`ಫರೋವನ ಪತ್ನಿಯೊಂದಿಗೆ ಸ್ವರ್ಗ ಪ್ರವೇಶಿಸುವೆ’

0
250

✍️ ಜಾಸಿಮುಲ್ ಮುತವ್ವ

ಮುಗುಳ್ನಗು ಅಲ್ಲಾಹನು ಮನುಷ್ಯನಿಗೆ ನೀಡಿದ ಮಹತ್ತರ ಅನುಗ್ರಹವಾಗಿದೆ. ಹೃದಯವಂತರಿಗೆ ಮಾತ್ರ ಈ ಅನುಗ್ರಹವನ್ನು ಆಸ್ವಾದಿಸಲು ಸಾಧ್ಯವಾಗುವುದು.

ಗತಕಾಲದ ವಿದ್ವಾಂಸರ ಇತಿಹಾಸದಲ್ಲಿ ಇಂತಹ ಹಲವಾರು ಒಳಿತು ತುಂಬಿದ ಹಾಸ್ಯಭಾವದ ಸುಂದರ ಸಂದರ್ಭಗಳನ್ನು ಕಾಣಬಹುದು. ಇಮಾಮ್ ಅಬೂ ಹನೀಫ(ರ)ರವರ ಮಾರ್ಗದರ್ಶಕರಾದ ಶಅಬಿಯವ ರೊಂದಿಗೆ ಓರ್ವರು “ಇಬ್ಲೀಸನ ಹೆಂಡತಿಯ ಹೆಸರೇ ನೆಂದು” ಕೇಳಿದರು. ತಕ್ಷಣ ಶಅಬಿಯವರು ಮುಗುಳ್ನಗುತ್ತಾ “ನಾನು ಆ ಮದುವೆಗೆ ಹೋಗಿರಲಿಲ್ಲ” ಎಂದು ತ್ತರಿಸಿದರು. ಫಲಪ್ರದವಾದ ಮಾತಿನೊಂದಿಗೆ ಸಮಸ್ಯೆಯನ್ನು ಬಗೆಹರಿಸಿದರು. ಶಅಬಿಯವರಿಗೆ “ಏನು? ಈ ರೀತಿ ಕೇಳಿ ನನ್ನನ್ನು ಅಣಕಿಸುತ್ತಿರುವೆಯಾ? ತಮಾಷೆ ಮಾಡಲು ಬೇರೆಯವರನ್ನು ನೋಡು. ನಾನು ಅದಕ್ಕೆ ಸಿಗಲ್ಲ” ಎಂದು ಉತ್ತರಿಸ ಬಹುದಿತ್ತು. ಇಂತಹ ಪ್ರತಿಕ್ರಿಯೆ ನೀಡಿದ್ದರೆ ಅಲ್ಲಿನ ಪರಿಸ್ಥಿತಿ ಭಿನ್ನವಾಗುತ್ತಿತ್ತು. ಮನಸ್ಸು ಬಿರುಕು ಮೂಡಿ ಹಳಸುತ್ತಿದ್ದವು. ಆದರೆ ಶಅಬಿಯವರು ಬಹಳ ಸುಂದರವಾದ ಉಕ್ತಿ ಯಿಂದ ಆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದರು. ಶಅಬಿಯವರ ಇಂತಹ ಒಳಿತಿನಿಂದ ಕೂಡಿದ ಹಾಸ್ಯೋಕ್ತಿಗಳ ಬಗ್ಗೆ ಓರ್ವರು ವಿಮರ್ಶಿಸಿದಾಗ “ಹಾಸ್ಯೋಕ್ತಿಗಳು ಇಲ್ಲದಿದ್ದರೆ ನಾವು ದುಃಖಿಸಿ ಸಾಯ ಬೇಕಾದೀತು, ಮಿತ್ರಾ!” ಎಂದು ಹೇಳಿದರು.

ಇದು ವಿದ್ವಾಂಸರ ಕತೆಯಾದರೆ ಜನಸಾಮಾನ್ಯರಲ್ಲಿಯೂ ಇಂತಹ ಹಾಸ್ಯ ಪ್ರಜ್ಞೆಯವರಿದ್ದಾರೆ. ಕೆಲಸ ಹುಡುಕಿ ಬಂದ ಓರ್ವನೊಡನೆ ಯಜಮಾನನು “ನಿನಗೆಷ್ಟು ಸಂಬಳ ಬೇಕು?” ಎಂದು ಕೇಳಿದರು. ಆಗ ಆ ಯುವಕ “ನನಗೆ ಉಣ್ಣಲು ಸಿಗುವ ಆಹಾರದಷ್ಟು ಸಾಕು” ಎಂದುತ್ತರಿಸಿದ. ಆಗ ಯಜಮಾನ “ಅದು ಅತಿಯಾಯಿತು, ಅಷ್ಟೆಲ್ಲಾ ಕೊಡಲಾಗದು” ಎಂದರು. ಆಗ ಆ ಯುವಕ “ಸರಿ, ನಾನು ಸೋಮವಾರ ಮತ್ತು ಗುರುವಾರ ಉಪವಾಸ ಇರುತ್ತೇನೆ” ಎಂದು ಹೇಳಿದ. ಯುವಕನ ಆಕರ್ಷಕ ಉತ್ತರದಿಂದ ಪ್ರಭಾವಿತನಾದ ಆ ಯಜಮಾನ ಆತನಿಗೆ ಕೆಲಸವನ್ನು ನೀಡಿದನು.

ನಾನು ಒಂದು ಘಟನೆ ನೆನಪಿ ಸುತ್ತಿದ್ದೇನೆ. ಪತಿಯ ವಿರುದ್ಧ ಪತ್ನಿ ಯೋರ್ವಳು ದೂರಿನೊಂದಿಗೆ ಬಂದಳು. ಪತಿಯನ್ನು ಹೇಗೆ ನಿಭಾಯಿಸ ಬೇಕೆಂಬುದು ಆಕೆಯ ಸಮಸ್ಯೆಯಾಗಿತ್ತು. ಆಕೆ ಹೇಳತೊಡಗಿದಳು “ನನ್ನ ತಂದೆ ಜಿಪುಣರಾಗಿದ್ದಾರೆ. ಯಾವಾಗಲೂ ತಾಯಿಯ ಮೇಲೆ ಕುಪಿತಗೊಳ್ಳುವರು, ಕೆಲವೊಮ್ಮೆ ಹೊಡೆಯುವುದೂ ಇದೆ. ಹೀಗೆ ಅವರಿಗೆ ಹಲವಾರು ದುರ್ಗುಣಗಳಿವೆ. ನನ್ನ ತಾಯಿ ಅವೆಲ್ಲವನ್ನೂ ತಾಳ್ಮೆಯಿಂದ ಸಹಿಸುವರು; ಅತ್ತು ಬಿಡುವರು. ಇದಕ್ಕೆಲ್ಲ ಅಲ್ಲಾಹನು ಪ್ರತಿಫಲ ನೀಡು ವನು ಎಂದು ಸುಮ್ಮನಿರುವರು. ತಾಳ್ಮೆ ಗೆಟ್ಟಾಗ ಆ ಹಾಸ್ಯಮಯ ಮಾತುಗಳಿಂದ ಆ ಸಂದರ್ಭದ ಬಿಗುವನ್ನು ಹತೋಟಿಗೆ ತರುವರು. ನಾನು ಫರೋವನ ಪತ್ನಿಯೊಂದಿಗೆ ಸ್ವರ್ಗ ಪ್ರವೇಶಿಸುವೆನು' ಎಂದು ಹೇಳುವರು. ಸಣ್ಣ ಸಣ್ಣ ಮಕ್ಕಳಾಗಿರುವ ನಾವು ತಾಯಿಯ ಈ ಮಾತು ಕೇಳಿ ನಗುವೆವು. ಹತ್ತು ವರ್ಷ ಕಳೆದಾಗ ಅದೇ ಪರಿಸ್ಥಿತಿ ನನ್ನದಾಯಿತು. ತಂದೆಯ ಅದೇ ಗುಣಸ್ವಭಾವದ ಓರ್ವರನ್ನು ವಿವಾಹವಾದೆ. ಆಗ ನಾನು ತಾಯಿಯ ಜೊತೆ ಕೂತುಅಮ್ಮಾ! ನಮಗಿಬ್ಬರಿಗೂ ಜೊತೆಯಾಗಿ ಫರೋವನ ಪತ್ನಿಯ ಜೊತೆ ಸ್ವರ್ಗ ಪ್ರವೇಶಿಸಬಹುದು’ ಎಂದು ಹೇಳುತ್ತಿದ್ದೆ. ನಾವಿಬ್ಬರೂ ನಮ್ಮ ಪತಿಯಂದಿರ ಗುಣಗಳ ಕುರಿತು ನಗುತ್ತಾ ಇರುವೆವು.”

ಅವರು ಹೇಳುತ್ತಿದ್ದುದೆಲ್ಲವನ್ನೂ ಮಂದಸ್ಮಿತನಾಗಿ ಆಲಿಸುತ್ತಾ ನಾನು ಅವರೊಂದಿಗೆ “ನೀವು ಮತ್ತು ನಿಮ್ಮ ತಾಯಿ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿ ಮಾನಸಿಕ ವಾಗಿಯೂ ದೈಹಿಕವಾಗಿಯೂ ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ದಾಂಪತ್ಯ ಬದುಕಿನ ಫಲಪ್ರದವಾದ ವಿಧಿಯಾಗಿದೆ” ಎಂದು ಹೇಳಿದೆ. ಅದಕ್ಕೆ ಅವರು “ಹೌದು, ಅದು ನಮಗೂ ತಿಳಿದಿದೆ, ಅಲ್ಹಮ್ದುಲಿಲ್ಲಾಹ್…” ಎಂದರು.

ನಗು ಮತ್ತು ಹಾಸ್ಯಪ್ರಜ್ಞೆ ಕೂಡಾ ಒಂದು ಕಲೆಯಾಗಿದೆ. ಇದರಲ್ಲಿ ನಿಪುಣರು ಜಯಶಾಲಿಗಳು. ವಿಶೇಷವಾಗಿ ದಾಂಪತ್ಯ ಬದುಕಿನಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಇದಕ್ಕಿಂತ ಉತ್ತಮವಾದ ಉಪಾಯ ಬೇರೆಯಿಲ್ಲ.

ದೇವಚರರು ಮಾನವರೂಪದಲ್ಲಿ ಅತಿಥಿಗಳಾಗಿ ಆಗಮಿಸಿದಾಗ ಪ್ರವಾದಿ ಇಬ್ರಾಹೀಮರ(ಅ) ಪತ್ನಿ ಸಾರಾ ನಕ್ಕ ಒಂದು ಘಟನೆಯನ್ನು ಕುರ್‌ಆನ್ ವಿವರಿಸುತ್ತದೆ. ಬಂದಿರುವ ಅತಿಥಿಗಳು ದೇವಚರರು ಎಂಬ ಅರಿವಿಲ್ಲದೆ ಅವರ ಮುಂದೆ ಆಹಾರದ ಬಟ್ಟಲುಗಳನ್ನು ಇರಿಸಿದರು. ಆಗ ಆ ದೇವಚರರ ಕರಗಳು ಆಹಾರದ ಬಟ್ಟಲಿನ ಕಡೆಗೆ ಚಲಿಸದಿರುವುದು ನೋಡಿ ಸಾರಾ ನಕ್ಕರು. ಆಗ ಪ್ರವಾದಿ ಇಬ್ರಾಹೀಮ(ಅ)ರು ಭಯಚಕಿತರಾದರು. ಬಂದ ಅತಿಥಿಗಳು ದೇವಚರರು ಎಂದು ಅರಿತಾಗ ಅವರು ಸಂತೋಷಭರಿತರಾದರು, ಸಾರಾ ನಕ್ಕು ಬಿಟ್ಟರು. ಅದನ್ನು ಕುರ್‌ಆನ್ ಹೀಗೆ ವಿವರಿಸಿದೆ: “ಅವರ ಕೈಗಳು ಆಹಾರದ ಕಡೆಗೆ (ಹುರಿದ ಕರುವನ್ನು ಭೋಜನಕ್ಕಾಗಿ ಇಟ್ಟಾಗ) ಚಲಿಸದಿರುವುದನ್ನು ಕಂಡಾಗ ಅವರು ಅತಿಥಿಗಳ ಬಗ್ಗೆ ಸಂದೇಹಕ್ಕೊಳಗಾದರು ಮತ್ತು ಮನಸ್ಸಿನೊಳಗೆ ಅವರ ಬಗ್ಗೆ ಹೆದರಿದರು. ಅವರು ಹೀಗೆ ಹೇಳಿದರು ಹೆದರ ಬೇಡಿರಿ, ನಾವು ಲೂತರ ಜನಾಂಗದ ಕಡೆಗೆ ಕಳುಹಿಸಲ್ಪಟ್ಟವರು.' ಇಬ್ರಾಹೀಮರ ಪತ್ನಿಯೂ (ಅಲ್ಲೇ) ನಿಂತಿದ್ದರು, ಅವರು ಇದನ್ನು ಕೇಳಿ ನಕ್ಕು ಬಿಟ್ಟರು. ಅನಂತರ ನಾವು ಆಕೆಗೆ ಇಸ್ಹಾಕ್ ಮತ್ತು ಇಸ್ಹಾಕ್‌ರ ತರುವಾಯ ಯಾಕೂಬರ ಬಗೆಗೂ ಸುವಾರ್ತೆ ನೀಡಿದೆವು." (ಹೂದ್: 70-71) ಈ ಸುವಾರ್ತೆಯು ಆ ನಗುವಿನ ಮೂಲಕ ದೊರೆಯಿತು. ಇದೇ ರೀತಿ ನಗು ಮತ್ತು ಹಾಸ್ಯ ಮನೋಭಾವ ಆಸ್ವಾದಿಸುವ ಸಹೃದಯತೆ ದಂಪತಿಗಳಲ್ಲಿ ಇರಬೇಕು ಎಂದು ಪ್ರವಾದಿವರ್ಯರು(ಸ) ಉಪದೇಶಿಸಿದ್ದಾರೆ: "ಅಲ್ಲಾಹನ ಸಂಪ್ರೀತಿಯನ್ನು ಬಯಸಿ ನೀನು ಮಾಡುವ ಎಲ್ಲಾ ಖರ್ಚು ವೆಚ್ಚಗಳಿಗೂ ಪ್ರತಿಫಲ ದೊರೆಯುವುದು. ನಿನ್ನ ಪತ್ನಿಯ ಬಾಯಿಗೆ ಆಹಾರದ ತುತ್ತು ನೀಡಿದರೂ ಆ ಕಾರ್ಯಕ್ಕೆ ಅಲ್ಲಾಹನಿಂದ ಪ್ರತಿಫಲ ದೊರೆಯುತ್ತದೆ."

ಒತ್ತಡದ ಸಂಕೀರ್ಣವಾದ ಸಮಸ್ಯೆಗಳನ್ನು ಹಾಸ್ಯದ ಮೂಲಕ ನಿವಾರಿಸುವ ನೈಪುಣ್ಯತೆ ಇದ್ದರೆ ನಮ್ಮ ಬದುಕು ನಯನ ಮನೋಹರವಾಗುವುದು. ಓರ್ವರು ಮಾತಿನ ಮಧ್ಯೆ ನನ್ನೊಂದಿಗೆ ಹೀಗೆ ಹೇಳುವುದನ್ನು ಕೇಳಿದ್ದೇನೆ: "ನನ್ನ ಪತ್ನಿಯ ನಾಲಗೆ ಸ್ವಲ್ಪ ಉದ್ದವಾಗಿದೆ, ಆ ಉತ್ತಮವಾದ ಬಾಯಲ್ಲಿ ಹಲವು ಬಾರಿ ಕೆಟ್ಟ ಮಾತುಗಳು ಕೇಳಿ ಬರುವುದು. ಒಮ್ಮೊಮ್ಮೆ ಮಾತು ಅತಿಯಾದಾಗ ನಾನು ಆಕೆಯೊಂದಿಗೆ ಉತ್ತಮ ಗುಣವನ್ನು ರೂಢಿಸಿಕೊಳ್ಳಿರಿ; ದ್ವೇಷವನ್ನು ಹತೋಟಿಯಲ್ಲಿಡಲು ಮನಸ್ಸನ್ನು ಪಾಕಗೊಳಿಸಬೇಕು. ಇದು ದೊಡ್ಡ ಜಿಹಾದ್‌ನಂತಹ ಕಠಿಣ ಪರಿಶ್ರಮವಿದು’ ಎಂದು ಹೇಳಿದಾಗ ಆಕೆ ನಕ್ಕು ಅಲ್ಲಿಂದ ಹೋಗುವಳು. ನಾನು ಕೂಡಾ ಆ ನಗುವಿನಲ್ಲಿ ಭಾಗಿಯಾಗುವೆನು. ಹೀಗೆ ಆ ಸಮಸ್ಯೆ ಬಗೆಹರಿಯುವುದು.” ಒಂದು ವಚನವಿದೆ: “ವಿವಾಹವಾಗಲು ನೀನು ಹಿಂದೆ ಸರಿಯಬೇಡ. ನಿನ್ನನ್ನು ಸಂತೃಪ್ತಗೊಳಿಸುವ ಓರ್ವ ಹೆಣ್ಮಗಳು ಆಕೆಯಾಗಿದ್ದರೆ ನೀನು ಭಾಗ್ಯವಂತ. ಇನ್ನು ಆಕೆ ದುರ್ಗುಣ ಹೊಂದಿದವಳು ಎಂದಾದರೆ ನೀನು ಓರ್ವ ತತ್ವಜ್ಞಾನಿಯಾಗುವೆ. ಎರಡೂ ವಿಷಯದಲ್ಲಿ ನೀನು ಸೌಭಾಗ್ಯವಂತ.”