ. ಅದು ಈಗ ತನ್ನ ಚಿನ್ನವನ್ನು ನಮಗೆ ಕೊಡಿ ಎಂದು ಅಲ್ಲಿನ ಆಡಳಿತ ಪಕ್ಷ ಕ್ರಿಶ್ಚಿನ್ ಡೆಮಕ್ರಾಟಿಕ್ ಪಾರ್ಟಿ ನಿರ್ಣಯ ಮಾಡಿದೆ. ಟ್ರಂಪ್‌ಗೆ ಹೀಗೂ ಆರ್ಥಿಕ ಪೆಟ್ಟೇ.

ಮುಸ್ಲಿಂ ಜಗತ್ತಿನ ಆಕ್ರೋಶ:

ಹೌದು ಇರಾನ್ ಮೇಲೆ ಟ್ರಂಪ್ ಬೆದರಿಕೆಗಳ ವಿರುದ್ಧ ಮುಸ್ಲಿಂ ಜಗತ್ತೇ ಆಕ್ರೋಶಗೊಂಡಿದೆ. ಆ ದೇಶಗಳ ಜನರು ಟ್ರಂಪ್ ವಿರುದ್ಧ ಆಕ್ರೋಶಗೊಂಡಿದ್ದರಿಂದ ಈ ದೇಶಗಳ ಆಡಳಿತಗಾರರಿಗೆ ಅಮೆರಿಕವನ್ನು ಎದುರು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಜನ ಸಿಡಿದೇಳುತ್ತಾರೆ. ಇತ್ತೀಚೆಗೆ ಅಮೆರಿಕ, ಇಂಗ್ಲೆಂಡ್ ಸಹಿತ ಯುರೋಪ್ ದೇಶಗಳಲ್ಲಿ ಟ್ರಂಪ್ ದುಂಡಾವರ್ತಿಯನ್ನು, ವಲಸೆ ವಿರೋಧಿ ನೀತಿಯನ್ನು, ಸಾಮ್ರಾಜ್ಯ ದಾಹವನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಬಾಗ್ದಾದ್ ನಲ್ಲಿ ನಡೆದ ಇತ್ತೀಚೆಗಿನ ಪ್ರತಿಭಟನೆಯಲ್ಲಿ ಜನರು ಡೊನಾಲ್ಡ್ ಟ್ರಂಪ್ ಅವರ ಫೋಟೊಗಳಿಗೆ ಬೆಂಕಿ ಹಚ್ಚಿ ಸುಟ್ಟರು. ಇರಾಕಿ ಧ್ವಜವನ್ನು ಬೀಸಿದ್ದಾರೆ. ಇರಾಕಿನ ಶಿಯಾ ಮೇಧಾವಿ ಮಾಜಿ ಪ್ರಧಾನಿ ನೂರಿ ಮಲಿಕಿ ಪ್ರಧಾನಿ ಹುದ್ದೆಗೆ ಮರಳಬಾರದೆಂದು ಟ್ರಂಪ್ ಧಮಕಿ ಹಾಕಿದ್ದು ಅವರಲ್ಲಿ ಆಕ್ರೋಶ ತರಿಸಿದೆ. ಮಲಿಕಿ ಇರಾನ್ ಪರ ಇರುವ ವ್ಯಕ್ತಿ.

ಇಸ್ರೇಲಿನೊಂದಿಗೆ ಗುಪ್ತವಾಗಿ ಮಿತೃತ್ವ ಹೊಂದಿದ್ದ ಕೊಲ್ಲಿ ದೇಶಗಳ ಅರಸರು ಧೈರ್ಯ ಕಳಕೊಂಡಿದ್ದಾರೆ. ಜನ ತಿರುಗಿ ಬೀಳುವ ಹೆದರಿಕೆ ಅವರಿಗೂ ಇದೆ. ಸಾಲದ್ದಕ್ಕೆ ಕತರ್ ಮೇಲೆ ಇಸ್ರೇಲ್ ದಾಳಿ ಮಾಡಿದ ಮೇಲೆ ವಿಶ್ವಾಸ ಕಳೆದುಕೊಂಡಿರುವುದು ಅಮೆರಿಕದ ಬಗ್ಗೆಯೂ ನಂಬಿಕೆ ಹೊರಟು ಹೋಗಿದೆ. ಅಮೆರಿಕ ಹೇಳದೆ ಇಸ್ರೇಲ್ ಈ ಕೆಲಸ ಮಾಡಿಲ್ಲ ಎಂದು ಯುಎಇಗೂ ಗೊತ್ತು. ಕತರ್, ಸೌದಿ, ಕುವೈಟ್‌ಗಳಿಗೂ ಗೊತ್ತು.
ವಾಸ್ತವದಲ್ಲಿ ಇರಾನಿಗೆ ದಾಳಿ ಮಾಡಲು ಜಾರ್ಜ್ ಅಬ್ರಹಾಂ ಲಿಂಕನ್ ಹಡಗು ಕಳುಹಿಸಿ ಟ್ರಂಪ್ ಸ್ವಂತ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆದ್ದರಿಂದ ಯುದ್ಧ ಮಾಡದೆ ಮಾನ ಉಳಿಯದು. ಯುದ್ಧ ಮಾಡಿದರೆ ಗತಿ ಸ್ಥಿತಿ ಎರಡೂ ನೆಟ್ಟಗಿರದು. ಹೀಗಾಗಿ,

ಇರಾನ್ ಮೇಲೆ ದಾಳಿ ಮಾಡುತ್ತೇನೆ ಎಂದು ಬೆದರಿಕೆ ಒಡ್ಡುತ್ತಿರುವುದು. ಇನ್ನೊಮ್ಮೆ ಅವರೇ ಇರಾನ್ ಮಾತುಕತೆಗೆ ಬರಬಹುದು ಎನ್ನುವುದು. ಕೊನೆಗೂ ಈ ಟ್ರಂಪ್ ಟರ್ಕಿಯ ವಿದೇಶ ಸಚಿವ ಹಕನ್ ಫಿಡಾನ್ ಹೇಳಿದಂತೆ ಮಾತುಕತೆಯ ದಾರಿಗೆ ಬರಬಹುದು. ಯಾಕೆಂದರೆ ಇರಾನ್ ಬೆದರಿಕೆಗೆ ಜಗ್ಗುವವರ ದೇಶ ವಲ್ಲ. ಇರಾನಿನ ಅಧ್ಯಕ್ಷ ಮಸೂದ್ ಪೆಜಸ್ಕಿಯಾನ್ ಸೌದಿ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಜೊತೆಗಿನ ಮಾತುಕತೆಯ ನಂತರ ಅಮೆರಿಕಕ್ಕೆ ಸೌದಿ ಸಹಕರಿಸುವುದಿಲ್ಲ ಎಂದು ಬಹಿರಂಗ ಹೇಳಿಕೆ ಬಂದ ನಂತರ ಡೊನಾಲ್ಡ್ ಟ್ರಂಪ್ ಏನು ಮಾಡಬಹುದು?