ವಯನಾಡಿನಲ್ಲಿ ಅಭ್ಯರ್ಥಿ ರಾಜೀವ್ ಗಾಂಧಿಯಲ್ವಾ…!

0
1476

ಕಲ್ಪಟ್ಟ,ಎ.10: ವಯನಾಡಿನಿಂದ ಲೋಕಸಭಾ ಅಭ್ಯರ್ಥಿ ಯಾರೆಂದು ಕೇಳಿದರೆ ವೇಳನ್ ಹೇಳುತ್ತಾರೆ. ” ಗೊತ್ತು, ರಾಜೀವ್ ಗಾಂಧಿಯಲ್ವಾ..” . ಇದನ್ನುಕೇಳಿದ ಕೂಡಲೇ ರಾಜು ತಿದ್ದಿದರು” ರಾಜೀವ್ ಗಾಂಧಿಯಲ್ಲ ಅಣ್ಣ.. ರಾಹುಲ್ ಗಾಂಧಿ” ಯಾರಾದರೂ ಗಾಂಧಿಯಲ್ಲವೇ ಎಂದು ವೆಳ್ಳನ್ ಮರು ಪ್ರಶ್ನೆಯನ್ನು ಹಾಕಿದರು.

ಈ ಚರ್ಚೆಯ ವೇಳೆ ಶಾಂತಾ ಬಂದರು ” ನನಗೆ ರಾಜೀವ್ ಗಾಂಧಿ,ಸೋನಿಯಾ, ರಾಹುಲ್ ಬಗ್ಗೆ ಗೊತ್ತಿದೆ. ಯಾರು ಗೆದ್ದರೂ ಬುಡಕಟ್ಟು ಜನರ ಜೀವನದಲ್ಲಿ ಬದಲಾವಣೆ ಆಗುವುದಿಲ್ಲ. ಮತದಾನ ಮಾಡುವವರೆಗೆ ಅದು ಮಾಡುತ್ತೇವೆ. ಇದು ಮಾಡುತ್ತೇವೆಎಂದು ಜನರು ಕಾಲನಿಗೆ ಬರುತ್ತಾರೆ. ಮತದಾನ ಮುಗಿದ ಬಳಿಕ ಇಲ್ಲಿಗೆ ಯಾರು ಬರುವುದಿಲ್ಲ” ಶಾಂತಾ ಹೇಳಿದರು.

ಇಲ್ಲಿನ ಎಲ್ಲ ಬುಡಕಟ್ಟು ಜನರಲ್ಲಿ ಇಂತಹದೇ ಉತ್ತರ ಮತ್ತು ಸಮಸ್ಯೆಗಳೂ ಇವೆ. ವಯನಾಡಿನ ಮುಟ್ಟಿಲ್ ಪಂಚಾಯತ್ ನಾಲ್ಕನೆ ವಾರ್ಡಿನ ಚೋಯಿ ಕಾಲನಿಯ ನಿವಾಸಿಗಳು ಮೇಲೆ ವಿವರಿಸಿದ ವ್ಯಕ್ತಿಗಳು. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಅವರಲ್ಲಿ ಹಲವು ದೂರುಗಳಿವೆ” ಈ ರಸ್ತೆ ನೋಡಿದ್ದೀರಾ.. ಹಲವು ವರ್ಷಗಳಿಂದ ಹೀಗೆ ಗುಂಡಿ, ಧೂಳು, ಕೆಸರುಗಳಿಂದ ತುಂಬಿಕೊಂಡಿದೆ. ಜಲ್ಲಿ ಕೂಡಾ ಹಾಕಿಲ್ಲ. ಕಾಂಕ್ರಿಟ್ ಹಾಕಿ ಅಥವಾ ಡಾಮರು ಹಾಕಿ ಎಂದು ಹಲವು ಸಲ ಹೇಳಿ ನೋಡಿದೆವು. ಹಲವು ಕಚೇರಿಗಳಿಗೆ ಅಲೆದಾಡಿದೆವು. ಕಳೆದ ದಿವಸ ಹೆರಿಗೆ ನೋವು ಬಂದ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಲು ಬಹಳ ಕಷ್ಟವಾಯಿತು. ವಾಹನ ಇಲ್ಲಿಗೆ ಬರುವುದಿಲ್ಲ” ಕಾಲನಿಯ ಮುಂದಿನ ರಸ್ತೆಯತ್ತ ಕೈ ತೋರಿಸಿ ಇಲ್ಲಿನವರು ಹೇಳುತ್ತಾರೆ. ರಾಜು ರಾಹುಲ್ ಗಾಂಧಿ ಭಾರೀ ಬಹುಮತದಿಂದ ಗೆಲ್ಲಲಿದ್ದಾರೆ ಎಂದು ಹೇಳುತ್ತಾರೆ. ಈ ಸಲರಾಹುಲ್‍ಗಾಗಿ ಮತಯಾಚಿಸುವೆ ಎನ್ನುತ್ತಾರೆ. 90 ವರ್ಷದ ವೃದ್ಧ ಕಿಟ್ಟಿಗೆ ನಡೆದು ಹೋಗಿ ಮತಹಾಕುವಷ್ಟು ಆರೋಗ್ಯ ಇಲ್ಲ. ಯಾರು ಸ್ಪರ್ಧಿಸುತ್ತಿದ್ದಾರೆಂದೂ ಗೊತ್ತಿಲ್ಲ. ಯಾರಾದರೂ ಮತಗಟ್ಟೆಗೆ ಕರೆದು ಕೊಂಡು ಹೋದರೆ ಈ ಸಲವೂ ಮತ ಹಾಕುತ್ತೇನೆ ಎಂದರು. ಕೂಲಿ ಕೆಲಸ ಕಡಿಮೆಯಾಗಿದ್ದರಿಂದ ಜೀವನ ಹೆಚ್ಚು ಕಷ್ಟದಲ್ಲಿದೆ. ರಾಹುಲ್ ಗಾಂಧಿ ಕಲ್ಪಟ್ಟದಲ್ಲಿ ಬಂದಾಗ ನೋಡಲು ಹೋಗಬೇಕೆಂದಿತ್ತು. ಆದರೆ ಬಸ್ಸಿಗೆ ಹಣ ಇರಲಿಲ್ಲ ಎಂದು ಅಮ್ಮಿಣಿ ಹೇಳುತ್ತಾರೆ.