ಸನ್ಮಾರ್ಗ ವಾರ್ತೆ
ಮುಂಬಯಿ: ಸಾಕ್ಷ್ಯ, ಪುರಾವೆಗಳಿಲ್ಲದೆ ಪತಿಯ ಮಾನಹಾನಿ ಮಾಡುವ ರೀತಿಯಲ್ಲಿ ಲಂಪಟ, ಮದ್ಯಪಾನಿಯೆಂದು ಆರೋಪಿಸುವುದು ಕ್ರೌರ್ಯ ಎಂದು ಬಾಂಬೆ ಹೈಕೋರ್ಟು ಹೇಳಿದೆ. ಪುಣೆಯ ದಂಪತಿಗಳ ವಿಚ್ಛೇದನ ಪ್ರಕರಣದಲ್ಲಿ ಕೋರ್ಟು ಹೀಗೆ ಹೇಳಿದೆ.
ನಿವೃತ್ತ ಅಧಿಕಾರಿಯಾದ ಪತಿಯೊಂದಿಗೆ ಸಂಬಂಧ ಕಡಿದುಕೊಳ್ಳಲು ಐವತ್ತು ವರ್ಷದ ಮಹಿಳೆ ಸಲ್ಲಿಸಿದ ವಿಚ್ಛೇದನ ಅರ್ಜಿಯಲ್ಲಿ ಜಸ್ಟಿಸ್ ನಿತಿನ್ ಜಮ್ದಾರ್, ಶರ್ಮಿಳಾ ದೇಶ್ಮುಖ್ರನ್ನೊಳಗೊಂಡ ಪೀಠವು ಈ ಟಿಪ್ಪಣಿ ನೀಡಿ ಅಕ್ಟೋಬರ್ ಹನ್ನೆರಡರಂದು ಅರ್ಜಿಯನ್ನು ತಳ್ಳಿಹಾಕಿದೆ. ಹೈಕೋರ್ಟ್ ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗಲೇ ಪತಿ ಸಾವನ್ನಪ್ಪಿದ್ದರು.
ಲಂಪಟ, ಕುಡುಕ ಪತಿಯ ಕಾರಣದಿಂದಾಗಿ ತನಗೆ ದಾಂಪತ್ಯದ ಹಕ್ಕು ನಷ್ಟವಾಗುತ್ತಿದೆ ಎಂದು ಮಹಿಳೆ ಅರ್ಜಿಯಲ್ಲಿ ಆರೋಪಿಸಿದ್ದರು. ಆದರೆ ಪತಿಯ ಕುರಿತು ತಪ್ಪು ಆರೋಪ ಎತ್ತಿದ ಪತ್ನಿಯ ವರ್ತನೆಯು ಪತಿಯ ವರ್ಚಸ್ಸಿಗೆ ಬಾಧೆಯಾಗುತ್ತದೆ ಇದು ಕ್ರೂರತನವೆಂದು ಕೋರ್ಟು ಹೇಳಿತು.
ಸ್ವಂತ ಹೇಳಿಕೆಯಲ್ಲದೆ ಆರೋಪವನ್ನು ಸಾಬೀತು ಪಡಿಸುವ ಇತರ ಯಾವುದೇ ಸಾಕ್ಷ್ಯಗಳನ್ನು ಮಹಿಳೆ ಹಾಜರುಪಡಿಸಿಲ್ಲ ಎಂದು ಹೈಕೋರ್ಟು ಆದೇಶದಲ್ಲಿ ತಿಳಿಸಿದೆ. ಪತಿಯ ಮಾನಹಾನಿ ಮಾಡುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಿದ ಅರ್ಜಿದಾರರು ಅವರನ್ನು ಮಾನಸಿಕವಾಗಿ ನೋಯಿಸಿದ್ದಾರೆ ಎಂದು ಪತಿಯ ಪರ ವಕೀಲರು ವಾದಿಸಿದರು. ಈ ಹಿಂದೆ, “ಪತ್ನಿ ತನ್ನನ್ನು ಮಕ್ಕಳು ಮೊಮ್ಮಕ್ಕಳಿಂದ ಬೇರ್ಪಡಿಸಿದ್ದಾಳೆ” ಎಂದು ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.
ಪ್ರತಿ ಕಕ್ಷಿಗೆ ಮಾನಸಿಕ ವ್ಯಥೆಗೂ, ದುಃಖಕ್ಕೂ ತಳ್ಳುವ ರೀತಿಯಲ್ಲಿ ಅರ್ಜಿದಾರೆಯ ವರ್ತನೆ ಕ್ರೂರತನವಾಗಿದೆ ಎಂದು ಕೋರ್ಟು ಬೆಟ್ಟು ಮಾಡಿತು. ಈ ಕಾರಣದಿಂದ ವಿಚ್ಛೇದನವು ಸರಿಯಾಗಿದೆ ಎಂದು ಕೋರ್ಟು ಆದೇಶಿಸಿದೆ.












