ದುಬಾಯಿಯಿಂದ ಕೊರೋನಾ ತಂದಿರೋದೇ ನೀವು ಎನ್ನುತ್ತಾ ಹೀನಾಯವಾಗಿ ನಿಂದಿಸಿದರು: ಬೆಳ್ತಂಗಡಿಯ ವ್ಯಕ್ತಿಯಿಂದ ಎಸ್ ಪಿಗೆ ದೂರು; ಪೊಲೀಸರಿಂದ ಪ್ರತಿ ದೂರು

0
2065

ಸನ್ಮಾರ್ಗ ವಾರ್ತೆ

ಕೊರೋನಾದ ನೆಪದಲ್ಲಿ ಪೊಲೀಸರು ಯದ್ವಾ ತದ್ವಾ ಲಾಠಿ ಬೀಸುತ್ತಿರುವುದು ಮತ್ತು ಜನರೊಂದಿಗೆ ಅಮಾನವೀಯವಾಗಿ ನಡಕೊಳ್ಳುತ್ತಿರುವ ಬಗ್ಗೆ ಎಲ್ಲೆಡೆಯಿಂದಲೂ ದೂರು ಕೇಳಿಬರುತ್ತಿದ್ದು, ಬೆಳ್ತಂಗಡಿಯಿಂದ ಪ್ರಕರಣವೊಂದು ವರದಿಯಾಗಿದೆ. ತನ್ನನ್ನು ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿರುವುದಾಗಿ ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮತ್ತು ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳದ ಹಂಝತ್ ಅಲಿ ಎಂಬವರು ದೂರು ಸಲ್ಲಿಸಿದ್ದಾರೆ.

ತಾನು ಮಾರ್ಚ್ರಂ 13ರಂದು ಯು ಎ ಇ ಯಿಂದ ಅಣ್ಣನ ನಿಧನದ ಕಾರಣವಾಗಿ ಊರಿಗೆ ಬಂದಿದ್ದೆ. ನಾನಲ್ಲದೆ, ನನ್ನ ತಮ್ಮ, ನನ್ನ ತಂಗಿ, ನನ್ನ ಅಣ್ಣ ಎಲ್ಲರೂ ದುಬೈಯಲ್ಲೇ ಇದ್ದೆವು. ನನ್ನನ್ನು ಬಿಟ್ಟು ಉಳಿದವರೆಲ್ಲ ಮಾರ್ಚ್ 12 ರಂದೇ ಊರಿಗೆ ಬಂದಿದ್ದರು. ಅಂದರೆ, ಮಾರ್ಚ್ 30ಕ್ಕೆ ನಾನು ಬಂದು ಹದಿನೆಂಟು ದಿನಗಳಾಗಿವೆ. ನನ್ನಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಇದರ ಮಧ್ಯೆ ಈಗಾಗಲೇ ನರ್ಸ್ ಮತ್ತು ಪೊಲೀಸ್ ಒಬ್ಬರು ನಾಲ್ಕು ಬಾರಿ ನಮ್ಮ ಆರೋಗ್ಯ ವಿಚಾರಿಸಿ ಮನೆಗೆ ಬಂದಿದ್ದಾರೆ. ನಾವು ಜವಾಬ್ದಾರಿಯುತವಾಗಿ ಸ್ಪಂದಿಸಿದ್ದೇವೆ ಎಂದು ಅವರು ಸನ್ಮಾರ್ಗದೊಂದಿಗೆ ಮಾತಾಡುತ್ತಾ ವಿವರಿಸಿದ್ದಾರೆ.

ನನಗೆ ಮತ್ತು ದುಬೈಯಿಂದ ಬಂದ ನನ್ನ ಕುಟುಂಬದ ಇತರರಿಗೂ ಯಾವುದೇ ಸೀಲ್ ಹಾಕಿರಲಿಲ್ಲವಾದರೂ ಸ್ವ ಇಚ್ಚೆಯಿಂದ ಎಲ್ಲೂ ನಾವು ಹೊರಹೋಗಿರಲಿಲ್ಲ. ಮಾರ್ಚ್ 30ರಂದು ಇಬ್ಬರು ಪೋಲೀಸರು (ಓರ್ವ ಪುರುಷ, ಓರ್ವ ಮಹಿಳೆ), ಓರ್ವ ಮಹಿಳಾ ವೈದ್ಯಕೀಯ ಸೇವಕಿ ಹಾಗೂ ಓರ್ವ ವಾಹನ ಚಾಲಕ ಮನೆಗೆ ಬಂದು ಹಂಝತ್ ಅಲಿ ಯಾರು ಎಂದು ಕೇಳಿದರು. ಮನೆಯಲ್ಲಿ ನೆಲ ಒರೆಸುತಿದ್ದ ನಾನು ಕೈ ಎತ್ತಿ ನಾನೇ ಹಂಝತ್ ಅಲಿ ಎಂದು ಹೇಳಿದಾಗ ಹೊರಬರುವಂತೆ ವೈದ್ಯಕೀಯ ಸಿಬಂದಿಯು ಕೇಳಿಕೊಂಡರು. ತಕ್ಷಣ ನಾನು ತಮ್ಮನನ್ನು ಕರೆದು ಮಾಸ್ಕ್ ಕೇಳಿ ಪಡೆದು ಅದನ್ನು ಧರಿಸಿಕೊಂಡು ಅಂತರವಿಟ್ಟೇ ಸ್ಪಂದಿಸಲು ಮುಂದಾದದ್ದೇ ತಡ ಗಂಗಾಧರ್ ಎನ್ನುವ ಪೋಲೀಸ್ ಪೇದೆ ಏಕಾಏಕಿ ಹೊಡೆಯಲು ಬಂದು ಡಿಸ್ಟೆನ್ಸ್ ಮೈಂಟೇನ್ ಮಾಡೋ ನಾಯಿ ಎಂದು ಕೀಳಾಗಿ ವ್ಯವಹರಿಸಿದ್ದಾರೆ. ತಕ್ಷಣ ನಾನು ಸಾವಧಾನವಾಗಿ ಮಾತನಾಡಿ ಎಂದಾಗ ನಿನಗೆ ಸಾವಧಾನ ಬೇರೆ ಕೇಡು, ದುಬಾಯಿಂದ ಕೊರೋನ ತರೋದೇ ನೀವು ಎಂದು ಹೇಳಿ ನಿಂದಿಸಿದರು. ಆ ಬಳಿಕ ಮಾತಿನ ಚಕಮಕಿ ನಡೆಯಿತು. ನನ್ನ ತಮ್ಮನೂ ಮಾತಾಡಿದ. ಹೀಗೆ ಸುಮಾರು ಹತ್ತು ನಿಮಿಷಗಳ ಕಾಲ ಮಾತಿನ ಬಳಿಕ ಆರೋಗ್ಯ ವಿಚಾರಿಸಿ ವೈದ್ಯಕೀಯ ಸಿಬಂದಿ ಇಳಿದು ಹೋದರು ಎಂದವರು ಹೇಳಿದ್ದಾರೆ.

ತಕ್ಷಣ ನಾನು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಫೋನಿನಲ್ಲಿ ಮತ್ತು ಬರಹದಲ್ಲಿ ದೂರು ನೀಡಿರುವೆ. ನಾವು ವಿಚಾರಿಸುತ್ತೇವೆ ಮತ್ತು ಓರ್ವ ಪೊಲೀಸರನ್ನು ವಿಚಾರಣೆಗೆ ಕಳುಹಿಸುತ್ತೇವೆ ಎಂದು ಹೇಳಿದರು. ಸಂಜೆ ನಾಲ್ಕು ಗಂಟೆಗೆ ಮಧುಸೂದನ್ ಅನ್ನುವ ಪೊಲೀಸ್ ಮನೆಗೆ ಬಂದು ವಿಚಾರಿಸಿದ್ದಾರೆ. ಅಲ್ಲಿಂದಲೇ ಎಸ್ ಐ ಅವರನ್ನು ಸಂಪರ್ಕಿಸಲು ನನ್ನಲ್ಲಿ ಹೇಳಿದರೂ ಸಂಪರ್ಕ ಸಿಗಲಿಲ್ಲ. ಮತ್ತೆ ಸಂಪರ್ಕ ಮಾಡಿ ಮಾತಾಡಿಸುವೆ ಎಂದು ಹೇಳಿ ಹೋಗಿದ್ದಾರೆ. ಅದೇದಿನ ಮಾರ್ಚ್ 30 ರ ರಾತ್ರಿ ಸುಮಾರು 11 ಗಂಟೆಗೆ ನಮ್ಮ ಮೇಲೆಯೇ ಎಫ್ ಐ ಆರ್ ದಾಖಲಾಗಿರುವುದು ಗೊತ್ತಾಗಿದೆ ಎಂದವರು ಸನ್ಮಾರ್ಗಕ್ಕೆ ತಿಳಿಸಿದ್ದಾರೆ.

ಈಗಾಗಲೇ ಮನೆಯ ಸದಸ್ಯರೊಬ್ಬರನ್ನು ಕಳಕೊಂಡು ಶೋಕದಲ್ಲಿರುವ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವ ತಾಯಿ ಮತ್ತು ಅಜ್ಜಿ ಹಾಗೂ ಮನೆಯಲ್ಲಿರುವ ಮಕ್ಕಳು ಮಹಿಳೆಯರೆಲ್ಲರನ್ನೂ ಗಂಗಾಧರ್ ಅವರು ಭಯಭೀತ ಗೊಳಿಸಿದರು ಎಂದವರು ಹೇಳಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಸ್ ಪಿ ಅವರಲ್ಲಿ ಕೋರಿದ್ದಾರೆ.

ಇದೇವೇಳೆ, ಬೆಳ್ತಂಗಡಿ ಪೊಲೀಸು ಠಾಣಾ ಸಿಬ್ಬಂದಿಗಳಾದ ಗಂಗಾದರ್‌, ಚೈತ್ರ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಎಎನ್‌ಎಂ ಕಮಲರವರೊಂದಿಗೆ ಹಂಝತ್‌ ಅಲಿ ಮತ್ತು ಅವರ ಮನೆಯಲ್ಲಿದ್ದ ಮಸೂದ್ ಆಲಿ, ಬಾತೀಷ್ ಆಲಿ, ಅಕ್ಬರ್ ಅಲಿ ಎಂಬವರು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಗಂಗಾದರ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸು ಠಾಣೆಯಲ್ಲಿ ಅ.ಕ್ರ. 31/ 2020 ಕಲಂ 269, 270, 353 504 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.