ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿರುವಾಗ ಆಡಳಿತದಲ್ಲಿ ರಾಜ್ಯಪಾಲರ‌ ಪಾತ್ರ ಅಗತ್ಯವಿಲ್ಲ: ಸರ್ವಪಕ್ಷದ ಸಭೆಯ ಬಳಿಕ ಸಿದ್ದರಾಮಯ್ಯ ಟ್ವೀಟ್

0
453

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಪಾಲರ‌ ಅಧ್ಯಕ್ಷ್ಯತೆಯಲ್ಲಿ ಕರೆಯಲಾಗಿದ್ದ ಸರ್ವ ಪಕ್ಷದ ಸಭೆಯ ಆನ್ ಲೈನ್ ಮೀಟಿಂಗ್ ಬಳಿಕ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಹಾಗೂ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿರುವಾಗ ಆಡಳಿತದಲ್ಲಿ ರಾಜ್ಯಪಾಲರ‌ ಪಾತ್ರ ಅಗತ್ಯವಿಲ್ಲ. ಆದರೂ ರಾಜ್ಯಪಾಲರ ಮೇಲಿನ ಗೌರವದಿಂದ ಭಾಗವಹಿಸಿದೆ ಎಂದು ತಿಳಿಸಿದ್ದಾರೆ.

ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಸ್ಥಿತಿಗಳ ಬಗ್ಗೆ ಚರ್ಚಿಸಲು ಇಂದು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷದ ಸಭೆ ಕರೆಯಲಾಗಿತ್ತು.
ಇದರಲ್ಲಿ ಭಾಗವಹಿಸಿದ ಬಳಿಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ, ಬಹುಮತದ ಸರ್ಕಾರ ಅಸ್ತಿತ್ವದಲ್ಲಿರುವಾಗ ದಿನನಿತ್ಯದ ಆಡಳಿತದಲ್ಲಿ ರಾಜ್ಯಪಾಲರ ಪಾತ್ರ ಇರುವುದಿಲ್ಲ. ರಾಜ್ಯದ ಬಿಜೆಪಿ ಸರಕಾರವು ಹೊಸ ಪರಂಪರೆಗೆ ನಾಂದಿ ಹಾಡಿದೆ. ಇದು ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ. ಹೀಗಿದ್ದರೂ ರಾಜ್ಯಪಾಲರ ಹುದ್ದೆಗೆ ಗೌರವ ಕೊಟ್ಟು ಇಂದಿನ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.

ತಜ್ಞರ ಸಮಿತಿಯ ವರದಿಯ ಆಧಾರದಲ್ಲಿ ಲಾಕ್ ಡೌನ್ ಸಂಬಂಧ ಸರ್ಕಾರ ತೀರ್ಮಾನ ಕೈಗೊಳ್ಳಬೇಕೆಂದು ನಾನು ಇಂದಿನ ಸಭೆಯಲ್ಲಿ ತಿಳಿಸಿದ್ದೇನೆ. ಲಾಕ್‌ಡೌನ್ ಹೇರುವಾಗ ಅದರಿಂದ ಉದ್ಯೋಗ ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ಬಗ್ಗೆಯೂ ಮುಖ್ಯಮಂತ್ರಿ ಯಡಿಯೂರಪ್ಪ ನವರು ಗಂಭೀರವಾಗಿ ಯೋಚಿಸಬೇಕಾಗುತ್ತದೆ ಎಂದು ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.