ತುಮಕೂರು: ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಲು ಆಗ್ರಹಿಸಿ ವೆಲ್ಫೇರ್ ಪಾರ್ಟಿಯಿಂದ ಅಲ್ಪಸಂಖ್ಯಾತರ ಆಯೋಗಕ್ಕೆ ಮನವಿ

0
745

ಸನ್ಮಾರ್ಗ ವಾರ್ತೆ

ತುಮಕೂರು:ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಈ ಸಮುದಾಯಗಳ ಶಿಕ್ಷಣ, ಮೂಲಭೂತ ಸೌಕರ್ಯ, ಆಶ್ರಯ ಯೋಜನೆಗಳ ಅಡಿಯಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರಿಗೆ ವೇಲ್ಫೇರ್ ಪಾರ್ಟಿ ಅಫ್ ಇಂಡಿಯಾದ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಇತರೆ ಮುಖಂಡರು ಮನವಿ ಸಲ್ಲಿಸಿದರು.

ಮುಸ್ಲಿಂ, ಸಿಖ್,ಜೈನ, ಪಾರ್ಶಿ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಒಳಗೊಂಡ ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ದಿಗೆ ಈ ಹಿಂದಿನ ಸರಕಾರದಲ್ಲಿ ೩೦೦೦ ಕೋಟಿ ರೂಗಳ ಅನುದಾನ ನೀಡಿತ್ತು.ಆದರೆ ೨೦೨೦-೨೧ನೇ ಸಾಲಿನಲ್ಲಿ ಅದನ್ನು ಶೇ.೫೦ಕ್ಕಿಂತಲೂ ಕಡಿಮೆ ಅಂದರೆ ೮೦೦ ಕೋಟಿ ರೂಗಳಿಗೆ ಇಳಿಸಲಾಗಿದೆ. ಶೇ೧೫ಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯದ ಅಭಿವೃದ್ದಿ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.ಅಲ್ಲದೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ನೀಡುತ್ತಿದ್ದ ಅರಿವು ಯೋಜನೆ ಅಡಿಯಲ್ಲಿ ನೀಡುತ್ತಿದ್ದ ಅನುದಾನವನ್ನು ೨೯೨ ಕೋಟಿಗೆ ಬದಲಾಗಿ ೭೧ ಕೋಟಿಗೆ ಕಡಿತ ಮಾಡಲಾಗಿದೆ.ಇದರಿಂದಾಗಿ ಈ ಹಿಂದಿನ ವರ್ಷಗಳಲ್ಲಿ ನಾನ್ ಸಿಇಟಿ ಅಡಿ ಸೌಲಭ್ಯ ಪಡೆದು ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ನವೀಕರಣಕ್ಕೂ ಅವಕಾಶ ನೀಡುತ್ತಿಲ್ಲ.

ಅರಿವು ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸುಮಾರು ೩೦ ಕೋಟಿ ರೂಗಳ ಹಣ ಬಾಕಿ ಬರಬೇಕಾಗಿದೆ.ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ.ಇದು ಶೈಕ್ಷಣಿಕವಾಗಿ ಈ ಸಮುದಾಯಗಳನ್ನು ಹಿಂದಕ್ಕೆ ತಳ್ಳುವ ಪ್ರಯತ್ನವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದ ಜನರಿರುವ ಕಡೆ ಕಾಲೋನಿ ಅಭಿವೃದ್ದಿ ಯೋಜನೆಯಡಿ ಸಿ.ಸಿ.ಟಿ.ವಿ, ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿ ಘಟಕ,ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ನೀಡುತಿದ್ದ ಅನುದಾನವನ್ನು ಸಹ ೨೦೨೦-೨೧ ಮರಲ್ಲಿ ಸ್ಥಗಿತಗೊಳಿಸಿದ್ದು, ಸದರಿ ಯೋಜನೆಯನ್ನು ಪುನಃ ಜಾರಿಗೆ ತರಬೇಕೆಂಬುದು ಸಮುದಾಯದ ಒತ್ತಾಯವಾಗಿದೆ.ಜೊತೆಗೆ ರದ್ದಾಗಿರುವ ಬಿದಾಯಿ ಯೋಜನೆಯನ್ನು ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತುಮಕೂರು ಜಿಲ್ಲೆಯ ವಕ್ಫ್ ಕಚೇರಿಗೆ ಇದುವರೆಗೂ ಸ್ವಂತ ಭೂಮಿ ಇಲ್ಲ.ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲು ಆಯೋಗ ಮುಂದಾಗಬೇಕು ಹಾಗೂ ಜಿಲ್ಲೆಯಲ್ಲಿ ವಕ್ಪ್ ಆಸ್ತಿಗಳ ಸರ್ವೇ ಮತ್ತು ಗಣಕೀಕರಣ, ಖಬರ್‌ಸ್ತಾನ್‌ಗಳಿಗೆ ಜಾಗ ಮೀಸಲು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಗೆ ಸಲ್ಲಿಸಿದರು.

ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಎಂ.ಮೆಹಬೂಬ್ ಪಾಷ, ಜಿಲ್ಲಾ ವಕ್ಪ್ ನಿವೃತ್ತ ಅಧಿಕಾರಿ ಮೊಹಮ್ಮದ್ದ ಆಸಿಫ್‌ವುಲ್ಲಾ, ತೆಹರಿಕ್-ಎ-ಉರ್ದು ಅದಬ್‌ನ ಸದಸ್ಯ ಮುಷ್ಕೂರ್ ಅಹಮದ್‌ಖಾನ್ ಮತ್ತಿತರರು ಜೊತೆಗಿದ್ದರು.