ಮೆಡಿಕಲ್ ಮಾಫಿಯಾದ ಒತ್ತಡದಿಂದ ಸುಹೈಲ್ ಕಂದಕ್ ಬಂಧನ: SDPI ಖಂಡನೆ

0
692

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರಿನ ಮೆಡಿಕಲ್ ಮಾಫಿಯಾದ ಅಹಂಕಾರದ ವರ್ತನೆ ಹಾಗೂ ಹಗಲು ದರೋಡೆಯನ್ನು ಪ್ರಶ್ನಿಸುವವರನ್ನು ಮಾಫಿಯಾದ ಒತ್ತಡದಿಂದ ಪೊಲೀಸರು ಬಂಧಿಸುತ್ತಿರುವುದು ಖಂಡನೀಯ, ಈ ಮೂಲಕ ಅನ್ಯಾಯವನ್ನು ಪ್ರಶ್ನಿಸುವವರ ಧ್ವನಿಯನ್ನು ದಮನಿಸಬಹುದೆಂದು ಪೊಲೀಸರು ಬಾವಿಸಿದ್ದರೆ ಅದು ಅವರ ಮೂರ್ಖತನ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷದ ನಾಯಕರು ,ಕಾರ್ಯಕರ್ತರು ಸೋಂಕಿನ ಅಪಾಯವನ್ನು ಲೆಕ್ಕಿಸದೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ರಾತ್ರಿ ಹಗಲೆನ್ನದೇ ತಂಡಗಳಾಗಿ ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. ಹಳ್ಳಿಗಳಿಂದ, ಹೊರಜಿಲ್ಲೆ, ಹೊರರಾಜ್ಯಗಳಿಂದ ಚಿಕಿತ್ಸೆಗಾಗಿ ಮಂಗಳೂರಿಗೆ ಬರುವ ರೋಗಿಗಳಿಗೆ ಬೇಕಾದ ನೆರವುಗಳನ್ನು ಇವರು ಒದಗಿಸುತ್ತಿರುವುದು ,ಅದರೊಂದಿಗೆ ಮಂಗಳೂರಿನ ಕೆಲವು ವೈದ್ಯರು ಹಾಗೂ ಆಸ್ಪತ್ರೆಗಳ ಹಗಲು ದರೋಡೆ, ಬೇಕಾಬಿಟ್ಟಿ ಸುಲಿಗೆಯನ್ನು ಪ್ರಶ್ನಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಿ ಕೊಡುತ್ತಿರುವುದು ಆಸ್ಪತ್ರೆ ಮಂಡಳಿಗೆ ನುಂಗಲಾರದ ತುತ್ತಾಗಿದೆ . ಕೋವಿಡ್ ಹೆಸರಿನಲ್ಲಿ ಪ್ಯಾಕೇಜ್‌ ಗಳನ್ನು ಮಾಡಿಕೊಂಡು ಆರೋಗ್ಯ ಕ್ಷೇತ್ರವನ್ನು ಅಪ್ಪಟ ವ್ಯಾಪಾರೀ ಕೇಂದ್ರವಾಗಿಸಿದ ಮಂಗಳೂರಿನ ಆಸ್ಪತ್ರೆಗಳ ಆಹಂನಿಂದ ಕೂಡಿದ ಸರ್ವಾಧಿಕಾರಿ ದೋರಣೆಗೆ ಜಿಲ್ಲೆಯ ಜನತೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಎಸ್ಡಿಪಿಐ ಆಗ್ರಹಿಸುತ್ತಿದೆ.

ಹಣದ ಅಹಂನಲ್ಲಿರುವ ಆಸ್ಪತ್ರೆ ಆಡಳಿತ ಮಂಡಳಿ ನೀಡುವ ದೂರನ್ನು ಕೂಡಲೇ ಪಡೆದು ಸಾಮಾಜಿಕ ಸೇವೆಯಲ್ಲಿ ನಿರತರಾದ ಯುವಕರನ್ನು ಬಂಧಿಸಲು ಅವಸರ ತೋರುವ ಪೊಲೀಸರು ಇತ್ತೀಚೆಗೆ ಮಂಗಳೂರಿನಲ್ಲಿ ಡಾಕ್ಟರ್ ಪ್ರಿಯಾ ಬಲ್ಲಾಳ್ ಹಾಗೂ ಕೆಲವು ವೈದ್ಯರು ಮತ್ತು ಹಲವು ಆಸ್ಪತ್ರೆಗಳ ಅಮಾನವೀಯ ಕ್ರತ್ಯಗಳಿಂದ ಪಡಬಾರದ ಸಂಕಷ್ಟ ಅನುಭವಿಸಿದ ಖತೀಜಾ ಜಾಸ್ಮಿನ್ ಎಂಬ ತುಂಬು ಗರ್ಭಣಿ ಮಹಿಳೆಯ ದೂರನ್ನು ಏಕೆ ಸ್ವೀಕರಿಸಲಿಲ್ಲ, ಈ ವಿಚಾರದಲ್ಲಿ
ಎಸ್ ಡಿ ಪಿ ಐ ಸೇರಿದಂತೆ ಹಲವಾರು ಸಂಘಟನೆಗಳು ಧ್ವನಿಗೂಡಿಸಿದರೂ ಚಕಾರವೆತ್ತದ ಪೊಲೀಸರು ಸಂತ್ರಸ್ತ ಕುಟುಂಬದ ಸದಸ್ಯರನ್ನೇ ಬಂಧಿಸಿ ಮಾನಸಿಕ ಹಿಂಸೆ ನೀಡಿದ್ದು ಗಮನಿಸುವಾಗ ಇಲಾಖೆಯ ಅಧಿಕಾರಿಗಳು ಯಾರ ಪರವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ ಇದನ್ನು ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಬೇಕೆಂದು SDPI ಆಗ್ರಹಿಸುತ್ತಿದೆ.

ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರುವ ಹಳೆಯ ಕಡತಗಳನ್ನು ಪರಿಶೀಲಿಸಿದರೆ ಅನ್ಯಾಯಕ್ಕೊಳಗಾದವರು ವೈದ್ಯರ ಹಾಗೂ ಅಸ್ಪತ್ರೆಗಳ ನಿರ್ಲಕ್ಷ್ಯದ ವಿರುದ್ಧ ನೀಡಿದ ನೂರಾರು ದೂರುಗಳ ಪ್ರತಿಗಳು ಸಿಗಬಹುದು ಆದರೆ ಇಲ್ಲೆಲ್ಲೂ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ಇಂದು ಕಾರ್ಪೊರೇಟ್ ನಿಯಂತ್ರಣದಲ್ಲಿರುವ ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದ ದೂರಿಗೆ ಕೂಡಲೇ ಸ್ಪಂದಿಸಿ ಸುಹೈಲ್ ಕಂದಕ್ ರಂತವರನ್ನು ಬಂಧಿಸಿದ್ದಾರೆ, ಎಂದರೆ ಮೆಡಿಕಲ್ ಮಾಫಿಯಾದ ಕರಾಳ ಬೇರುಗಳು ಎಷ್ಟೊಂದು ಆಳವಾಗಿದೆ ಎಂಬುದು ಮನವರಿಕೆ ಆಗುತ್ತದೆ.

ಜನಸಾಮಾನ್ಯರ ಪರವಾಗಿ ನಿಲ್ಲಬೇಕಾದ ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ರೀತಿ ಅಮಾಯಕರನ್ನ ಬಂಧಿಸಿ ಬಂಡವಾಳಶಾಹಿಯ ಪರವಾಗಿ ನಿಲ್ಲುವುದಾದರೆ ನಾಗರಿಕರು ಇಲಾಖೆ ಮೇಲಿನ ವಿಶ್ವಾಸ ಕಳೆದುಕೊಂಡು ಬೀದಿಗಿಳಿಯ ಬೇಕಾಗಬಹುದು. ಇದಕ್ಕೆ ಅವಕಾಶ ನೀಡದೇ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಕಿಸಿ ಸಂವಿಧಾನ ಬದ್ದವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಇಲ್ಲದಿದ್ದರೆ ಜನಸಾಮಾನ್ಯರ ಪರವಾಗಿ ಅನ್ಯಾಯದ ವಿರುದ್ಧ ವಾಗಿ ಎಸ್ಡಿಪಿಐ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಅಥಾವುಲ್ಲಾ ಎಚ್ಚರಿಕೆ ನೀಡಿದ್ದಾರೆ.