ಇಂಡಿಯನ್ ಎಕ್ಸ್ಪ್ರೆಸ್ನ ಶೈನಿ ಅಯ್ಯರ್ ಮಾಡಿರುವ ವಿಡಿಯೋ ಸ್ಟೋರಿಯ ಸಂಗ್ರಹಾನುವಾದ.
ಒಂದು ಸರ್ಕಾರ ತನ್ನದೇ ದೇಶದ ಯುವಜನತೆಯನ್ನು ಕಂಡು ಹೆದರಿದರೆ ಪರಿಸ್ಥಿತಿ ಹೇಗಿರುತ್ತೆ ಗೊತ್ತಾ? ಬಹುಶಃ ಇತ್ತೀಚಿನ ದಿನಗಳಲ್ಲಿ ದೆಹಲಿ ಕಂಡ ಪರಿಸ್ಥಿತಿಯಂತೆಯೇ ಇರಬಹುದು. ಸಾವಿರಾರು ಸಶಸ್ತ್ರ ಪಡೆಗಳು, ರಸ್ತೆಗಳಲ್ಲಿ ನಾಟಿರುವ ಕಬ್ಬಿಣದ ಸ್ಪೈಕ್ಗಳು, ಐದು ಹಂತಗಳ ಬ್ಯಾರಿಕೇಡ್ಗಳು, ಹತ್ತಾರು ಮೆಟ್ರೋ ಸ್ಟೇಷನ್ಗಳು ಬಂದ್, ಮೊಬೈಲ್ ಇಂಟರ್ನೆಟ್ ಕಟ್! ಪ್ರತಿಯೊಂದು ಸರ್ಕಲ್ನಲ್ಲೂ ವಿದ್ಯಾರ್ಥಿಗಳು, ಪ್ರತಿಭಟನಾಕಾರರು ಮತ್ತು ಸಂವಿಧಾನದ ಪ್ರತಿಯನ್ನು ಹಿಡಿದು ಬಾವುಟ ಬೀಸುತ್ತಿದ್ದ ಯುವಕರನ್ನು ಎತ್ತಾಕೊಂಡು ಹೋಗಲು ಪಬ್ಲಿಕ್ ಬಸ್ಗಳು ರೆಡಿಯಾಗಿ ನಿಂತಿದ್ದವು.
ಪ್ರತಿಭಟನಾಕಾರರು ಘೋಷಣೆ ಕೂಗುವಂತೆ: “ಯಾವಾಗ್ಯಾವಾಗ ಮೋದಿ ಹೆದರುತ್ತಾರೆ… ಪೊಲೀಸರನ್ನು ಮುಂದೆ ಬಿಡುತ್ತಾರೆ…” ಚಿತ್ರಣ ಹಾಗೆಯೇ ಇತ್ತು.
ಸೆಂಟ್ರಲ್ ದೆಹಲಿಯ ಕೆಲವೆಡೆ ಸಂಪೂರ್ಣ ಕರ್ಫ್ಯೂ ವಾತಾವರಣವಿತ್ತು. 40,000 ಪೊಲೀಸ್ ಸಿಬ್ಬಂದಿ, ಮುಖ್ಯ ರಸ್ತೆಗಳಲ್ಲಿ ಪ್ರತಿ 200 ಮೀಟರ್ಗೆ ಬ್ಯಾರಿಕೇಡ್ಗಳು ನಿಲ್ಲಿಸಲಾಗಿತ್ತು. ರಾತ್ರಿಯಾಗುವಷ್ಟರಲ್ಲಿ ಬರೋಬ್ಬರಿ 7,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿತ್ತು. ವಿರೋಧ ಪಕ್ಷದ ನಾಯಕರು, ನಾಲ್ವರು ಮಾಜಿ ಮುಖ್ಯಮಂತ್ರಿಗಳು, ವಿದ್ಯಾರ್ಥಿ ಹೋರಾಟಗಾರರು, ಪತ್ರಕರ್ತರು ಮತ್ತು ದಿನನಿತ್ಯ ಓಡಾಡುವ ಸಾಮಾನ್ಯ ನಾಗರಿಕರೂ ಅದರಲ್ಲಿ ಸೇರಿದ್ದರು. ಹೆಚ್ಚಿನವರಂತೂ ಜಂತರ್ ಮಂತರ್ ಹತ್ತಿರ ಹೋಗೋ ಮುನ್ನವೇ ಬಸ್ಸುಗಳಿಗೆ ತುಂಬಿ ಎನ್ಸಿಆರ್ನ ಸುತ್ತಮುತ್ತಲಿನ ತಾತ್ಕಾಲಿಕ ಡಿಟೆನ್ಷನ್ ಸೆಂಟರ್ಗಳಿಗೆ ಕಳುಹಿಸಿಬಿಟ್ಟರು.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ “ಮೆಟ್ರೋ ಸ್ಟೇಷನ್ಗಳನ್ನು ತೆರೆಯಿರಿ, ಇಂಟರ್ನೆಟ್ ಮರುಸ್ಥಾಪಿಸಿ” ಎಂದ ನಂತರ ಕೆಲವು ನಿಯಮ ಸಡಿಲಿಕೆಯಾಯ್ತು. ನಿರ್ಬಂಧಗಳಿಲ್ಲದ ಜಾಗದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ, ಆದರೆ ನಿರ್ಬಂಧವಿರುವಲ್ಲಿ ಐದಕ್ಕಿಂತ ಹೆಚ್ಚು ಜನ ಸೇರಿದರೆ ಕ್ರಮ ಖಂಡಿತ ಎಂದು ಪೊಲೀಸರು ಹೇಳಿದರು. ಅದೇ ಪ್ರಕಾರ ಭಾನುವಾರವೂ ಕನಿಷ್ಠ 500 ಜನರನ್ನು ವಶಕ್ಕೆ ಪಡೆಯಲಾಯಿತು. “ಪ್ರತಿದಿನ ನಾವು ನಗರವನ್ನು ಹೀಗೆ ಸೀಝ್ ಮಾಡಿ ಇಡೋಕಾಗಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಅಷ್ಟಕ್ಕೂ ಈ ದಿಗ್ಬಂಧನ ಯಾರ ವಿರುದ್ಧ? ಯಾವುದೋ ವಿದೇಶಿ ಶತ್ರು ಸೈನ್ಯದ ವಿರುದ್ಧವೇ? ಇಂಡಿಯನ್ ಎಕ್ಸ್ಪ್ರೆಸ್ನ ಪ್ರತಾಪ್ ಭಾನು ಮೆಹ್ತಾ ತಮ್ಮ ಅಂಕಣದಲ್ಲಿ ಬರೆಯುತ್ತಾ, “ಸಾಮಾನ್ಯ ಮತ್ತು ನ್ಯಾಯಯುತ ಬೇಡಿಕೆಗಳನ್ನು ಇಡುತ್ತಿರುವ ಯುವಕರ ಬದಲಾಗಿ, ಯಾವುದೋ ಪರಕೀಯ ಸೈನ್ಯ ಆಕ್ರಮಣ ಮಾಡಿದಂತೆ ಸರ್ಕಾರ ವರ್ತಿಸುತ್ತಿದೆ.”
ಆದರೆ ಈ ಇಡೀ ಘಟನೆಗಳ ಅಸಲಿ ಉದ್ದೇಶವೇನಿತ್ತು? ಇದು ಸರ್ಕಾರ ತನ್ನ ಜನರಿಗೆ ನೇರವಾಗಿ ರವಾನಿಸಿದ ಒಂದು ಕಠಿಣ ಸಂದೇಶ ಇದೆ. ಇದು ಕೇವಲ ಅಭಿಜೀತ್ ದೀಪ್ಕೆ, ನೇಹಾ ಬೋರಾ ಅಥವಾ ಧ್ರುವ್ ರಾಠಿಯಂತಹ ವ್ಯಕ್ತಿಗಳ ಮೇಲಿನ ಕಾರ್ಯಾಚರಣೆಯಷ್ಟೇ ಅಲ್ಲ. ಅವರೆಲ್ಲಾ ಮುಂಚೂಣಿಯಲ್ಲಿದ್ದು ನೇರ ಹೊಡೆತ ತಿಂದಿರಬಹುದು; ಆದರೆ ನಮ್ಮಂತಹ ಪ್ರತಿಯೊಬ್ಬ ನಾಗರಿಕನಿಗೂ ತಲುಪಿದ ಸಂದೇಶ ಒಂದೇ – “ನೀವೇನಾದರೂ ಪ್ರತಿಭಟನೆಗೆ ಸೇರಿದರೆ ನಿಮಗೂ ಇದೇ ಗತಿ ಆಗುತ್ತೆ.” ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ದೇಶದ ಭದ್ರತಾ ವೈಫಲ್ಯ ಅಥವಾ ಭಯೋತ್ಪಾದಕ ದಾಳಿಯಂತೆ ನೋಡಲಾಯಿತು. ಶಾಂತಿಯುತವಾಗಿ ಒಗ್ಗೂಡುವ ಸಾಂವಿಧಾನಿಕ ಹಕ್ಕನ್ನು ಕೇವಲ ‘ಕಾನೂನು ಮತ್ತು ಸುವ್ಯವಸ್ಥೆ’ಯ ಸಮಸ್ಯೆಯಾಗಿ ಬದಲಾಯಿಸಿಬಿಟ್ಟರು.
ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ ವಿಷಯವನ್ನೇ ತೆಗೆದುಕೊಳ್ಳಿ. ಅಕ್ಟೋಬರ್ 10ರ ಕಾರ್ಯಕ್ರಮಕ್ಕೆ ಕೇವಲ ಮೂರು ದಿನಗಳ ಮುಂಚೆ ಅರ್ಜಿ ಹಾಕಿದ್ದರಿಂದ ಭದ್ರತಾ ಸಿದ್ಧತೆಗಳಿಗೆ ಸಮಯ ಸಿಗಲಿಲ್ಲ ಎಂಬುದು ಅಧಿಕೃತ ಕಾರಣ. ಆದರೆ, ಮಾಡಲಾದ ಭದ್ರತಾ ಸಿದ್ಧತೆಗಳನ್ನು ನೋಡಿ. 40,000 ಪೊಲೀಸರು, ಬಂಗಾಳ ಮತ್ತು ಛತ್ತೀಸ್ಗಢದಿಂದ ಕರೆಸಲಾದ 7,000 ಸಿಆರ್ಪಿಎಫ್ ಪಡೆಗಳು, ಜೊತೆಗೆ ಎಸ್ಎಸ್ಬಿ ಮತ್ತು ಐಟಿಬಿಪಿ! ಈ ಪಡೆಗಳನ್ನು ತರಲು ರೈಲ್ವೇ ಇಲಾಖೆ ತರಾತುರಿಯಲ್ಲಿ ಆರು ವಿಶೇಷ ರೈಲುಗಳನ್ನೇ ಓಡಿಸಿದೆ. ಕೇವಲ 72 ಗಂಟೆಗಳಲ್ಲಿ ಇಷ್ಟೆಲ್ಲಾ ಭದ್ರತೆ ಮಾಡಿಕೊಳ್ಳಲು ಸಾಧ್ಯವಾಯಿತು. ಆದರೆ, ಪ್ರತಿಭಟನೆಗೆ ಅವಕಾಶ ಕೊಡಲು ಸಮಯವಿರಲಿಲ್ಲವಂತೆ!
ಇಂಡಿಯನ್ ಎಕ್ಸ್ಪ್ರೆಸ್ನ ಮೊಹಮ್ಮದ್ ತನ್ವರ್ ಅವರ ವರದಿಯ ಪ್ರಕಾರ, ಪ್ರತಿಭಟನೆಗೆ ಆರು ದಿನ ಮುಂಚೆಯೇ ಅಂದರೆ ಅಕ್ಟೋಬರ್ 4 ರಂದು ಕೇಂದ್ರ ಗೃಹ ಕಾರ್ಯದರ್ಶಿಗಳು ವಿವಿಧ ರಾಜ್ಯಗಳ ಡಿಜಿಪಿಗಳು ಮತ್ತು ಕಮಿಷನರ್ಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ನೋಟಿಸ್ ಜಾರಿ ಮಾಡಿ, ಮುಂಜಾಗ್ರತಾ ಬಂಧನಗಳನ್ನು ನಡೆಸಿ, ಪ್ರತಿಭಟನಾಕಾರರ ಫಂಡಿಂಗ್ ಬಗ್ಗೆ ತನಿಖೆ ನಡೆಸಿ ಎಂದು ಸ್ಪಷ್ಟ ಸೂಚನೆ ನೀಡಲಾಗಿತ್ತು. ಅಕ್ಟೋಬರ್ 8 ರಂದು ಮತ್ತೊಂದು ರಿವ್ಯೂ ಮೀಟಿಂಗ್ ಕೂಡ ನಡೆಯಿತು. ಹಾಗಾಗಿ ಇದು ಕೊನೆ ಕ್ಷಣದ ನಿರ್ಧಾರವಲ್ಲ. ಮೊದಲೇ ಪಕ್ಕಾ ಪ್ಲಾನ್ ಮಾಡಿ ರೂಪಿಸಿದ ತಂತ್ರ – ರೈಲುಗಳನ್ನು ತಡೆಯಿರಿ, ನಿಲ್ದಾಣ ಮತ್ತು ಏರ್ಪೋರ್ಟ್ಗಳಲ್ಲೇ ಅರೆಸ್ಟ್ ಮಾಡಿ, ಗಡಿಗಳನ್ನು ಸೀಲ್ ಮಾಡಿ, ಮೆಟ್ರೋ ನಿಲ್ಲಿಸಿ, ಕೊನಾಟ್ ಪ್ಲೇಸ್ ಬ್ಲಾಕ್ ಮಾಡಿ ಮತ್ತು ಜಂತರ್ ಮಂತರ್ಗೆ ಬಿಗಿ ಕಾವಲು ಹಾಕಿ.
ಅದರ ಬೆನ್ನಲ್ಲೇ ಬಿಎನ್ಎಸ್ಎಸ್ ಸೆಕ್ಷನ್ 163 (ಹಳೆಯ ಸೆಕ್ಷನ್ 144 ರ ಬದಲಿ ನಿಯಮ) ಜಾರಿಗೆ ತರಲಾಯಿತು. ಸಾರ್ವಜನಿಕ ಶಾಂತಿ ಕದಡದಂತೆ ತುರ್ತು ನಿರ್ಬಂಧಗಳನ್ನು ಹೇರಲು ಇದು ಮ್ಯಾಜಿಸ್ಟ್ರೇಟ್ಗೆ ಅಧಿಕಾರ ನೀಡುತ್ತದೆ. ಆ ಪರಿಣಾಮವಾಗಿ ಜಂತರ್ ಮಂತರ್ ಮತ್ತು ಸೆಂಟ್ರಲ್ ವಿಸ್ಟಾ ಸುತ್ತಮುತ್ತ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಮೆರವಣಿಗೆ, ಘೋಷಣೆ, ಬ್ಯಾನರ್ಗಳಿಗೂ ನಿಷೇಧ. ಅಷ್ಟೇ ಅಲ್ಲ, ಜಂತರ್ ಮಂತರ್ ಹತ್ತಿರ ಸುಳಿಯುವ ಮುನ್ನವೇ ಸಾವಿರಕ್ಕೂ ಹೆಚ್ಚು ಜನರನ್ನು ಮುಂಜಾಗ್ರತೆಯಾಗಿ ವಶಕ್ಕೆ ಪಡೆಯಲಾಯಿತು.
ಮುಂದಿನ ಹಂತ: ಸೆಕ್ಷನ್ 163 ಜಾರಿಯಲ್ಲಿದ್ದಾಗ ಗುಂಪಿನಲ್ಲಿ ಭಾಗವಹಿಸುವುದನ್ನು ಆದೇಶ ಉಲ್ಲಂಘನೆ (ಹಳೆಯ ಐಪಿಸಿ 188, ಹೊಸ ಬಿಎನ್ಎಸ್ಎಸ್ 223) ಎಂದು ಪರಿಗಣಿಸಲಾಯಿತು. ಪ್ಲಾನ್ ತುಂಬಾ ಸಿಂಪಲ್ ಆಗಿತ್ತು.
- ಪ್ರತಿಭಟನೆಯನ್ನು ಕಾನೂನುಬಾಹಿರ ಎಂದು ಘೋಷಿಸುವುದು.
- ಯಾವುದೇ ಕಿಡಿ ಹೊತ್ತಿಕೊಳ್ಳದಂತೆ ಬೃಹತ್ ಭದ್ರತಾ ಪಡೆಗಳನ್ನು ಇಳಿಸುವುದು.
- ಸಾರಿಗೆ ಮತ್ತು ಸಂವಹನ ಕಡಿತಗೊಳಿಸುವುದು.
- ಗಣ್ಯರನ್ನೂ ಸೇರಿದಂತೆ ಎಲ್ಲರನ್ನೂ ಮುಂಜಾಗ್ರತಾ ಬಂಧನ ಮಾಡುವುದು.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಕರ್ತ ಆಲೋಕ್ ಸಿಂಗ್ ಅವರ ವರದಿ ಪ್ರಕಾರ, ಪೊಲೀಸರು ಬಿಎನ್ಎಸ್ಎಸ್ನ ಸೆಕ್ಷನ್ 126 ಮತ್ತು 170 ಅನ್ನು ಬಳಸಿದ್ದಾರೆ (ಹಳೆಯ ಸಿಆರ್ಪಿಸಿ 117 ಮತ್ತು 151). ಸೆಕ್ಷನ್ 126 ಶಾಂತಿ ಕಾಪಾಡಲು ಬಾಂಡ್ ಬರೆಸಿಕೊಳ್ಳಲು ಅವಕಾಶ ನೀಡಿದರೆ, ಸೆಕ್ಷನ್ 170 ಅಡಿಯಲ್ಲಿ ಯಾವುದೇ ವ್ಯಕ್ತಿ ಅಪರಾಧ ಎಸಗಬಹುದು ಎಂಬ ಸಂಶಯವಿದ್ದರೆ ವಾರಂಟ್ ಇಲ್ಲದೆ ಬಂಧಿಸಬಹುದು. ಗಮನಿಸಿ, ಇದು ಅಪರಾಧ ಸಾಬೀತಾಗಿ ಮಾಡುವ ಬಂಧನವಲ್ಲ, ಶಾಂತಿಭಂಗ ತಡೆಯಲು ತುರ್ತಾಗಿ ಬಳಸುವ ತಾತ್ಕಾಲಿಕ ಕ್ರಮವಷ್ಟೇ. ಕಾನೂನಿನ ಪ್ರಕಾರ ಇಂತಹ ಬಂಧನಕ್ಕೆ 24 ಗಂಟೆಗಳ ಮಿತಿ ಇರುವುದರಿಂದಲೇ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರಬ್ ದಾಸ್ ಅವರಂತಹ ವ್ಯಕ್ತಿಗಳನ್ನು 24 ಗಂಟೆಗಳಲ್ಲೇ ಬಿಡುಗಡೆ ಮಾಡಲಾಯಿತು. ಈ ಪ್ರಿವೆಂಟಿವ್ ಅರೆಸ್ಟ್ ಪರಿಕಲ್ಪನೆಯೇ 1898ರ ಬ್ರಿಟಿಷ್ ಕಾಲದ್ದು. ಸಂವಿಧಾನದ 22ನೇ ವಿಧಿಯಡಿ ಇದಕ್ಕೆ ಅವಕಾಶವಿದ್ದರೂ, “ಇದು ವಸಾಹತುಶಾಹಿ ಕಾಲದ ಅಸ್ತ್ರ, ಇದನ್ನು ನಾಗರಿಕರ ವಿರುದ್ಧ ಬಳಸಬಾರದು” ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಎಚ್ಚರಿಸಿದೆ.
ವಾರಾಂತ್ಯದಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ರಾಜಕೀಯ ನಾಯಕರವರೆಗೂ ಸಾವಿರಾರು ಜನರನ್ನು ವಶಕ್ಕೆ ಪಡೆಯಲಾಯಿತು. ಐಸಾ ನಾಯಕಿ ನೇಹಾ ಬೋರಾ, ಯೂಟ್ಯೂಬರ್ ಧ್ರುವ್ ರಾಠಿ (ತಮ್ಮನ್ನು ಅಪಹರಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ), ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡೆರೆಕ್ ಒಬ್ರಿಯಾನ್, ಸಾಕೇತ್ ಗೋಖಲೆ, ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಸದ ಜಾನ್ ಬ್ರಿಟ್ಟಾಸ್ ಎಲ್ಲರನ್ನೂ ವಶಕ್ಕೆ ಪಡೆಯಲಾಯಿತು. “ಪೊಲೀಸರು ನಮ್ಮನ್ನು ಠಾಣೆಗೂ ಕರೆದೊಯ್ಯದೆ ಮೂರೂವರೆ ಗಂಟೆ ಬಸ್ಸಿನಲ್ಲೇ ನಗರದಾದ್ಯಂತ ಸುತ್ತಾಡಿಸಿದರು, ಇದು ಸಂಪೂರ್ಣ ಪೊಲೀಸ್ ರಾಜ್” ಎಂದು ಜಾನ್ ಬ್ರಿಟ್ಟಾಸ್ ಕಿಡಿಕಾರಿದರು. ಜೊತೆಗೆ, “ಪೊಲೀಸರ ಕಠಿಣ ಕ್ರಮದಿಂದಾಗಿ ಈಗ ಇಡೀ ದೆಹಲಿಯೇ ನಮಗೆ ಜಂತರ್ ಮಂತರ್ ಆಗಿದೆ” ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಪೊಲೀಸರ ಲೆಕ್ಕಾಚಾರ ಒಂದು ರೀತಿಯಲ್ಲಿ ಗೆದ್ದಿರಬಹುದು. ನಾಯಕರನ್ನು ಬೇರೆ ಬೇರೆ ಕಡೆ ಕಳುಹಿಸಿ ಜಂತರ್ ಮಂತರ್ ಖಾಲಿ ಇಡುವಲ್ಲಿ ಯಶಸ್ವಿಯಾದರು. ಆದರೆ ಪರಿಣಾಮ ಏನಾಯ್ತು? ದೆಹಲಿಯಾದ್ಯಂತ ಸಣ್ಣಪುಟ್ಟ ಫ್ಲ್ಯಾಶ್ ಮಾಬ್ಗಳು, ಏಕಾಂಗಿ ಪ್ರತಿಭಟನೆಗಳು ಶುರುವಾದವು. ಶನಿವಾರ ದೆಹಲಿ ಹಾತ್ ಕಡೆ ಹೊರಟ ನೇಹಾ ಬೋರಾ ಮತ್ತು 200 ವಿದ್ಯಾರ್ಥಿಗಳನ್ನು ಬಂಧಿಸಿದರೂ, ಚಳವಳಿ ನಿಲ್ಲಲಿಲ್ಲ. ಅದು ನಗರದಾದ್ಯಂತ ಚದುರಿ ಹೋಯಿತು. ಸಫ್ದರ್ಜಂಗ್ ಫ್ಲೈಓವರ್ ಮೇಲೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು. “ನಾಯಕರನ್ನು ಬಂಧಿಸಿದರೆ ನಮ್ಮ ಧೈರ್ಯ ಕುಗ್ಗುತ್ತದೆ ಅಂದುಕೊಂಡಿದ್ದಾರೆ, ಆದರೆ ಪ್ರತಿಯೊಂದು ಗಲ್ಲಿಯಲ್ಲೂ ಪೊಲೀಸ್ ಕಾವಲು ಹಾಕಲು ಸಾಧ್ಯವೇ?” ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾರೆ. ಕನ್ನಾಟ್ ಪ್ಲೇಸ್, ಗೋಲ್ ಮಾರ್ಕೆಟ್, ಸಂಸದ್ ಮಾರ್ಗ, ರಾಜ್ಘಾಟ್, ಹೀಗೆ ಎಲ್ಲೆಂದರಲ್ಲಿ ನಾಲ್ಕೈದು ಜನ ಸೇರೋದು, ಸ್ಲೋಗನ್ ಕೂಗೋದು, ಪೊಲೀಸರು ಬರುವಷ್ಟರಲ್ಲಿ ಇನ್ನೊಂದು ಕಡೆ ಮತ್ತೊಂದು ಗುಂಪು ಶುರುವಾಗೋದು! ಜಂತರ್ ಮಂತರ್ ಖಾಲಿ ಮಾಡಿಸಬಹುದು, ಆದರೆ ಇಡೀ ದೆಹಲಿ ಅಥವಾ ಸೋಶಿಯಲ್ ಮೀಡಿಯಾವನ್ನು ಖಾಲಿ ಮಾಡಿಸಲು ಸಾಧ್ಯವೇ?
ಕೆಲವರು ಇದು ಕೇವಲ ಇನ್ಸ್ಟಾಗ್ರಾಮ್ ಪ್ರತಿಭಟನೆ, ದೆಹಲಿಯಾಚೆ ಯಾರಿಗೂ ಇದರ ಕಾಳಜಿಯಿಲ್ಲ ಎಂದು ವಾದಿಸಬಹುದು. ಆದರೆ ಸರ್ಕಾರ ಗಡಿಯಿಂದ ಸೈನಿಕರನ್ನು ಕರೆಸಿ ವಿದ್ಯಾರ್ಥಿಗಳನ್ನು ತಡೆಯಲು ನಿಲ್ಲಿಸಿದೆ ಎಂದರೆ, ಸರ್ಕಾರಕ್ಕೆ ಇದರ ಬಗ್ಗೆ ಎಷ್ಟು ಆತಂಕವಿದೆ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, “ಜಂತರ್ ಮಂತರ್ ಕೇವಲ 4 ಚದರ ಕಿಲೋಮೀಟರ್, ಆದರೆ ಭಾರತ 32 ಲಕ್ಷ ಚದರ ಕಿಲೋಮೀಟರ್; ಜಂತರ್ ಮಂತರ್ ಇಡೀ ಭಾರತದ ಕಥೆಯಲ್ಲ” ಎಂದು ಲೇವಡಿ ಮಾಡಿದ್ರು. ಆದರೆ ಜೆಪಿ ಚಳವಳಿಯಿಂದ ಹಿಡಿದು ರೈತರ ಪ್ರತಿಭಟನೆ, ನಿರ್ಭಯಾ ಆಂದೋಲನದವರೆಗೆ ಭಾರತದ ಸಾಮಾನ್ಯ ಜನರು ದೆಹಲಿಯಲ್ಲೇ ತಮ್ಮ ಧ್ವನಿ ಎತ್ತಿದ್ದಾರೆ. ಅವರೆಲ್ಲರೂ ಅರಾಜಕತಾವಾದಿಗಳೇ?
ಇಂಡಿಯನ್ ಎಕ್ಸ್ಪ್ರೆಸ್ನ ಸಂಪಾದಕೀಯದಲ್ಲಿ ಬರೆದಂತೆ: “ಸಂಸತ್ ರಸ್ತೆಯ ಆ ಸಣ್ಣ ಜಾಗದಲ್ಲಿ ಭೂಮಿ ಕಳೆದುಕೊಂಡವರಿಂದ ಹಿಡಿದು ಪ್ರಾಣಿ ದಯಾ ಸಂಘಟನೆಗಳವರೆಗೆ ಎಲ್ಲರೂ ಬಂದು ನಿಲ್ಲುತ್ತಾರೆ. ಇಡೀ ಭಾರತದ ಪ್ರತಿಯೊಂದು ಸಣ್ಣ-ದೊಡ್ಡ ನೋವಿಗೂ ಜಾಗ ಕೊಡುವ ನಮ್ಮ ದೇಶದ ಪಂಚಾಯ್ತಿ ಕಟ್ಟೆ ಅದು.”
2018ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು: “ವಿರೋಧಿಸುವುದು ಪ್ರಜಾಪ್ರಭುತ್ವದ ಸೇಫ್ಟಿ ವಾಲ್ವ್ ಇದ್ದಂತೆ, ಅದನ್ನು ಮುಚ್ಚಿದರೆ ಪ್ರೆಶರ್ ಕುಕ್ಕರ್ ಸಿಡಿಯಬಹುದು.” ಜಂತರ್ ಮಂತರ್ ನಮ್ಮ ದೇಶದ ಆ ಸೇಫ್ಟಿ ವಾಲ್ವ್. ಅದನ್ನು ಮುಚ್ಚಿ, ಪ್ಲಕಾರ್ಡ್ ಹಿಡಿಯುವ ಮುನ್ನವೇ ಜನರನ್ನು ಜೈಲಿಗೆ ಹಾಕಿದರೆ, ಹಿಂಸೆಯನ್ನು ತಡೆಯುತ್ತಿದ್ದೀರಾ ಅಥವಾ ಪ್ರಜಾಪ್ರಭುತ್ವವನ್ನೇ ಇಲ್ಲವಾಗಿಸುತ್ತಿದ್ದೀರಾ?
ಅಂಕಣಕಾರ ಪ್ರತಾಪ್ ಭಾನು ಮೆಹ್ತಾ ಹೇಳುವಂತೆ: “ಪ್ರತಿಭಟನೆಗಳು ಸರ್ಕಾರದ ದರ್ಪವನ್ನು ಕೊಂಚ ತಗ್ಗಿಸಿರಬಹುದು, ಯುವಜನರಲ್ಲಿ ಧೈರ್ಯ ತುಂಬಿರಬಹುದು. ಆದರೆ ಅವು ಜಗ್ಗದ ಸರ್ಕಾರದ ಗೋಡೆಗೆ ಬಡಿದುಕೊಳ್ಳುತ್ತಿವೆ.”
ಪಿ.ವಿ. ನರಸಿಂಹರಾವ್ ಅವರ ಮಾತೊಂದಿದೆ: “ಭಾರತ ಸರ್ಕಾರ ಆನೆ ಇದ್ದಂತೆ. ಸಮಸ್ಯೆ ಇಲ್ಲವಾಗುವವರೆಗೂ ತನ್ನ ತೂಕದ ಭಾರದಿಂದ ಅದರ ಮೇಲೆ ಕುಳಿತುಬಿಡುತ್ತದೆ.” ಈಗಿನ ಸರ್ಕಾರವೂ ಬಂಧನಗಳು, ಭದ್ರತಾ ಪಡೆಗಳ ನಿಯೋಜನೆಯ ಮೂಲಕ ಜನರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ.
ನಾನು ಆರಂಭದಲ್ಲಿ ತಮ್ಮ ಮುಂದಿಟ್ಟಿರುವ ಪ್ರಶ್ನೆ ನೆನಪಿದೆಯೇ? “ತನ್ನದೇ ಯುವಕರನ್ನು ಕಂಡು ಸರ್ಕಾರ ಹೆದರಿದಾಗ ಹೇಗಿರುತ್ತೆ?” ಕೊನೆಯಲ್ಲಿ ನಾನು ನಿಮ್ಮನ್ನು ಮತ್ತೊಂದು ಪ್ರಶ್ನೆ ಕೇಳ ಬಯಸುತ್ತೇನೆ: “ಅದೇ ಯುವಜನತೆ ಭಯವನ್ನು ಬಿಟ್ಟು ನಿಂತಾಗ ಪರಿಸ್ಥಿತಿ ಹೇಗಿರುತ್ತೆ?”












