ಸನ್ಮಾರ್ಗ ವಾರ್ತೆ
ವಾಷಿಂಗ್ಟನ್ : ಕೊರೊನ ವೈರಸ್ ಚೀನಾದ ಲ್ಯಾಬ್ನಿಂದ ಹೊರ ಬಂದಿತ್ತೆಂಬ ನನ್ನ ವಾದ ಸರಿಯೆಂದು ಸಾಬೀತುಗೊಂಡಿದೆ ಎಂದು ಅಮರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದ್ದರಿಂದ ಚೀನ ಹತ್ತು ಟ್ರಿಲಿಯನ್ ಡಾಲರ್ ನಷ್ಟಪರಿಹಾರ ಜಗತ್ತಿಗೆ ಕೊಡಬೇಕೆಂದು ಟ್ರಂಪ್ ಆಗ್ರಹಿಸಿದ್ದಾರೆ. ಚೀನದ ಲ್ಯಾಬ್ನಿಂದ ಹೊರಬಂದಿದೆ ಎಂದು ಕೊರೊನ ವೈರಸ್ ಕುರಿತು ವಾದ ಪುನಃ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಟ್ರಂಪ್ ಮತ್ತೆ ಚರ್ಚೆಯಲ್ಲಿದ್ದಾರೆ.
ಶತ್ರುವೆಂದು ಹೇಳುವವರು ಕೂಡ ಈಗ ನಾನು ಹೇಳಿದ್ದನ್ನು ಸರಿಯೆನ್ನುತ್ತಿದ್ದಾರೆ. ಕೊರೊನ ಮೂಲ ಆಗಿರುವ ನಷ್ಟ ಸಾವುಗಳ ಹೊಣೆಯನ್ನು ಚೀನದ ಮೇಲೆ ಹೊರಿಸಬೇಕು. ಅಮೆರಿಕ ಮತ್ತು ಜಾಗತಿಕ ದೇಶಗಳಿಗೆ ಚೀನ ಹತ್ತು ಟ್ರಿಲಿಯನ್ ಡಾಲರ್ ನಷ್ಟ ಪರಿಹಾರ ಕೊಡಬೇಕೆಂದು ಟ್ರಂಪ್ ಹೇಳಿದರು.
ವೈರಸನ್ನು ಚೀನ ನಿರ್ಮಿಸಿದೆ ಎಂದು ಟ್ರಂಪ್ ಆರಂಭದಿಂದಲೇ ಹೇಳುತ್ತಾ ಬಂದಿದ್ದಾರೆ. ಚೀನ ವೈರಸ್ ಎಂದು ಅವರು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಚೀನದ ಲ್ಯಾಬ್ನಿಂದ ಸಾರ್ಸ್ಕೋವ್-2 ವೈರಸ್ ಹೊರಬಂದಿದೆ ಎಂದು ಬ್ರಿಟಿಷ್ ಸಂಶೋಧಕರು ಆರಂಭದಲ್ಲಿ ವಾದ ಎತ್ತಿದ್ದರು. ನಂತರ ಬಾವಲಿಗಳಿಂದ ಹರಡುತ್ತಿದೆ ಎಂದು ಇವರು ಹೇಳಿದರು. ಆದರೆ, ಲ್ಯಾಬ್ನಿಂದ ವೈರಸ್ ಬಂದಿದೆ ಎಂಬ ವಾದವನ್ನು ವಿಶ್ವಾರೋಗ್ಯ ಸಂಘಟನೆ ಆರಂಭದಿಂದಲ್ಲೇ ನಿರಾಕರಿಸಿದೆ. ಹೊಸ ಶೋಧನೆ ಪ್ರಕಾರ ವೈರಸ್ ಉದ್ಭವದ ಕುರಿತು ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಅಮೆರಿಕ ಅಧ್ಯಕ್ಷ ಜೊ ಬೈಡನ್ ಇಂಟಲಿಜೆನ್ಸ್ ವಿಭಾಗಕ್ಕೆ ಸೂಚಿಸಿದ್ದಾರೆ.












