ರಾಹುಲ್ ನೇತೃತ್ವದಲ್ಲಿ ಕೃಷಿ ರಕ್ಷಾ ರ‌್ಯಾಲಿ: ಹರಿಯಾಣ ಸರಕಾರದಿಂದ ತೀವ್ರ ವಿರೋಧ; ತಡೆಯಲು ಸವಾಲೆಸೆದ ಕಾಂಗ್ರೆಸ್

0
584

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.6: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯಲಿರುವ ‘ಕೃಷಿ ರಕ್ಷಾ ರ್ಯಾಲಿಗೆ’ ಹರಿಯಾಣದಲ್ಲಿ ಪ್ರವೇಶಿಸುವುದಕ್ಕೆ ಬಿಜೆಪಿ ಸರಕಾರ ಶರ್ತ ವಿಧಿಸದ್ದನ್ನು ವಿರೋಧಿಸಿ ಕಾಂಗ್ರೆಸ್ ಅದನ್ನು ತಡೆಯುವಂತೆ ಸವಾಲೆಸೆದಿದೆ. ಪಂಜಾಬಿನಲ್ಲಿ ನಡೆಸಿದ ಮೂರು ದಿನಗಳ ರ್ಯಾಲಿಗಳ ಬಳಿಕ ಮಂಗಳವಾರ ಹರಿಯಾಣಕ್ಕೆ ರ್ಯಾಲಿ ಪ್ರವೇಶಿಸಲಿದ್ದು, ಬುಧವಾರ ಹರಿಯಾಣದ ಕುರುಕ್ಷೇತ್ರ, ಕರ್ನಾಲ್‍ಗಳಲ್ಲಿ ರ್ಯಾಲಿ ನಡೆಯಲಿದೆ ಎಂದು ಘೋಷಿಸಲಾಗಿದೆ. ಇದೇವೇಳೆ, ರಾಜ್ಯ ಸರಕಾರ ಶರ್ತ ವಿಧಿಸಿತು.

ರಾಹುಲ್ ಬಂದರೆ ವಿರೋಧವಿಲ್ಲ. ಅವರ ಜೊತೆ ಕಡಿಮೆ ಜನರಿರಬೇಕು. ದೊಡ್ಡ ಸಂಖ್ಯೆಯಲ್ಲಿ ಜನರಿರಬಾರದೆಂದು ಮುಖ್ಯಮಂತ್ರಿ ಮನೋಹರಲಾಲ ಕಟ್ಟರ್ ಹೇಳಿದರು. ಜನರನ್ನು ಕರೆ ತರಲು ಅನುಮತಿಸುವುದಿಲ್ಲ. ರಾಜ್ಯದ ಕಾನೂನು ವ್ಯವಸ್ಥೆಗೆ ಸಮಸ್ಯೆ ಸೃಷ್ಟಿಸಲು ಬಿಡುವುದಿಲ್ಲ ಎಂದು ಕಟ್ಟರ್ ಹೇಳಿದರು.

ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆಗೆ ಜನರೊಂದಿಗೆ ಮಾತಾಡಲು ಎಲ್ಲರಿಗೂ ಹಕ್ಕಿದೆ ಎಂದು ಕಾಂಗ್ರೆಸ್ ಹೇಳಿತು. ರಾಹುಲ್ ಹರಿಯಾಣ ಗಡಿಯಲ್ಲಿ ಬಂದಾಗ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ರೈತರು ಸೇರಿಕೊಳ್ಳಲಿದ್ದಾರೆ. ಇದರಲ್ಲಿ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಪಂಜಾಬ್‍ನಲ್ಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್‍ರ ಜೊತೆ ನಡೆದ ರ್ಯಾಲಿಯಲ್ಲಿ ಸೋಮವಾರ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ರೈತ ವಿರೋಧಿ ಕಾನೂನನ್ನು ಟೀಕಿಸಿದ್ದಾರೆ. ರಾಹುಲ್ ನಡೆಸಿದ ಟ್ರಾಕ್ಟರ್ ರ್ಯಾಲಿಯನ್ನು ಬಿಜೆಪಿ ವ್ಯಂಗ್ಯವಾಡಿದೆ. “ಟ್ರಾಕ್ಟರ್‌ನಲ್ಲಿ ಕುಷನ್ ಹಾಕಿದ ಸೀಟಿನಲ್ಲಿ ಕುಳಿತುಕೊಂಡ ‘ವಿಐಪಿ’ ರೈತನೇ?” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್‍ ಕುರಿತು ವ್ಯಂಗ್ಯವಾಡಿದ್ದಾರೆ.