ಕೇರಳ: ಮಾಟಗಾತಿಯ ವಿರುದ್ಧ 15ಕ್ಕೂ ಹೆಚ್ಚು ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರು

0
482

ಸನ್ಮಾರ್ಗ ವಾರ್ತೆ

ಕೇರಳ: ಮಲಯಾಳಪ್ಪುಝದ ಮಾಟಗಾತಿ ವಾಸಂತಿ ಅಮ್ಮ ಮಠಂ ಯಾನೆ ಶೋಭಾ ತಿಲಕ್ ವಿರುದ್ಧ ಹದಿನೈದಕ್ಕೂ ಹೆಚ್ಚು ದೂರುಗಳನ್ನು ಗ್ರಾಮಸ್ಥರು ನೀಡಿದರೂ ಮಲೆಯಾಳಪ್ಪುಝ ಠಾಣೆಯ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ದೂರು ಕೇಳು ಬಂದಿದೆ.

ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದಾಗಿ ಅವರ ಮನೆಗೆ ರಾತ್ರಿ ಹಗಲೆನ್ನದೇ ಅನೇಕ ಜನರು ಬಂದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವರಿಗೆ ಪೂಜೆ ಮಾಡಲು ಮನೆಯ ಪಕ್ಕದಲ್ಲಿ ಮತ್ತು ಮನೆಯೊಳಗೆ ಅಗತ್ಯ ಸ್ಥಳ, ವ್ಯವಸ್ಥೆ ಮಾಡಲಾಗುತ್ತಿದೆ. ರಾತ್ರಿ ವೇಳೆ ಜೋರಾದ ಶಬ್ದ, ಕಿರುಚಾಟ, ಅರಚಾಟ ಕೇಳಿ ಬರುತ್ತಿರುವುದು ನೆರೆಹೊರೆಯವರಲ್ಲಿ ಭೀತಿಯನ್ನು ಹುಟ್ಟುಹಾಕುತ್ತಿದೆ.

ಇವರು ಪೂಜೆ ಆರಂಭಿಸಿ ಹತ್ತು ವರ್ಷಗಳಾಗಿವೆ. ಜನರ ಮೈ ಮೇಲೆ ಬರುವ ಪಿಶಾಚಿ ಬಿಡಿಸಲು ‘ಬೆತ್ತದ ಸೇವೆ’ ಪ್ರಯೋಗ ನಡೆಸುತ್ತಾರೆ. ಇವರ ಏಟು ತಿಂದು ಜನರು ಅರಚುವುದು ಇಲ್ಲಿನ ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಘಟನೆಯಲ್ಲಿ ದೂರು ಕೊಟ್ಟವರ ಮೇಲೆ ದುರ್ಮಂತ್ರವಾದ ಮಾಡಿ ಇಲ್ಲದಾಗಿಸುವೆ, ಗಡಿಪಾರು ಮಾಡಿಸುವೆ ಎಂದು ಬೆದರಿಕೆ ಒಡ್ಡುತ್ತಾರೆ ಎಂದೂ ಆರೋಪಿಸಲಾಗಿದೆ. ಜಿಲ್ಲೆಯ ಹೊರಗಿನಿಂದ ಹಲವರು ಶೋಭಾ ತಿಲಕ್‍ರನ್ನು ಭೇಟಿಯಾಗಲು ಬರುತ್ತಾರೆ. ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ಶೋಭಾ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ವರದಿಯಾಗಿದೆ.

ಇದೇವೇಳೆ, ಎಐವೈಎಫ್ ಮಾಟಗಾತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾರ್ಚ್ ನಡೆಸಿದೆ. ಜಿಲ್ಲಾ ಕಾರ್ಯದರ್ಶಿ ಎಸ್.ಅಖಿಲ್ ಮುಂತಾದವರು ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ಮಾಟಗಾತಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.