ಪಾತುಕಟ್ಟಿ ಮತ್ತು ಹನ್ನೊಂದು ಮಕ್ಕಳು

0
1984

✒ಸಲೀಮ್ ಬೋಳಂಗಡಿ

ಕೇರಳದ ಆಲುವಾ ಜಿಲ್ಲೆಯ ಏಲೂರು ನಿವಾಸಿ ಪಾತುಕುಟ್ಟಿ ಹನ್ನೊಂದು ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹಿ ಕಳೆದೆರಡು ವರ್ಷಗಳಿಂದ ಅನಾಥಾಶ್ರಮದಲ್ಲಿ ತನ್ನನ್ನು ಕರೆದು ಕೊಂಡು ಹೋಗಲು ಬರುತ್ತಾರೆಂಬ ನಿರೀಕ್ಷೆಯಲ್ಲಿ ತುಂಬಿದ ಕಣ್ಣುಗಳಿಂದ ದಿನದೂಡುತ್ತಿದ್ದಾರೆ. ಹೌದು, ಹನ್ನೊಂದು ಮಕ್ಕಳಿದ್ದೂ ಈ ತಾಯಿಯನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಈ ವರೆಗೂ ಬಂದಿಲ್ಲ. ಮಕ್ಕಳ ಆಸರೆಯಲ್ಲಿ ಕಳೆಯಲು ಉಮ್ಮಳಿಸಿ ಬರುವ ದುಃಖದೊಂದಿಗೆ ಈ ಮನಸ್ಸು ಹಪಹಪಿಸುತ್ತಿದೆ. ಈಗ ಆಲುವಾದ ವೆಲ್ಫೇರ್ ಅಸೋಸಿಯೇಶನ್ ಟ್ರಸ್ಟ್‌ನ ಅಧೀನದಲ್ಲಿ ಕಾಲ ಕಳೆಯುತ್ತಿದ್ದಾರೆ. ಪಾತುಕುಟ್ಟಿಯನ್ನು ಕರೆದುಕೊಂಡು ಹೋಗಲು ಮಕ್ಕಳಲ್ಲಿ ನಿರಂತರ ಒತ್ತಾಯಿಸಿಯೂ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಈ ವಿಚಾರವಾಗಿ ಆರ್.ಡಿ.ಓ. ಭಾಗಿಯಾಗಿಯೂ ಮಕ್ಕಳು ಬರಲೇ ಇಲ್ಲ. ಮುಂದಿನ ಮಾರ್ಚ್ ಎಂಟರಂದು ಕಾನೂನು ಕ್ರಮದ ಮೂಲಕ ಮಕ್ಕಳನ್ನು ಕರೆಯುವ ಪ್ರಕ್ರಿಯೆಯಲ್ಲಿ ಆರ್.ಡಿ.ಓ. ತೊಡಗಿಸಿಕೊಂಡಿದೆ. ಪಾತುಕುಟ್ಟಿ ಈ ದಿವಸವಾದರೂ ಹನ್ನೊಂದು ಮಕ್ಕಳಲ್ಲಿ ಯಾರಾದರೊಬ್ಬರು ಬಂದು ಕರೆದುಕೊಂಡು ಹೋಗಬಹುದೆನ್ನುವ ಆಶಾಭಾವದಲ್ಲಿದ್ದಾರೆ. ಅದರಲ್ಲೂ ಓರ್ವ ದುಬಾಯಿಯಲ್ಲಿದ್ದಾನೆಂದೂ ಆ ಮಾತೆ ಹೇಳುತ್ತಿದ್ದಾರೆ.

ಆ ಮಾತೆಗೆ ಹನ್ನೊಂದು ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹಲು ಕಷ್ಟವಾಗಿರಲಿಕ್ಕಿಲ್ಲ. ಪಾಪ ಆ ಮಾತೆಯ ಆರೈಕೆ ಮಾಡಲು ಆ ಹನ್ನೆರಡು ಮಕ್ಕಳಿಂದ ಆಗುತ್ತಿಲ್ಲ. ಎಂತಹ ವಿಚಿತ್ರವಿದು. ಕಾಲ ಎಷ್ಟು ಬದಲಾಗುತ್ತಿದೆಯೆಂದರೆ ಸಾಮಾನ್ಯವಾಗಿ ಮುಪ್ಪಿನ ಸಂದರ್ಭದಲ್ಲಿ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಿಂಗಳಿಗೋ ವರ್ಷಕ್ಕೋ ಒಂದಿಷ್ಟು ಹಣ ಸುರಿದು ಕೈತೊಳೆಯುತ್ತಿರುವ ಜನರ ಮಧ್ಯೆ ಅದನ್ನು ಮೀರಿ ತಿರುಗಿ ಕೂಡಾ ನೋಡದಂತಹ ಪರಿಸ್ಥಿತಿಗೆ ಬಂದು ನಿಂತಿದೆ. ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚಗುತ್ತಿವೆ. ಹೌದು ಮಾತಾಪಿತರು ಮಕ್ಕಳಿಗೆ ಭಾರವಾಗುತ್ತಿದ್ದಾರೆ, ಕುಟುಂಬ ಮತ್ತು ಸಮಾಜ ಅವನತಿಯತ್ತ ಸಾಗುವ ನಿದರ್ಶನವಿದು. ಸಾಮಾಜಿಕ ಕಾರ್ಯಕರ್ತರೇ ಮಕ್ಕಳನ್ನು ಹುಡುಕಿ ಒಪ್ಪಿಸಿದರೂ ಹೆತ್ತಮ್ಮನನ್ನು ಪಡೆಯಲು ನಿರಾಕರಿಸುವ ಮಕ್ಕಳು ಅಹಾ! ಎಂಥ ವಿಪರ್ಯಾಸವಿದು. ನಾನು ಹೆತ್ತು ಹಾಲುಣಿಸಿ ತೋರುಬೆರಳು ಹಿಡಿದು ನಡೆದಾಡಿಸಿದ ಆ ಹನ್ನೊಂದು ಮಕ್ಕಳಲ್ಲಿ ಯಾರಿಗೂ ನಾನು ಬೇಡವಾದೆನಲ್ಲ ಎನ್ನುವ ಆ ಮಾತೆಯ ಹೃದಯ ಸಂಕಟ, ಮಾನಸಿಕ ಯಾತನೆ ಹೇಗಿರಬಹು ದೆಂಬುದನ್ನೊಮ್ಮೆ ಯೋಚಿಸಿ. ಮೃಗಗಳಿಗಿರುವ ವಾತ್ಸಲ್ಯ ಮನುಷ್ಯ ನಲ್ಲಿಲ್ಲವೆಂಬುದನ್ನು ಇದು ಪುಷ್ಟೀಕರಿಸುತ್ತದೆ. ಕರುಳ ಬಳ್ಳಿಯ ಸಂಬಂಧಗಳು ದೂರವಾಗುತ್ತಿರುವಂತಹ ನೀಚ ಮಟ್ಟಕ್ಕೆ ಸಮಾ ಜದ ಈ ನಡೆ ಭವಿಷ್ಯದಲ್ಲಿ ಅಪಾಯಕಾರಿಯಾಗಿದೆ. ಇಹದ ಸುಖಲೋಲುಪತೆಯು ಅವರ ಪರಲೋಕವನ್ನು ಸ್ಮರಿಸದ ಹಂತಕ್ಕೆ ತಲುಪಿಸಿದೆ.

ವಾಸ್ತವದಲ್ಲಿ ತಂದೆ ತಾಯಿಗಳೇ ನಮ್ಮ ಸೌಭಾಗ್ಯ ಎಂಬುದನ್ನು ಇಸ್ಲಾಮ್ ಕಲಿಸುತ್ತದೆ. ಪವಿತ್ರ ಕುರ್‍ಆನಲ್ಲಿ ಈ ಬಗ್ಗೆ ಹಲವೆಡೆ ಪ್ರಸ್ತಾಪಿಸಲಾಗಿದೆ. ದೇವನಿಗೆ ಕೃತಜ್ಞರಾಗಬೇಕೆಂದು ಆದೇಶಿಸಿದ ಅನೇಕ ಕಡೆಗಳಲ್ಲಿ ಮಾತಾಪಿತರಿಗೆ ಕೃತಜ್ಞರಾಗಬೇಕೆಂದು ಆದೇಶಿಸ ಲಾಗಿದೆ. “ನೀವು ಅಲ್ಲಾಹನ ಹೊರತು ಅನ್ಯರ ದಾಸ್ಯಾರಾಧನೆ ಮಾಡಬಾರದೆಂದೂ ತಂದೆ ತಾಯಿಗಳೊಂದಿಗೆ ಸೌಜನ್ಯದ ವ್ಯವಹಾರ ಮಾಡಬೇಕೆಂದೂ ನಿಮ್ಮ ಪ್ರಭು ವಿಧಿಸಿದ್ದಾನೆ.”(ಬನೀ ಇಸ್ರಾಈಲ್: 23)

ಒಮ್ಮೆ ಪ್ರವಾದಿ ಮುಹಮ್ಮದ್(ಸ)ರಲ್ಲಿ ಒಬ್ಬರು ಬಂದು “ತಂದೆ-ತಾಯಿಗಳ ಹಕ್ಕು ಮಕ್ಕಳ ಮೇಲೆ ಏನಿದೆ” ಎಂದು ಕೇಳಿದರು. “ತಂದೆ ತಾಯಿಗಳೇ ನಿಮ್ಮ ಸ್ವರ್ಗ ತಂದೆ ತಾಯಿಗಳೇ ನಿಮ್ಮ ನರಕ” ಎಂದು ಹೇಳಿದರು. ಇದು ಬಹಳ ಅರ್ಥ ಗರ್ಭಿತವಾದ ಪ್ರವಾದಿ ವಚನವಾಗಿದೆ. ನಮ್ಮ ಇಹಪರದ ಯಶಸ್ಸಿನಲ್ಲಿ ತಂದೆ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದು. ಅವರ ಉಪಕಾರದ ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಇದು ಸೌಜನ್ಯದ ಬೇಡಿಕೆಯಾಗಿದೆ. ನಮ್ಮ ಅಸ್ತಿತ್ವದ ಬಾಹ್ಯ ಕಾರಣಕರ್ತರು ತಂದೆತಾಯಂದಿರು ಎಂಬ ವಾಸ್ತವವನ್ನು ಮರೆತಾಗ ತಂದೆ ತಾಯಂದಿರನ್ನು ಕೀಳಾಗಿ ಕಂಡು ಹೀನ ರೀತಿಯಲ್ಲಿ ವರ್ತಿಸುತ್ತಾರೆ. ತಂದೆ ತಾಯಂದಿರ ಪಾಲನೆ, ಪೋಷಣೆ, ಮೇಲ್ನೋಟದಿಂದ ನಾವು ಯೌವನವನ್ನು ತಲುಪುತ್ತೇವೆ. ಅವರ ಅಸಾಮಾನ್ಯವಾದ ವಾತ್ಸಲ್ಯ, ತ್ಯಾಗ, ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು. ನಮ್ಮ ರಕ್ತದ ಕಣಕಣದಲ್ಲಿ ಕೃತಜ್ಞತೆ, ಪ್ರೀತಿ ತುಂಬಿ ತುಳುಕಬೇಕು.

ಆಧುನಿಕ ಸಮಾಜವು ಅಭಿವೃದ್ಧಿ ಹೊಂದಿದಂತೆ ನೈತಿಕತೆ, ಸಾಮಾಜಿಕ ನ್ಯಾಯ, ಕುಟುಂಬ ಸಂಬಂಧಗಳು ಶಿಥಿಲವಾಗುತ್ತಾ ಬರುತ್ತಿದೆ. ಲೌಕಿಕ ವ್ಯಾಮೋಹದ ಅಲೆಯಲ್ಲಿ ತೇಲಾಡು ವಾಗ ಮಾತಾಪಿತರು ಭಾರವಾಗುತ್ತಾರೆ. ಅವರಿಗೆ ಅದೊಂದು ಪೀಡೆಯಾಗಿ ಕಂಡು ಬರುತ್ತದೆ, ಇವೆಲ್ಲ ಅವರ ಅವನತಿಯ ಲಕ್ಷಣವಾಗಿದೆ. ಮಾತಾಪಿತರ ಮೊರೆ ಅಪಾಯಕಾರಿಯಾಗಿದೆ. ಮಾತೆಯಾದ ವಳು ಜೀವಂತ ಇದ್ದಾಳೆಂದು ತಿಳಿದು ಕೂಡಾ ಅವರು ಬರುತ್ತಿಲ್ಲವೆಂದಾದರೆ ಅದು ನಿಜಕ್ಕೂ ಅಕ್ಷಮ್ಯ. ಅವರನ್ನು ಕಾನೂನು ಪ್ರಯೋಗಿಸಿ ಬಲವಂತವಾಗಿ ಕರೆತರುವುದರಿಂದ ಪ್ರಯೋಜನವಾಗದು. ಈ ಬಗ್ಗೆ ಸಮಾಜ ಬಹಳಷ್ಟು ಚಿಂತಿಸ ಬೇಕಾಗಿದೆ. ಮಾತೆಯ ಪಾದದಡಿಯಲ್ಲಿ ಸ್ವರ್ಗವಿದೆ ಎಂದು ಸಾರಿದ ಧರ್ಮ ವಿದು. ಇದು ಕೇವಲ ಗಲ್ಲಿ ಕೊಂಪೆ ಸ್ಲಮ್‍ಗಳಲ್ಲಿ ಮಾತ್ರವಲ್ಲ ಸಮಾಜದಲ್ಲಿ ಪ್ರತಿಷ್ಠಿತರಾಗಿ ಗುರುತಿಸಿಕೊಂಡ ಕೆಲವರ ಕುಟುಂಬದಲ್ಲಿಯೂ ಮಾತಾಪಿತರನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತದೆ. ತಾವು ಸಾಗಿ ಬಂದ ಹಾದಿಯನ್ನು ಮರೆತು ಕೃತಘ್ನತಾ ಭಾವದಿಂದ ವರ್ತಿಸುವವರಿದ್ದಾರೆ. ಇಂತಹ ವರ್ತನೆ ಅವರ ಪತನದೆಡೆಗಿನ ಪಯಣ ಎಂಬ ವಾಸ್ತವವನ್ನು ಅವರು ಅರಿಯದಿರುವುದು ದುರಂತ.

ವೇದಿಕೆಗಳಲ್ಲಿ ಸಂಭಾವಿತರಂತೆ ಇರುವ ಹಲವರ ಕುಟುಂಬದ ಒಳಾಂತರಂಗ ಹೀಗಿರುತ್ತದೆ. ಅದು ಬಹಿರಂಗವಾಗುವುದಿಲ್ಲ. ರಹಸ್ಯವಾಗಿ ಇರುತ್ತದೆ. ಈ ನರಕದ ಕೂಪದಿಂದ ಹೊರಬರಲು ಕಾತರದಿಂದ ಕಾಯುತ್ತಿರುವ ವಯೋವೃದ್ದ ಮಾತಾಪಿತರಿಗೂ ಈ ಸಮಾಜದಲ್ಲಿ ಕೊರತೆಯಿಲ್ಲ. ಒಮ್ಮೆ ಇಹಲೋಕಕ್ಕೆ ವಿದಾಯ ಹೇಳಿದರೆ ಸಾಕು ಎಂಬರ್ಥದ ಪ್ರಾರ್ಥನೆಯಲ್ಲಿ ದಿನ ರಾತ್ರಿ ಕಳೆಯುವವರೂ ಈ ಸಮಾಜದಲ್ಲಿದ್ದಾರೆ, ಸೊಸೆಯ ಅಥವಾ ಮಕ್ಕಳ ದರ್ಪದ ಮುಂದೆ ಅವರು ಭಯಭೀತರಾಗಿ ಮಂಕಾಗಿ ಭಯದ ವಾತಾವರಣದಲ್ಲಿ ಕಳೆಯುವ ಮಾತಾಪಿತರೂ ಈ ಸಮಾಜದಲ್ಲಿದ್ದಾರೆ. ತಮಗೆ ಉದರದಲ್ಲಿ ಆಶ್ರಯ ನೀಡಿ ಸಾಕಷ್ಟು ನೋವುಂಡು ಬಳಲಿ ಬೆಂಡಾಗಿ ಜನ್ಮವಿತ್ತ ಮಾತೆಯ ಸೇವೆ ಎಷ್ಟು ಮಾಡಿದರೂ ಅದು ತೃಣ ಸಮಾನವಾಗಿದೆ.

ಓರ್ವರು ಪ್ರವಾದಿವರ್ಯರ(ಸ) ಬಳಿ ಬಂದು ನಾನು ನನ್ನ ತಾಯಿಯನ್ನು ಹೊತ್ತು ಕೊಂಡೇ ಯಮನ್‍ನಿಂದ ಬಂದು ಹಜ್ಜ್ ನಿರ್ವಹಿಸಿದೆ. ತವಾಫ್ ಮಾಡಿದೆ. ಹೀಗೇ ಹಜ್ಜ್ ನ ಎಲ್ಲಾ ವಿಧಿ ವಿಧಾನಗಳನ್ನು ತಾಯಿಯನ್ನು ಹೊತ್ತುಕೊಂಡೇ ನಿರ್ವಹಿಸಿದೆ. ನನ್ನ ತಾಯಿಯ ಋಣ ಸಂದಾಯವಾಯಿತೇ? ಎಂದು ಕೇಳಿ ದಾಗ ಪ್ರವಾದಿವರ್ಯರು(ಸ) ಈ ಸೇವೆ ನಿನಗೆ ಜನ್ಮವಿತ್ತಾಗ ಆಕೆ ಮಾಡಿದ ಚೀತ್ಕಾರಕ್ಕೂ ಸಮವಾಗದು” ಎಂದರು. ಆದ್ದರಿಂದ ನೋಡಿ ಕುರ್‍ಆನಿನಲ್ಲಿ ಮಾತಾಪಿತರಿಗೆ ಕೃತಜ್ಞ ರಾಗಿರಿ ಎಂದು ಒತ್ತು ಕೊಟ್ಟು ಹೇಳಿರುವುದು. ಪ್ರವಾದಿವರ್ಯರು(ಸ) ಹೇಳಿದರು, “ಅವನು ನಿಂದ್ಯನಾಗಲಿ! ಅವನು ನಿಂದ್ಯನಾಗಲಿ! ಅವನು ನಿಂದ್ಯನಾಗಲಿ! ಆಗ ಜನರು ಕೇಳಿದರು, ಓ ಪ್ರವಾದಿವರ್ಯರೇ(ಸ)! ಯಾರು? ಆಗ ಪ್ರವಾದಿ(ಸ)ರು, “ತಂದೆ ತಾಯಿಯರಿ ಬ್ಬರೂ ಅಥವಾ ಅವರಲ್ಲೊಬ್ಬರು ಮುದಿತನದಲ್ಲಿರುವಾಗ (ಅವರ ಸೇವೆ ಮಾಡಿ) ಸ್ವರ್ಗ ಪ್ರವೇಶಿಸದವನು” ಎಂದು ಉತ್ತರಿಸಿದರು.

ಒಮ್ಮೆ ಪ್ರವಾದಿವರ್ಯರು(ಸ) ತಂದೆ ತಾಯಿಯರ ಸೇವೆಯನ್ನು ಜಿಹಾದ್‍ನಂತಹ ಉತ್ಕೃಷ್ಟ ಆರಾಧನೆಗಿಂತಲೂ ಉತ್ತಮ ವೆಂದು ಸಾರಿದ್ದರು. ಇಷ್ಟು ಮಹತ್ತರವಾದ ವಿಚಾರವನ್ನು ಲಘುವಾಗಿ ಕಾಣಬಾರದು. ಸಮಾಜ ಸೇವೆ ಮತ್ತಿತರ ಯಾವುದೇ ಕಾರ್ಯದಲ್ಲಿ ನಾವು ಮುಂಚೂಣಿಯಲ್ಲಿದ್ದರೂ ನಮ್ಮ ಮಾತಾಪಿತರ ಬಗ್ಗೆ ನಾವು ಎಚ್ಚರದಿಂದ ಇರಬೇಕಾಗಿದೆ. ಮಾಡಿದ ಕರ್ಮಗಳೆಲ್ಲವೂ ಶೂನ್ಯವಾಗುವುದರ ಕುರಿತು ಪ್ರಜ್ಞಾವಂತರಾಗಬೇಕು.