ಬಹರೇನ್‌ ನಲ್ಲಿ ಸಿಲುಕಿರುವ ಭಾರತೀಯರನ್ನು ಸೌದಿಗೆ ಕರೆಸಿಕೊಳ್ಳಲು ಸಕಲ ಪ್ರಯತ್ನ: KSA ರಾಯಭಾರಿ

0
682

ಸನ್ಮಾರ್ಗ ವಾರ್ತೆ

ಬಹರೇನ್: ಸೌದಿಗೆ ತೆರಳುವುದಕ್ಕಾಗಿ ಬಹರೈನ್‌ಗೆ ಬಂದಿಳಿದಿರುವ ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದು ಅವರನ್ನು ಸೌದಿಗೆ ತಲುಪಿಸುವುದಕ್ಕಾಗಿ ಸೌದಿ ಬಹರೈನ್ ಇಂಡಿಯನ್ ರಾಯಭಾರ ಕಚೇರಿಗಳು ತೀವ್ರ ಶ್ರಮ ನಡೆಸುತ್ತಿರುವುದಾಗಿ ಸೌದಿಯ ಭಾರತೀಯ ರಾಯಭಾರಿ ಡಾಕ್ಟರ್ ಔಸಾಫ್ ಸಯೀದ್ ಹೇಳಿದ್ದಾರೆ. ಸೌದಿಗೆ ಬರಲು 1500ರಷ್ಟು ಭಾರತೀಯರು ಬಹರೈನ್‌ನಲ್ಲಿದ್ದು ಅವರು ಸೌದಿ ಅನುಮತಿಗಾಗಿ ಕಾಯುತ್ತಿದ್ದಾರೆ.

ಸೌದಿ ಅರೇಬಿಯಾ ಅಂಗೀಕರಿಸಿರುವ ಕೊರೋನಾ ವ್ಯಾಕ್ಸಿನ್ ಪಡೆಯದವರಿಗೆ ದಮ್ಮಾಮ್ ಕಿಂಗ್ ಪಹದ್ ಕೋಸ್ ವೇ ಮೂಲಕ ಸೌದಿಗೆ ಬರಲು ಸಾಧ್ಯವಿಲ್ಲ ಎಂಬ ಹೊಸ ನಿಯಮವೇ ಬಹರೈನ್ ನಲ್ಲಿರುವ ಭಾರತೀಯರಿಗೆ ತಡೆಯಾಗಿದೆ.

ಸೌದಿ ವಿದೇಶ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ನಿರೀಕ್ಷೆ ಇದೆ ಎಂದು ರಾಯಭಾರಿ ಹೇಳಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದವರಿಗೆ ಸೌದಿಗೆ ಬರಬಹುದು. ಇವರಿಗೆ ಕ್ವಾರಂಟೈನ್ ಅಗತ್ಯವಿಲ್ಲ. ಸೌದಿಯಲ್ಲಿ ಈ ವ್ಯಾಕ್ಸಿನ್ ಆಸ್ಟ್ರೋಜೆನಿಕಾ ಎಂಬ ಹೆಸರಲ್ಲಿ ಗುರುತಿಸಿಕೊಳ್ಳುತ್ತದೆ. ಸೌದಿ ಅಧಿಕಾರಿಗಳಿಗೆ ಕೋವಿಶೀಲ್ಡ್ ಮತ್ತು ಆಸ್ಟ್ರೋಜೆನಿಕ ಎರಡೂ ಕೂಡ ಒಂದೇ ಎಂಬುದನ್ನು ತಿಳಿಸುವುದಕ್ಕೆ ಸಾಧ್ಯವಾಗಿರುವುದರಿಂದ
ಕೋವಿಶೀಲ್ಡ್ ಪಡೆದ ಭಾರತೀಯರು ಆ ಪತ್ರವನ್ನು ಪಡೆದುಕೊಂಡು ಸೌದಿಗೆ ಬರಬಹುದು ಎಂದು ರಾಯಬಾರಿ ಹೇಳಿದ್ದಾರೆ.

ಆದರೆ ಕೋವಿಶೀಲ್ಡ್ ಪಡೆದವರಿಗೆ ಕೊಡುವ ಪ್ರಮಾಣಪತ್ರದಲ್ಲಿ ಆಧಾರ್ ಸಂಖ್ಯೆಯನ್ನು ಮಾತ್ರ ನಮೂದಿಸುತ್ತಿರುವುದರಿಂದ ತೊಂದರೆಯಾಗುತ್ತಿದ್ದು ಅದರಲ್ಲಿ ಪಾಸ್ಪೋರ್ಟ್ ನಂಬರನ್ನು ಕೂಡ ದಾಖಲಿಸಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ದೆಹಲಿಯ ಇಂಡಿಯನ್ ಕೋವಿಡ್ ಸೆಲ್‌ನೊಂದಿಗೆ ಹೇಳಿರುವುದಾಗಿ ರಾಯಭಾರಿ ಹೇಳಿದ್ದಾರೆ.

ಅದೇ ವೇಳೆ ಭಾರತದಲ್ಲಿ ನೀಡಲಾಗುತ್ತಿರುವ ಕೊವಾಕ್ಸಿನನ್ನು ಸೌದಿ ಅಂಗೀಕರಿಸಿಲ್ಲ. ಇದಕ್ಕೆ ಸೌದಿಯಿಂದ ಅಂಗೀಕಾರ ಲಭಿಸುವ ಬಗ್ಗೆ ಪ್ರಯತ್ನ ಮುಂದುವರಿದಿದೆ ಎಂದು ರಾಯಭಾರಿ ಹೇಳಿದ್ದಾರೆ.