ಮನೆಗೆ ನುಗ್ಗಿ ದಂಪತಿಗಳಿಗೆ ಇರಿದು ಆತ್ಮಹತ್ಯೆ ಮಾಡಿಕೊಂಡ ಯುವಕ

0
296

ಸನ್ಮಾರ್ಗ ವಾರ್ತೆ

ಕೇರಳ,ಡಿ.9: ಮನೆಗೆ ನುಗ್ಗಿ ದಂಪತಿಗಳನ್ನು ಇರಿದ ಯುವಕ ನಂತರ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಗಮಾಲಿ ಕರುಕುಟ್ಟಿ ಎಂಬಲ್ಲಿನ ನಿಷಿಲ್(30) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಈತನಿಂದ ಇರಿತಕೊಳ್ಳಗಾದ ಡೆಯ್ಮಿ(34), ಪತ್ನಿ ಫಿಫಾ(28)ರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಡೆಯ್ಮಿಯ ಮನೆಗೆ ಬಂದ ನಿಷಿಲ್ ತನ್ನ ಜೇಬಿನಲ್ಲಿದ್ದ ಕತ್ತಿಯಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ನೋವಿನಿಂದ ನರಳಿದ ದಂಪತಿಗಳು ಬೊಬ್ಬೆ ಹೊಡೆದಾಗ ಊರವರು ಓಡಿ ಬಂದಿದ್ದರು. ನಂತರ ನಿಷಿಲ್ ಅಂಗಳಕ್ಕೆ ಬಂದು ತಾನು ತಂದಿದ್ದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಹರಡಿದಂತೆ ಡೆಯ್ಮಿಯ ಕಾರಿಗೆ ಹತ್ತಿ ಕಾರನ್ನು ಸುಡುವ ಯತ್ನವನ್ನು ಮಾಡಿದರೂ ಅದರಲ್ಲಿ ನಿಷಿಲ್ ಯಶಸ್ವಿಯಾಗಿಲ್ಲ. ವಿಪರೀತ ಸುಟ್ಟಗಾಯಗಳೊಂದಿಗೆ ನಿಷಿಲ್‍ನನ್ನು ಊರವರು ಆಸ್ಪತ್ರೆಗೆ ದಾಖಲಿಸಿದರೂ ಸಂಜೆಯ ಹೊತ್ತಿಗೆ ಮೃತಪಟ್ಟಿದ್ದಾನೆ.

ನಿಷಿಲ್ ಅವಿವಾಹಿತನಾಗಿದ್ದು, ಎರಡು ವರ್ಷ ಹಿಂದೆ ಡೆಯ್ಮಿಯ ಮನೆಗೆ ಟೈಲ್ ಹಾಕುವ ಕೆಲಸಕ್ಕಾಗಿ ನಿಷಿಲ್ ಬಂದಿದ್ದ. ಟೈಲ್ ಕೆಲಸದ ಬಾಕಿ ಹಣದ ವಿಚಾರದಲ್ಲಿ ನಿಷಿಲ್ ಮತ್ತು ಡೆಯ್ಮಿ ಕುಟುಂಬದ ನಡುವೆ ಹಲವು ಬಾರಿ ಜಗಳವಾಗಿತ್ತು.