ಇದ್ದತ್: ಒಂದು ದುರಂತದಿಂದ ಇನ್ನೊಂದು ದುರಂತಕ್ಕೆ ತಳ್ಳುವುದರ ಹೆಸರಲ್ಲ

0
2386

➤ ಅಬ್ದುಸ್ಸಮದ್ ಎ.

ಫಝಲ್‍ನ ತಂದೆ ಅಪಘಾತವೊಂದಕ್ಕೆ ಸಿಲುಕಿ ಅನಿರೀಕ್ಷಿತವಾಗಿ ಮರಣ ಹೊಂದಿದರು. ನಾಲ್ವರು ಪುತ್ರರೂ ವಿದೇಶದಲ್ಲಿದ್ದಾರೆ. ತಂದೆಯ ಅನಿರೀಕ್ಷಿತ ಸಾವು ತಾಯಿಯನ್ನು ಮಾನಸಿಕ ಅಘಾತಕ್ಕೊಳಗಾಗುವಂತೆ ಮಾಡಿತ್ತು. ಈ ಸ್ಥಿತಿಯಲ್ಲಿ ತಾಯಿ ಇದ್ದತ್‍ನಲ್ಲಿರುವುದಾದರೂ ಹೇಗೆ ಎಂಬ ಕುರಿತು ತರ್ಕವೆದ್ದಿತು. ಸಂಬಂಧಿಕರು ಮತ್ತು ಊರಿನವರು ಸಂಪ್ರದಾಯದಂತೆ ಇದ್ದತ್‍ನಲ್ಲಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತಿಯ ಅಕಾಲಿಕ ನಿಧನದಿಂದ ಅಘಾತಕ್ಕೊಳಗಾದಂತಹ ತಾಯಿಯನ್ನು ಏಕಾಂತದಲ್ಲಿರುವಂತೆ ಮಾಡುವುದನ್ನು ಯೋಚಿಸಿ ಫಝಲ್ ತೀವ್ರ ದುಃಖಿತನಾಗಿದ್ದ. ಮಕ್ಕಳ ಬಳಿಗೂ ಕರೆದುಕೊಂಡು ಹೋಗಬಾರದೆಂಬ ತೀರ್ಮಾನವೂ ಬಂತು. ಅಲ್ಲದೆ ಇತರ ಯಾರನ್ನೂ ಕಡ್ಡಾಯವಾಗಿ ನೋಡಬಾರದೆಂಬ ಕಠಿಣ ಆದೇಶವೂ ಬಂದು ಬಿಟ್ಟಿತು.

ಊರಲ್ಲಿದ್ದ ಫಝಲ್ ನನ್ನನ್ನು ಫೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿ ಪರಿಹಾರ ಕೇಳಿದಾಗ, “ಪತಿಯ ಸಾವಿನ ಕಾರಣವಾಗಿ ಮಹಿಳೆಯರ ಮೇಲೆ ತಾಳುವಂತಹ ನಿಲುವು ಪತಿಯನ್ನು ಅವರೇ ಕೊಂದರೇ ಎಂಬಂತಿದೆ. ಸಂಗಾತಿಯ ಅಗಲಿಕೆಯ ದುಃಖದಲ್ಲಿ ಮುಳುಗಿ ರುವ ಸಂದರ್ಭದಲ್ಲಿ ಅವರಿಗೆ ಸಾಂತ್ವನದ ಅಗತ್ಯವಿದೆ. ಮಕ್ಕಳ ನೆರವು ಮತ್ತು ಸಾಮೀಪ್ಯದ ಅಗತ್ಯತೆ ಅವರಿಗಿದೆ. ಒಂದೋ ನೀವು ತಾಯಿಯ ಬಳಿ ತಂಗಿರಿ ಅಥವಾ ತಾಯಿಯನ್ನು ತಾವು ಇದ್ದಲ್ಲಿಗೆ ಕರೆದುಕೊಂಡು ಹೋಗಿರಿ” ಎಂಬುದಾಗಿ ನಾನು ಅವರನ್ನು ಉಪದೇಶಿಸಿದೆ. ಅವರು ಅದರಲ್ಲಿ ಎರಡನೇಯ ಅಭಿಪ್ರಾಯವನ್ನು ಸ್ವೀಕರಿಸಿದರು.

ಪತಿ ಮರಣ ಹೊಂದಿದ ಬಳಿಕ ನಾಲ್ಕು ತಿಂಗಳು ಹತ್ತುದಿನಗಳ ಕಾಲ ಇದ್ದತ್ ಆಚರಣೆ ಯಲ್ಲಿರಬೇಕು ಎಂದು ಕುರ್‍ಆನ್ ಸ್ಪಷ್ಟಪಡಿಸಿದೆ. ಅದನ್ನೊಂದು ಧಾರ್ಮಿಕವಾದ ವಿಧಿ ನಿರ್ಣಯ ಎಂದು ಭಾವಿಸಿ ಮುಸ್ಲಿಮ್ ಜಗತ್ತು ಸ್ವೀಕರಿಸಿದೆ. ಅದರ ಹೆಸರಲ್ಲಿ ಇಂದು ಕಂಡುಬರುವ ಕೆಲವು ವಿಚಾರಗಳು ಪ್ರವಾದಿವರ್ಯರು(ಸ) ಹೇಳಿದ್ದಲ್ಲ. ಆನಂತರದ ಕೆಲವರು ಹೇಳಿದ್ದಾಗಿದೆ. ನಮ್ಮ ಪರಿಸರದಲ್ಲಿ ಕಂಡುಬರುವ ಇದ್ದತ್‍ನ ಆಚರಣೆಗಳು ಅದರ ಭಾಗವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಾವನ್ನು ಒಂದು ಪಾಪವಾಗಿ ಇಸ್ಲಾಮ್ ಕಾಣದು. ಅದೊಂದು ಸಾಮಾನ್ಯವಾದ ಘಟನೆಯಾಗಿದೆ. ಆದ್ದರಿಂದ `ವಿಧವೆ’ ಎಂಬುವುದು ಶಾಪವಲ್ಲ, ಅದಕ್ಕಾಗಿ ವಿಧವೆಯರ ಸಂರಕ್ಷಣೆಯ ಕುರಿತು ಇಸ್ಲಾಮ್ ಅತೀವ ಜಾಗ್ರತೆಯನ್ನು ಪಾಲಿಸುತ್ತದೆ. ಅದೇವೇಳೆ ವಿಧವೆಯನ್ನು ಒಂದು ಶಾಪವಾಗಿ ಪರಿಗಣಿಸುವ ಅನೇಕ ಸಿದ್ಧಾಂತಗಳು ನಮ್ಮ ಸಮಾಜದಲ್ಲಿವೆ.

ಅವರು ಬಿಳಿ ಬಟ್ಟೆ ಮಾತ್ರ ಧರಿಸಬೇಕು. ಶುಭ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ. ಹಿಂದಿನ ಕಾಲದಲ್ಲಿ ಪತಿ ಮರಣ ಹೊಂದಿದರೆ ಅವರ ಶವವನ್ನು ಸುಡುವ ಚಿತೆಗೆ ಹಾರಿ ಜೀವ ಕಳೆದುಕೊಳ್ಳುವ `ಸತಿ ಸಹಗಮನ ಪದ್ಧತಿ’ ಆಚರಣೆಯಲ್ಲಿತ್ತು. ಪತಿಯ ಸಾವಿನ ಬಳಿಕ ಬರುವಂತಹ ಅವಮಾನ ಹಿಂಸೆಗಿಂತ ಸಾಯುವುದೇ ಮೇಲು ಎಂಬರ್ಥವೂ ಈ ಪದ್ಧತಿಯಲ್ಲಿ ಒಳಗೊಂಡಿದೆ. ಹೀಗೆ ಜೀವಿಸಿದ ಮಹಿಳೆಯರು ಶಾಪವಾಗಿ ಸ್ವಯಂ ಬೆಂಕಿಗೆ ಆಹುತಿಯಾಗಿರುವ ಮಹಿಳೆಯರನ್ನು ದೇವಿಯಾಗಿ ದೇವತೆಯಾಗಿ ಪೂಜಿಸುವ ಅನಾಚಾರ ನಮ್ಮ ನಾಡಲ್ಲಿ ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ.

ಅದೇವೇಳೆ ಇಸ್ಲಾಮ್ ಪತಿ ಮರಣ ಹೊಂದಿದ ಕೂಡಲೇ ಮಹಿಳೆಯರ ಕುರಿತು ಅಂತಹದ್ದೊಂದು ನಿಲುವನ್ನು ಸ್ವೀಕರಿಸಿಲ್ಲ. ಲೋಕದಿಂದ ಅವಳನ್ನು ಏಕಾಂತಗೊಳಿಸುವಂತೆ ಮಾಡಿದ್ದು ಕೆಲವು ಪುರೋಹಿತಶಾಹಿಗಳಾಗಿದ್ದಾರೆ. ಒಟ್ಟಿನಲ್ಲಿ ಇದು ಧಾರ್ಮಿಕ ರಂಗವನ್ನು ಪ್ರವೇಶಿಸಿದ ದುರಂತವಾಗಿದೆ. ಇದರಲ್ಲಿ ಐದು ನಿಬಂಧನೆಗಳನ್ನು ನಮಗೆ ಕಾಣಬಹುದು.

1. ಪತಿಯ ಮನೆಯಲ್ಲಿಯೇ ವಾಸಿಸಿರಿ (ಅಗತ್ಯ ಕಾರಣಗಳಿಗಾಗಿ ಆಕೆಗೆ ಹೊರಗಡೆ ಹೋಗಲು ಅನುಮತಿಯಿದೆ.).
2. ಸಾಮಾನ್ಯವಾದ ವಸ್ತ್ರಗಳನ್ನು ಧರಿಸಿರಿ, ಅಲಂಕಾರಗಳಿಂದ ದೂರವಿರಿ. ಬಿಳಿ, ಕಪ್ಪು, ಹಸಿರು ಮುಂತಾದ ಪ್ರತ್ಯೇಕವಾದ ಬಣ್ಣದ ವಸ್ತ್ರಗಳೇ ಆಗಬೇಕೆಂಬ ನಿಬಂಧನೆಗಳಿಲ್ಲ.
3. ಸುಗಂಧ ಉಪಯೋಗಿಸ ಬೇಡಿ (ಕೆಲವು ಉಪಾಧಿಗಳನ್ನು ಹೊರತುಪಡಿಸಿ).
4. ಆಭರಣಗಳನ್ನು ವರ್ಜಿಸಿರಿ.
5. ಸುರ್ಮ, ಮದರಂಗಿ ಮುಂತಾದುವುಗಳಿಂದ ದೂರವಿರಿ.

ಪ್ರವಾದಿವರ್ಯರ(ಸ) ಆಗ ಮನದ ಸಂದರ್ಭದಲ್ಲಿ ಮಹಿಳೆ ಯರನ್ನು ಹೀನಾಯವಾಗಿ ಕಾಣ ಲಾಗುತ್ತಿತ್ತು. ಒಂದು ವರ್ಷದ ತನಕ ಏಕಾಂತವಾಗಿ ಜೀವಿಸ ಬೇಕು, ತಲೆಬೋಳಿಸಬೇಕು ಮುಂತಾದ ಆಚರಣೆಗಳಿದ್ದವು. ಪತಿಯ ಸಾವಿನಿಂದ ಮಹಿಳೆಯರು ಯಾರಿಂದಲೂ ಅಡಗಿ ಕೂರುವ ಸಂಪ್ರದಾಯ ಇಸ್ಲಾಮಿನಲ್ಲಿಲ್ಲ. ಪತಿಯ ಸಾವಿನ ಬಳಿಕ ಮಹಿಳೆಯರ ಇದ್ದತ್‍ನ ಕಾಲದಲ್ಲಿ ನೀವು ಅವರೊಂದಿಗೆ ಮಾತನಾಡುವಾಗ ರಹಸ್ಯವಾಗಿ ವಿವಾಹದ ವಾಗ್ದಾನ ನೀಡಬಾರದು ಎಂದು ಕುರ್‍ಆನ್ ಹೇಳುತ್ತದೆ.
ಇಂದಿನಂತೆ ಮೊಬೈಲ್ ಫೋನ್ ಇಲ್ಲದ ಆ ಕಾಲದಲ್ಲಿ ನೇರವಾಗಿ ಮುಖಾಮುಖಿಯಾಗಿ ಮಾತನಾಡಲು ಮಾತ್ರ ಅವಕಾಶವಿತ್ತು. ವಿವಾಹದ ವಾಗ್ದಾನವನ್ನು ನೀಡುವುದು ವಿವಾಹ ನಿಷಿದ್ಧವಲ್ಲದ ವ್ಯಕ್ತಿಗಳಿಂದ ಮಾತ್ರ ಸಾಧ್ಯವಲ್ಲವೇ? ಸಾಮಾನ್ಯ ಸ್ಥಿತಿಯಲ್ಲಿ ನೋಡುವಂತಹ ಯಾರನ್ನು ಪತಿಯ ಮರಣದ ಬಳಿಕ ನೋಡಬಾರದೆಂದು ಇಸ್ಲಾಮಿನಲ್ಲಿ ಎಲ್ಲಿಯೂ ಹೇಳಲಿಲ್ಲ.

ಇಸ್ಲಾಮಿನ ಹೆಸರಲ್ಲಿ ಯಾರೋ ಕೃತಕ ವಾಗಿ ಸೃಷ್ಟಿಸಿದ ಕಟ್ಟುಕತೆಯೆಂದೇ ಇದನ್ನು ಹೇಳಬೇಕು. ಸರಿಯಾದ ಗೌರವಾರ್ಹವಾದ ರೀತಿಯಲ್ಲಿ ಬಟ್ಟೆ ಧರಿಸಿ ಮಹಿಳೆಯರು ಸಮಾಜದ ಮುಂದೆ ಬರಬೇಕು. (ಅದು ಪುರುಷರಿಗೂ ಭಾದಕವಾಗಿದೆ). ಪತಿಯ ಮರಣದಿಂದ ಮಾನಸಿಕ ಸಂಘರ್ಷಕ್ಕೊಳಗಾದ ಸಂಗಾತಿಯನ್ನು ಇಂದು ಕಾಣುವ ರೀತಿಯಲ್ಲಿ ಅವಳನ್ನು ಕುಸಿಯುವಂತೆ ಮಾಡುತ್ತಿರುವುದು ಅಮಾನ ವೀಯವೂ ಅಧಾರ್ಮಿ ಕತೆಯೂ ಆಗಿದೆ. ಪರ ಧರ್ಮದ ಮಹಿಳೆಯರನ್ನು ಕೂಡಾ ನೋಡಬಾರದೆಂಬುದು ಅದರ ತತ್ವದಲ್ಲಿ ಸೇರಿದೆ.

ಪ್ರತಿಯೊಬ್ಬ ಮಹಿಳೆಗೂ ಅವಳ ಪತಿಯ ಅಗಲಿಕೆಯ ಸಂದರ್ಭದಲ್ಲಿ ಆಕೆಗೆ ಹೆಚ್ಚು ಮಾನ ಸಿಕವಾದ ಸಾಂತ್ವನ ಧೈರ್ಯ, ಸ್ಥೈರ್ಯವನ್ನು ನೀಡಬೇಕಾಗಿದೆ. ಅವಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಅವಳ ಮನಸ್ಸನ್ನು ಇನ್ನಷ್ಟು ಕುಸಿಯುವಂತೆ ಮಾಡುವುದನ್ನು ಇಸ್ಲಾಮಿನೊಂದಿಗೆ ಬೆರೆಸಬಾರದು. ಕೇವಲ ಕೆಲವು ಅಲಂಕಾರಗಳನ್ನು ಮಾಡಬಾರದು ಎಂಬುವುದನ್ನು ಹೊರತುಪಡಿಸಿ ದರೆ ಪತಿಯ ಮರಣದಿಂದ ಪತ್ನಿ ಏನೂ ಕಳೆದುಕೊಳ್ಳುವಂತಿಲ್ಲ. ಇಸ್ಲಾಮಿನಲ್ಲಿ ವಿಧವೆಯರ ಜೀವನವು ಅವಳು ಕೊನೆಯ ವರೆಗೂ ಹಾಗೆಯೇ ಜೀವಿಸಬೇಕೆಂದಿಲ್ಲ. ಮುಂದೆ ಹೊಸ ಜೀವನಕ್ಕೆ ಅವಳಿಗೆ ಅವಕಾಶವಿದೆ. ಇದ್ದತ್ ಎಂಬುದು ಒಂದು ಹಿಂಸೆಯ, ದೌರ್ಜನ್ಯದ ಕಾಲಾವಧಿಯಲ್ಲ. ಸಂಗಾತಿಯ ಅಗಲಿಕೆಯ ನೋವಿನಿಂದ, ಯಾತನೆ ಯಿಂದ ಅವಳು ಮುಕ್ತಳಾಗಲು ಸಮಾಜವು ಪ್ರಯತ್ನಿಸುವ ಕಾಲವೆಂದೇ ಅದನ್ನು ಪರಿಗಣಿಸ ಬೇಕು. ಒಂದು ದುರಂತದಿಂದ ಮತ್ತೊಂದು ದುರಂತಕ್ಕೆ ತಳ್ಳಿಬಿಡುವುದು ಎಂಬುವುದು ಧರ್ಮದ ಹೆಸರಲ್ಲಿ ಉಂಟುಮಾಡಿದ ಕಟ್ಟುಕತೆಗಳಾಗಿವೆ.