ಸನ್ಮಾರ್ಗ ವಾರ್ತೆ
ನವದೆಹಲಿ ಏಪ್ರಿಲ್ 19- ಉತ್ತರಪ್ರದೇಶದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಯೊಂದು ದೈನಿಕ್ ಜಾಗರಣ್ ಪತ್ರಿಕೆಯಲ್ಲಿ ಪ್ರಕಟಿಸಿರುವ ಜಾಹೀರಾತು ವಿವಾದಕ್ಕೆ ಕಾರಣವಾಗಿದ್ದು ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.
ಮುಸ್ಲಿಂ ರೋಗಿಗಳಿಗೆ ಪ್ರವೇಶವಿಲ್ಲ ಎಂದು ಜಾಹೀರಾತಿನಲ್ಲಿ ಹೇಳಿರುವ ವೆಲೆಂಟಿಸ್ ಕ್ಯಾನ್ಸರ್ ಆಸ್ಪತ್ರೆಯು, ನಾವು ಮುಸ್ಲಿಂ ರೋಗಿಗಳನ್ನು ಸ್ವೀಕರಿಸಬೇಕಾದರೆ ರೋಗಿ ಮತ್ತು ಅವರ ಜೊತೆ ಇರುವ ವ್ಯಕ್ತಿಗೆ ಕೊರೋನಾ ಇಲ್ಲ ಅನ್ನುವುದನ್ನು ದೃಢಪಡಿಸುವ ದಾಖಲೆಗಳನ್ನು ಅವರು ಒದಗಿಸಬೇಕು ಎಂದು ಹೇಳಿದೆ. ಈ ಕುರಿತಂತೆ ದ ವೈರ್ https://thewire.in/ ವಿಸ್ತೃತ ವರದಿಯನ್ನು ಪ್ರಕಟಿಸಿದೆ.
ಶುಕ್ರವಾರ ಇಂಥದ್ದೊಂದು ಜಾಹೀರಾತನ್ನು ದೈನಿಕ್ ಜಾಗರಣ್ ಪ್ರಕಟಿಸಿದೆ. ಮುಸ್ಲಿಂ ರೋಗಿಗಳು ಮುಖಗವಸನ್ನು ಬಳಸುವುದಿಲ್ಲ ಮತ್ತು ನೈರ್ಮಲ್ಯವನ್ನು ಕಾಪಾಡುವುದಿಲ್ಲ ಮಾತ್ರವಲ್ಲ, ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಅವರು ಕೆಟ್ಟದಾಗಿ ವರ್ತಿಸುತ್ತಾರೆ ಎಂದು ಅದು ತನ್ನ ಈ ಆದೇಶಕ್ಕೆ ಕಾರಣವನ್ನು ನೀಡಿದೆ.
ಅಂದಹಾಗೆ, ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2019 ಮಾರ್ಚ್ ನಲ್ಲಿ ಬಿಡುಗಡೆಗೊಳಿಸಿದ ನಿಯಮಾವಳಿಗಳಿಗೆ ವಿರುದ್ಧವಾಗಿದ್ದು ಅದರ ಭಾಗ ಎಂಟರ ಪ್ರಕಾರ, ಯಾವುದೇ ರೋಗಿಗೆ ಆತನ ಅಥವಾ ಆಕೆಯ ಧರ್ಮ ಅಥವಾ ಕಾಯಿಲೆಯ ಕಾರಣಕ್ಕಾಗಿ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ.
ಹಾಗೆಯೇ ದೆಹಲಿಯಲ್ಲಿ ನಡೆದ ತಬ್ಲಿಗಿ ಜಮಾಅತ್ ನ ಸಮ್ಮೇಳನದಿಂದಾಗಿ ಕೋರೋನಾ ಸೋಂಕಿತರ ಸಂಖ್ಯೆ ಅನಿರೀಕ್ಷಿತವಾಗಿ ಏರಿದೆ, ಮೀರತ್ ನಿಂದ ತಬ್ಲೀಗ್ ಸಭೆಯಲ್ಲಿ ಭಾಗಿಯಾದ ಹೆಚ್ಚಿನವರು ಕೊರೋನಾ ಸೋಂಕು ಪೀಡಿತರಾಗಿದ್ದಾರೆ ಎಂದು ಕೂಡ ಜಾಹೀರಾತಿನಲ್ಲಿ ಹೇಳಲಾಗಿದೆ. ಆದರೆ ಜಾಹೀರಾತಿನ ಈ ವಿವರಗಳು ಸರಿಯಲ್ಲ ಅನ್ನುವುದನ್ನು ಏಪ್ರಿಲ್ 18ರಂದು ಲಕ್ನೋ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಮಾಹಿತಿಯು ಹೇಳುತ್ತದೆ. ಮೀರತ್ ನಲ್ಲಿ 70 ಮಂದಿಗೆ ಕೋರೋನಾ ಧೃಡಪಟ್ಟಿದ್ದು, ಇವರಲ್ಲಿ 46 ಮಂದಿ ಮಾತ್ರ ತಬ್ಲೀಗಿಗೆ ಸಂಬಂಧಿಸಿದವರಾಗಿದ್ದಾರೆ.
ಅದೇ ವೇಳೆ, ರೋಗಿ ಮುಸ್ಲಿಂ ಆಗಿದ್ದು, ತುರ್ತಾಗಿ ಚಿಕಿತ್ಸೆ ನೀಡಬೇಕಾದವರಾದರೆ ಆಸ್ಪತ್ರೆಅವರನ್ನು ಪರಿಗಣಿಸಲಿದ್ದು, ಆದರೆ ಅವರ ಗಂಟಲು ದ್ರವವನ್ನು ಕೊರೋನಾ ಪರೀಕ್ಷೆಗಾಗಿ ಮೀರತ್ ನ ಮೆಡಿಕಲ್ ಕಾಲೇಜಿಗೆ ಕಡ್ಡಾಯವಾಗಿ ಕಳುಹಿಸಬೇಕು ಮತ್ತು ಅದಕ್ಕಾಗಿ 4500 ರೂಪಾಯಿಯನ್ನು ರೋಗಿ ತೆರಬೇಕು ಎಂದು ಕೂಡ ಜಾಹೀರಾತಿನಲ್ಲಿ ಹೇಳಲಾಗಿದೆ. ಮುಸ್ಲಿಂ ಬಹುಸಂಖ್ಯಾತ ಏರಿಯಾಗಳಲ್ಲಿ ವಾಸಿಸದ ಮುಸ್ಲಿಂ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ನ್ಯಾಯಾಧೀಶರು, ಪೊಲೀಸ್ ಸಿಬ್ಬಂದಿಗಳು, ಶಿಕ್ಷಕರು ಮತ್ತು ಇತರ ಮುಸ್ಲಿಂ ಸಹೋದರರಿಗೆ ಈ ಆದೇಶದಿಂದ ವಿನಾಯಿತಿ ಇದೆ ಎಂದು ಕೂಡ ಜಾಹೀರಾತು ಹೇಳುತ್ತದೆ.
ಈ ಜಾಹೀರಾತಿನ ಮರುದಿನ ಮತ್ತೊಂದು ಜಾಹೀರಾತನ್ನು ದೈನಿಕ್ ಜಾಗರಣ್ ನಲ್ಲಿ ಅದು ಪ್ರಕಟಿಸಿದ್ದು, ಹಿಂದೂ ಮತ್ತು ಜೈನರಲ್ಲಿ ಕ್ಷಮೆ ಕೋರಿದೆ. ಜಿಪುಣರೆಂದು ಗುರುತಿಸಿಕೊಂಡಿರುವ ಶ್ರೀಮಂತ ಜೈನ್ ಮತ್ತು ಹಿಂದೂ ಕುಟುಂಬಗಳು ಪಿ ಎಂ ಕೇರ್ ನಿಧಿಗೆ ದಾನ ನೀಡಬೇಕು ಎಂದು ಈ ಹಿಂದಿನ ಜಾಹೀರಾತಿನ ಕೊನೆಯ ಭಾಗದಲ್ಲಿ ಹೇಳಲಾಗಿತ್ತು.
ಆ ಪದವು ಮುದ್ರಣ ದೋಷದಿಂದಾಗಿ ಆಗಿದ್ದು ಅದು ಉದ್ದೇಶಪೂರ್ವಕವಲ್ಲ, ಅದಕ್ಕಾಗಿ ವಿಷಾದಿಸುತ್ತೇವೆ ಎಂದು ಅದು ಹೇಳಿಕೊಂಡಿದೆ. ಅದೇ ವೇಳೆ ಮುಸ್ಲಿಮರನ್ನು ಚಿಕಿತ್ಸೆಯಿಂದ ಹೊರಗಿಡುವ ಬಗ್ಗೆ ಅದು ಯಾವ ವಿಷಾದವನ್ನೂ ವ್ಯಕ್ತಪಡಿಸಿಲ್ಲ.
ಈ ಕುರಿತು ಕ್ರಮ ಕೈಗೊಳ್ಳುವಂತೆ ಮೀರತ್ ಪೊಲೀಸ್ ಠಾಣೆಯು ಇಂಚೌಳಿ ಪೊಲೀಸ್ ಠಾಣೆಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದೆ. ಹಾಗೆಯೇ, ಈ ಜಾಹೀರಾತಿಗಾಗಿ ಕ್ಷಮೆ ಕೋರುವಂತೆ ಮೀರತ್ ಜಿಲ್ಲಾಡಳಿತವು ಆಸ್ಪತ್ರೆಗೆ ಸೂಚಿಸಿದೆ ಅಥವಾ ನಿಮ್ಮ ಪರವಾನಿಗೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
ನಿರ್ದಿಷ್ಟ ಧರ್ಮ ಮೇಲಿನ ತಾರತಮ್ಯವು ಮೆಡಿಕಲ್ ನಿಯಮವನ್ನು ಉಲ್ಲಂಘಿಸುತ್ತದೆ. ನಾವು ಆಸ್ಪತ್ರೆಗೆ ನೋಟೀಸನ್ನು ಜಾರಿಗೊಳಿಸುತ್ತೇವೆ ಮತ್ತು ಅದು ಸಾರ್ವಜನಿಕವಾಗಿ ಕ್ಷಮೆಯನ್ನು ಕೋರಬೇಕು. ಒಂದು ವೇಳೆ ಅದು ಕ್ಷಮೆ ಕೋರದಿದ್ದರೆ ಧಾರ್ಮಿಕ ತಾರತಮ್ಯದ ಅಡಿಯಲ್ಲಿ ಅದರ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಮೀರತ್ ನ ಆರೋಗ್ಯ ಅಧಿಕಾರಿ ರಾಜಕುಮಾರ್ ಹೇಳಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












