ತರ್ಕದಿಂದ ನೀವು ಗೆಲ್ಲಬಹುದು, ಆದರೆ…

0
163

ಸನ್ಮಾರ್ಗ ವಾರ್ತೆ

✍️ಅದ್ಹಮ್ ಶರ್ಖಾವಿ
ಅನು: ಅಬೂ ಸಲ್ವಾನ್

ಓರ್ವ ಪ್ರಯಾಣಿಕ ಹೇಳುತ್ತಾರೆ: ನಾನು ಒಮ್ಮೆ ಏರ್‌ಪೋರ್ಟ್ ಗೆ ಟ್ಯಾಕ್ಸಿ ಮೂಲಕ ಹೋಗುತ್ತಿದ್ದೆ. ಸಾಮಾನ್ಯ ವೇಗದಲ್ಲಿ ನಾವು ಸಂಚರಿಸುತ್ತಿದ್ದಂತೆ ಹಠಾತ್ತನೆ ಅತಿ ವೇಗದಲ್ಲಿ ಬಂದ ಕಾರೊಂದು ನಮ್ಮ ಮುಂದೆ ಬಂದು ನಿಂತಿತು. ನಮ್ಮ ಚಾಲಕ ತಕ್ಷಣ ಬ್ರೇಕ್ ಹಾಕಿದ ಕಾರಣ ಆ ಕಾರಿಗೆ ಡಿಕ್ಕಿ ಹೊಡೆಯುವುದರಿಂದ ಅಲ್ಲಾಹನ ಅನು ಗ್ರಹದಿಂದ ಸ್ವಲ್ಪದರಲ್ಲೇ ಪಾರಾಯಿತು. ಆದರೆ ಇಷ್ಟೆಲ್ಲಾ ಮಾಡಿದ ಆ ತಪ್ಪಿತಸ್ಥ ಕಾರಿನ ಚಾಲಕ ಕಾರಿನಿಂದ ಇಳಿದು ಎಗರಾಡುತ್ತಾ ನಮ್ಮ ಮುಂದೆ ಅವಾಚ್ಯ ಶಬ್ದ ಬಳಸುತ್ತಾ ಜಗಳಕ್ಕಿಳಿದನು. ಬೊಬ್ಬೆ ಹಾಕುತ್ತಾ ಉಚ್ಚ ಸ್ವರದಲ್ಲಿ ಮಾತನಾಡ ತೊಡಗಿದ. ನಮ್ಮ ಚಾಲಕ ಎಲ್ಲವನ್ನೂ ಮುಗುಳ್ನಗುತ್ತಾ ಕೇಳುತ್ತಿದ್ದ.

ನಮ್ಮ ಚಾಲಕನ ವರ್ತನೆಯಿಂದ ಆಶ್ಚರ್ಯ ಚಕಿತನಾದ ನಾನು ಅವರಲ್ಲಿ ಆ ವ್ಯಕ್ತಿ ಇಷ್ಟೊಂದು ಎಗರಾಡುವಾಗ ನೀವೇಕೆ ಪ್ರತಿಕ್ರಿಯಿಸದೆ ಮುಗುಳ್ನಗುತ್ತಿದ್ದೀರಿ? ಎಂದು ಕೇಳಿದೆ. ಅದಕ್ಕೆ, ಆ ವ್ಯಕ್ತಿ ನಮ್ಮನ್ನು ಕೊಲ್ಲುತ್ತಿದ್ದರು ಎಂದು ಹೇಳಿದರು. ಆಗ ನಮ್ಮ ಚಾಲಕನ ಬಗ್ಗೆ ನನ್ನಲ್ಲಿ ಗೌರವಾದರ ಮೂಡಿತು. ಯಾಕೆಂದರೆ ಅವರು ನನಗೆ ಉತ್ತಮವಾದ ಸಂದೇಶ ನೀಡಿದ್ದರು. ಅದಕ್ಕೆ ನಾನು ಕಾರು ಕಲಿಸಿದ ಪಾಠ ಎಂಬ ಶೀರ್ಷಿಕೆ ನೀಡಿ ದಾಖಲಿಸಿಟ್ಟೆ. ಇಷ್ಟಕ್ಕೂ ಆ ಚಾಲಕ ನನ್ನಲ್ಲಿ ಏನು ಹೇಳಿದ್ದರು ಗೊತ್ತೇ? “ಜನರಲ್ಲಿ ಹೆಚ್ಚಿನವರು ದೊಡ್ಡ ಲಾರಿಯಂತೆ ಇರುತ್ತಾರೆ. ಅನ್‌ಲೋಡ್ ಮಾಡುವ ಗುರಿಯಿಂದ ಸಂಚರಿಸುತ್ತಾರೆ. ಅದರ ಭಾರ, ಸಂಕಷ್ಟ ಎಲ್ಲಾ ತುಂಬಿ ತುಳುಕುತ್ತಿರುವಂತೆ ಅದನ್ನು ಎಲ್ಲಾದರೂ ಇಳಿಸಿ ಬಿಡುವ ಸ್ಥಳದ ಹುಡುಕಾಟದಲ್ಲಿರುತ್ತಾರೆ. ಆದ್ದರಿಂದ ಯಾವುದೇ ವಿಷಯವನ್ನು ವೈಯಕ್ತಿಕವಾಗಿ ಪರಿಗಣಿಸಬಾರದು. ಆ ವ್ಯಕ್ತಿ ಅನ್‌ಲೋಡ್ ಮಾಡುವ ಸಮಯವಾದಾಗ ನಾವು ಸಿಕ್ಕಿದೆವು ಅಷ್ಟೇ. ನೀವು ಮುಗುಳ್ನಗುತ್ತಿರಿ. ಅವರಿಗೆ ಒಳಿತನ್ನು ಬಯಸಿರಿ. ನೀವು ನಿಮ್ಮ ಹಾದಿಯಲ್ಲೇ ಸಂಚರಿಸಿರಿ. ಅಲ್ಲಿದ್ದ ದ್ವೇಷದ ಗಂಟು ಮೂಟೆಗಳನ್ನು ಇತರರಿಗೆ ನೀಡದಿರಿ. ಅದನ್ನು ನಿಮ್ಮಲ್ಲೇ ಇಟ್ಟುಕೊಳ್ಳಿರಿ. ಎಲ್ಲರಿಗೂ ಅವರಿಗೆ ಅಗತ್ಯವಾದುದು ಅವರ ಬಳಿಯಲ್ಲೇ ಇರುತ್ತದೆ ಅಲ್ಲವೇ?

ಸಂದೇಶಗಳು:
1.ಕೆಲವು ಜಗಳದಲ್ಲಿ ಗೆಲ್ಲಲು ಇರುವ ಏಕೈಕ ಉಪಾಯ ಆರಂಭದಿಂದಲೇ ಅದರಲ್ಲಿ ಪ್ರವೇಶಿಸದಿರುವುದಾಗಿದೆ. ತರ್ಕ ಕುತರ್ಕಗಳಲ್ಲಿ ಗೆಲ್ಲುವವನಲ್ಲ ನಿಜವಾದ ಶೂರ, ತರ್ಕಗಳಿಂದ ದೂರ ನಿಲ್ಲುವವನೇ ನಿಜವಾದ ಶೂರ. ಕೆಲವು ತರ್ಕಗಳಲ್ಲಿ ಗೆಲ್ಲಬಹುದಾದರೂ ಅದರಲ್ಲಿ ರಸವಿರದು. ಯಾವುದಾರೊಂದು ಪಕ್ಷದವರ ನಿಲುವಿನ ಕಾರಣ ಅದರ ಜಯ ಮತ್ತು ಅಪಜಯ ಸಮಾನವಾಗಿರುತ್ತದೆ. ಹಲವರ ಬಳಿ ಹೋಗುವ ಹಲವರೊಂದಿಗೆ ಸೇರಿ ಮಾಡುವ ಯಾವುದೇ ಜಗಳ ತರ್ಕದಲ್ಲಿ ಭಾಗಿಯಾಗಬಾರದು. ಸುಲಭವಾದ ತರ್ಕ ಜಗಳದಲ್ಲಿ ಗೆಲುವು ಪಡೆಯ ಬಹುದೆಂಬ ಅತಿಯಾಸೆ ನಿಮ್ಮನ್ನು ಒಂದು ಮಹಾ ವಂಚನೆಗೆ ಕೊಂಡೊಯ್ಯಬಹುದು. ಗೆಲುವು ಸಾಧಿಸಿ ತಮ್ಮ ಆಪ್ತರಿಂದಲೇ ದೂರವಾದರೆ ಅದರಿಂದ ಏನು ಪ್ರಯೋಜನವಿದೆ? ಪರಾಜಿತನು ಕೆಲ ಸಂದರ್ಭಗಳಲ್ಲಿ ವಿಜಯ ಸಾಧಿಸಿದವನಿಗಿಂತ ಹೆಚ್ಚಿನದ್ದನ್ನು ಗಳಿಸುತ್ತಾನೆ. ವಾಸ್ತವದಲ್ಲಿ ಪರಾಜಿತನೇ ವಿಜಯಿಯಾಗಿರುತ್ತಾನೆ, ಆತನ ಮಾನವೀಯತೆಯ ಗುಣ ಆತನನ್ನು ಗೆಲುವಿನ ದಡ ಸೇರಿಸುತ್ತದೆ.

2.ಯಾವುದೇ ವಿಚಾರವನ್ನು ವೈಯಕ್ತಿಕವಾಗಿ ಪರಿಗಣಿಸಬಾರದು. ಕೆಲವರ ಎಲ್ಲಾ ವಿಚಾರಗಳಲ್ಲಿ ಬದುಕಿನಲ್ಲಿ ಹಗೆ ಧಗೆ, ಕೋಪವೇ ತುಂಬಿರುತ್ತದೆ. ಅದರಲ್ಲಿ ಒಂದಂಶ ನೀವಾಗಿರುತ್ತೀರಿ. ಅವರ ಕೋಪದ ಸಂದರ್ಭದಲ್ಲಿ ನೀವಲ್ಲದಿದ್ದರೆ ಇನ್ನೊಬ್ಬ ಸಿಗುತ್ತಾರೆ ಅಷ್ಟೆ. ಅಂತಹವರ ತರವೇ ಚಿಂತಿಸಿದಾಗ ನಿಮ್ಮಲ್ಲಿ ಪ್ರತೀಕಾರದ ಹೊಗೆಯನ್ನು ಶೈತಾನ ಎಬ್ಬಿಸುತ್ತಾನೆ. ಆದರೆ ನೀವು ಆತನನ್ನು ಓರ್ವ ರೋಗಿಯಾಗಿ ಪರಿಗಣಿಸಿ. ಆಗ ಅವರ ಬಗ್ಗೆ ನಿಮಗಿರುವ ನಿಲುವು ಬದಲಾಗುತ್ತದೆ. ಅವರಲ್ಲಿದ್ದ ಕೋಪ ದ್ವೇಷ ಕರುಣೆಯಾಗಿ ಮಾರ್ಪಡುತ್ತದೆ.
ಬುದ್ದಿವಂತ ವ್ಯಕ್ತಿ ಹಾಗೂ ಓರ್ವ ಹುಚ್ಚ ನಿಮ್ಮೊಂದಿಗೆ ಜಗಳಕ್ಕಿಳಿದರೆ ನೀವು ಹೇಗೆ ಅವರೊಂದಿಗೆ ವರ್ತಿಸುವಿರೋ ಅದೇ ರೀತಿ ಇಲ್ಲಿಯೂ ವರ್ತಿಸಬೇಕು. ಬುದ್ಧಿವಂತ ವ್ಯಕ್ತಿ ನಿಮ್ಮ ಜೊತೆ ಅವಾಚ್ಯವಾಗಿ ನಡೆದುಕೊಂಡರೆ ನೀವು ಕೋಪಿಸುತ್ತಾ ಪ್ರತೀಕಾರಕ್ಕೆ ಮುಂದಾಗುತ್ತೀರಿ. ಹಾಗೆಯೇ ಓರ್ವ ಹುಚ್ಚ ನಿಮ್ಮೊಂದಿಗೆ ಜಗಳ ಕಾಯ್ದರೆ ನೀವು ಕೇವಲ ಮುಗುಳ್ನಗುತ್ತಿರುವಿರಿ. ಅದನ್ನು ಒಂದು ಹಾಸ್ಯವಾಗಿ ಸ್ವೀಕರಿಸುತ್ತೀರಿ. ಜಗಳಕ್ಕೆ ಬದಲು ಪ್ರೀತಿ ಪ್ರತೀಕಾರಕ್ಕೆ ಬದಲು ಪ್ರಾರ್ಥನೆ ಮಾಡಿದರೆ ನಿಮಗೆ ಹೆಚ್ಚು ನೆಮ್ಮದಿದಾಯಕವಾಗಿರುತ್ತದೆ.

3.ಕೆಲವರಲ್ಲಿ ನ್ಯಾಯ ಯಾವತ್ತೂ ಅವರೊಂದಿಗೇ ಇರುತ್ತದೆ. ಅಂತಹವರೊಂದಿಗೆ ತರ್ಕಿಸಿ ಸಮಯ ಮತ್ತು ಆರೋಗ್ಯವನ್ನು ಹಾಳು ಮಾಡಬಾರದು. ಅವರು ನಿಮ್ಮನ್ನು ಗುಂಡಿಟ್ಟುಕೊಂದರೂ, ಕೋವಿಯ ಮುಂದೆ ಬಂದು ನೀವೆ ನಿಂತದ್ದು ಎಂದು ಹೇಳಿ ನಿಮ್ಮನ್ನು ಆಕ್ಷೇಪಿಸಬಹುದು. ಅವರು ನಿಮ್ಮನ್ನು ಕತ್ತಿಯಿಂದ ತಿವಿದರೂ ಅವರ ಕತ್ತಿಗೆ ನೀವೇ ರಕ್ತ ಸವರಿದಿರಿ ಎಂದು ಆಕ್ಷೆಪಿಸಬಹುದು. ಇಂತಹವರು ಸೂರ್ಯ ಉದಯಿಸುವುದೂ ಆವರಿಗಾಗಿಯೇ, ಅದಕ್ಕಾಗಿ ನಾವು ಅವರಿಗೆ ತೆರಿಗೆ ಕಟ್ಟಬೇಕೆಂದು ಬಯಸುತ್ತಾರೆ. ಅವರೇ ಈ ಜಗತ್ತು ಪ್ರಕಾಶಿಲು ಕಾರಣ ಎಂದು ಭಾವಿಸುತ್ತಾರೆ. ಆಕಾಶದಿಂದ ಮಳೆ ಸುರಿಯುವುದು ಕೂಡಾ ಅವರ ಕಾರಣದಿಂದಾಗಿದೆ ಎಂದು ಭಾವಿಸುತ್ತಾರೆ. ಇಂತಹವರು ಸಮಾಜದಲ್ಲಿ ಧಾರಾಳ ಮಂದಿ ಇದ್ದಾರೆ. ಅವರನ್ನು ಅವರದ್ದೇ ಆದ ದಾರಿಯಲ್ಲಿ ಬಿಟ್ಟು ಬಿಡಿರಿ. ಸತ್ಯದ ಪರ ನಿಲ್ಲದವರ ಜೊತೆ ತರ್ಕಿಸಲೇ ಬಾರದು. ಅಂತಹವರನ್ನು ರಸ್ತೆಯಲ್ಲಿನ ಉಬ್ಬು ತಗ್ಗುಗಳಿಂದ ಮೆಲ್ಲನೆ ಸಂಚರಿಸಿ ತಪ್ಪಿಸಿಕೊಳ್ಳುವಂತೆ ಮುಂದೆ ಸಾಗಬೇಕು.

4.ಉಪದೇಶ ಕೆಲವರಿಗೆ ಜಗಳ ಕಾಯಲು ವಿಷಯ, ಕಾರಣ ಬೇಕಾಗಿಲ್ಲ. ಅಂತಹವರಿಗೆ ನೆನಪಿಸಲು ಒಂದು ತೋಳದ ಕತೆಯಿದೆ. ಹರಿಯುತ್ತಿರುವ ನದಿಯ ಮೇಲ್ಬಾಗದಲ್ಲಿ ನಿಂತ ತೋಳ ಕೆಳ ಭಾಗದಲ್ಲಿ ನಿಂತ ಆಡಿನ ಮರಿಯ ಜೊತೆ ನೀನು ನಾನು ಕುಡಿಯುವ ನೀರನ್ನು ಹಾಳು ಮಾಡಿದೆ ಎಂದ ಹೇಳಿದಾಗ, ಆಡು ನನಗಿಂತ ಮೊದಲು ನೀನಲ್ಲವೇ ನೀರು ಕುಡಿಯುತ್ತಿರುವುದು ಎಂದು ಹೇಳಿತು. ಆಗ ತೋಳ, ನೀನು ಕಳೆದ ವರ್ಷ ನನ್ನೊಂದಿಗೆ ಜಗಳ ಮಾಡಿದ್ದೆಯಲ್ಲಾ ಎಂದಾಗ, ಆಡಿನ ಮರಿಯು, ನನಗೀಗ ಕೇವಲ ಆರು ತಿಂಗಳು ಮಾತ್ರ ಪ್ರಾಯವಾಗಿದೆ ಎಂದಿತು. ಹಾಗಾದರೆ ನಿನ್ನ ತಂದೆ ನನ್ನೊಡನೆ ಜಗಳ ಮಾಡಿರಬಹುದು ಎಂದಾಗ ಆಡಿನ ಮರಿಯು ನಾನು ಅನಾಥನಾಗಿ ಹುಟ್ಟಿದವನು, ನನಗೆ ನನ್ನ ತಂದೆ ಯಾರೆಂದು ತಿಳಿದಿಲ್ಲ ಎಂದಿತು. ಆಗ ತೋಳ “ಹಾಗಾದರೆ ನಿನ್ನ ತಾತ ನನ್ನೊಂದಿಗೆ ಜಗಳ ಮಾಡಿರಬಹುದು” ಎನ್ನುತ್ತದೆ.

ಜನರಲ್ಲೂ ಇಂತಹ ಸಾಕಷ್ಟು ತೋಳಗಳಿವೆ. ಸಣ್ಣ ಸಣ್ಣ ವಿಚಾರಕ್ಕೆ ಕಾಲು ಕೆರೆದು ಜಗಳ ಮಾಡುವವರು. ಅವರಿಗೆ ಜಗಳ ಮಾಡಲು ಕಾರಣ ಬೇಕಾಗಿಲ್ಲ.