ಆಕ್ಸಿಜನ್ ಕೊರತೆಯಿಂದ ಒಂದೇ ದಿನ ಏಳು ಕೋವಿಡ್ ರೋಗಿಗಳ ಮೃತ್ಯು ಆರೋಪ: ಕುಟುಂಬಸ್ಥರಿಂದ ವೈದ್ಯರ ಜೊತೆಗೆ ವಾಗ್ವಾದ

0
736

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್ ಬಿಕ್ಕಟ್ಟಿನ ಮಧ್ಯೆ ಪಾಲ್ಘರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಂದೇ ದಿನ ಏಳು ಮಂದಿ ಸಾವನ್ನಪ್ಪಿದ್ದು, ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ ಮತ್ತು ಸರಿಯಾದ ಸೌಲಭ್ಯವಿಲ್ಲದ್ದರಿಂದ ಮೃತಪಟ್ಟರೆಂದು ಆರೋಪಿಸಿ ಮೃತರ ಕುಟುಂಬಸ್ಥರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ವರದಿಯಾಗಿದೆ.

ಉತ್ತರ ಮುಂಬೈನಿಂದ 60 ಕಿಲೋಮೀಟರ್ ದೂರದಲ್ಲಿರುವ ನಲಾ ಸೊಪಾರಾದ ವಿನಾಯಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಕ್ರೋಶಿತರಾದ ಮೃತರ ಕುಟುಂಬದ ಸದಸ್ಯರು ಆಸ್ಪತ್ರೆಯ ಬೇಜವಾಬ್ದಾರಿಯ ಬಗ್ಗೆ ವಾಗ್ವಾದ ನಡೆಸಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ‌.

ಸೋಮವಾರ ಸಾವನ್ನಪ್ಪಿದ ಏಳು ಜನರ ಸಂಬಂಧಿಕರು ಆಮ್ಲಜನಕದ ಕೊರತೆಯಿಂದ ಮತ್ತು ವೈದ್ಯರ ಬೇಜವಾಬ್ದಾರಿಯಿಂದಾಗಿ‌ ಅವರು ಸಾವನ್ನಪ್ಪಿದ್ದಾರೆ ಎಂದು ದೂಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಭಾರೀ ಜನಸಂಖ್ಯೆ ಯಲ್ಲಿ ಸೇರಿ ವೈದರು ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಜೊತೆಗೆ ವಾಗ್ವಾದ ನಡೆಸಿದರಲ್ಲದೇ, ರೋಗಿಗಳ ಪರಿಸ್ಥಿತಿಯ ಬಗ್ಗೆ ಮೊದಲೇ ತಿಳಿಸಿದ್ದರೆ ಇತರ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದೆವು ಎಂದು ಹೇಳಿದರು.

ಮೃತಪಟ್ಟವರೋರ್ವರ ಮಗಳಾಗಿರುವ ಪಿಂಕಿ ವರ್ಮಾ ಎಂಬಾಕೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತನ್ನ ತಂದೆ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಡಿಸ್ಚಾರ್ಜ್ ಮಾಡಲು ಸೂಚನೆ ನೀಡಿದ್ದರು. ‌ಆದರೆ ವೈದ್ಯರು ಹಾಗೂ ಸಿಬ್ಬಂದಿಗಳ ಬೇವಾಬ್ದಾರಿಯಿಂದ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ತಿಳಿಸಿದ್ದಾರೆ.