ಲವ್ ಎಂಬ ಪದವನ್ನು ಓದಲು ನಾಚಿಕೊಳ್ಳುತ್ತಿದ್ದ ಬಾಲ್ಯದಿಂದ; ಐ ಲವ್ ಯೂ ಮಮ್ಮಾ…ಎನ್ನುವ ಈ ದಿನದ ವರೆಗೆ

0
2167

✒ಸಾಲಿಹಾ ಸಾದಿ

ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಬದಲಾಗುವಾಗ ನಮಗೆ ತಿಳಿಯದೆ ಅಲ್ಲಿ ಎಲ್ಲವೂ ಬದಲಾಗುತ್ತದೆ. ಉದಾಹರಣೆಗೆ ಉಡುಗೆ-ತೊಡುಗೆ, ವಾಹನಗಳು, ಮನೆಯ ವಿನ್ಯಾಸಗಳು ,ಆಟ ವಿನೋದಗಳು ,ಮನೋರಂಜನೆಗಳು ಇತ್ಯಾದಿ. ಅದೇ ರೀತಿ ಉಪಯೋಗಿಸುವ ಭಾಷೆಗಳಲ್ಲಿ ಬದಲಾಗುವ ಹಲವಾರು ಪದಗಳು. ನಮ್ಮ ಬಾಲ್ಯದಲ್ಲಿ ನಮಗೆ ಅರ್ಥವಾಗದ ವಿಷಯಗಳನ್ನು, ಪದಗಳನ್ನು ಅಮ್ಮಂದಿರು ಅಥವಾ ಹಿರಿಯರು ನಮ್ಮ ಮಾತೃ ಭಾಷೆಯಲ್ಲಿ ಹೇಳಲು ಸೋತು ಕೊನೆಗೆ ಕನ್ನಡದಲ್ಲಿ ಹೇಳುತ್ತಿದ್ದರು. ಯಾವುದಾದರೂ ವಸ್ತುವಿನ ಹೆಸರು, ವಾರಗಳ ಹೆಸರು ಕನ್ನಡದಲ್ಲಿ ಹೇಳಿದರೆ ಮಾತ್ರ ನಮಗೆ ಅರ್ಥವಾಗುತ್ತಿತ್ತು. ಟೈಮ್ ಟೇಬಲ್ ನೋಡುತ್ತಾ ಮರುದಿವಸದ ಪುಸ್ತಕಗಳನ್ನು ಬ್ಯಾಗಿನೊಳಗೆ ಹಾಕುವಾಗ, ” ಅಮ್ಮ ನಾಳೆ ಯಾವ ವಾರ? ಎಂದು ಕೇಳುವಾಗ ಅವರು ವಾರದ ಹೆಸರನ್ನು ಮಾತೃ ಭಾಷೆಯಲ್ಲಿ ಹೇಳಿದರೆ ಸಣ್ಣವರಿರುವಾಗ ನಮಗೆ ಅರ್ಥವಾಗುತ್ತಿರಲಿಲ್ಲ. ಅಮ್ಮ ಕನ್ನಡದಲ್ಲಿ ಹೇಳಿ ಎಂದು ಹೇಳುತ್ತಿದ್ದೆವು. ಅದೇ ರೀತಿ ಹಲವಾರು ವಸ್ತುಗಳಿಗೆ ಕನ್ನಡದ ಪದ ಬಳಕೆ ಮಾಡುತ್ತಿದ್ದೆವು. ಇಂದು ಯಾವ ಡೇ ಎಂಬ ಪ್ರಶ್ನೆಗೆ ಉತ್ತರಿಸಿ ಬ್ಯಾಗಿನೊಳಗೆ ಪುಸ್ತಕಗಳನ್ನು ತೆಗೆದಿರಿಸುವಂತೆ ವಾರಕ್ಕೆ ಎರಡು ಬಾರಿ ಮಾತ್ರ ಸಮವಸ್ತ್ರ ಹಾಕಿ ಶಾಲೆಗೆ ಹೋಗುತ್ತಿದ್ದ ಕಾಲದಿಂದ ಬದಲಾಗಿ ದಿನಕ್ಕೊಂದು ಬಣ್ಣದ ಯೂನಿಫಾರಂ ಹಾಕುವ ಕಾಲಕ್ಕೆ ಬದಲಾಗಿದ್ದೇವೆ. ಬದಲಾವಣೆಗಳು ಇನ್ನೂ ಮುಂದಕ್ಕೆ ಬದಲಾಗುತ್ತಾ ಹೋಗಬಹುದು.

ಒಂದೊಂದು ಪದಗಳಿಗೆ ಒಂದೇ ಅರ್ಥವನ್ನು ಕಲ್ಪಿಸಿ ದ್ದರಿಂದ ಅಂತಹ ಪದಗಳನ್ನು ಹೇಳಲು ನಮ್ಮ ಬಾಲ್ಯದಲ್ಲಿ ನಾವು ಎಷ್ಟು ಹೆದರುತ್ತಿದ್ದೆವೋ, ನಾಚಿಕೆ ಪಡುತ್ತಿದ್ದೆವೋ ಅಂತಹ ಪದಗಳು ಇಂದು ಎಷ್ಟು ಲೀಲಾಜಾಲವಾಗಿ ವ್ಯವಹರಿಸುತ್ತಿದೆ ಎನ್ನುವುದಕ್ಕೆ ಬದಲಾವಣೆಯೇ ಸಾಕ್ಷಿ. ಮಗಳು ಅವಳ ಗೆಳತಿಯರಿಗೆ ಕೊಡುವ ಫ್ರೆಂಡ್ಶಿಪ್ ಕಾರ್ಡುಗಳಲ್ಲೂ, ಶಾಲಾ ಚಟುವಟಿಕೆಗಳಲ್ಲಿ ಅಮ್ಮಂದಿರ ಬಗ್ಗೆ ಅಥವಾ ಅಧ್ಯಾಪಕರ ಬಗ್ಗೆ ಏನಾದರೂ ಬರೆಯಿರಿ ಎಂದು ಟೀಚರ್ ಹೇಳುವಾಗಲೂ, ಏನು ಬರೆದರೂ ಕೊನೆಗೆ ಐ ಲವ್ ಯು ಮಾಮ್ ಎಂದು, ಐ ಲವ್ ಯು ಟೀಚರ್ ಎಂದು ಖಂಡಿತ ಇರುತ್ತದೆ. ಈ ಐ ಲವ್ ಯೂ ಎಂಬ ವಾಕ್ಯವು ನಮ್ಮ ಬಾಲ್ಯದಲ್ಲಿ ಬಹಳ ಹೆದರಿಕೆಯದ್ದು, ರಹಸ್ಯ ಉಳ್ಳದ್ದು, ಯಾರದ್ದಾದರೂ ಬಾಯಿಯಿಂದ ಕೇಳಿದರೆ ಅದು ಟೀಚರ್ ನ ಕಿವಿಗೆ ತಲುಪುವವರೆಗೂ ಸಾಗುವ ಒಂದು ಭಯಾನಕ ವಾಕ್ಯವಾಗಿತ್ತು. ಇಂಗ್ಲಿಷ್ ಪಾಠ ಪುಸ್ತಕ ವನ್ನು ಟೀಚರ್ ಓದಲು ಹೇಳಿದಾಗ ವಾಕ್ಯದ ನಡುವೆ ಲವ್ ಎಂಬ ಪದ ಬಂದರೆ ಅದನ್ನು ಓದಲು ನಾಚಿಕೆಪಡುವ, ಓದಿದಾಗ ಮಕ್ಕಳೆಲ್ಲರೂ ಪರಸ್ಪರ ಕಿಸಿ ಕಿಸಿ ಎಂದು ನಗುವಷ್ಟರ ಮಟ್ಟಿಗೆ ತಲುಪಿದ ನಾಚಿಕೆಯ ಪದವಾಗಿತ್ತು.

ಪ್ರೈಮರಿ ದಿನಗಳಲ್ಲಿ ಶಾಲೆಗೆ ಹೋಗುತ್ತಿದ್ದ ಸಮಯ ಶಾಲೆಯಲ್ಲಿ ಒಬ್ಬ ಹುಡುಗ ಯಾವುದೊ ಹುಡುಗಿಗೆ ಪ್ರೇಮಪತ್ರ ಕೊಟ್ಟಿದ್ದ .ಅವಳ ಕೈಯಲ್ಲಿ ಕೆಂಡವಿಟ್ಟಂತೆ ಗೊಳೋ ಎಂದು ಅಳುತ್ತಾ ಟೀಚರ್ ನ ಕೈಯಲ್ಲಿ ಆ ಪತ್ರವನ್ನು ಕೊಟ್ಟಿದ್ದಳು. ಟೀಚರ್ ಬೆನ್ನು ಮುರಿಯುವಂತೆ ಎಲ್ಲ ಮಕ್ಕಳೆದುರು ಆ ಹುಡುಗನಿಗೆ ಹೊಡೆದಿದ್ದರು. ಶಾಲೆಯಲ್ಲಿ ನಡೆದ ಯಾವುದೇ ಘಟನೆಯನ್ನು ಅದೇ ರೀತಿ ಬಂದು ಅಮ್ಮನಿಗೆ ಹೇಳುತ್ತಿದ್ದದರಿಂದ, ಅಂದು ಕೂಡ ಸಂಜೆ ದೊಡ್ಡಮ್ಮ ನೊಂದಿಗೆ ಹರಟೆ ಹೊಡೆಯುತ್ತಿದ್ದ ಅಮ್ಮನ ಜೊತೆ ಶಾಲೆ ಬಿಟ್ಟ ಕೂಡಲೇ ಎಲ್ಲವನ್ನು ಬಂದು ಹೇಳಿದ್ದೆ. ಸಣ್ಣ ಬಾಯಿಯಿಂದ ಲವ್ ಲೆಟರ್ ಎಂಬ ಪದ ಕೇಳಿದ್ದೇ ತಡ ಅಮ್ಮ ಮನೆಯ ಹತ್ತಿರವಿದ್ದ ಬಿಂಬುಳಿ ಮರದಿಂದ ಬೆತ್ತ ತಯಾರಿಸಿ ನನಗೆ 2 ಬಾರಿಸಿದ್ದರು. ಅಮ್ಮನಿಗೂ ನನಗೂ ಈ ಘಟನೆ ಈಗಲೂ ನಗು ತರಿಸುತ್ತದೆ. ಯಾರೋ ಮಾಡಿದ ತಪ್ಪನ್ನು ಅಮ್ಮಂದಿರೊಂದಿಗೆ ನಾವು ಹೇಳುವಾಗ ನಮ್ಮಲ್ಲಿ ಸಿಟ್ಟಾಗುತ್ತಿದ್ದ ಅಮ್ಮಂದಿರಿಂದ ಅದು ತಪ್ಪೆಂದು, ಅದನ್ನು ನಾವು ಕೂಡ ಮಾಡಬಾರದು ಎನ್ನುವ ಪಾಠವಿತ್ತು.

ಕೇವಲ ಇಂತಹ ಪದ ಬಳಕೆಗೆ ಹೆದರುತ್ತಿದ್ದ ಕಾಲವು ಯಾವತ್ತೋ ಬದಲಾಯಿತು. ಕಪ್ಪು ಬಿಳುಪಿನ ಕಾಲದಲ್ಲಿ ಯಾವುದು ಕಪ್ಪು ಯಾವುದು ಬಿಳಿ, ಯಾವುದು ಸರಿ ಯಾವುದು ತಪ್ಪು ಎಂಬುವುದನ್ನು ತಿಳಿಯುವುದರ ಜತೆಗೆ ಅನುಸರಣೆಯೂ ಇತ್ತು. ಬಣ್ಣದ ಲೋಕವು ಗರಿ ಬಿಚ್ಚಿದಾಗ ಬಣ್ಣದ ಟಿವಿಯಲ್ಲಿ ಚಾನಲ್ ಗಳ ಸಂಖ್ಯೆಯೂ ಏರಿದಾಗ, ಪಾಶ್ಚಾತ್ಯ ಸಂಸ್ಕೃತಿಯು ನಮ್ಮಲ್ಲೂ ಲಗ್ಗೆ ಇಟ್ಟಾಗ ,ಇಂಟರ್ನೆಟ್ ನಮ್ಮ ಕೈಯಲ್ಲೇ ಸಿಕ್ಕಾಗ, ಮಕ್ಕಳಿಗೆ ಎಲ್ಲಾ ಕಡೆಯೂ ಸಲುಗೆಯ ಸ್ವಾತಂತ್ರ್ಯವು ಸಿಕ್ಕಿತು.

ಕಾಲ ಎಷ್ಟೇ ಬದಲಾದರೂ, ಉನ್ನತಿಯ ಉತ್ತುಂಗಕ್ಕೇರಿದ್ದರೂ ಇಸ್ಲಾಂ ಧರ್ಮವು ಅದರ ಚೌಕಟ್ಟಿನೊಳಗೆ ಜೀವಿಸಲು ಕಲಿಸುತ್ತದೆ. ವೇಷಭೂಷಣಗಳು ಬದಲಾದರೂ ಹೆಣ್ಣಿಗೆ ಹಿಜಾಬನ್ನು ಕಡ್ಡಾಯಗೊಳಿಸಿದೆ. ಹೆಣ್ಣು ಮತ್ತು ಗಂಡಿನ ಸಲುಗೆಯನ್ನು ಸ್ವಚ್ಛಂದತೆ ಯನ್ನು ಅದು ಖಂಡಿತವಾಗಿಯೂ ಅನುಮತಿಸುವುದಿಲ್ಲ. ಹಾಗಂತ ಪ್ರೀತಿ ಪ್ರೇಮವನ್ನು ಇಸ್ಲಾಂ ನಿಷೇಧಿಸುವುದಿಲ್ಲ. ಗಂಡು ಹೆಣ್ಣಿನ ಪ್ರೀತಿ ಪ್ರೇಮಕ್ಕೆ ,ಅನುರಾಗ ಅನುಕಂಪ ಮತ್ತು ಪರಸ್ಪರ ಅರ್ಥೈಸಿಕೊಂಡು ಬಾಳುವ ಜೀವನಕ್ಕೆ ಅದು ‘ಮದುವೆ’ ಎಂಬ ಸುಂದರ ಒಪ್ಪಂದವನ್ನು ನೀಡಿದೆ. ಪರಸ್ಪರ ಇಷ್ಟ ಅನಿಷ್ಟವನ್ನು, ಕುಂದುಕೊರತೆಗಳನ್ನು, ರಹಸ್ಯವನ್ನು ,ನೋವು ನಲಿವನ್ನು ಹಂಚಿಕೊಳ್ಳುವ ಪತಿ-ಪತ್ನಿ ಎಂಬ ಸುಂದರ ಜೋಡಿ ಯನ್ನು ಅವರು ಪರಸ್ಪರ ಉಡುಪಾಗಿರುವರು ಎಂದು ಪವಿತ್ರ ಕುರ್ ಆನ್ ಹೇಳುತ್ತದೆ.

ಪ್ರೀತಿ ಪ್ರೇಮಕ್ಕೆ ದಿನವಿಲ್ಲ, ಘಳಿಗೆ ಇಲ್ಲ ಪರಸ್ಪರ ಅರ್ಥೈಸಿಕೊಂಡು ಇತಿಮಿತಿಯೊಳಗೆ ಜೀವಿಸುವ ಸಂತೋಷದ ದಿನ ಗಳೆಲ್ಲವೂ ಪ್ರೇಮಿಗಳ ದಿನವಾಗಿದೆ. ಕಚೇರಿಯಲ್ಲಿ ಎಷ್ಟೇ ಕೆಲಸದ ಒತ್ತಡವಿದ್ದರೂ ಸುಸ್ತಾಗಿ ಮನೆಗೆ ಬಂದಾಗ ಮಕ್ಕಳು ಅಪ್ಪ ಎಂದು ಓಡಿ ಬಂದು ತಬ್ಬಿಕೊಳ್ಳುವ ಮುತ್ತಿಕ್ಕುವ, ಮಕ್ಕಳ ಆಟವನ್ನು ,ಕ್ಷಣದಲ್ಲಿ ಮರೆತುಬಿಡುವ ಸಣ್ಣ ಜಗಳವನ್ನು ನೋಡುವ, ಸುಸ್ತಾಗಿ ಸೋಫಾದ ಮೇಲೆ ಒರಗಿ ಕುಳಿತಾಗ, ಚಹಾ ತಿಂಡಿಯನ್ನು ತಂದು ತನ್ನ ಬಳಿ ಬಂದು ಕುಳಿತು ತಲೆಕೂದಲನ್ನು ನೇವರಿಸುತ್ತಾ ಮುದವನ್ನು ನೀಡುವ ಪತ್ನಿಯ ಆರೈಕೆಯ ದಿನವೆಲ್ಲವೂ ಪ್ರೇಮಿಗಳ ದಿನವೇ ಆಗಿದೆ. ಇತಿಮಿತಿಯೊಳಗೆ ಸುಂದರ ಸಂಸಾರವನ್ನು ಸಾಗಿಸಲು ಪತಿಯೊಂದಿಗೆ ಕೈಜೋಡಿಸುವ ಪತ್ನಿಯ ಪ್ರೀತಿಯು ಸದಾ ಜೊತೆಗಿದ್ದರೆ ಎಲ್ಲ ದಿನವೂ ಪ್ರೀತಿಯ ಸುದಿನ ವಾಗಿರುವುದು.