ಗುಜರಾತ್‌ನಲ್ಲಿ ಸಜ್ಜಾದ ಕೇಜ್ರಿವಾಲ್ ಚುನಾವಣಾ ಕಣ: ಪ್ರತಿ ಕುಟುಂಬಕ್ಕೆ ಮಾಸಿಕ 27,000 ರೂ. ಮೌಲ್ಯದ ಸೌಲಭ್ಯ ಘೋಷಣೆ

0
270

ಸನ್ಮಾರ್ಗ ವಾರ್ತೆ

ಅಹಮದಾಬಾದ್: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ 27,000 ರೂ.ಗಳನ್ನು ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗುವುದು ಎಂದರು. ಪಂಚಮಹಲ್‌ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವುದರಿಂದ ಗುಜರಾತ್‌ನ ಪ್ರತಿ ಮನೆಗೆ ಮಾಸಿಕ 27,000 ರೂ. ಮೌಲ್ಯದ ಸೌಲಭ್ಯ ಸಿಗಲಿದೆ. ಉಚಿತ ವಿದ್ಯುತ್ ಮೂಲಕ 3,000, ಉಚಿತ ಆರೋಗ್ಯ ಸೇವೆಯ ಮೂಲಕ 5,000, ನಿರುದ್ಯೋಗ ಭತ್ಯೆ(2 ನಿರುದ್ಯೋಗಿ ಸದಸ್ಯರಿಗೆ) ಮೂಲಕ 6,000 ಮತ್ತು ಮಹಿಳಾ ಸಮ್ಮಾನ್ ರಾಶಿ (3 ಮಹಿಳೆಯರಿಗೆ) ಮೂಲಕ 3,000 ಉಳಿಸಲು ನಮ್ಮ ಸರ್ಕಾರವು ನಿಮಗೆ ಸಹಾಯ ಮಾಡುತ್ತದೆ ”ಎಂದು ಅವರು ಹೇಳಿದರು.

ದೇಶದಲ್ಲಿ ಹಣದುಬ್ಬರ ಅತ್ಯಂತ ಹೆಚ್ಚಾಗಿ ಬಾಧಿಸಿರುವುದು ಗುಜರಾತಿನಲ್ಲಿ. ನಾನು ನಿಮ್ಮನ್ನು ಮೊದಲು ಬೆಲೆಯೇರಿಕೆಯಿಂದ ಬಿಡುಗಡೆಗೊಳಿಸುವೆ. ಮಾರ್ಚ್ ಒಂದರಿಂದ ನೀವು ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ನಿಮಗಾಗಿ ನಾನು ಅದನ್ನು ಮಾಡುವೆ. ಎಎಪಿ ಅಧಿಕಾರಕ್ಕೆ ಬಂದರೆ ಪ್ರತೀ ತಿಂಗಳು 27000ರೂಪಾಯಿ ಸೌಲಭ್ಯವು ನಿಮಗೆ ಸಿಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ಉಚಿತ ಆರೋಗ್ಯ ಸೇವೆ ಸೇರಿದಂತೆ ನಿರುದ್ಯೋಗಿ ಯುವಕರಿಗೆ ತಲಾ 3000 ಹಾಗೂ ಮಹಿಳೆಯರಿಗೆ ತಲಾ 1000 ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು. ಭ್ರಷ್ಟ ಶಾಸಕರು ಮತ್ತು ಸಚಿವರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮೂರು ದಿನಗಳ ಭೇಟಿಗಾಗಿ ಅವರು ಗುಜರಾತ್‌ನಲ್ಲಿದ್ದರು.