ಆದರ್ಶ ಧೀರ ಪತ್ರಕರ್ತನ ನೆನಪಿನಲ್ಲಿ…!

0
787

ಲೇಖಕರು: ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು

1945ರ ಆಗಸ್ಟ್ ತಿಂಗಳ 6ನೇ ತಾರೀಕು ಮುಂಜಾನೆ 8:15ಕ್ಕೆ ಬೋಯಿಂಗ್ ಬಿ-29 ಎಂಬ ಮಾರಕವಾದ ಅಣುಬಾಂಬನ್ನು ಹೊತ್ತುಕೊಂಡ ಅಮೇರಿಕಾದ ಯುದ್ಧ ವಿಮಾನ ಜಪಾನಿನ ಹಿರೋಷಿಮಾ ನಗರದ ಮೇಲೆ ಸುರಿಸಿ ಪ್ರಸ್ತುತ ನಗರವನ್ನು ಸುಟ್ಟು ಭಸ್ಮ ಮಾಡಿತು. ತದಬಳಿಕ ಖ್ಯಾತ ಅಣುಶಾಸ್ತ್ರಜ್ಞ ಮತ್ತು ಅಮೇರಿಕಾದ ಅಣ್ವಸ್ತ್ರ ಮಂಡಳಿಯ ಅಧ್ಯಕ್ಷ ಜನರಲ್‌ ಥಾಮಸ್ ಫೆರಲ್‌ ಟೋಕಿಯೋದಲ್ಲಿ ಪತ್ರಿಕಾಗೋಷ್ಟಿ ನಡೆಸಿದರು. ಆಸ್ಟ್ರೇಲಿಯಾದ ಪತ್ರಕರ್ತ ವಿಲ್‌ಫ್ರೆಡ್‌ ಬುರ್ಜೆಟ್‌ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಅಣುಬಾಂಬ್‌ ಹಿರೋಷಿಮಾದ ಬಹಳಷ್ಟು ಎತ್ತರದಲ್ಲಿ ಸ್ಫೋಟಿಸಿದೆ. ಆದ್ದರಿಂದ ಅಲ್ಲಿ ವಿಕಿರಣ ಪ್ರಭಾವ ಬೀರಲಿಲ್ಲವೆಂದು ಫೆರಲ್‌ ಸಮಜಾಯಿಸಿದಾಗ, ಪತ್ರಕರ್ತ ವಿಲ್‌ಫ್ರೆಡ್‌ ಬುರ್ಜೆಟ್‌ರಿಗೆ ಮೂಕರಂತೆ ತೆಪ್ಪಗೆ ಕೂರಲು ಸಾಧ್ಯವಾಗಲಿಲ್ಲ. ಏಕೆಂದರೆ ಸತ್ಯ ಸುಟ್ಟು ಹೋಗುವುದು ಅವರಿಗೆ ತೀರಾ ಅಸಹ್ಯವಾಗಿತ್ತು. ಅವರು ಟಿಆರ್‌ಪಿಯ ಮೇಲೆ ಕಣ್ಣಿಟ್ಟು ಬದುಕುವ ಜಾಯಮಾನದವರಲ್ಲ. ಪತ್ರಿಕಾ ಧರ್ಮವನ್ನು ಸಮರ್ಥವಾಗಿ ನಿಭಾಯಿಸುವ ಧೀರರವರು. ಅಮೇರಿಕಾದ ಕ್ರೌರ್ಯವನ್ನು ಸಮರ್ಥಿಸ ಹೊರಟ ಥಾಮಸ್ ಫೆರಲ್‌ರನ್ನು ಅವರು ತೀರ್ವವಾಗಿ ತರಾಟೆಗೆ ತೆಗೆದರು. ಅವರಿಬ್ಬರ ನಡುವೆ ವಾಗ್ವಾದ ನಡೆಯಿತು.

ಬುರ್ಜೆಟ್‌: ಅಣುವಿಕಿರಣ ಉಂಟಾಗಿಲ್ಲವೆಂಬ ನಿಮ್ಮ ವಾದ ಸರಿಯೆಂದಾದರೆ ಹಿರೋಷಿಮಾ ನದಿಯ ಮೀನುಗಳು ಸಾಯುತ್ತಿರುವುದೇಕೆ?

ಫೆರಲ್‌: ಅದು ತೀವ್ರ ತಾಪದಿಂದಾಗಿರಬಹುದು.

ಬುರ್ಜೆಟ್‌: ಹಾಗಾದರೆ ಅಣುಬಾಂಬ್‌ ಸ್ಫೋಟಿಸಿ ಒಂದು ತಿಂಗಳ ನಂತರ ವಾತಾವರಣದ ತಾಪಮಾನ ಹೆಚ್ಚಿರುವುದೇಕೆ?

ಫೆರಲ್: ಸರ್‌, ಮೀನುಗಳು ಒಂದು ತಿಂಗಳ ಹಿಂದೆ ಸತ್ತಿರಬಹುದು.
[ಅಷ್ಟಕ್ಕೇ, ಅದನ್ನು ಒಪ್ಪಿ ಸತ್ಯದ ಕತ್ತು ಕೊಯ್ಯುವ ಕೃತ್ಯಕ್ಕೆ ಮೂಕ ಪ್ರೇಕ್ಷಕರಾಗಲು ಬುರ್ಜೆಟ್‌ರಂತೂ ತಯಾರಾಗಲಿಲ್ಲ. ಅವರು ಅಣುಶಾಸ್ತ್ರಜ್ಞರಿಗೆ ಮರು ಸವಾಲು ಹಾಕಿದರು.]

ಬುರ್ಜೆಟ್‌: ಹಾಗಿದ್ದರೆ ಈಗ ನದಿಗೆ ಬಿಟ್ಟ ಮೀನುಗಳು ಸಾಯುವುದೇಕೆ?

ಈ ಪ್ರಶ್ನೆಗೆ ಉತ್ತರವಿಲ್ಲದೆ ಫೆರಲ್‌ ಒಂದು ಕ್ಷಣ ಸ್ಥಂಭೀಭೂತರಾದರು. ಜನರಲ್‌ ಥಾಮಸ್‌ ಫೆರಲ್‌ ತಮ್ಮ ಡೈರಿಯಲ್ಲಿ ಹೀಗೆ ಬರೆದಿದ್ದಾರೆ.

“ವಿಲ್‌ಫ್ರೆಡ್‌ ಬುರ್ಜೆಟ್‌ ಅಮೇರಿಕಾ ಮತ್ತು ಅದರ ಹಿತಾಸಕ್ತಿಗಳನ್ನು ಸುಳ್ಳುಗಳಿಂದ ನಿರಾಕರಿಸಲಾಗದಂತಹ ಮೇಧಾವಿಯಾಗಿದ್ದಾರೆ. ಇಂತಹ ಸತ್ಯನಿಷ್ಠ ಪತ್ರಕರ್ತರು ತೀರಾ ವಿರಳವಾಗಿದ್ದಾರೆ. ಅದು ನನ್ನ ಜೀವನದ ಅತಿ ಕಠಿಣ ಪತ್ರಿಕಾಗೋಷ್ಟಿಯಾಗಿತ್ತು. ಬುರ್ಜೆಟ್‌ರ ಮುಂದೆ ಸೋಲದೆ ನನಗೆ ನಿರ್ವಾಹವಿರಲಿಲ್ಲ…”

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ಬಳಿಕದ ಎರಡ್ಮೂರು ದಶಕಗಳ ವರೆಗೆ ಮಾಧ್ಯಮಗಳ ಬಗ್ಗೆ ದೇಶದ ಜನಸಾಮಾನ್ಯರಿಂದ ಹಿಡಿದು ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕರುಗಳ ವರೆಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯವಿತ್ತು. ಏಕೆಂದರೆ ಸಮಾಜದ ಹಿತ ಮತ್ತು ರಾಷ್ಟ್ರದ ಭದ್ರತೆಯ ಬಗ್ಗೆ ಅವುಗಳು ತೀವ್ರ ಕಾಳಜಿ ವಹಿಸುತ್ತಿದ್ದುವು. ಗಾಂಧೀಜಿಯವರ ಹರಿಜನ್, ತಿಲಕರ ಸ್ವರಾಜ್‌, ಅಬುಲ್‌ ಕಲಾಮ್‌ ಆಝಾದ್‌ರ “ಅಲ್‌ ಹಿಲಾಲ್‌” ಮುಂತಾದ ಅನೇಕ ಪತ್ರಿಕೆಗಳು ಬ್ರಿಟಿಷರ ದಾಸ್ಯದಿಂದ ಹೊರ ಬರಲು ದೇಶದಾದ್ಯಂತ ಸ್ವಾತಂತ್ರ್ಯದ ಕಿಡಿ ಹಚ್ಚುವಲ್ಲಿ ಯಶಸ್ವಿಯಾಗಿದ್ದವು. ಸದಾ ಜನಪರವಾಗಿದ್ದು, ಉತ್ಕೃಷ್ಟವಾದ ಸೇವೆ ಸಲ್ಲಿಸುತ್ತಿದ್ದವು.

ಆದರೆ, ಕಾಲದ ಉರುಳಾಟದೊಂದಿಗೆ ಮಾಧ್ಯಮಕ್ಕೆ ಗರ ಬಡಿಯಿತು. ಹಲವು ಬರಹಗಾರರು ತಮ್ಮ ಕರ್ತವ್ಯಗಳನ್ನು ಮರೆತು ಸಿರಿವಂತರ, ಫ್ಯಾಸಿಸ್ಟರ ಮತ್ತು ನೋಟಿನ ಕಟ್ಟಿನ ಮುಂದೆ ಪತ್ರಿಕಾ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿಕೆಗಳನ್ನು ಒತ್ತೆಯಿಟ್ಟರು. ಪ್ರಶಸ್ತಿ, ಸ್ಥಾನಮಾನ, ಆಶೆ, ಆಮಿಷಗಳ ಮುಂದೆ ನಗ್ನರಾಗಿ, ಮಾಧ್ಯಮದ ಆಶಯ, ಆದರ್ಶಗಳನ್ನು ಬಲಿ ನೀಡಿದರು. ದೇಶ ಮತ್ತು ಒಟ್ಟು ಸಮಾಜವನ್ನು ಗಂಡಾಂತರಗಳಿಂದ ಕಾಪಾಡ ಬೇಕಾದ ಪತ್ರಕರ್ತರು ಮತೀಯ ದ್ವೇಷಿಗಳಾಗಿ ಹಿಂಸೆಗೆ ಪ್ರಚೋದಿಸುವ ಗೂಂಡಾಗಳಾಗುತ್ತಿದ್ದಾರೋ ಎಂದೂ ಭಯವಾಗುತ್ತಿದೆ. ಈ ಅನ್ಯಾಯ, ಹಿಂಸೆ, ಜಾತಿ ದ್ವೇಷದ ನಡುವೆ, ಬುರ್ಜೆಟ್‌ರಂತಹ ಆದರ್ಶ ಧೀರ ಪತ್ರಕರ್ತರ ಅಗತ್ಯ, ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಅಂತಹ ಪತ್ರಕರ್ತರ ಹುಡುಕಾಟದಲ್ಲಿದ್ದೇನೆ. ಧಾರಾಳ ಸಿಗುವಂತಾಗಲಿ…