ಸನ್ಮಾರ್ಗ ವಾರ್ತೆ
ನನ್ನ ಬದುಕು ಇಲ್ಲಿಗೇ ಮುಕ್ತಾಯಗೊಳ್ಳುತ್ತಿದೆ ಎಂದು ಭಾವಿಸಿದೆ. ನನ್ನ ಎದುರು ಕತ್ತಲೆ ಆವರಿಸಿದಂತಾಯಿತು. ನನಗೆ ಅಂಡಾಶಯ ಕ್ಯಾನ್ಸರ್ ಎಂದು ಗೊತ್ತಾದಾಗ ಎಲ್ಲರಂತೆ ನಾನೂ ಭಯ ಪಟ್ಟೆ. ನಾನು ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿದ್ದೇನೆ ಅನ್ನುವ ಯಾವ ಸೂಚನೆಯೂ ನನಗೆ ಗೊತ್ತೇ ಆಗಿರಲಿಲ್ಲ. ನನ್ನ ಬದುಕಿನ ಅತಿ ದೊಡ್ಡ ಹೋರಾಟವೆಂದರೆ ಈ ಕ್ಯಾನ್ಸರ್ ನ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾಗಿದೆ ಎಂದು ನಟಿ ಮನೀಷಾ ಕೊಯಿರಾಲ ಹೇಳಿದ್ದಾರೆ.
2012ರಲ್ಲಿ ನಾನು ಕ್ಯಾನ್ಸರ್ ತಪಾಸಣೆಗೆ ಒಳಗಾದೆ. ಅಂಡಾಶಯ ಕ್ಯಾನ್ಸರ್ ತನ್ನ ಕೊನೆಯ ಹಂತದಲ್ಲಿದೆ ಎಂದು ತಿಳಿದು ಬಂತು. ನನ್ನ ದೇಶವಾದ ನೇಪಾಳದಲ್ಲಿ ಈ ಪರೀಕ್ಷೆ ನಡೆಸಿದೆ. ಈ ಕಾಯಿಲೆಯ ಬಗ್ಗೆ ಎರಡು ಮೂರು ವೈದ್ಯರಲ್ಲಿ ವಿಚಾರಿಸಿದ ಬಳಿಕ ನಾನು ಇನ್ನೂ ಹೆಚ್ಚು ಸಮಯ ಬದುಕಲಾರೆ ಎಂದು ಅಂದುಕೊಂಡೆ. ನನ್ನ ಬದುಕಿನ ಕೊನೆಯ ಕಾಲಘಟ್ಟದಲ್ಲಿದ್ದೇನೆ ಎಂದು ಭಾವಿಸಿದೆ ಎಂದು ಮನೀಷಾ ಕೊಯಿರಾಲ ಹೇಳಿದ್ದಾರೆ.
ನನ್ನ ಪರಿಚಿತರಲ್ಲಿ ಒಬ್ಬರು ಈ ಕಾಯಿಲೆಯ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ಹೋಗಿರುವುದು ತಿಳಿದು ಬಂತು. ಹಾಗೆ ಅಮೆರಿಕಕ್ಕೆ ಹೋದೆ. 11 ಗಂಟೆಗಳ ದೀರ್ಘ ಸಮಯದ ಆಪರೇಷನ್ ನಡೆಯಿತು. ಬಳಿಕ ಕಿಮೋಥೆರಪಿಗೆ ಒಳಗಾದೆ. ಹೀಗೆ ಸಾಕಷ್ಟು ಸಮಯವನ್ನು ಕಳೆದೆ. ನನ್ನೆದುರು ಕತ್ತಲೆಯಷ್ಟೇ ಉಳಿದಿತ್ತು ಎಂದು ಅವರು ಹೇಳಿದ್ದಾರೆ.
ಬದುಕು ನನಗೆ ಇನ್ನೊಂದು ಅವಕಾಶ ಕೊಟ್ಟರೆ ನಾನು ಆ ಸಮಯವನ್ನು ಗರಿಷ್ಠ ರೀತಿಯಲ್ಲಿ ಉಪಯೋಗಿಸಿಕೊಳ್ಳುವೆ ಎಂದು ತೀರ್ಮಾನಿಸಿದೆ. ಏಕೆಂದರೆ ಬದುಕು ನನಗೆ ಸಾಕಷ್ಟು ಕೊಟ್ಟಿದೆ. ಆದರೆ ನಾನು ಅವನ್ನೆಲ್ಲಾ ಹಾಳು ಮಾಡಿದ್ದೇನೆ. ಆದ್ದರಿಂದ ಆ ತಪ್ಪನ್ನು ಮರಳಿ ಮಾಡಬಾರದು ಎಂದು ನಿಶ್ಚಯಿಸಿದೆ. ನನ್ನ ವೃತ್ತಿಯಲ್ಲಿ ನಾನು ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಅನಿಸಿತು. ಯಾಕೆಂದರೆ ಸಾಕಷ್ಟು ಕೆಟ್ಟ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಆ ಬಗ್ಗೆ ನನಗೆ ನಿರಾಶೆಯಾಯಿತು. ನನಗೆ ಇನ್ನೊಂದು ಅವಕಾಶ ಸಿಕ್ಕರೆ ಇಂತಹ ತಪ್ಪು ಮಾಡಲಾರೆ ಎಂದು ಅಂದುಕೊಂಡೆ ಎಂದವರು ತನ್ನ ಅನುಭವವನ್ನು ದಾಖಲಿಸಿದ್ದಾರೆ.












