ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 5: ಯೋಗಿ ಆದಿತ್ಯನಾಥ್ ಸರಕಾರವಿರುವ ಉತ್ತರಪ್ರದೇಶದ ಕೋರ್ಟಿನಲ್ಲಿ ಮಹಿಳೆಯರು, ಮಕ್ಕಳ ಮೇಲೆ 66,994 ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಇಡೀ ದೇಶದಲ್ಲಿ 2.40 ಲಕ್ಷ ಅತ್ಯಾಚಾರ-ಪೊಕ್ಸೊ ಪ್ರಕರಣಗಳು ವಿಚಾರಣೆಗೆ ಕಾದಿವೆ ಎಂದು ಕೇಂದ್ರ ಕಾನೂನು ಸಚಿವಾಲಯ ಪಾರ್ಲಿಮೆಂಟಿಗೆ ತಿಳಿಸಿದೆ. 2019 ಡಿಸೆಂಬರ್ ವರೆಗಿನ ಲೆಕ್ಕವನ್ನು ಕಾನೂನು ಸಚಿವಾಲಯ ನೀಡಿದ್ದು ಮಹಿಳೆಯರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅತ್ಯಾಚಾರ-ಪೊಕ್ಸೊ ಪ್ರಕರಣಗಳ ಲೆಕ್ಕದಲ್ಲಿ ಮಹಾರಾಷ್ಟ್ರ ಎರಡನೆ ಸ್ಥಾನದಲ್ಲಿದ್ದು ಅಲ್ಲಿ 21,691 ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಪಶ್ಚಿಮ ಬಂಗಾಳ ಮೂರನೇ ಸ್ಥಾನದಲ್ಲಿದ್ದು 20,511 ಪ್ರಕರಣಗಳಿವೆ. ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆಯುವ ಕಾನೂನು ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳು ಸಮಯಕ್ಕೆ ಸರಿಯಾಗಿ ವಿಚಾರಣೆ ನಡೆಸಲು 1023 ವಿಶೇಷ ಫಾಸ್ಟ್ ಟ್ರಾಕ್ ಕೋರ್ಟುಗಳನ್ನು ದೇಶಾದ್ಯಂತ ಸ್ಥಾಪಿಸಲು ಸರಕಾರ ತೀರ್ಮಾನಿಸಿತ್ತು.
2020 ಜನವರಿ 31ರವರೆಗೆ 195 ಫಾಸ್ಟ್ ಟ್ರಾಕ್ ಕೋರ್ಟುಗಳು ದೇಶದಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ 99.43 ಕೋಟಿ ರೂಪಾಯಿ ವ್ಯಯಿಸಲಾಗಿದ್ದು ಇದೇವೇಳೇ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಅತ್ಯಂತ ಹೆಚ್ಚು ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ ರಾಜ್ಯಗಳಲ್ಲಿದ್ದರೂ ಇಲ್ಲಿ ಒಂದೇ ಒಂದು ಫಾಸ್ಟ್ ಟ್ರಾಕ್ ಕೋರ್ಟುಗಳಿಲ್ಲ.
ಉತ್ತರ ಪ್ರದೇಶದಲ್ಲಿ 218, ಮಹಾರಾಷ್ಟ್ರದಲ್ಲಿ 138, ಪಶ್ಚಿಮ ಬಂಗಾಳದಲ್ಲಿ 123 ಫಾಸ್ಟ್ ಟ್ರಾಕ್ ಕೋರ್ಟುಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಘೋಷಿಸಿದೆ. ಜೆಡಿಯು ನಾಯಕ ರಾಜೀವ್ ರಂಜನ್ರ ಪ್ರಶ್ನೆಗೆ ಉತ್ತರವಾಗಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಈ ವಿವರಗಳನ್ನು ನೀಡಿದ್ದಾರೆ.












