ಮುಗಿದ ಆಕ್ಸಿಜನ್ : ದಿಲ್ಲಿಯ ಬಾತ್ರ ಆಸ್ಪತ್ರೆಯಲ್ಲಿ ಡಾಕ್ಟರ್ ಸಹಿತ 8 ಮಂದಿ ಮೃತ್ಯು

0
824

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮೆಡಿಕಲ್ ಆಕ್ಸಿಜನ್ ಮುಗಿದದ್ದರಿಂದ ದಿಲ್ಲಿಯ ಬಾತ್ರ ಆಸ್ಪತ್ರೆಯಲ್ಲಿ ವೈದ್ಯರ ಸಹಿತ ಎಂಟು ಮಂದಿ ಕೊರೋನ ರೋಗಿಗಳು ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ 11:45ಕ್ಕೆ ಘಟನೆ ನಡೆದಿದೆ. 1.30ಕ್ಕೆ ಆಕ್ಸಿಜನ್ ಟ್ಯಾಂಕರ್ ಆಸ್ಪತ್ರೆಗೆ ಬಂದ ಮೇಲೆ ಆಕ್ಸಿಜನ್ ವಿತರಣೆ ಪುನರಾರಂಭವಾಯಿತು. 80 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿದ್ದ 230 ರೋಗಿಗಳು ಆಕ್ಸಿಜನ್ ಇಲ್ಲದೆ ಸಮಯ ಕಳೆಯಬೇಕಾಯಿತು ಎಂದು ಆಸ್ಪತ್ರೆಯ ಅಧಿಕಾರಿಗಳು ದಿಲ್ಲಿ ಹೈಕೋರ್ಟಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಯ ಐಸಿಯುನಲ್ಲಿ ಆರು ರೋಗಿಗಳು ಮತ್ತು ಕೊರೋನ ವಾರ್ಡಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಗ್ಯಾಸ್ಟ್ರೊ ಎಂಟರೊಲಜಿ ವಿಭಾಗ ಮುಖ್ಯಸ್ಥ ಡಾ. ಆರ್.ಕೆ. ಹಿಮಾತಾನಿ ಮೃತಪಟ್ಟವರಲ್ಲಿ ಸೇರಿದ್ದಾರೆ. 307 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಅದರಲ್ಲಿ 230 ಮಂದಿ ಆಕ್ಸಿಜನ್ ನ ಸಹಾಯದಿಂದ ಉಸಿರಾಟ ನಡೆಸುತ್ತಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಆಕ್ಸಿಜನ್ ಮುಗಿಯುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಲಾಯಿತೆಂದು ಬಾತ್ರ ಆಸ್ಪತ್ರೆಯ ಎಕ್ಸಿಕ್ಯೂಟಿವ್ ನಿರ್ದೇಶಕ ಡಾ. ಸುಧಾನ್ಶು ಬಂಕಡ ಕೋರ್ಟಿಗೆ ತಿಳಿಸಿದರು.

ಯಾರು ಮೃತಪಟಿಲ್ಲ ಎಂದು ಭಾವಿಸುತ್ತೇನೆ ಎಂದು ಕೋರ್ಟು ಆಶಾವಾದ ವ್ಯಕ್ತಪಡಿಸಿದಾಗ ನಮ್ಮ ವೈದ್ಯರ ಸಹಿತ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದರು. ಇದು ಎರಡನೇ ಬಾರಿ ಬಾತ್ರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು. ಎಪ್ರಿಲ್ 24ಕ್ಕೆ ಆಕ್ಸಿಜನ್ ಇಲ್ಲದ ಸ್ಥಿತಿ ಬರುತ್ತದೆ ಎಂಬಂತಿದ್ದರೂ ಕೊನೆ ನಿಮಿಷದಲ್ಲಿ ಸಮಸ್ಯೆ ಪರಿಹಾರವಾಗಿತ್ತು.