ಹೈದರಾಬಾದ್ ಸಮ್ಮೇಳನದ ಉದ್ದೇಶವೇನು?

0
591

ಸನ್ಮಾರ್ಗ ವಾರ್ತೆ

ಹೈದರಾಬಾದ್‌ನಲ್ಲಿ ನಡೆದ ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರ ಐದನೇ ಅಖಿಲ ಭಾರತ ಸಮ್ಮೇಳನದ ಹಿನ್ನಲೆಯಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಟಿ. ಆರಿಫ್ ಅಲಿಯವರೊಂದಿಗೆ ನಡೆಸಲಾದ ಸಂದರ್ಶನ.

ಪ್ರಶ್ನೆ: ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರ ಸಮ್ಮೇಳನ ಯಶ್ವಸಿಯಾಗಿ ನಡೆಯಿತು. ಈ ಸಮ್ಮೇಳನದ ಹಿನ್ನಲೆಯೇನು?

ಉತ್ತರ: ವಿಶೇಷವಾದ ಗುರಿಯೊಂದಿಗೆ ದೊಡ್ಡ ಕರ್ತವ್ಯಗಳನ್ನು ನಿರ್ವಹಿಸಲು ವಿವಿಧ ಸಂದರ್ಭಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸದಸ್ಯರ ಸಭೆಯನ್ನು ನಡೆಸುತ್ತದೆ. 2015ರಲ್ಲಿ ಇದೇ ಸ್ಥಳದಲ್ಲಿ ಸದಸ್ಯರ ಸಮ್ಮೇಳನವು ನಡೆದಿತ್ತು. 2015ರಲ್ಲಿ ಭಾರತದಲ್ಲಿನ ವಿಶಿಷ್ಟ ರಾಜಕೀಯ ಪರಿಸ್ಥಿತಿ ನಮಗೆ ತಿಳಿದಿದೆ. ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದು, ಅದರ ಅಜೆಂಡಾಗಳು ಆತಂಕ ಸೃಷ್ಟಿಸಿದ್ದವು. ಬದಲಾದ ರಾಜಕೀಯ ಪರಿಸ್ಥಿತಿಯಿಂದ ಎದುರಿಸಬೇಕಾದ ಸವಾಲುಗಳೊಂದಿಗೆ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂಬ ವಿಷಯದಲ್ಲಿ ಮುಸ್ಲಿಮ್ ಸಮುದಾಯದ ಒಳಗೂ, ಇಸ್ಲಾಮೀ ಆಂದೋಲನದಲ್ಲೂ ಚರ್ಚೆಗಳು ನಡೆಯುತ್ತಿತ್ತು.

ಇಂಥ ಸಂದರ್ಭದಲ್ಲಿ ಇಸ್ಲಾಮಿ ಆಂದೋಲನದ ಕೇಂದ್ರ ಬಿಂದುವಾಗಿರುವ ಸದಸ್ಯರನ್ನು ಜಾಗೃತಗೊಳಿಸುವುದು ಸಮ್ಮೇಳನದ ಉದ್ದೇಶವಾಗಿತ್ತು. 2023ರಲ್ಲಿ ಮಾಡಿದ ಕಾರ್ಯ ಯೋಜನೆಯಂತೆ 2024ರ ಈ ಸಮ್ಮೇಳನ ನಡೆದಿದೆ. ದೇಶದ ಹೊಸ ಪರಿಸ್ಥಿತಿಯನ್ನು ಮುಂದಿರಿಸಿಕೊಂಡು ಕಾರ್ಯ ಯೋಜನೆಯಲ್ಲಿ ಹಲವಾರು ಬದಲಾವಣೆ ತರಲಾಗಿದೆ.

ಪ್ರತಿಯೊಬ್ಬ ಜಮಾಅತ್ ಸದಸ್ಯರು ನಿರ್ವಹಿಸಬೇಕಾದ ಹೊಣೆಯೇನೆಂದು ಮೀಖಾತಿ ಮನ್ಸೂಬಾದಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಕಾಲದಲ್ಲಿ ನಾವು ಗಳಿಸಬೇಕಾದ ಮೀಕಾತಿ ಮಿಶನ್ ಕೂಡಾ ಮುಂದಿದೆ. ಅದರ ಆಧಾರದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯವನ್ನೂ ಸಿದ್ಧಪಡಿಸಲಾಗಿದೆ. ಇದನ್ನು ಸದಸ್ಯರಿಗೆ ತಲುಪಿಸುವ ವ್ಯವಸ್ಥೆ ಇದ್ದರೂ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಬದಲಾದ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು, ಅದಕ್ಕೆ ಎಲ್ಲರನ್ನೂ ಹೇಗೆ ಸಿದ್ಧಗೊಳಿಸಬೇಕು, ಮುಸ್ಲಿಮ್ ಸಮುದಾಯವನ್ನು ಹೇಗೆ ಈ ಹೊಣೆಗಾರಿಕೆಯ ಭಾಗವಾಗಿಸಬಹುದು, ಇತರ ಸಮುದಾಯದೊಂದಿಗೆ ಸೇರಿಕೊಂಡು ಹೇಗೆ ಈ ಮಿಶನ್ ಪೂರ್ತಿಗೊಳಿಸಲು ಸಾಧ್ಯ ಎಂಬ ಬಗ್ಗೆ ಪ್ರಜ್ಞಾವಂತಗೊಳಿಸಬೇಕಾಗಿತ್ತು. ಅದು ಸಮ್ಮೇಳನದ ಒಂದು ಉದ್ದೇಶ.

ಹೆಚ್ಚುತ್ತಿರುವ ಬೆದರಿಕೆ ಮತ್ತು ದೌರ್ಜನ್ಯಗಳಿಂದ ಇನ್ನು ನಮಗೇನೂ ಮಾಡಲು ಸಾಧ್ಯವಿಲ್ಲವೆಂಬ ನಿರಾಶೆಗೆ ಜನ ತಲುಪುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಸಮುದಾಯಕ್ಕೆ ಸರಿಯಾದ ದಿಕ್ಕನ್ನು ತೋರಿಸಬೇಕಾಗಿದೆ. ಈ ವಿಷಯವನ್ನು ಮೊದಲನೆಯದಾಗಿ ತಿಳಿಯಬೇಕಾದದ್ದು ಮತ್ತು ಅದಕ್ಕೆ ಸಿದ್ಧರಾಗಬೇಕಾದದ್ದು ಸದಸ್ಯರಾಗಿದ್ದಾರೆ. ಇದು ಸಮ್ಮೇಳನದ ಇನ್ನೊಂದು ಉದ್ದೇಶ.

ಪ್ರಶ್ನೆ: ಪ್ರಸಕ್ತ ಭಾರತದಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ಧತೆ ಮೇಲುಗೈ ಸಾಧಿಸುತ್ತಿದೆ. ಈ ಸಂದರ್ಭದಲ್ಲಿ ಈ ಸಮ್ಮೇಳನವು ದೇಶದ ಪ್ರಜೆಗಳಿಗೆ ಯಾವ ಸಂದೇಶವನ್ನು ನೀಡಿದೆ?

ಉತ್ತರ: ನ್ಯಾಯ ಪಾಲನೆ ಎಂಬುದು ಸಮ್ಮೇಳನದ ಶೀರ್ಷಿಕೆಯಾಗಿತ್ತು. ನ್ಯಾಯ ಪಾಲನೆಯು ಅನಿವಾರ್ಯವಾಗಿರುವ ಸಂದರ್ಭವಿದು. ಒಂದನೆಯದಾಗಿ ಜಮಾಅತ್ ತನ್ನ ಸದಸ್ಯರಲ್ಲಿ ನ್ಯಾಯ ಪಾಲನೆಗೆ ಕರೆ ಕೊಡುತ್ತದೆ. ನೀವು ತಮ್ಮ ಜೀವನದಲ್ಲಿ ನ್ಯಾಯ ಪಾಲಿಸಿ. ಎರಡನೆಯದಾಗಿ ನೀವು ನ್ಯಾಯಕ್ಕಾಗಿ ನೆಲೆಗೊಳ್ಳಿರಿ. ಮೂರನೆಯದಾಗಿ ಸಮಾಜದಲ್ಲಿ ನ್ಯಾಯದ ಬಗ್ಗೆ ಚರ್ಚೆ ಸಮಗ್ರವಾಗಿ ನಡೆಯಬೇಕು.

ಏಕೆಂದರೆ ಅನ್ಯಾಯವನ್ನು ಆಧರಿಸಿದ ಸಾಮಾಜಿಕ ವ್ಯವಸ್ಥೆಯು ಭಾರತದಲ್ಲಿ ಯುಗಯುಗಗಳಿಂದ ಅಸ್ತಿತ್ವದಲ್ಲಿದೆ. ಇದಕ್ಕೆ ಜಾತೀಯತೆ ಮೊದಲ ಉದಾಹರಣೆ. ಆದರೆ ಇದನ್ನು ಹತ್ತಿಕ್ಕುವ ಸಂವಿಧಾನ 1950ರಲ್ಲಿ ನಮಗೆ ದೊರೆತಿತ್ತು. ಆದರೆ ಸಂವಿಧಾನವನ್ನು ಮೀರಿ ಉಚ್ಚ ನೀಚತೆ, ಧಾರ್ಮಿಕ ತಾರತಮ್ಯ, ದ್ವೇಷಗಳು ಇಂದು ಶಕ್ತವಾಗುತ್ತಿದೆ. ಈ ಅಪಾಯದಿಂದ ಪಾರಾಗಲು ಸಂವಿಧಾನದ ಮೌಲ್ಯಗಳನ್ನು ಇಲ್ಲಿ ಜಾರಿಗೊಳಿಸಬೇಕು. ನ್ಯಾಯಯುತ ಸಾಮಾಜಿಕ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಈ ಸಮ್ಮೇಳನವು ಜನತೆಯ ಮುಂದಿರಿಸಿದೆ.

ಶಾಂತಿಯುತ ಸಮಾಜ ನಿರ್ಮಾಣವು ಕೇವಲ ಒಂದು ಧಾರ್ಮಿಕ ವಿಭಾಗದ ಮಾತ್ರ ಹೊಣೆಯಲ್ಲ. ದೇಶ, ನ್ಯಾಯಾಲಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ. ನಾಲ್ಕನೆಯದಾಗಿ ದ್ವೇಷ ರಾಜಕೀಯದ ವಿರುದ್ಧದ ದೊಡ್ಡ ಧ್ವನಿಯು ಸಮ್ಮೇಳನದಲ್ಲಿ ಮೊಳಗಿತು. ದ್ವೇಷ ರಾಜಕಾರಣವು ದೇಶವನ್ನು ಅಧಃಪತನದತ್ತ ಮಾತ್ರ ಒಯ್ಯಲು ಸಾಧ್ಯ. ಆದ್ದರಿಂದ ದೇಶದ ಜನರು ಅದನ್ನು ತಿಳಿದುಕೊಂಡು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು.

ದೇಶದ ಗುಣಾತ್ಮಕ ಸಾಮರ್ಥ್ಯವನ್ನು ಸಮ್ಮೇಳನವು ಶ್ಲಾಘಿಸಿತು. ಹೆಚ್ಚುತ್ತಿರುವ ಜನಸಂಖ್ಯೆಯೇ ದೇಶದ ಶಕ್ತಿ. ಜ ನ ಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಪ್ರತಿಭಾವಂತರು ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ದೊಡ್ಡ ಕೊಡುಗೆಯನ್ನು ನೀಡಬಹುದು. ತಂತ್ರಜ್ಞಾನ ಮತ್ತು ಆರ್ಥಿಕ ರಂಗದಲ್ಲೂ ಪ್ರಗತಿ ಸಾಧಿಸುವ ಸಾಧ್ಯತೆ ನಮಗಿದೆ. ಆದರೆ ರಾಜಕೀಯ ಹಾಗೂ ಸಾಮಾಜಿಕ ಮಾಲಿನ್ಯದಿಂದಾಗಿ ಸಂಪನ್ಮೂಲವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿ, ದೇಶವನ್ನು ಮುನ್ನಡೆಸಲು ಬೇಕಾದ ಮೂಲಭೂತ ಮಾರ್ಗಸೂಚಿಗಳನ್ನು ಸಮ್ಮೇಳನ ದೇಶದ ಮುಂದಿರಿಸಿದೆ.

ಪ್ರಶ್ನೆ: ಈ ಸಮ್ಮೇಳನದ ಉದ್ದೇಶಗಳೇನು? ಅದನ್ನು ಸಾಧಿಸುವಲ್ಲಿ ನೀವು ಎಷ್ಟು ಯಶಸ್ವಿಯಾಗಿದ್ದೀರಿ?

ಉತ್ತರ: ಜಮಾಅತೆ ಇಸ್ಲಾಮೀ ಹಿಂದ್ ಎಂಬುದು ಒಂದು ಸೈದ್ಧಾಂತಿಕ ಆಂದೋಲನವಾಗಿದೆ. ಸ್ವಾಭಾವಿಕವಾಗಿ ಇದಕ್ಕೆ ವೈಚಾರಿಕ ಬೆಳವಣಿಗೆ ಅನಿವಾರ್ಯವಾಗಿದೆ. ಕೇವಲ ನಾಯಕತ್ವದಲ್ಲಿ ಮಾತ್ರ ವೈಚಾರಿಕ, ಚಿಂತನಾರ್ಹ ಬದಲಾವಣೆಯಾದರೆ ಸಾಲದು. ಅದು ಸದಸ್ಯರು ಮತ್ತು ಕಾರ್ಯಕರ್ತರಲ್ಲೂ ಗೋಚರಿಸಬೇಕು. ಪ್ರತಿನಿಧಿಗಳ ಚಿಂತನೆಗಳಿಗೆ ಸ್ಪಷ್ಟವಾದ ದಿಕ್ಕನ್ನು ತೋರಿಸುವುದು, ಇಡೀ ಆಂದೋಲನವನ್ನು ಹೊಸ ಹಂತಕ್ಕೆ ತಲುಪಿಸುವುದು ಈ ಸಮ್ಮೇಳನದ ಉದ್ದೇಶವಾಗಿತ್ತು.

ಎರಡನೆಯದಾಗಿ ಆಂದೋಲನದ ಚಟುವಟಿಕೆಗಳಲ್ಲಿ ಸ್ಪಷ್ಟತೆಯನ್ನು ಖಾತ್ರಿಪಡಿಸುವುದು. ದೇಶದ ಇಂದಿನ ಪರಿಸ್ಥಿತಿಯಲ್ಲಿ ನಾವು ಮುಂದುವರಿಯಬೇಕಾದ ದಾರಿ ಯಾವುದೆಂದು ತಿಳಿಸಿ, ಕಾರ್ಯರಂಗದಲ್ಲಿ ಕ್ಲಾರಿಟಿಯನ್ನು ಉಂಟು ಮಾಡುವುದು.

ಮೂರನೆಯದಾಗಿ ಸದಸ್ಯರಲ್ಲಿ ಆಧ್ಯಾತ್ಮಿಕತೆ, ಸಂಘಟನಾತ್ಮಕ ಭಾವನೆ, ಮುಸ್ಲಿಮ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವಂತಹ ಒಂದು ಮಾನಸಿಕ ಸ್ಥಿತಿ ರೂಪಿಸುವುದು. ಯಾವುದೇ ಸಂದಿಗ್ಧ ಹಂತವನ್ನು ಎದುರಿಸುವ ಸಾಮರ್ಥ್ಯವನ್ನು ಉಂಟುಮಾಡುವುದು.

ನಾಲ್ಕನೆಯದು ಅನುಭವಗಳ ಹಂಚಿಕೊಳ್ಳುವಿಕೆ. ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಚಟುವಟಿಕೆಗಳು ವಿಭಿನ್ನವಾಗಿರುತ್ತವೆ. ಇದನ್ನೆಲ್ಲಾ ಪರಸ್ಪರ ತಿಳಿಯಲು, ಅರ್ಥಮಾಡಿಕೊಳ್ಳಲು ಇದು ಒಂದು ಅವಕಾಶವಾಗಿದೆ. ಚಿಂತನೆ, ಕರ್ಮ, ಭಾವನೆ ಮತ್ತು ಅನುಭವ ಈ ನಾಲ್ಕು ಉದ್ದೇಶಗಳು ಈ ಸಮ್ಮೇಳನಕ್ಕೆ ಇತ್ತು. ಅದರಲ್ಲಿ ಸಮ್ಮೇಳನವು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಭಾಗವಹಿಸಿದ ಸದಸ್ಯರ ಅನುಭವದ ಹೇಳಿಕೆಗಳು ಇದನ್ನು ಸಾಬೀತು ಪಡಿಸಿವೆ. ಇಲ್ಲಿ ಲಭಿಸಿದ ಆವೇಶ, ಹುರುಪು, ಉತ್ಸಾಹವನ್ನು ತಮ್ಮೂರಿಗೆ ಮರಳಿದ ಸದಸ್ಯರು ಸಮಾಜದ ವಿವಿಧ ರಂಗಗಳಲ್ಲಿ ಪ್ರಚಾರ ಮಾಡಿದರೆ ದೊಡ್ಡ ಯಶಸ್ಸು ಸಾಧ್ಯ ಎಂದು ನಿರೀಕ್ಷಿಸಿದ್ದೇವೆ.

ಪ್ರಶ್ನೆ: 15,000 ಜನರು ಭಾಗವಹಿಸುವ ಒಂದು ಸಮ್ಮೇಳನ ನಡೆಸಲು ತೀರ್ಮಾನಿಸಿದಾಗ ಏನೆಲ್ಲಾ ಸವಾಲುಗಳು ಮುಂದಿದ್ದವು?

ಉತ್ತರ: ಜನರ ಅಭಿರುಚಿ ನಿಲುವುಗಳು, ಅಗತ್ಯಗಳು, ಸೌಕರ್ಯಗಳು ಹೀಗೆ ಎಲ್ಲದರಲ್ಲೂ ಬಹಳಷ್ಟು ಬದಲಾವಣೆಗಳು ಸಂಭವಿಸಿದ ಕಾಲವಿದು. ಆದ್ದರಿಂದ ಇಷ್ಟು ಅಧಿಕ ಸಂಖ್ಯೆಯಲ್ಲಿ ಜನರು ಒಂದುಗೂಡುವ ಈ ಸಭೆಯನ್ನು ಸದಸ್ಯರು ಹೇಗೆ ಸ್ವೀಕರಿಸಬಹುದು ಎಂಬ ವಿಷಯದಲ್ಲಿ ಆತಂಕವಿತ್ತು. ವಿಚಾರ ವಿನಿಮಯಗಳಿಗೆ ಹಲವು ರೀತಿಯ ಸುಲಭ ದಾರಿಗಳು ಇರುವಾಗ ಭಾರತದ ವಿವಿಧ ಕಡೆಗಳಿಂದ ಅವರನ್ನು ಸೇರಿಸುವಂತಹ ಆವಶ್ಯಕತೆ ಏನಿದೆ ಎಂಬ ಪ್ರಶ್ನೆ ಜಮಾಅತ್ ವಲಯಗಳಿಂದಲೇ ಕೇಳಿಬರಬಹುದು! ಈ ವಿಷಯವನ್ನು ನಾವು ಮೊದಲೇ ಎದುರಿಸಬೇಕಾಯಿತು.

ತಂತ್ರಜ್ಞಾನವನ್ನು ಉಪಯೋಗಿಸಿ ಧ್ವನಿ, ಶಬ್ದ, ದೃಶ್ಯ ಮಾಧ್ಯಮಗಳ ಮೂಲಕ ಹಂಚುವ ಕಾರ್ಯಗಳು ಮಾತ್ರವಲ್ಲ ಇಂತಹ ಸಮ್ಮೇಳನಗಳಿಂದ ನಡೆಯುವುದು. ಇಸ್ಲಾಮೀ ಕಾರ್ಯಕರ್ತರು ಮುಖತಃ ಭೇಟಿಯಾಗಿ, ಒಟ್ಟು ಸೇರಿ ಬೆರೆತು ಕುಳಿತುಕೊಂಡು, ಪ್ರಾರ್ಥಿಸಿ, ಒಟ್ಟಿಗೆ ದಿನ ಕಳೆದು, ಆಹಾರ ಸೇವಿಸಿ, ಒಟ್ಟಾಗಿ ನಿದ್ರಿಸಿ, ಪರಸ್ಪರ ಕೈ ಕುಲುಕುವುದು, ಆಲಿಂಗನ ಎಲ್ಲವನ್ನೂ ಮಾಡುವಾಗ ಉಂಟಾಗುವ ಅನುಭೂತಿಯು ಬೇರೆಯೇ ಮಟ್ಟದ್ದಾಗಿರುತ್ತದೆ. ಪರಸ್ಪರ ಕುಶಲೋಪರಿ, ಪರಿಸ್ಥಿತಿಯ ಅವಲೋಕನ, ಭಾವನಾತ್ಮಕ ವಿಚಾರಗಳು ಎಲ್ಲವೂ ಬಹಳ ಮುಖ್ಯವಾಗುತ್ತದೆ. ಇವೆಲ್ಲವನ್ನೂ ಆನ್‌ಲೈನ್‌ನ ಆಡಿಯೋ-ವೀಡಿಯೋ ಸಂದೇಶಗಳಿಂದ ಸಾಧ್ಯವಾಗುವುದಿಲ್ಲ. ಇದನ್ನು ಮನವರಿಕೆ ಮಾಡಲು ನಮಗೆ ಸಾಧ್ಯವಾಯಿತು. ಆದ್ದರಿಂದಲೇ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದರು.

ಅಭಿರುಚಿಗಳಲ್ಲೂ ದೊಡ್ಡ ವ್ಯತ್ಯಾಸ ಸಂಭವಿಸಿರುವ
ದಿನಗಳು. ದೀರ್ಘ ಭಾಷಣ, ಉಪನ್ಯಾಸಗಳನ್ನು ಕೇಳುವುದು ಅಷ್ಟು ಸುಲಭದ ವಿಷಯವಲ್ಲ. ಹಿಂದೆ ಒಂದೆರಡು ತಾಸು ದೀರ್ಘವಾದ ಭಾಷಣಗಳನ್ನು ಜನರು ಆವೇಶದಿಂದ ಕೇಳುತ್ತಿದ್ದರು. ಆದರೆ ಇಂದಿನ ಮನುಷ್ಯನಿಗೆ ಅದು ಸಾಧ್ಯವಿಲ್ಲ. ಏಕೆಂದರೆ ಮಾನಸಿಕ ಸ್ಥಿತಿ ಭಿನ್ನವಾಗಿದೆ. ಆದ್ದರಿಂದ ಹೊಸ ಪೀಳಿಗೆಯ ಅಭಿರುಚಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ಭಾಷಣದ ಹೊರತಾಗಿಯೂ ಜನರೊಂದಿಗೆ ಮಾತನಾಡಬೇಕಾಗಿದೆ. ಆದ್ದರಿಂದ ಬಹಳ ಹೃಸ್ವ ಅಧಿವೇಶನಗಳನ್ನು ಪ್ಲಾನ್ ಮಾಡಿದೆವು. ಸೆಶನ್‌ಗಳ ನಡುವೆ ತುಂಬಾ ಬಿಡುವು ಇತ್ತು. ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳ, ಸಂಸ್ಥೆಗಳ, ಘಟಕಗಳ ಕಾರ್ಯಚಟುವಟಿಕೆಯನ್ನು ಕಾಣಲು, ವಿಚಾರ ವಿನಿಮಯ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಬೋರು ಹೊಡೆಸುವ ಕಾರ್ಯಕ್ರಮವನ್ನು ಕೈ ಬಿಡಬೇಕು ಎಂಬುದು ದೊಡ್ಡ ಸವಾಲಿನ ಸಂಗತಿಯಾಗಿತ್ತು.

ಇದು ತಂತ್ರಜ್ಞಾನದ ಯುಗ. ಐದು ವರ್ಷಗಳ ಹಿಂದೆ ಒಂದು ಸಭೆಯಲ್ಲಿ ನಾವು ಮೊಬೈಲ್ ನೋಡುವುದು ಎಂಬುದು ಅಪಮಾನದ ವಿಷಯವಾಗಿತ್ತು. ಆದರೆ ಇಂದು ಮೊಬೈಲ್ ಫೋನ್ ಮತ್ತು ಡಿವೈಸ್‌ಗಳು ಸಮ್ಮೇಳನದ ಭಾಗವಾಗಿ ಬಿಟ್ಟಿದೆ. ಸಮ್ಮೇಳನದ ಅಗತ್ಯಕ್ಕಾಗಿಯೇ ಮೊಬೈಲ್ ನೋಡಬೇಕಾದ ಪರಿಸ್ಥಿತಿ ಇಂದಿನದು. ಅಭಿಪ್ರಾಯಗಳನ್ನು ಹೇಳುವಾಗಲೂ, ಇತರರ ಅಭಿಪ್ರಾಯಗಳನ್ನು ಮೌಲ್ಯಮಾಪನ ಮಾಡುವಾಗಲೂ, ಹೊಸ ವಿವರಗಳು ಲಭಿಸಲು ಫೋನ್‌ನಲ್ಲಿ ಒಂದು ಕ್ಲಿಕ್ ಸಾಕು ಎನ್ನುವ ಕಾಲದಲ್ಲಿ ನಾವಿದ್ದೇವೆ. ಮೊಬೈಲ್ ಅನ್ನು ಸೇರಿಸಿಕೊಂಡು ಮಾಡಬೇಕಾದ ಕಾರ್ಯಕ್ರಮ ಪ್ಲಾನ್ ಮಾಡಬೇಕಾಗುತ್ತದೆ. ಇದು ಇನ್ನೊಂದು ಸವಾಲಾಗಿತ್ತು. ಆದ್ದರಿಂದ ಆಧುನಿಕ ತಂತ್ರಜ್ಞಾನದ ಸಹಾಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲು ನಾವು ಪ್ರಯತ್ನಿಸಿದೆವು. ಮೊದಲೇ ಒಂದು ಮೊಬೈಲ್ ಆ್ಯಪ್ ಸಿದ್ಧಗೊಳಿಸಿ, ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಅದರಲ್ಲಿ ಸೇರಿಸಿದೆವು.

ರಿಜಿಸ್ಟ್ರೇಶನ್‌ನಿಂದ ಆರಂಭಗೊಂಡು ಭಾಷಣಗಳ ಅನುವಾದದವರೆಗೆ ಅದರಲ್ಲಿತ್ತು. ಜನರು ಎಷ್ಟು ಮಂದಿ, ಯಾವ ದಿನ, ಯಾವ ಸಮಯ, ಯಾವ ರೈಲ್ವೇ ಸ್ಟೇಶನ್‌ಗೆ ಬಂದು ತಲುಪುತ್ತಾರೆ ಎಂಬ ವಿವರಗಳೂ ಈ ಮೂಲಕ ಲಭಿಸಿತು. ಸಮ್ಮೇಳನದ ಭಾಷಣಗಳನ್ನು ಮೊದಲೇ ಸಿದ್ಧಪಡಿಸಿ, ಅನುವಾದಿಸಿ ಅವುಗಳನ್ನು ಆಡಿಯೋ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು. ವೇದಿಕೆಯಲ್ಲಿ ಭಾಷಣಗಳು ನಡೆಯುತ್ತಿರುವಾಗಲೇ ಆಯಾ ಭಾಷೆಗಳ ಅನುವಾದಗಳನ್ನು ವೀಕ್ಷಕರಿಗೆ ಕೇಳಬಹುದಾಗಿತ್ತು. ಮೊಬೈಲ್ ಫೋನ್ ಕೈಯಲ್ಲಿರುವ ವ್ಯಕ್ತಿ ಸಮ್ಮೇಳನದ ಮೊದಲೇ ಸಮ್ಮೇಳನದೊಂದಿಗೆ ಸಂಚರಿಸುವ ವಾತಾವರಣ ಸೃಷ್ಟಿಯಾಗಿತ್ತು. ಅಡ್ಮಿನಿಸ್ಟ್ರೇಶನ್, ಪ್ರದರ್ಶನ ಮುಂತಾದವುಗಳಲ್ಲಿ ಇದು ತುಂಬಾ ಪ್ರಯೋಜನವಾಯ್ತು.

ಭಾರತದ ಎಲ್ಲಾ ಭಾಷೆಗಳಿಂದಲೂ ಹೆಚ್ಚಿನ ಸಂಖ್ಯೆಯ ಜಮಾಅತ್ ಸದಸ್ಯರಾಗಿ ಸೇರಿಕೊಳ್ಳುತ್ತಿದ್ದಾರೆ. ಹಿಂದೆ ಪರಸ್ಪರ ಸಂವಹನ ಭಾಷೆಯಾಗಿ ಉರ್ದು ಮುಂದಿನ ಪಂಕ್ತಿಯಲ್ಲಿತ್ತು. ಇಂದು ಕೂಡಾ ಉರ್ದು ಮುಖ್ಯ ಭಾಷೆಯಾಗಿದ್ದರೂ, ಉರ್ದು ತಿಳಿಯದ ವ್ಯಕ್ತಿಗಳೂ ಧಾರಾಳವಾಗಿದ್ದಾರೆ. ಮಲಯಾಳ, ಬಂಗಾಳಿ, ತಮಿಳು, ಕನ್ನಡ, ಅಸ್ಸಾಮೀಸ್ ಭಾಷೆಗಳಲ್ಲಿ ಅನುವಾದಬೇಕಿತ್ತು. ಹಾಗಿದ್ದರೆ ಮಾತ್ರ ಆ ಭಾಷಿಕರಿಗೆ ಭಾಷಣ ತಿಳಿಯಲು ಸಾಧ್ಯ. ಅಲ್ಲೇ ಅದನ್ನು ಅನುವಾದಿಸಿದರೆ ಅರ್ಧಗಂಟೆಯ ಭಾಷಣಕ್ಕೆ ಹೆಚ್ಚೆಂದರೆ 10 ನಿಮಿಷ ನೀಡಬಹುದು. ಆದರೆ ಅದು ಪ್ರಾಯೋಗಿಕವಲ್ಲವೆಂದು ತಿಳಿದು ತಂತ್ರಜ್ಞಾನ ಮೊರೆ ಹೋದೆವು. ತಮ್ಮ ಮೊಬೈಲ್ ಫೋನ್‌ನಲ್ಲಿ ಯಾವುದೇ ಆತಂಕವಿಲ್ಲದೆ ಕೇಳುವಂತಹ ಅವಕಾಶ ಸದಸ್ಯರಿಗೆ ದೊರೆಯಿತು.

ಇನ್ನು ಜೀವನ ಶೈಲಿಯಲ್ಲಿನ ಬದಲಾವಣೆಯು ಇನ್ನೊಂದು. ಹಾಸಿಗೆ, ಕುಳಿತುಕೊಳ್ಳುವುದು, ಮಲಗುವುದು ಮತ್ತು ತಿನ್ನುವ ವಿಷಯದಲ್ಲೂ ಜನರ ಅಗತ್ಯತೆಗಳೇ ಬದಲಾಗಿದೆ. ಅದಕ್ಕೆ ಅನುಕೂಲತೆ ಮಾಡಿಕೊಡಬೇಕು. ಆಸನಗಳು, ಪ್ರಾರ್ಥನಾ ಸ್ಥಳ, ಮಲಗಲು ಇನ್ನೊಂದು ಸ್ಥಳ ಹೀಗೆ ಬೇರೆ ಬೇರೆ ಸೌಕರ್ಯ ಮಾಡಿಕೊಡಬೇಕಿತ್ತು. ಹಿಂದೆ ಇಂತಹ ಸೌಕರ್ಯಗಳಿಲ್ಲದಿದ್ದರೂ ನಡೆಯುತ್ತಿತ್ತು. ಹೀಗೆ ಎಲ್ಲವನ್ನೂ ಸುಂದರವಾಗಿ ನಿರ್ವಹಿಸಲು ನಮಗೆ ಸಾಧ್ಯವಾಯಿತು.

ಪ್ರಶ್ನೆ: ಹೈದರಾಬಾದ್‌ನ ಜನರು ಮತ್ತು ರಾಜ್ಯ ಸರಕಾರವು ಈ ಸಮ್ಮೇಳನವನ್ನು ಹೇಗೆ ನೋಡಿತು?

ಉತ್ತರ: ಹೈದರಾಬಾದ್ ಎರಡು ರೀತಿಯ ಸಹಾಯವನ್ನು ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರ ಸಮ್ಮೇಳನಕ್ಕೆ ನೀಡಿದೆ. ನಾವು ಹೈದರಾಬಾದ್‌ನ ಮುಸ್ಲಿಮ್ ಸಮುದಾಯವನ್ನು ಈ ಸಮ್ಮೇಳನಕ್ಕೆ ಸೇರಿಸಿಲ್ಲ. ಆದರೆ ಈ ಸಮ್ಮೇಳನವನ್ನು ಮುಸ್ಲಿಮ್ ಸಮುದಾಯ ಮತ್ತು ಸಂಘಟನೆಗಳು ಆತ್ಮೀಯವಾಗಿ ಸ್ವಾಗತಿಸಿತು.

ಜಮಾಅತೆ ಇಸ್ಲಾಮಿಯೊಂದಿಗೆ ಹಲವು ಅಭಿಪ್ರಾಯ ವ್ಯತ್ಯಾಸವಿದ್ದರೂ ಅಸದುದ್ದೀನ್ ಓವೈಸಿಯವರ ಸಹಕಾರವನ್ನು ಉಲ್ಲೇಖಿಸಲೇಬೇಕು. ಎಂ.ಎಲ್.ಸಿ. ಯಾಗಿರುವ ಮಿರ್ಝಾ ರಹ್ಮತ್ ಬೇಗ್ ಅವರನ್ನು ಸಮ್ಮೇಳನದ ಅಗತ್ಯಗಳಿಗಾಗಿ ಉವೈಸಿ ವಿಶೇಷವಾಗಿ ನೇಮಿಸಿದರು. ರೆಹಮತ್ ಬೇಗ್ ಸಮ್ಮೇಳನಕ್ಕೆ ಎಲ್ಲಾ ಇಲಾಖೆಗಳೊಂದಿಗೆ ಅಗತ್ಯ ನೆರವು ಮತ್ತು ಸಹಕಾರವನ್ನು ಖಾತ್ರಿಪಡಿಸಿದರು. ಸಚಿವರನ್ನೂ ಸಂಪರ್ಕಿಸಿದೆವು. ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ವ್ಯವಹಾರಗಳ ಸಲಹೆಗಾರ ಮುಹಮ್ಮದ್ ಅಲಿ ಶಬೀರ್ ಮತ್ತು ಜಮಾಅತ್ ಪ್ರತಿನಿಧಿಗಳು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದರು. ಈ ಹಿನ್ನೆಲೆಯಲ್ಲಿ ಐ.ಟಿ. ಸಚಿವ ಡಿ. ಶ್ರೀದರ್ ಬಾಬು ಅವರಿಗೆ ಸಮ್ಮೇಳನದ ವ್ಯವಹಾರಗಳನ್ನು ನೋಡಿಕೊಳ್ಳಲು ವಿಶೇಷ ಹೊಣೆಯನ್ನು ಮುಖ್ಯ ಮಂತ್ರಿ ನೀಡಿದರು. ಮುಹಮ್ಮದ್ ಅಲಿ ಶಬೀರ್, ಡಿ. ಶ್ರೀದರ್ ಬಾಬು, ಮಿರ್ಝಾ ರಹ್ಮದ್ ಬೇಗ್‌ರು ಸೇರಿ ಸರಕಾರಿ ಇಲಾಖೆಗಳ ಸಭೆ ಕರೆದು ಸಮನ್ವಯಗೊಳಿಸಿದರು.

ಪೊಲೀಸ್, ಟ್ರಾಫಿಕ್ ಡಿಪಾರ್ಟ್ಮೆಂಟ್ ಬಹಳ ಸಮನ್ವಯದಿಂದ ಕೆಲಸ ಮಾಡಿದೆ. ಸಮ್ಮೇಳನ ನಗರದ ಸುತ್ತಲೂ 24 ಗಂಟೆ ಪೊಲೀಸ್ ಬಂದೋಬಸ್ತ್ ಇತ್ತು. ಟ್ರಾಫಿಕ್ ಜಾಮ್‌ಗೆ ಗುರಿಯಾಗುವ ಹೈದರಾಬಾದ್‌ನಲ್ಲಿ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಅವರು ಕಾಳಜಿ ವಹಿಸಿದರು. ಪಿ.ಡಬ್ಲ್ಯೂ.ಡಿ. ಇಲಾಖೆಯನ್ನು ವಿಶೇಷವಾಗಿ ಸ್ಮರಿಸಬೇಕಾಗಿದೆ.

ಸಮ್ಮೇಳನ ನಗರದ ಸಂಚಾರ ಸುಗಮಗೊಳಿಸಲು ಕಿಲೋ ಮೀಟರ್ ಎತ್ತರದ ಒಂದು ರಸ್ತೆಯನ್ನು ನಗರದೊಳಗೆ ನಿರ್ಮಿಸಿದರು. ಇದು ಸಂಪೂರ್ಣ ಖಾಸಗಿ ಜಾಗವಾಗಿದ್ದರೂ ಅದರೊಳಗೆ ರಸ್ತೆ ನಿರ್ಮಿಸಲು ಸರ್ಕಾರ ಒಂದು ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ. ಇನ್ನೊಂದು ನೀರು ಸರಬರಾಜು ಇಲಾಖೆ. ಸಭೆಯ ಅಗತ್ಯಗಳಿಗೆ ನಿರಂತರ ನೀರಿನ ಪೂರೈಕೆ ಒದಗಿಸಲು ಸಾಧ್ಯವಾಯಿತು. ವಿದ್ಯುತ್ ಮತ್ತು ಶುಚಿತ್ವ ಇಲಾಖೆಯೂ ಸಹಕರಿಸಿತು. ವ್ಯತ್ಯಯವಿಲ್ಲದೆ ಅಗತ್ಯ ವಿದ್ಯುತ್ ಲಭ್ಯವಾಗುವಂತೆ ಮಾಡಲಾಗಿತ್ತು. ನಗರ ಸಭೆಯಿಂದ ಸುಮಾರು 300 ಸ್ವಚ್ಛತಾ ಕಾರ್ಮಿಕರು ಸಮ್ಮೇಳನದ ನಗರ ಮತ್ತು ಸುತ್ತಮುತ್ತ ಹಗಲು ರಾತ್ರಿ ಸ್ವಚ್ಛತೆಯಲ್ಲಿ ತೊಡಗಿದ್ದರು.
ಜಮಾಅತ್‌ಗೆ ಸರಕಾರದೊಂದಿಗೆ ಇರುವ ನಿಷ್ಠೆ ಅಥವಾ ಜಮಾಅತ್‌ನಿಂದ ಏನಾದರೂ ವಿಶೇಷವಾಗಿ ನಿರೀಕ್ಷೆಯಿಂದಲೋ ಅವರು ಇದನ್ನು ಮಾಡಲಿಲ್ಲ. ಇದು ಸರಕಾರದ ಕರ್ತವ್ಯ ನಿರ್ವಹಣೆಯ ಭಾಗವಾಗಿತ್ತು.

ಸಚಿವ ಡಿ. ಶ್ರೀಧರ್ ಬಾಬು ಹೇಳಿದರು: ಇದು ತೆಲಂಗಾಣ, ನಮ್ಮ ರಾಜಧಾನಿ ಹೈದರಾಬಾದ್‌ಗೆ ಬಂದಿಳಿಯುವ ಒಬ್ಬನಿಗೂ ಪರಕೀಯತೆ ಉಂಟಾಗಬಾರದು. ಇಲ್ಲಿನ ವಿಮಾನ ನಿಲ್ದಾಣ, ಬಸ್ಸು ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪರಕೀಯ ಭಾವನೆ ಹೊಂದಬಾರದು. ಅಂದರೆ ಇದು ಸಂಪೂರ್ಣ ಜಾತ್ಯತೀತ ರಾಜ್ಯವಾಗಿದೆ. ಇಲ್ಲಿ ಎಲ್ಲಾ ಧರ್ಮೀಯರಿಗೂ ತಮ್ಮದೇ ಆದ ಹಕ್ಕು ಮತ್ತು ಅಭಿಮಾನ ಇದೆ ಎಂದು ಇಲ್ಲಿಗೆ ಬರುವ ಎಲ್ಲರ ಅನುಭವಕ್ಕೆ ಬರಬೇಕು. ಅದರಂತೆ ಸರಕಾರಿ ಇಲಾಖೆಗಳು ನಡೆದುಕೊಳ್ಳಬೇಕು ಎಂಬ ಆದೇಶ ನೀಡಲಾಯಿತು.

ಜಾತ್ಯತೀತ ಸರಕಾರಗಳು ಅರ್ಥಮಾಡಿಕೊಳ್ಳಬೇಕಾದ ಮತ್ತು ಅಳವಡಿಸಿಕೊಳ್ಳಬೇಕಾದ ಅಂಶವಿದು ಎಂದು ನಾನು ಭಾವಿಸುತ್ತೇನೆ. ಒಂದು ದೇಶದ ಅಥವಾ ರಾಜ್ಯ ಸರ್ಕಾರದ ಪ್ರತಿಷ್ಠೆಯು ಅಲ್ಲಿನ ಅಲ್ಪಸಂಖ್ಯೆಯಲ್ಲಿರುವ ಸಮುದಾಯದೊಂದಿಗೆ ಎಷ್ಟು ಸಕಾರಾತ್ಮಕ ಮನೋಭಾವವನ್ನು ಅವಲಂಬಿಸಿದೆ ಮತ್ತು ಸರ್ಕಾರ ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಅವಲಂಬಿಸಿದೆ. ಇದಕ್ಕೆ ತೆಲಂಗಾಣ ಉತ್ತಮ ಉದಾಹರಣೆಯಾಗಿದೆ.

ಬಹುಸಂಖ್ಯಾತರಿಗೆ ನೀಡುವ ಬೆಂಬಲವನ್ನು ದೇಶಪ್ರೇಮದ ಭಾಗವಾಗಿ ನೋಡುವ ಮತ್ತು ಅಲ್ಪಸಂಖ್ಯಾತರಿಗೆ ನೀಡುವ ಸಣ್ಣ ಬೆಂಬಲವನ್ನು ಸಹ ತುಷ್ಟೀಕರಣ ಎಂದು ಪರಿಗಣಿಸುವ ಸಮಯದಲ್ಲಿ ತೆಲಂಗಾಣ ಸರಕಾರದ ಕಾರ್ಯ ವಿಧಾನವು ಇತರ ಸರ್ಕಾರಗಳಿಗೆ ಪ್ರೇರಣೆಯಾಗಬೇಕು.