ನಿವೃತ್ತರಾಗಲಿರುವ ನ್ಯಾಯಾಧೀಶರೇ ಮುಂದುವರಿಯಬೇಕು; ಮಾಲೆಗಾಂವ್ ಸ್ಫೋಟದ ಬಲಿಪಶುಗಳ ಪರ ಅರ್ಜಿ

0
658

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 14: ಭೋಪಾಲ್ ಸಂಸದೆ ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಯಾಗಿರುವ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಎನ್‍ಐಎ ಕೋರ್ಟಿನ ನ್ಯಾಯಾಧೀಶ ವಿನೋದ್ ಪದೋಲ್‍ಕರ್ ರ ನಿವೃತ್ತಿ ಸಮಯವನ್ನು ವಿಸ್ತರಿಸಬೇಕೆಂದು ಮುಂಬೈ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸ್ಫೋಟದಲ್ಲಿ ಮೃತಪಟ್ಟಿದ್ದ ಸೈಯದ್ ಅಝರ್ ತಂದೆ ನಿಸಾರ್ ಅಹ್ಮದ್ ಬಾಂಬೆ ಹೈಕೋರ್ಟಿನಲ್ಲಿ ಚೀಫ್ ಜಸ್ಟಿಸ್ ಮುಂದೆ ಅರ್ಜಿ ಸಲ್ಲಿಸಿದರು. ಫೆ. 28ಕ್ಕೆ ಜಡ್ಜ್ ಪದೊಲ್ಕರ್ ನಿವೃತ್ತರಾಗುವರು.
ಆರೋಪಿಗಳು ಮತ್ತು ಎನ್‍ಐಎಯ ತಡಮಾಡುವ ತಂತ್ರಕ್ಕೆ ಬಗ್ಗದೆ ಕೇಸು ನಿರ್ವಹಿಸುತ್ತಿರುವ ನ್ಯಾಯಾಧೀಶರಲ್ಲಿ ಸ್ಫೋಟದ ಬಲಿಪಶುಗಳ ಕುಟುಂಬಿಕರಿಗೆ ವಿಶ್ವಾಸವಿದೆ. ಆದ್ದರಿಂದ ವಿಚಾರಣೆ ಮುಗಿದು ತೀರ್ಪು ನೀಡುವವರೆಗೆ ಅವರನ್ನೇ ಮುಂದುವರಿಸಬೇಕೆಂದು ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ಮತ್ತು ಕೇಂದ್ರ ಗೃಹ ಸಚಿವರಿಗೂ ಅರ್ಜಿಯ ಪ್ರತಿಯನ್ನು ಕಳುಹಿಸಿಕೊಡಲಾಗಿದೆ.

ಸ್ಫೋಟ ನಡೆದು ಹತ್ತು ವರ್ಷದ ಬಳಿಕ ವಿಚಾರಣೆ ಆರಂಭವಾಗಿದೆ ಎಂದು ನಿಸಾರ್ ಅಹ್ಮದ್ ಹೇಳಿದ್ದಾರೆ. ಸುಪ್ರೀಂಕೋರ್ಟಿನ ಮಧ್ಯಪ್ರವೇಶದಿಂದಾಗಿ 2015ರಲ್ಲಿ ಎಸ್‍ಡಿ ಕೊಕ್ಲೆಯವರನ್ನು ಮಾಲೆಗಾಂವ್ ಸ್ಫೋಟ ವಿಚಾರಣೆಗೆ ನಿಯೋಜಿಸಿದ್ದರೂ 2018ರಲ್ಲಿ ಅವರನ್ನು ವರ್ಗಾಯಿಸಲಾಗಿತ್ತು. 2018ರಲ್ಲಿ ವಿನೋದ್ ಪದೊಲ್ಕರ್ ಗೆ ವಿಚಾರಣೆ ಹೊಣೆ ವಹಿಸಿಕೊಡಲಾಯಿತು. ಪ್ರಜ್ಞಾಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಮುಂತಾದ ಆರೋಪಿಗಳ ಒತ್ತಡ ತಂತ್ರದ ಬಗ್ಗೆ ಆರೋಪಪಟ್ಟಿ ಹೊರಿಸಲಾಗಿತ್ತು. 140 ಸಾಕ್ಷಿಗಳ ಸಾಕ್ಷ್ಯ ಪಡೆದುಕೊಳ್ಳಲಾಗಿತ್ತು. ದಿವಂಗತ ಹೇಮಂತ್ ಕರ್ಕರೆಯ ನೇತೃತ್ವದ ಮಹಾರಾಷ್ಟ್ರ ಎಟಿಎಸ್ ಸಲ್ಲಿಸಿರುವ ಆರೋಪ ಪಟ್ಟಿಯನ್ನು ತಿರಸ್ಕರಿಸಿ ಪ್ರಜ್ಞಾ ಸಿಂಗ್‍ರನ್ನು ಆರೋಪಿ ಸ್ಥಾನದಿಂದ ಕೈಬಿಟ್ಟು ನಂತರ ಎನ್‍ಐಎ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಎಟಿಎಸ್ ವಾದವನ್ನು ಒಂದೇಟಿಗೆ ತಿರಸ್ಕರಿಸಲಿಲ್ಲ. ಪ್ರಜ್ಞಾಸಿಂಗ್‍ರನ್ನು ಕೇಸಿನಿಂದ ಹೊರಗಿಡಲು ಜಡ್ಜ್ ಪದಾಲ್ಕರ್ ಸಿದ್ಧರಾಗಿರಲಿಲ್ಲ. ವಿಚಾರಣೆಯನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ನಿಷೇಧಿಸಬೇಕೆಂಬ ಎನ್‍ಐಎ ಬೇಡಿಕೆಯನ್ನೂ ಕೂಡ ಪದಾಲ್ಕರ್ ತಿರಸ್ಕರಿಸಿದ್ದರು.