✍️ ಏ.ಕೆ. ಕುಕ್ಕಿಲ
2026 ಅಕ್ಟೋಬರ್ 3
2025 ಮೇ 16
2025 ಮೇ 13
2025 ಜೂನ್ 25
2025 ಜೂನ್ 3
ಇವೆಲ್ಲ ಬರೇ ವರ್ಷಗಳು ಮತ್ತು ದಿನಾಂಕಗಳಲ್ಲ. ಈ ದೇಶದ ರಹಸ್ಯವನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದವರನ್ನು ಬಂಧಿಸಲಾದ ದಿನಾಂಕಗಳು. 2026 ಅಕ್ಟೋಬರ್ 3 ರಂದು ಆಂಧ್ರಪ್ರದೇಶದ ಗುಪ್ತಚರ ಅಧಿಕಾರಿಗಳು ನೌಕಾಪಡೆಯ 18 ಮಂದಿಯನ್ನು ವಶಕ್ಕೆ ಪಡೆದರು. ಇವರಲ್ಲಿ 31 ವರ್ಷದ ಪ್ರದೀಪ್ ಮುಖರ್ಜಿ ಮತ್ತು ಅನ್ನಮ್ ಸಾಯಿ ವರಪ್ರಸಾದ್ ಎಂಬಿಬ್ಬರ ಹೆಸರನ್ನು ಬಹಿರಂಗಪಡಿಸಲಾಗಿದೆ. ಪ್ರದೀಪ್ ಮುಖರ್ಜಿ ನೌಕಾ ನಾವಿಕನಾಗಿದ್ದರೆ, ವರಪ್ರಸಾದ್ ಎಂಬವ ವಿಶಾಖಪಟ್ಟಣಂನ ನೌಕಾ ಅಧಿಕಾರಿಗಳಿಗೆ ಕೆಲಸ ಮಾಡುತ್ತಿದ್ದ ಸಿವಿಲಿಯನ್ ಚಾಲಕ. ಈ ಇಬ್ಬರನ್ನೂ ಬಂಧಿಸಲಾಗಿದೆ. ಒಟ್ಟು 18 ಮಂದಿಯ ಪೈಕಿ 13 ಮಂದಿ ನೌಕಾ ಸಿಬಂದಿಗಳಾಗಿದ್ದಾರೆ. ಆಪರೇಶನ್ ಫೈರ್ವಾಲ್ ಎಂಬ ಹೆಸರಲ್ಲಿ ನಡೆಸಲಾದ ಈ ಕಾರ್ಯಾಚರಣೆಯು ದೇಶದ ನೌಕಾಪಡೆಯು ಎಷ್ಟು ಅಭದ್ರವಾಗಿದೆ ಎಂಬುದನ್ನು ಸೂಚಿಸಿದೆ. ವಿಶಾಖಪಟ್ಟಣಂನಲ್ಲಿರುವ ನೌಕಾಪಡೆಯ ಈ ಸಿಬಂದಿಗಳು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಮತ್ತು ಈ ಕಾರಣದಿಂದಾಗಿ ದೇಶದ ರಹಸ್ಯಗಳನ್ನು ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಸೋರಿಕೆ ಮಾಡಿರುವುದಕ್ಕೆ ಪ್ರತಿಯಾಗಿ ಇವರು ದೊಡ್ಡ ಮೊತ್ತದ ಹಣವನ್ನೂ ಪಡೆದುಕೊಂಡಿದ್ದಾರೆ. ಈ ಇಬ್ಬರನ್ನೂ 18 ದಿನಗಳ ಜ್ಯುಡೀಶಿಯಲ್ ಕಸ್ಟಡಿಗೆ ನೀಡಲಾಗಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳ ಮೂಲಕ ಪಾಕ್ ಗೂಢಚಾರಿ ಯುವತಿಯರು ಇವರಿಗೆ ಪರಿಚಿತರಾಗಿದ್ದಾರೆ. ಆ ಬಳಿಕ ನಿರಂತರ ಸಂಪರ್ಕ ನಡೆಯಿತಲ್ಲದೇ ಹಣದ ಆಸೆಗೆ ಸೂಕ್ಷ್ಮ ರಹಸ್ಯವನ್ನು ಇವರು ಹಂಚಿಕೊಂಡಿದ್ದಾರೆ ಎಂಬುದು ಆರೋಪ. ಅಂದಹಾಗೆ,
ಪೆಹಲ್ಗಾಮ್ನಲ್ಲಿ ಭಯೋತ್ಪಾದಕರು ಮಾರಣ ಹೋಮ ನಡೆಸಿದ ಭಯಾನಕ ಘಟನೆಯ ಬಳಿಕ ಭಾರತವು ಆಪರೇಶನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ದೇಶ ಭಾವುಕವಾಗಿತ್ತು. 26 ಮಂದಿ ನಿರಾಯುಧ ಪ್ರವಾಸಿಗರನ್ನು ಬಂದೂಕುಧಾರಿ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಆ ಭಯೋತ್ಪಾದಕರಿಗೂ ಈ ಪ್ರವಾಸಿಗರಿಗೂ ಯಾವ ಸಂಬಂಧವೂ ಇರಲಿಲ್ಲ. ಅವರ ನಡುವೆ ಪರಿಚಯವೇ ಇರಲಿಲ್ಲ. ಹೀಗೆ ಅತ್ಯಂತ ಪೈಶಾಚಿಕವಾಗಿ ಹತ್ಯೆ ಮಾಡಲಾದ ಈ ಕ್ರೌರ್ಯಕ್ಕೆ ದೇಶ ತೀವ್ರ ಆಕ್ರೋಶಗೊಂಡಿತು. ಈ ಕೃತ್ಯವನ್ನು ಎಸಗಿದವರಿಗೆ ಪಾಕಿಸ್ತಾನ ನೆಲೆ ಒದಗಿಸಿದೆ ಎಂಬ ಆರೋಪವನ್ನು ಭಾರತ ಸರಕಾರ ಮಾಡಿತು. ಅವರು ಇರುವ ನೆಲೆಗಳಿಗೆ ದಾಳಿ ಮಾಡುವ ಯೋಜನೆ ಹಾಕಿ ಕೊಂಡಿತು. ಹೀಗೆ ಪಾಕಿಸ್ತಾನದ ವಿವಿಧ ನೆಲೆಗಳ ಮೇಲೆ ದಾಳಿಯನ್ನೂ ನಡೆಸಿತು. ಆದರೆ,
ಇಂಥ ಕಠಿಣ ಪರಿಸ್ಥಿತಿಯಲ್ಲಿ ದೇಶ ಸಾಗುತ್ತಿದ್ದಾಗ ಜ್ಯೋತಿ ಮಲ್ಹೋತ್ರಾ ಎಂಬ ಹರಿಯಾಣದ ವ್ಲಾಗರ್ ಮತ್ತು ಯೂಟ್ಯೂಬರ್ ಒಬ್ಬರು ಪಾಕ್ ಅಧಿಕಾರಿಗಳೊಂದಿಗೆ ರಹಸ್ಯ ಸಂಪರ್ಕದಲ್ಲಿದ್ದಳು. ಟ್ರಾವೆಲ್ ವಿತ್ ಜೋ ಎಂಬ ಹೆಸರಲ್ಲಿ ಯೂಟ್ಯೂಬ್ ನಡೆಸುತ್ತಿದ್ದ ಈಕೆ 4 ಲಕ್ಷದಷ್ಟು ಸಬ್ಸ್ಕ್ರೈಬ್ಗಳನ್ನು ಹೊಂದಿ ಜನ ಪ್ರಿಯತೆಯನ್ನೂ ಪಡೆದುಕೊಂಡಿದ್ದರು. ಎಪ್ರಿಲ್ನಲ್ಲಿ ಆಪರೇಶನ್ ಸಿಂಧೂರ್ ನಡೆದ ಬಳಿಕ 2025 ಮೇ 13ರಂದು ದೆಹಲಿಯಲ್ಲಿರುವ ಪಾಕ್ ಹೈಕಮೀಷನ್ನಿನ ಅಧಿಕಾರಿ ಇಹ್ಸಾನರ್ರಹೀಮ್ ಅಥವಾ ಡ್ಯಾನಿಶ್ನನ್ನು ಭಾರತದಿಂದ ಹೊರಹಾಕಲಾಯಿತು. ಈತನೊಂದಿಗೆ ಜ್ಯೋತಿ ಮಲ್ಹೋತ್ರ ಹತ್ತಿರದ ಸಂಬಂಧವನ್ನು ಇಟ್ಟುಕೊಂಡಿದ್ದಳು. ಈತನಿಗೆ ದೇಶದ ರಹಸ್ಯವನ್ನು ಸೋರಿಕೆ ಮಾಡುತ್ತಿದ್ದಳು. ಈತ ಐಎಸ್ಐ ಏಜೆಂಟ್ ಎಂದು ಭಾರತ ಸರಕಾರ ಹೇಳುತ್ತಿದೆ. ಈತ ವೀಸಾ ಡೆಸ್ಕ್ನಲ್ಲಿ ಕೆಲಸ ಮಾಡುತ್ತಿದ್ದ.
2023ರಲ್ಲಿ ಪಾಕಿಸ್ತಾನಕ್ಕೆ ಹೋಗಲು ವೀಸಾ ಕೋರಿ ಪಾಕ್ ಹೈಕಮೀಷನ್ನಿಗೆ ಜ್ಯೋತಿ ಮಲ್ಹೋತ್ರ ಅರ್ಜಿ ಹಾಕುತ್ತಾಳೆ. ಅಲ್ಲಿ ಈ ಡ್ಯಾನಿಶ್ನ ಭೇಟಿಯಾಗುತ್ತದೆ. ಆ ಬಳಿಕ ಈಕೆ ಪಾಕಿಸ್ತಾನಕ್ಕೆ ಕನಿಷ್ಠ 2ರಿಂದ ಮೂರು ಬಾರಿ ಭೇಟಿ ನೀಡಿದ್ದಾಳೆ. ಸಿಖ್ ಯಾತ್ರಾ ಗುಂಪು ಗಳೊಂದಿಗೆ ಸೇರಿಕೊಂಡು ಈ ಯಾತ್ರೆ ನಡೆಸಿದ್ದಾಳೆ. ಅಲ್ಲಿ ಅಲಿ ಹಸನ್ ಎಂಬಾತ ಈಕೆಯನ್ನು ಪಾಕಿಸ್ತಾನ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದ ಎಂದು ಜ್ಯೋತಿ ತನಿಖೆಯ ವೇಳೆ ಹೇಳಿಕೊಂಡಿದ್ದಾಳೆ. ಅಲ್ಲಿ ಗುಪ್ತಚರ ವಿಭಾಗದ ಶಕೀರ್ ಎಂಬ ವರ ಪರಿಚಯವಾಗುತ್ತದೆ. ಆತನ ಮೊಬೈಲ್ ಸಂಖ್ಯೆಯನ್ನು ಜಾಟ್ ರಾಂಧವ ಎಂಬ ಹೆಸರಲ್ಲಿ ಸೇವ್ ಮಾಡುತ್ತಾಳೆ. ಆ ಬಳಿಕ ಟೆಲಿಗ್ರಾಮ್, ವಾಟ್ಸಾಪ್, ಸ್ನಾಪ್ಚಾಟ್ಗಳ ಮೂಲಕ ಇವರೆಲ್ಲರ ಜೊತೆ ಈಕೆ ಸಂಪರ್ಕದಲ್ಲಿರುತ್ತಾಳೆ. ಪಾಕಿಸ್ತಾನವಲ್ಲದೇ ಈಕೆ ಚೀನಾವೂ ಸೇರಿ 8 ದೇಶಗಳಿಗೆ ಪ್ರಯಾಣಿಸಿದ್ದಾಳೆ. ಇಂಥ ಜ್ಯೋತಿ ಮಲ್ಹೋತ್ರಳನ್ನು 2025 ಮೇ 16ರಂದು ಹರ್ಯಾಣದಿಂದ ಬಂಧಿಸಲಾಯಿತು.
ಇದರ ಜೊತೆಗೇ,
ದೆಹಲಿಯ ನೌಕಾ ಕೇಂದ್ರ ಕಚೇರಿಯಲ್ಲಿ ಕ್ಲರ್ಕ್ ಆಗಿರುವ ವಿಶಾಲ್ ಯಾದವ್ನನ್ನು ಬಂಧಿಸಲಾಯಿತು. ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಸಬ್ಸ್ಕ್ರೈಬ್ಗಳನ್ನು ಹೊಂದಿರುವ ಯೂಟ್ಯೂಬರ್ ಜಸ್ಬೀರ್ ಸಿಂಗ್ನನ್ನು ಬಂಧಿಸಲಾಯಿತು. ಇದರ ಜೊತೆಜೊತೆಗೇ ಸುಖ್ಪ್ರೀತ್ ಸಿಂಗ್ ಮತ್ತು ಕರಣ್ಬೀರ್ ಸಿಂಗ್ ಎಂಬಿಬ್ಬರು ಬಂಧನಕ್ಕೊಳಗಾದರು. ಸೇನಾ ಚಲನೆ ಮತ್ತು ತಂತ್ರಾತ್ಮಕ ಸ್ಥಳಗಳ ಮಾಹಿತಿಯನ್ನು ಪಾಕ್ ಜೊತೆ ಹಂಚಿಕೊಂಡ ಆರೋಪವನ್ನು ಇವರಿಬ್ಬರ ಮೇಲೆ ಹೊರಿಸ ಲಾಯಿತು. ಸೇನಾ ನಿಯೋಜನೆಯ ಮಾಹಿತಿಯನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡ ಆರೋಪದಲ್ಲಿ ಗಗನ್ದೀಪ್ ಸಿಂಗ್ನನ್ನು ಬಂಧಿಸಲಾಯಿತು.
ಅಂದಹಾಗೆ,
ಇಲ್ಲಿ ಕೊಟ್ಟಿರುವ ಮಾಹಿತಿಗಳೆಲ್ಲ ಆಪರೇಶನ್ ಸಿಂಧೂರ್ ಬಳಿಕ ನಡೆದಂಥದ್ದು. ಅದಕ್ಕಿಂತ ಮೊದಲಿನವರ ಪಟ್ಟಿಯನ್ನು ಹುಡುಕುತ್ತಾ ಹೋದರೂ ಮುಸ್ಲಿಮರು ಬೆರಳೆಣಿಕೆಯಲ್ಲಷ್ಟೇ ಸಿಗುತ್ತಾರೆ. ಒಂದಷ್ಟು ಕಷ್ಟಪಟ್ಟು ಪತ್ತೆ ಕಾರ್ಯಕ್ಕೆ ತೊಡಗಿದರೆ, ಇಂಥ ಮಾಹಿತಿಗಳನ್ನು ಪಡೆದುಕೊಳ್ಳುವುದು ಇವತ್ತು ಕಷ್ಟವೂ ಅಲ್ಲ. ಇಷ್ಟಿದ್ದೂ, ದೇಶದ್ರೋಹ ಅಂದ ತಕ್ಷಣ ಮುಸ್ಲಿಮರತ್ತ ಕೈ ತೋರಿಸುವುದೇಕೆ? ಅವರ ಮುಸ್ಲಿಮ್ ಐಡೆಂಟಿಟಿಯೇ? ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡುವ ರಾಜಕಾರಣದ ಪ್ರಭಾವವೇ? ಅಥವಾ ಪಾಕಿಸ್ತಾನ ಮುಸ್ಲಿಮ್ ಬಹು ಸಂಖ್ಯಾತ ರಾಷ್ಟ್ರವಾಗಿದ್ದು, ಇಲ್ಲಿನ ಮುಸ್ಲಿಮರೂ ಪಾಕ್ ಪರ ಇದ್ದಾರೆ ಎಂಬ ಅನುಮಾನವೇ? ನಿಜ ಏನೆಂದರೆ,
ದೇಶದ್ರೋಹ ಎಂಬ ಪದವನ್ನು 2014ರ ಬಳಿಕ ಉದ್ದೇಶಪೂರ್ವಕವಾಗಿ ಮುಸ್ಲಿಮರ ವಿರುದ್ಧ ಅತ್ಯಂತ ಬುದ್ಧಿವಂತಿಕೆಯಿಂದ ಬಳಸಲು ಪ್ರಾರಂಭಿಸಲಾಗಿದೆ. ಮುಸ್ಲಿಮರಿಗೆ ಸಂಬಂಧಿಸಿ ಏನೇ ಸಂಗತಿ ಇದ್ದರೂ ‘ಪಾಕಿಸ್ತಾನಕ್ಕೆ ಹೋಗು’ ಎಂದು ಹೇಳುವುದು ಅಭ್ಯಾಸವಾಗಿ ಬಿಟ್ಟಿದೆ. ಇದು ಬಾಹ್ಯನೋಟಕ್ಕೆ ತೀರಾ ಬಾಲಿಶ ಹೇಳಿಕೆಯಂತೆ ಕಂಡರೂ ಆಳವಾಗಿ ನೋಡಿದರೆ ಇದು ಬರೇ ಹೇಳಿಕೆಯಷ್ಟೇ ಅಲ್ಲ ಅನ್ನುವುದು ಗೊತ್ತಾಗುತ್ತದೆ. ಇದು ಅತ್ಯಂತ ಅಳೆದೂ ತೂಗಿ ಕಾರ್ಯರೂಪಕ್ಕೆ ತರಲಾದ ಪದ. ‘ದೇಶದ್ರೋಹಿ’ ಮತ್ತು ‘ಪಾಕಿಸ್ತಾನಕ್ಕೆ ಹೋಗು’ ಎಂಬ ಪದದ ಮೂಲಕ ಮುಸ್ಲಿಮರನ್ನು ಗುರಿ ಮಾಡುವುದು ಇದರ ಹಿಂದಿನ ಉದ್ದೇಶ. ದ.ಕ. ಜಿಲ್ಲೆಯ ಕುಡುಪು ಎಂಬಲ್ಲಿ 2025 ಎಪ್ರಿಲ್ನಲ್ಲಿ ಅಶ್ರಫ್ ಎಂಬ ಕೇರಳದ ವ್ಯಕ್ತಿಯನ್ನು ಗುಂಪು ಹತ್ಯೆ ಮಾಡಿದಾಗಲೂ ಈ ಪದವನ್ನು ಚಾಲ್ತಿಗೆ ತರಲಾಗಿತ್ತು ಅನ್ನುವುದನ್ನು ಪರಿಶೀಲಿಸಿದಾಗ ಈ ಪದಗಳು ವಿನಾ ಕಾರಣ ಹುಟ್ಟಿಕೊಂಡಿಲ್ಲ ಎಂಬುದು ಮನವರಿಕೆಯಾಗುತ್ತದೆ.
ಅಶ್ರಫ್ ಎಂಬ ಆ ವ್ಯಕ್ತಿ ಪೂರ್ಣ ಆರೋಗ್ಯವಂತರಾಗಿರಲಿಲ್ಲ. ಮಾನಸಿಕವಾಗಿ ತುಸು ಸಮಸ್ಯೆಗಳಿತ್ತು. ಆ ಕಾರಣದಿಂದಲೇ ಆತ ಕುಡುಪು ಭಾಗಕ್ಕೆ ಬಂದಿದ್ದ. ಆತನಿಗೂ ಪಾಕಿಸ್ತಾನ ಜಿಂದಾಬಾದ್ಗೂ ಸಂಬಂಧವೇ ಇಲ್ಲ. ಆದರೆ, ಆತ ಹಾಗೆ ಹೇಳಿದ್ದಾನೆ ಎಂದು ಸಮಾಜವನ್ನು ನಂಬಿಸುವುದು ಸುಲಭ. ಯಾಕೆಂದರೆ, ಆತ ಮುಸ್ಲಿಮ್. ಆತ ಹಾಗೆ ಹೇಳಿದ್ದರಿಂದಾಗಿಯೇ ಹತ್ಯೆ ಮಾಡಲಾಗಿದೆ ಎಂದು ಹೇಳಿದರೆ, ಆ ಹತ್ಯೆಯೂ ಸಕ್ರಮವಾಗುತ್ತದೆ. ಅಷ್ಟಕ್ಕೂ ಆತ ಹಾಗೆ ಯಾಕೆ ಹೇಳಿದ, ಹಾಗೆ ಹೇಳೋವಷ್ಟು ಮಾನಸಿಕ ಸುಸ್ಥಿತಿ ಆತನಿಗಿತ್ತಾ, ಅಲ್ಲಾಹನು ಪಾಕ್-ಇಂಡಿಯಾ ಕ್ರಿಕೆಟ್ ಸಮರ ನಡೆಯುತ್ತಿತ್ತಾ, ಕುಡುಪುವಿನಲ್ಲಿ ಕ್ರಿಕೆಟ್ ಆಡುತ್ತಿದ್ದವರ ಬಳಿ ಬಂದು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಅಗತ್ಯ ಏನಿತ್ತು.. ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ ಎಂಬ ಧೈರ್ಯ ಆರೋಪಿಗಳಲ್ಲಿತ್ತು. ಈ ಧೈರ್ಯಕ್ಕೆ ಕಾರಣ ಏನೆಂದರೆ, ಸಂತ್ರಸ್ತನ ಹೆಸರು ಅಶ್ರಫ್. ಮುಸ್ಲಿಮರೆಂದರೆ ಪಾಕನ್ನು ಬೆಂಬಲಿಸುವವರು ಮತ್ತು ಆ ಕಾರಣಕ್ಕಾಗಿಯೇ ದೇಶದ್ರೋಹಿಗಳು ಎಂಬೊಂದು ಸುಳ್ಳನ್ನು ಅತ್ಯಂತ ಯೋಜಿತವಾಗಿ ಹಬ್ಬಿಸಿ ಬಿಡಲಾಗಿರುವುದರ ಫಲಿತಾಂಶ ಇದು.
ಮುಸ್ಲಿಮರು ಸಾಮಾನ್ಯವಾಗಿ ಬಳಸುವ ಹಸಿರು ಧ್ವಜವನ್ನು ಈ ದೇಶದ ಮಾಧ್ಯಮಗಳು ಹತ್ತು-ಹಲವು ಬಾರಿ ಪಾಕಿಸ್ತಾನದ ಧ್ವಜ ಎಂದು ಸುದ್ದಿ ಮಾಡಿವೆ. ಹಿಜಾಬ್ ವಿವಾದ ಸಮಯದಲ್ಲಿ ಸರಕಾರದ ಭಾಗವಾಗಿರುವ ಶಾಸಕರು ಮತ್ತು ಕಾರ್ಯಕರ್ತರು ಹತ್ತು-ಹಲವು ಬಾರಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ‘ಪಾಕಿಸ್ತಾನಕ್ಕೆ ಹೋಗಿ’ ಎಂದು ನಿರ್ಭಾವುಕವಾಗಿ ಹೇಳಿದ್ದಾರೆ. ಈಗಲೂ ಕೇಂದ್ರ ಸರಕಾರವನ್ನು ಪ್ರಶ್ನಿಸುವುದನ್ನು ದೇಶದ್ರೋಹ ಎಂದು ಸರಕಾರದ ಬೆಂಬಲಿಗರು ಕರೆಯುತ್ತಾರೆ. ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಮೆಚ್ಚಿಕೊಳ್ಳುವುದನ್ನು 2014ರಿಂದ ನಿಷೇಧಿಸಲಾಗಿದೆ. ಜೈಲಲ್ಲಿರುವ ಪಾಕ್ನ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರ ಸಮಕಾಲೀನ ಭಾರತೀಯ ಕ್ರಿಕೆಟಿಗರನ್ನು ಇಲ್ಲಿ ದೇಶದ್ರೋಹಿಗಳು ಎಂದು ಕರೆಯಲಾಗಿದೆ. ‘ದೇಶ ವಿಭಜನೆಯಾಗುವಾಗಲೇ ಪಾಕಿಸ್ತಾನಕ್ಕೆ ಹೋಗಬೇಕಿತ್ತು, ನಿಮಗೆ ಈ ದೇಶದಲ್ಲಿ ಏನೂ ಹಕ್ಕಿಲ್ಲ..’ ಎಂದು ಪ್ರಭುತ್ವದ ಬೆಂಬಲಿಗರು ಆಗಾಗ ಮುಸ್ಲಿಮರಿಗೆ ಬೆದರಿಕೆ ಹಾಕುತ್ತಿರುತ್ತಾರೆ. ನಿಜವಾಗಿ,
ಈ ದೇಶದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿ ಹಣ ಮಾಡುತ್ತಿರುವ ಸಾಲು ಸಾಲು ಆರೋಪಿಗಳಲ್ಲಿ ಮುಸ್ಲಿಮರ ಸಂಖ್ಯೆ ವಿರಳಾತಿವಿರಳ ಆಗಿದ್ದರೂ ಅದನ್ನು ಮುಚ್ಚಿಟ್ಟು ಮುಸ್ಲಿಮರು ದೇಶದ್ರೋಹಿಗಳು ಎಂಬ ನರೇಟಿವನ್ನು ಕಟ್ಟಲು ಪ್ರಭುತ್ವದ ಪರ ಗುಂಪು ಶಕ್ತಿ ಮೀರಿ ಯತ್ನಿಸುತ್ತಿದೆ. ದೇಶದ್ರೋಹ ಮಾಡಲು ಮುಸ್ಲಿಮರಿಂದಷ್ಟೇ ಸಾಧ್ಯ ಮತ್ತು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವುದಷ್ಟೇ ದೇಶದ್ರೋಹ ಎಂದು ಜನರನ್ನು ನಂಬಿಸಲು ಒಂದು ಹಂತದವರೆಗೆ ಪ್ರಭುತ್ವದ ಬೆಂಬಲಿ ಗರು ಯಶಸ್ವಿಯೂ ಆಗಿದ್ದಾರೆ. ಆದರೆ ನಿಜಕ್ಕೂ ದೇಶದ್ರೋಹ ಅಂದರೇನು? ಈ ದೇಶದ ಬ್ಯಾಂಕ್ಗಳಿಗೆ 26,645 ಕೋಟಿ ರೂಪಾಯಿಯನ್ನು ವಂಚಿಸಿ ದೇಶವನ್ನೇ ಬಿಟ್ಟು ಹೋದ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ, ನಿತಿನ್ ಸಂದೇಸರಾ, ದೀಪ್ತಿ ಸಂದೇಸರಾ, ಸಂಜಯ್ ಭಂಡಾರಿ, ಪುಷ್ಪೇಶ್ ಕುಮಾರ್, ಸುದರ್ಶನ್ ವೆಂಕಟರಾಮನ್ ಸಹಿತ ಸಾಲು ಸಾಲು ಆರ್ಥಿಕ ಅಪರಾಧವನ್ನು ಎಸಗಿದವರು ಏನು? ಇವರು ಈ ದೇಶಕ್ಕೆ ಮಾಡಿರುವುದು ದೇಶದ್ರೋಹ ಅಲ್ಲವೇ? ಇವರಲ್ಲಿ ಮುಸ್ಲಿಮ್ ಹೆಸರು ಹುಡುಕಿದರೂ ಸಿಗದಷ್ಟು ಅಪರೂಪವಾಗಿದೆ. ಪಾಕ್ಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿದವರ ಪಟ್ಟಿಯಲ್ಲೂ ಮುಸ್ಲಿಮ್ ಹೆಸರು ಅಪರೂಪವಾಗಿದೆ. ಹಾಗಿದ್ದ ಮೇಲೂ ಮುಸ್ಲಿಮರ ಮೇಲೆ ಆರೋಪ ಹೊರಿಸುವುದಕ್ಕೆ ಏನರ್ಥ ಇದೆ?












