
ಸನ್ಮಾರ್ಗ ವಾರ್ತೆ
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿರುವ ಕರ್ನಾಟಕ ಸರಕಾರದ ಕ್ರಮವನ್ನು ಪ್ರಶ್ನಿಸಿ ಕಾಸರಗೋಡಿನ ಸಂಸದ ರಾಜಮೋಹನ್ ಉನ್ನತಿನ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ದಾಖಲಿಸಿದ್ದಾರೆ. ಈ ಗಾಡಿಯನ್ನು ತೆರೆಯ ಕಾರಣ ಎರಡು ದಿನಗಳ ಹಿಂದಷ್ಟೇ ಓರ್ವ ಮಹಿಳೆ ಚಿಕಿತ್ಸೆ ದೊರೆಯಲಾರದೆ ಸಾವನ್ನಪ್ಪಿದ್ದರು.
ಕಾಸರಗೋಡಿನ ಜನತೆ ತಮ್ಮ ವೈದ್ಯಕೀಯ ಸವಲತ್ತುಗಳಿಗೆ ಹಲವಾರು ವರ್ಷಗಳಿಂದ ಮಂಗಳೂರನ್ನೇ ಅವಲಂಬಿಸಿದ್ದಾರೆ. ಗಡಿಯನ್ನು ಮುಚ್ಚಿರುವ ಕ್ರಮ ಸಂವಿಧಾನ ವಿರೋಧಿಯಾಗಿದ್ದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಿಟ್ ಪಿಟಿಷನ್ ನಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲಪಾಡಿಯ ರಸ್ತೆಯನ್ನು ಮುಚ್ಚಿರುವುದರಿಂದ ಗಡಿಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಜನರಿಗೆ ಅನನುಕೂಲವಾಗಿದ್ದು ಆಹಾರ; ಆರೋಗ್ಯ ಹಾಗೂ ವೈದ್ಯಕೀಯ ಸಹಕಾರದ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂಬುದಾಗಿ ರಿಟ್ ಅಜಿ೯ಯಲ್ಲಿ ಹೇಳಲಾಗಿದೆ.
ಎನ್ ಹೆಚ್ 66 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಟ್ಟಿದ್ದು ಕರ್ನಾಟಕ ರಾಜ್ಯ ಸರಕಾರಕ್ಕೆ ಸದರಿ ಹೆದ್ದಾರಿಯನ್ನು ಮುಚ್ಚುವ ಅಧಿಕಾರವಿಲ್ಲ. ಕರ್ನಾಟಕ ಸರಕಾರದ ಕ್ರಮವು ಸಂವಿಧಾನದ ವಿಧಿ 19(1) (d)ನಿಯಮ ಮತ್ತು 21 ರ ಉಲ್ಲಂಘನೆಯಾಗಿದೆ. ಹೆದ್ದಾರಿಯನ್ನು ಮುಚ್ಚಿರುವುದರಿಂದ ಕ್ಲಪ್ತ ಕಾಲದಲ್ಲಿ ವೈದ್ಯಕೀಯ ನೆರವು ದೊರಕದೆ ಇಬ್ಬರು ವ್ಯಕ್ತಿಗಳು ಮೃತರಾಗಿದ್ದಾರೆ.
ನಿರ್ದಿಷ್ಟವಾಗಿ ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿರುವುದರಿ೦ದ ಕಾಸರಗೋಡು ಜಿಲ್ಲೆಗೆ ಆಹಾರ ಮತ್ತು ಇತರ ಅವಶ್ಯಕ ವಸ್ತುಗಳ ಸರಬರಾಜು ವ್ಯತ್ಯಯವಾಗಿದ್ದು ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಹಾಗೂ ಕೇಂದ್ರ ಸರಕಾರದ ನಿರ್ದೇಶನಗಳಿಗೆ ತದ್ವಿರುದ್ಧವಾಗಿದೆ. ಆಹಾರದ ಮತ್ತು ಆರೋಗ್ಯದ ಹಕ್ಕು ಮೂಲಭೂತ ಹಕ್ಕು ಆಗಿರುತ್ತದೆ ಎಂದು ರಿಟ್ ನಲ್ಲಿ ತಿಳಿಸಲಾಗಿದೆ.
ಆದುದರಿಂದ ತಲಪಾಡಿಯಲ್ಲಿ ಮುಚ್ಚಿರುವ ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ತೆರೆಯುವಂತೆ ಕರ್ನಾಟಕ ರಾಜ್ಯ ಸರಕಾರಕ್ಕೆ ನಿದೇ೯ಶಿಸಬೇಕೆಂದು ರಿಟ್ ಅರ್ಜಿಯಲ್ಲಿ ಕೇಳಿಕೊಳ್ಳಲಾಗಿದೆ ಹಾಗೂ ಗಡಿಯನ್ನು ಬಂದ್ ಮಾಡಿದವರ ವಿರುದ್ಧ FIR ದಾಖಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೂಡ ಹೇಳಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.











