ಲಕ್ನೋ, ಡಿ.27: ಪೌರತ್ವ ಕಾನೂನು ತಿದ್ದುಪಡಿಯ ವಿರುದ್ಧ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಯ ನಷ್ಟ ಪರಿಹಾರವಾಗಿ ಬುಲಂದ್ ಶಹರ್ ನ ಮುಸ್ಲಿಮರು ಉತ್ತರಪ್ರದೇಶ ಸರಕಾರಕ್ಕೆ ಆರು ಕಾಲು ಲಕ್ಷ ರೂಪಾಯಿ ನೀಡಿದರು. ಶುಕ್ರವಾರ ಜುಮುಅದ ಬಳಿಕ ಬುಲಂದ್ ಶಹರ್ ನ ಮುಸ್ಲಿಮ್ ಪ್ರತಿನಿಧಿಗಳು 6,27,507 ರೂಪಾಯಿಯ ಡಿಡಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದರ್ ಕುಮಾರ್ ಮತ್ತು ಉನ್ನತ ಪೊಲೀಸ್ ಸೂಪರಿಡೆಂಟ್ ಸಂತೋಷ್ ಕುಮಾರ್ ಗೆ ಹಸ್ತಾಂತರಿಸಿದರು. ಜುಮುಅ ನಮಾಝ್ ಬಳಿಕ ಅಹಿತಕರ ಘಟನೆಗಳು ನಡೆದಿದ್ದವು. ಸರಕಾರಿ ವಾಹನ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.
ಬುಲಂದ್ ಶಹರಿನ ಮುಸ್ಲಿಂ ಸಮುದಾಯ ಉತ್ತಮ ಮಾದರಿಯನ್ನು ತೋರಿಸಿದೆ. ತೆರಿಗೆ ಹಣದಿಂದ ಸಾರ್ವಜನಿಕ ಆಸ್ತಿ ಮಾಡಲಾಗುತ್ತದೆ. ಅದು ನಾಶವಾಗುವುದೆಂದರೆ ಸ್ವಂತ ಆಸ್ತಿಯನ್ನು ನಾಶಪಡಿಸಿದ್ದಕ್ಕೆ ಸಮ ಎಂದು ಅವರು ಅರಿತುಕೊಂಡರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದರ್ ಕುಮಾರ್ ಹೇಳಿದರು. ಕಳೆದ ವಾರ ನಡೆದ ಬುಲಂದ್ ಶಹರ್ ನ ಪ್ರತಿಭಟನೆಯು ಹಿಂಸಾತ್ಮಕವಾಗಿತ್ತು. ಸರಕಾರಿ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಲವು ವಾಹನಗಳಿಗೆ ಹಾನಿಯಾಗಿವೆ. ಎಂಟು ನೂರಕ್ಕೂ ಹೆಚ್ಚು ಮಂದಿಯ ಮೇಲೆ ಪೊಲೀಸರು ಕೇಸು ಹಾಕಿದ್ದಾರೆ. ಇದೇ ವೇಳೆ ಪೊಲೀಸರೇ ಹಲವಾರು ವಾಹನಗಳು ಮತ್ತಿತರ ವಸ್ತುಗಳನ್ನು ನಾಶಪಡಿಸುವ ಸಿಸಿಟಿವಿ ದೃಶ್ಯಗಳು ಹೊರಬಂದಿವೆ.
source: https://www.madhyamam.com/india/muslims-bulandshahr-pay-rs-6-lakh-damage-public-property-during-anti-caa-protests-india-news












