ಗೋವಾದ ರಾಜಕೀಯದಲ್ಲಿ ಇನ್ನೊಂದು ತಿರುವು: ಇಬ್ಬರು ಎಂಜಿಪಿ ಶಾಸಕರು ಬಿಜೆಪಿಗೆ ಸೇರ್ಪಡೆ

0
737

ಪಣಜಿ,ಮಾ. 27: ಗೋವಾದ ರಾಜಕೀಯದಲ್ಲಿ ನಾಟಕೀಯ ತಿರುವು ಸಂಭವಿಸಿದ್ದು ಮಹಾರಾಷ್ಟ್ರ ಗೋಮಾಂತಕ ಪಾರ್ಟಿಯ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮನೋಹರ್ ಅಜ್‍ಗೋಂಕರ್, ದೀಪಕ್ ಪವಾಸ್ಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ನಲ್ವತ್ತು ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯ ಬಲ 14ಕ್ಕೇರಿಕೆಯಾಗಿದೆ. ಎಂಜಿಪಿ ಬಿಜೆಪಿಯ ಮಿತ್ರಪಕ್ಷವಾಗಿದ್ದು ಅದು ಮೂವರು ಶಾಸಕರನ್ನು ಹೊಂದಿತ್ತು.

ಪ್ರಮೋದ್ ಸಾವಂತ್‍ರ ನೇತೃತ್ವದ ಗೋವಾ ಸರಕಾರದಲ್ಲಿ ಸುಧಿನ್ ವಾಲಿಕರ್ ಉಪಮುಖ್ಯಮಂತ್ರಿ ಮತ್ತು ಮನೋಹರ್ ಅಜ್‍ಗೋಂಕರ್ ಪ್ರವಾಸೋದ್ಯಮ ಸಚಿವರಾಗಿದ್ದಾರೆ. ನಿಯಮ ಪ್ರಕಾರ ಒಂದು ಪಕ್ಷದ ಮೂರನೇ ಎರಡರಷ್ಟು ಶಾಸಕರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೆ ಉಳಿದ ಶಾಸಕರು ಸಹಜವಾಗಿ ವಿಲೀನದಲ್ಲಿ ಶಾಮೀಲಾಗುತ್ತಾರೆ.

ಎಂಜಿಪಿಯ ಪತ್ರ ಬಂದಿದೆ ಆದರೆ ಧವಾಲ್ಕರ್ ಅದರಲ್ಲಿ ಸಹಿಹಾಕಿಲ್ಲ ಎಂದುಸ್ಪೀಕರ್ ಲೋಬೊ ಹೇಳಿದ್ದಾರೆ. ಬಿಜೆಪಿಯಲ್ಲಿ ವಿಲೀನಗೊಳ್ಳಲು ತೀರ್ಮಾನಿಸಿದ ಬಳಿಕ ಶಾಸಕರು ಮುಖ್ಯಮಂತ್ರಿ ಪ್ರಮೋದ್ ಸಾವಂತ್‍ರನ್ನು ಭೇಟಿಯಾಗಿ ಪತ್ರ ನೀಡಿದ್ದಾರೆ. ನಂತರ ಇವರು ಸ್ಪೀಕರ್‍ರನ್ನು ಭೇಟಿಯಾಗಿ ವಿಲೀನದ ಕುರಿತ ಪತ್ರವನ್ನು ನೀಡಿದರು.

ಎಂಜಿಪಿಯ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ವಿಧಾನಸಭೆಯಲ್ಲಿ ಸಮಾನ ಸದಸ್ಯ ಬಲವಾಗಿದೆ. ಈವರೆಗೆ ಕಾಂಗ್ರೆಸ್ ಗೋವಾ ವಿಧಾನಸಭೆಯಲ್ಲಿ ಹೆಚ್ಚು ಶಾಸಕರನ್ನು ಹೊಂದಿದ ಏಕೈಕ ಪಕ್ಷವಾಗಿತ್ತು. ಮಮೋಹರ್ ಪಾರಿಕ್ಕರ್ ನಿಧನದ ಬಳಿಕ ಸರಕಾರ ರೂಪೀಕರಿಸಲು ಕಾಂಗ್ರೆಸ್ ವಿಫಲ ಯತ್ನ ನಡೆಸಿತ್ತು.