ದೆಹಲಿ ನಿಜಾಮುದ್ದೀನ್ ಪ್ರಕರಣ: ದಿಢೀರ್ ಆಗಿ ರೈಲು, ವಾಹನ ಸಂಚಾರ ರದ್ದುಗೊಳಿಸಿರುವುದು ಸಮಸ್ಯೆಗೆ ಕಾರಣ, ನಾವು ಕಾನೂನು ಉಲ್ಲಂಘಿಸಿಲ್ಲ: ತಬ್ ಲೀಗಿ ಜಮಾಅತ್ ನಿಂದ ಸ್ಪಷ್ಟೀಕರಣ

0
2164

ಸನ್ಮಾರ್ಗ ವಾರ್ತೆ

ನವದೆಹಲಿ; ಮಾರ್ಚ್ ದೆಹಲಿಯ ನಿಜಾಮುದ್ದೀನ್ ಸದ್ಯ ಸುದ್ದಿಯ ಕೇಂದ್ರವಾಗಿದ್ದು, ಅಲ್ಲಿನ ಚಟುವಟಿಕೆ, ಸುದ್ದಿಗಳ ಬಗ್ಗೆ ತಬ್ ಲೀಗಿ ಜಮಾಅತ್ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು, ಅದು ಹೀಗಿದೆ.

ಮರ್ಕಜ್ ನಿಜಾಮುದ್ದೀನ್ ಸುಮಾರು 100 ವರ್ಷಗಳ ಕಾಲ ತಬ್ ಲೀಗಿ ಜಮಾಅತ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಾಗಿದೆ. ಪ್ರಪಂಚದಾದ್ಯಂತದ ಸಂದರ್ಶಕರು / ಅತಿಥಿಗಳು / ಆರಾಧಕರು ಇಲ್ಲಿಗೆ ಬರುತ್ತಾರೆ ಮತ್ತು 3-5 ದಿನಗಳಿಗಿಂತ ಹೆಚ್ಚು ಕಾಲ ಇಲ್ಲಿ ಕಾರ್ಯಕ್ರಮ ನಡೆಯುವುದಿಲ್ಲ. ದೂರದ ಸ್ಥಳಗಳಿಂದ ಭೇಟಿ ನೀಡುವವರಿಗೆ ಅನುಕೂಲವಾಗುವಂತೆ ಎಲ್ಲಾ ಕಾರ್ಯಕ್ರಮಗಳನ್ನು ಒಂದು ವರ್ಷ ಮುಂಚಿತವಾಗಿ ನಿರ್ಧರಿಸಲಾಗುತ್ತದೆ.

ಮಾರ್ಚ್ 22 ರ ಜನತಾ ಕರ್ಫ್ಯೂವನ್ನು ಪ್ರಧಾನಿ ಘೋಷಿಸಿದಾಗ, ಮರ್ಕಜ್ ನಿಜಾಮುದ್ದೀನ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು, ಆದರೆ ಮಾರ್ಚ್ 22 ರಂದು ದೇಶಾದ್ಯಂತ ರೈಲು ಸೇವೆಗಳನ್ನು ಹಠಾತ್ತನೆ ರದ್ದುಗೊಳಿಸಿದ್ದರಿಂದ, ರೈಲು ಮೂಲಕ ತೆರಳಬೇಕಾಗಿದ್ದ ಸಂದರ್ಶಕರ ಒಂದು ದೊಡ್ಡ ಗುಂಪು ಮರ್ಕಜ್ ಆವರಣದಲ್ಲಿ ಸಿಲುಕಿಕೊಂಡಿದೆ.

ದೆಹಲಿಯ ಮುಖ್ಯಮಂತ್ರಿಯವರು ಮಾರ್ಚ್ 23 ರಂದು ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 31 ರವರೆಗೆ ದೆಹಲಿಯಲ್ಲಿ ಲಾಕ್ ಡೌನ್ ಮಾಡುವುದಾಗಿ ಘೋಷಿಸಿದರು, ಇದರಿಂದಾಗಿ ಈ ಗುಂಪು ತಮ್ಮ ಮನೆಗೆ ಹಿಂದಿರುಗಲು ರಸ್ತೆ ಸಾರಿಗೆಯ ಅವಕಾಶಗಳೂ ಇಲ್ಲದಾದುವು.

ಮಾರ್ಚ್ 23 ರ ಸಂಜೆ ಇದ್ದಕ್ಕಿದ್ದಂತೆ, ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಲಾಯಿತು. ಜನರು ಎಲ್ಲಿರುವರೋ ಅಲ್ಲೇ ಉಳಿಯುವಂತೆ ಆದೇಶಿಸಲಾಯಿತು. ಅಂತಹ ಸಂದರ್ಭದಲ್ಲಿ ಮರ್ಕಜ್ ನಿಜಾಮುದ್ದೀನ್‌ಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಆದ್ದರಿಂದ ಸಿಕ್ಕಿಬಿದ್ದ ಸಂದರ್ಶಕರಿಗೆ ಉಳಕೊಳ್ಳಲು ಅವಕಾಶ ನೀಡಲಾಯಿತು.
ಮಾರ್ಚ್ 24ರಂದು ಇದ್ದಕ್ಕಿದ್ದಂತೆ ಮರ್ಕಜ್ ಆವರಣವನ್ನು ಮುಚ್ಚುವಂತೆ ಹೇಳಲಾಯಿತು. ಇದರಿಂದಾಗಿ ವಿವಿಧ ರಾಜ್ಯಗಳಿಗೆ ಸೇರಿದ ಸುಮಾರು 1000 ಸಂದರ್ಶಕರು ಮರ್ಕಜ್ ನಲ್ಲಿ ಉಳಿದಿದ್ದಾರೆ ಎಂದು ಮಾರ್ಚ್ 24 ರಂದು ಹೇಳಿದ್ದೇವೆ.

ಮಾರ್ಚ್ 25ರಂದು, ತಹಶೀಲ್ದಾರ್ ರು ವೈದ್ಯಕೀಯ ತಂಡದೊಂದಿಗೆ ಮರ್ಕಜ್ ಗೆ ಭೇಟಿ ನೀಡಿದರು. ಅವರಿಗೆ ಸಂಪೂರ್ಣ ಸಹಕಾರವನ್ನು ನೀಡಲಾಯಿತು. ಅವರು ಅನೇಕರನ್ನು ಪರೀಕ್ಷಿಸಿದರು.

ಮಾರ್ಚ್ 26 ರಂದು ವೈದ್ಯರು ಮರ್ಕಜ್ ನಿಜಾಮುದ್ದೀನ್‌ಗೆ ಭೇಟಿ ನೀಡಿದರು ಮತ್ತು ಮುಂದಿನ ಸಭೆಗೆ ನಮ್ಮನ್ನು ಕರೆದರು. ಮರುದಿನ, ಮಾರ್ಚ್ 27 ರಂದು ಆರು ಜನರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಯಿತು.

ಮಾರ್ಚ್ 28ರಂದು ವೈದ್ಯರು ಮತ್ತು ಡಬ್ಲ್ಯುಎಚ್‌ಒ ತಂಡವು ಮರ್ಕಜ್‌ಗೆ ಭೇಟಿ ನೀಡಿ 33 ಜನರನ್ನು ವೈದ್ಯಕೀಯ ತಪಾಸಣೆಗಾಗಿ ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಶ್ಚರ್ಯಕರವೆಂಬಂತೆ ಅದೇ ದಿನ ಮತ್ತೊಂದು ನೋಟಿಸ್ ನೀಡಲಾಗಿದೆ. ಈ ಬಾರಿ ಕಾನೂನು ಕ್ರಮಗಳ ಎಚ್ಚರಿಕೆ ನೀಡಲಾಗಿದೆ. ನಾವು ಇಷ್ಟೆಲ್ಲಾ ಸಹಕರಿಸಿದ ಬಳಿಕವೂ ಹೀಗೆ ನಡೆದಿದೆ.

ಮಾರ್ಚ್ 30ರಂದು, ಕೊರೋನಾ ಪೀಡಿತ ಜನರು ಮರ್ಕಜ್ ನಲ್ಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಯೊಂದು ಹರಡಿತು. ಅದೇ ಕಾರಣದಿಂದಾಗಿ ಕೆಲವು ಸಾವುಗಳು ಸಂಭವಿಸಿವೆ ಎಂದು ಪ್ರಸಾರವಾಗುತ್ತಿದೆ. ಅನಿರೀಕ್ಷಿತವಾಗಿ, ಎಎನ್‌ಐ ವರದಿ ಮಾಡಿದಂತೆ, ದೆಹಲಿಯ ಮುಖ್ಯಮಂತ್ರಿ ಅವರು ಮರ್ಕಜ್ ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿಯವರು ಈವರೆಗಿನ ಬೆಳವಣಿಗೆಗಳ ಬಗ್ಗೆ ಸತ್ಯ-ಪರಿಶೀಲನೆ ಮಾಡಬಹುದಿತ್ತು, ಉಳಿದಿರುವ ಗುಂಪನ್ನು ಅವರವರ ಊರಿಗೆ ಕಳುಹಿಸಲು ನಡೆಸಲಾದ ಶ್ರಮಗಳು, ಅಧಿಕಾರಿಗಳ ಭೇಟಿ, ಮಾತುಕತೆ, ವೈದ್ಯಕೀಯ ತಪಾಸಣೆ, ಇಲ್ಲಿ ಉಳಿದುಕೊಳ್ಳಲು ಕಾರಣವಾದ ಬಗೆ ಇತ್ಯಾದಿಗಳನ್ನು ಅವರಿಗೆ ತಿಳಿಸಬಹುದಿತ್ತು. ಈ ಇಡೀ ಬೆಳವಣಿಗೆಯಲ್ಲಿ , ಮರ್ಕಜ್ ನಿಜಾಮುದ್ದೀನ್ ಯಾವುದೇ ಕಾನೂನಿನ ನಿಯಮವನ್ನು ಉಲ್ಲಂಘಿಸಿಲ್ಲ, ಮತ್ತು ವಿವಿಧ ರಾಜ್ಯಗಳಿಂದ ದೆಹಲಿಗೆ ಬಂದ ಸಂದರ್ಶಕರ ಬಗ್ಗೆ ಯಾವಾಗಲೂ ಸಹಾನುಭೂತಿಯಿಂದ ವರ್ತಿಸಿದೆ.ಇವರನ್ನು ಗುಂಪುಗೂಡಿಸುವ ಮೂಲಕ ಅಥವಾ ಬೀದಿಯಲ್ಲಿ ತಿರುಗಾಡುವ ಮೂಲಕ ವೈದ್ಯಕೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲು ಅವರಿಗೆ ಅವಕಾಶ ನೀಡಲಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ