ಸನ್ಮಾರ್ಗ ವಾರ್ತೆ
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform civil code) ಜಾರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಮಂಗಳವಾರ (ಜೂನ್ 27) ಸಂಜೆ ನವ ದೆಹಲಿಯಲ್ಲಿ ತುರ್ತು ಸಭೆ ನಡೆಸಿ ಉದ್ದೇಶಿತ ಕಾಯ್ದೆಯನ್ನು ವಿರೋಧಿಸಲು ನಿರ್ಧರಿಸಿದೆ.
ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ವಿಡಿಯೋ ಮೂಲಕ ಸಭೆ ನಡೆಸಿದ್ದು, “ಅದರ ಸದಸ್ಯರು ಯುನಿಪಾರ್ಮ್ ಸೀವಿಲ್ ಕೋಡ್ ಕುರಿತು ಸುಮಾರು ಮೂರು ಗಂಟೆಗಳ ಕಾಲ ಚರ್ಚಿಸಿದರು. ಧರ್ಮ – ಆಧಾರಿತ ವೈಯಕ್ತಿಕ ಕಾನೂನುಗಳು, ಉತ್ತರಾಧಿಕಾರದ ನಿಯಮಗಳು, ದತ್ತು ಮತ್ತು ಉತ್ತರಾಧಿಕಾರವನ್ನು ಬದಲಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಮಂಡಳಿಯ ಸದಸ್ಯರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಜತೆಗೆ, ಯುನಿಫಾರ್ಮ್ ಸೀವಿಲ್ ಕೋಡ್ ನ ಕಾನೂನಾತ್ಮಕ ಆಯಾಮಗಳ ಬಗ್ಗೆಯೂ ಮಂಡಳಿಯ ಸದಸ್ಯರು ಸಮಾಲೋಚಿಸಿದ್ದಾರೆ. ಸದಸ್ಯರು, ವಕೀಲರು ಹಾಗೂ ಪರಿಣತರು ಮುಂದಿಟ್ಟ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಮಂಡಳಿಯು ಈ ವಿಚಾರದ ಬಗ್ಗೆ ಕಾನೂನು ಆಯೋಗಕ್ಕೆ ತನ್ನ ಕ್ರೋಡೀಕರಿಸಿದ ವಾದಗಳ ಕರಡನ್ನು ಸಲ್ಲಿಕೆ ಮಾಡಲು ನಿರ್ಧರಿಸಿದೆ.
ಸಭೆಯಲ್ಲಿ, ಎಐಎಂಪಿಎಲ್ಬಿ ಅಧ್ಯಕ್ಷ ಸಫೀಯುಲ್ಲಾ ರೆಹಮಾನಿ, ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ ಅಧ್ಯಕ್ಷ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಹಾಗೂ ಮಂಡಳಿಯ ಸದಸ್ಯರು, ವಕೀಲರು ಭಾಗವಹಿಸಿದ್ದರು.
ಏಕರೂಪ ನಾಗರಿಕ ಸಂಹಿತೆ ಕಾನೂನು ಸಿದ್ಧಪಡಿಸಲು ಸಮಿತಿಯನ್ನು ಸ್ಥಾಪಿಸುವ ಖಾಸಗಿ ಸದಸ್ಯ ಮಸೂದೆಯನ್ನು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ರಾಜ್ಯ ಸಭೆಯಲ್ಲಿ ಮಂಡಿಸಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಕೂಡ ಇದೇ ರೀತಿಯ ಮಸೂದೆಗಳ ಮಂಡನೆಗೆ ಪಟ್ಟಿ ಮಾಡಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.












