ಕಣ್ಣೂರ್,ಎ.9: ಆದಿವಾಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ ಸಿಪಿಎಮ ಬ್ರಾಂಚ್ ಕಾರ್ಯದರ್ಶಿ ಮಹೇಶ್ ಪಣಿಕ್ಕರ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಹದಿನೇಳು ವರ್ಷದ ಹುಡುಗಿ ಈತನ ವಿರುದ್ಧ ದೂರು ನೀಡಿದ್ದು ಆಕೆಯಿಂದ ವಿವರವಾಗಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಘಟನೆಯ ವೇಳೆ ಆರೋಪಿಗೆ ಊರವರೇ ಹೊಡೆದಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಮನೆಗೆ ವಿಶೇಷ ಪೂಜೆ ಮಾಡಲು ಬಂದಿದ್ದ ಪಣಿಕ್ಕರ್, ಆಕೆಯನ್ನು ಬಲವಂತವಾಗಿ ಹಿಡಿದುಕೊಂಡು ಅಶ್ಲೀಲವಾಗಿ ವರ್ತಿಸಿದ್ದಾನೆ. ಬಾಲಕಿಯ ಬೊಬ್ಬೆ ಕೇಳಿ ಊರವರು ಧಾವಿಸಿದ್ದು ಮಹೇಶ್ ಪಣಿಕ್ಕರ್ನನ್ನು ಹಿಡಿದು ಧರ್ಮದೇಟು ನೀಡಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೂಡಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.












