ಬೀದರ್ :ಚಾಕಲೇಟ್ ವಿತರಿಸಿದ್ದೇ ಗುಂಪು ಹತ್ಯೆಗೆ ಕಾರಣವೇ? ಓದಿ ಸನ್ಮಾರ್ಗ ವರದಿ

0
1195

“ಕೆಂಪು ಕಾರಿನಲ್ಲಿರುವವರನ್ನು ಹೋಗಲು ಬಿಡಬೇಡಿ. ಅವರು ಮಕ್ಕಳು ಕಳ್ಳರು‌” ಎಂಬ ವಾಟ್ಸಪ್ ಸಂದೇಶವು ಹರಿದಾಡಿದ ಅರ್ಧ ಗಂಟೆಯಲ್ಲಿಯೇ ಆಕ್ರೋಶಿತ ಜನರಿಂದ ದಾಳಿಗೊಳಗಾದ ಆಝಮ್ ಸ್ಥಳದಲ್ಲೇ ಮೃತ ಪಟ್ಟರೆ ಇನ್ನೂ ಮೂವರು ಗಂಭೀರ ಗಾಯಗೊಂಡರು.
ಕಳೆದ ಮೇ ತಿಂಗಳಾಂತ್ಯದಲ್ಲಿ ವಾಟ್ಸಪ್ ಸುಳ್ಳು ಸಂದೇಶದ ವದಂತಿಯಿಂದ ರಾಜಸ್ಥಾನ ಮೂಲದ 26ರ ಹರೆಯದ ಯುವಕನನ್ನು ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಆಕ್ರೋಶಿತ ಜನರ ಗುಂಪು ಭಯೋತ್ಪಾದಕನೆಂದು ಬಗೆದು ಹೊಡೆದು ಕೊಂದು ಹಾಕಿತ್ತು.
ಆದರೆ ಕಳೆದ ವಾರ ಮತ್ತೊಂದು ವಾಟ್ಸಪ್ ಸುಳ್ಳು ಸಂದೇಶಕ್ಕೆ ಟೆಕ್ಕಿ ಆಝಮ್ ಜನರಿಂದ ಹತರಾದರು.
ಒಂದು ಕಡೆ ವಾಟ್ಸಪ್ ಸುಳ್ಳು ಸಂದೇಶಗಳು ಅಮಾಯಕ ಜನರ ಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆಯಾದರೂ ಇನ್ನೊಂದು ಕಡೆ ಅವರು ವಿತರಿಸಿದ ಚಾಕೊಲೇಟ್ ಗಳು ಕಾರಣವೆಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ ಹತರಾದ ಮುಹಮ್ಮದ್ ಆಝಮ್, ಅವರ ಸ್ನೇಹಿತರಾದ ಮುಹಮ್ಮದ್ ಸಲ್ಮಾನ್ ಅಲಿನಾರ್, ತಲ್ಹಾ ಇಸ್ಮಾಯಿಲ್ ಖುರೈಶಿ, ನೂರ್ ಮುಹಮ್ಮದ್ ಸಾದಿಕ್ ಹೈದರಾಬಾದಿನಿಂದ ಬೀದರ್ ನಲ್ಲಿರುವ ತಮ್ಮ ಗೆಳೆಯ ಬಶೀರ್ ಅಫ್ರೋಝ್ ರವರೊಂದಿಗೆ ಔಪಚಾರಿಕ ಭೇಟಿಗಾಗಿ ಬಂದಿದ್ದರು ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ ಅವರು ಹಂಡಿಕೇರಾದಲ್ಲಿ ಸ್ಥಳ ಖರೀದಿಸಲು ಬಂದಿದ್ದರು ಎನ್ನಲಾಗುತ್ತಿದೆ.
ಹಂಡಿಕೇರಾದಲ್ಲಿ ತಾವು ಖರೀದಿಸ ಬಯಸುವ ಸ್ಥಳದ ವೀಕ್ಷಣೆಯ ನಂತರ ಬಟ್ಕೂಲ್ ಗೋಕುಲ್ ಶಾಲೆಗೆ ಹತ್ತಿರದಲ್ಲೇ ಇರುವ ಚಹಾ ಅಂಗಡಿಯಲ್ಲಿ ಚಹಾ ಸೇವಿಸಿ ತಮ್ಮ ಕಾರಿನ ಬಳಿ ನಿಂತು ಮಾತುಕತೆ ನಡೆಸುತ್ತಿದ್ದರು. ಸುಮಾರು 4- 4:3೦ ರ ಆಸುಪಾಸಿನಲ್ಲಿ ಶಾಲೆಯು ಬಿಟ್ಟಿರುವುದರಿಂದ ಮಕ್ಕಳು ಮನೆಗೆ ತೆರಳುತ್ತಿದ್ದರು. ಖುರೈಶಿಯವರು ಓರ್ವ ವಿದೇಶಿ ಉದ್ಯೋಗಿಯಾಗಿದ್ದು ತಾವು ಅಲ್ಲಿಂದ ತಂದ ಚಾಕೋಲೇಟ್ ಗಳನ್ನು ಮಕ್ಕಳಿಗೆ ವಿತರಿಸಿದ್ದರಂತೆ. ಕೆಲವು ಮಕ್ಕಳು ಅವುಗಳನ್ನು ಪಡೆದುಕೊಂಡರೆ ಇನ್ನೂ ಕೆಲವು ಮಕ್ಕಳು ಅವುಗಳನ್ನು ನಿರಾಕರಿಸಿದ್ದರಂತೆ. ತದನಂತರ ಹೊಸ ಟೊಯೋಟಾ ಕಾರ್ ಮುಂದೆ ಮುರ್ಕಿ ಚಲಿಸಿದಾಗ ಅದಾಗಲೇ ಅವರ ಮೇಲೆ ದಾಳಿ ನಡೆಸಲು ಜನರ ಗುಂಪು ಸಂಪೂರ್ಣ ತಯಾರಿಯೊಂದಿಗೆ ಸಜ್ಜಾಗಿತ್ತು. ಇನ್ನೇನು ತಮ್ಮ‌ ಮೇಲೆ ಜನರು ದಾಳಿ ನಡೆಸುತ್ತಾರೆಂದು ಎಚ್ಚೆತ್ತ ಆಝಮ್ ಕಾರಿನ ವೇಗವನ್ನು ಹೆಚ್ಚಿಸಿದರಾದರೆ ಜನರು ದಾರಿಗಡ್ಡವಿಟ್ಟ ಮರದ ತಡೆಗೆ ಡಿಕ್ಕಿ ಹೊಡೆದು ಉರುಳಿ ಬಿತ್ತೆಂದು ಹೇಳಲಾಗುತ್ತಿದೆ.‌ ಆಕ್ರೋಶಿತ ಗುಂಪು ಅವರನ್ನು ಹೊರಗೆಳೆದು ಮಕ್ಕಳ ಕಳ್ಳರೆಂದು ಅವಾಚ್ಯ ಪದಗಳಿಂದ ನಿಂದಿಸಿ ಥಳಿಸಿದೆ. ಅವರು ತಾವು ಅಂತಹವರಲ್ಲವೆಂದು ಹೇಳಿದರೂ ಕೇಳದೇ ಜನರು ಅವರ ಮೇಲೆ ದಾಳಿ ನಡೆಸಿದ್ದಾರೆ‌. ಯಾವುದೇ ನಂಬರ್ ಪ್ಲೇಟ್ ಇಲ್ಲದ ಹೊಸ ಕಾರು, ಹಾಗೂ ಗಡ್ಡವಿರಿಸಿದ ನಾಲ್ವರು ಶಾಲಾ ಮಕ್ಕಳಿಗೆ ನೀಡಿದ ಚಾಕೋಲೇಟ್ ಗಳು, ಜನರ ದಾಳಿಯಿಂದ ತಪ್ಪಿಸಿಕೊಳ್ಳಲು ಕಾರಿನ ವೇಗವನ್ನು ಹೆಚ್ಚಿಸಿದುದು ಎಲ್ಲವೂ ಅವರನ್ನು ಮಕ್ಕಳ ಕಳ್ಳರೆಂದು ಶಂಕಿಸಲು ಕಾರಣವಾಯ್ತು ಎಂದು ಜನರು ಹೇಳುತ್ತಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಸುಳ್ಳು ವಾಟ್ಸಪ್ ಸಂದೇಶ ಕಳುಹಿಸಿದ ಮನೋಜ್ ಪಾಟೀಲ್ ‌ಹಾಗೂ ದಾಳಿ ನಡೆಸಿದ 30 ಜನರನ್ನು ಬಂಧಿಸಿದ್ದಾರೆ. ಆದರೆ ಈ ಬಂಧನಗಳಿಂದ ಆಕ್ರೋಶಕ್ಕೊಳಗಾದ ಜನರು,
“ಗಡ್ಡವಿಟ್ಟ ನಾಲ್ವರು ಶಾಲೆಯ ಎದುರು ಮಕ್ಕಳಿಗೆ ಚಾಕೊಲೇಟ್ ನೀಡಿದ್ದಾರೆ, ಕೆಂಪು ಬಣ್ಣದ ಹೊಸ ಟೊಯೋಟಾ ಕಾರ್ ನಲ್ಲಿ ಬಂದಿದ್ದಾರೆ, ಯಾವುದೇ ನಂಬರ್‌ ಪ್ಲೇಟ್ ಇಲ್ಲ, ಜನರು ನಿಲ್ಲಿಸಲು ಹೇಳಿದರೆ ವೇಗವನ್ನು ಹೆಚ್ಚಿಸಿ ಓಡಲೆತ್ನಿಸಿದ್ದಾರೆ…” ಎಂಬ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ.
ಇನ್ನು ಪತ್ರಿಕೆಯೊಂದರಲ್ಲಿ ಮಾತನಾಡಿದ ಪ್ರಭು ಎಂಬ ಹಂಡಿಕೇರಾ ಗ್ರಾಮಸ್ಥರು ‘ಕಾರಿನಲ್ಲಿ ಬಂದವರು ಬಟ್ಕೂಲ್ ಬಳಿ ತಮ್ಮ ಕಾರನ್ನು ನಿಲ್ಲಿಸಿದ್ದರು.‌ ತದನಂತರ ಅಲ್ಲಿಂದ ಶಾಲಾ ಮಕ್ಕಳಿಗೆ ಚಾಕಲೇಟು ನೀಡುವ ನೆಪದಲ್ಲಿ ತಮ್ಮ‌ ಕಾರಿನಲ್ಲಿ ಬಲವಂತವಾಗಿ ಹತ್ತಿಸಲು ಪ್ರಯತ್ನಿಸಿದರು. ಜನರು ಗುಂಪಾಗಿ ಇವರನ್ನು ವಿಚಾರಿಸಲು ಬರುತ್ತಿರುವಾಗಲೇ ಮೂವರೂ ಅಲ್ಲಿಂದ ಪರಾರಿಯಾದರು. ಜನರು ಅವರನ್ನು ತಡೆಯಲು ಯತ್ನಿಸಿದರಾದರೂ ಅವರು ತಮ್ಮ ಕಾರಿನ ವೇಗ ಹೆಚ್ಚಿಸಿ ಅಲ್ಲಿಂದ ಪರಾರಿಯಾದರು. ಮುರ್ಕಿಯಲ್ಲಿಯೂ ಅವರನ್ನು ನಿಲ್ಲಿಸಲು ಯತ್ನಿಸಲಾಯಿತು. ಆದರೆ, ಅವರು ತಮ್ಮ ಕಾರಿನ‌ವೇಗವನ್ನು ಹೆಚ್ಚಿಸುತ್ತಲೇ ಇದ್ದರು. ಮಿತಿ‌ಮೀರಿದ ವೇಗದಿಂದಾಗಿ ಕಾರು ಪಲ್ಟಿಯಾಗಿದೆ. ಇದು ಅವರ ತಪ್ಪು. ಸರಣಿ ತಪ್ಪುಗಳನ್ನು ಅವರು ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಇದೀಗ ಆಝಮ್ ಹತರಾಗಿ ಒಂದು ವಾರ ಸಂದಿದ್ದರೂ ಅವರ ಗೆಳೆಯ ಅಫ್ರೋಝ್ ಈಗಲೂ ಈ ಘಟನೆಯಿಂದ ಚೇತರಿಕೆ ಕಂಡಿಲ್ಲ.
ತನ್ನದೇ ಗ್ರಾಮಸ್ಥರು ನಡೆಸಿದ ದಾಳಿಯಿಂದ ಭೀತಿಗೊಳಗಾದ ಅಫ್ರೋಝ್ ರವರು ಜನರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಅವರ ಸ್ನೇಹಿತ ಆಝಮ್ ರವರನ್ನು ಥಳಿಸಿ ಕೊಂದು ಹಾಕಿದುದು ಮತ್ತು ತನ್ನ ಸ್ನೇಹಿತರು ಗಂಭೀರ ಗಾಯಗೊಂಡಿರುವುದರಿಂದ ತೀವ್ರ ದುಃಖಿತರಾಗಿದ್ದಾರೆ. ತನ್ನ ಸ್ನೇಹಿತರನ್ನು ಶುದ್ಧ ಜೇನು ತುಪ್ಪ ಸವಿಯಲು ಹಾಗೂ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಆಮಂತ್ರಿಸಿದುದು ಅವರ ಜೀವಕ್ಕೆ ಮುಳುವಾಗುವುದೆಂದು ನಾನು ತಿಳಿದಿರಲಿಲ್ಲ. ಜನರು ದಾಳಿ ನಡೆಸುತ್ತಿರುವಾಗ ನಮ್ಮನ್ನು ರಕ್ಷಿಸಲು ಪೋಲಿಸರನ್ನು ಬಿಟ್ಟು ಕೆಲವರಾದರೂ ಮುಂದೆ ಬಂದಿದ್ದರೆ ಈ ದುರಂತವು ಸಂಭವಿಸುತ್ತಿರಲಿಲ್ಲ. ಥಳಿಸಿ ಕೊಂದವರೆಲ್ಲರನ್ನೂ ಶಿಕ್ಷೆಗೊಳಪಡಿಸದೇ ತಾನು ಈ ಸ್ಥಳ ಬಿಟ್ಟು ಹೈದರಾಬಾದಿಗೆ ತೆರಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿಯೂ ಭೀತಿಯ ವಾತಾವರಣ ನಿರ್ಮಾಣವಾಗಿದ್ದು ಪೋಲಿಸರು ಅಮಾಯಕ ಜೀವಗಳು ಹತರಾಗದಿರಲು ಬಿಗಿ ಬಂದೋಬಸ್ತ್ ನಡೆಸುತ್ತಿದ್ದಾರೆ.
ಈ ಹಿಂದೆ ತಮಿಳುನಾಡಿನ ಅತಿಮೂರ್ ಹಳ್ಳಿಯಲ್ಲಿ 65ರ ಹರೆಯ ಮಹಿಳೆಯು ದೇವಸ್ಥಾನಕ್ಕೆ ತೆರಳಿ ತಮ್ಮ ಸಂಬಂಧಿಕರ ಮನೆಗೆ ಹೋಗಲು ದಾರಿ ಕೇಳಿ ಮಕ್ಕಳಿಗೆ ಚಾಕಲೇಟ್ ನೀಡಿದುದರಿಂದಾಗಿ ಇನ್ನೂರು ಜನರಿಂದ ಥಳಿತಕ್ಕೊಳಗಾಗಿ ಮೃತರಾಗಿದ್ದರು.‌ ಜುಲೈ 6 ರಿಂದ 9 ನೇ ತಾರೀಖಿನ ವರೆಗೆ 15 ಪ್ರಕರಣಗಳಲ್ಲಿ ಮಕ್ಕಳರೆಂಬ ವದಂತಿಯಿಂದಾಗಿ 27 ಜನರು ಹತರಾಗಿದ್ದಾರೆಂದು ದಿನಪತ್ರಿಕೆಯೊಂದು ವರದಿ ಮಾಡಿದೆ.‌

ನೆರವು- ರಫೀಕ್ ಅಹ್ಮದ್ ಬೀದರ್