ಸುಮಂತ್ ಎಂಬ ಬಾಲಕನ ಸಂದೇಹಾಸ್ಪದ ಸಾವು ಆಘಾತಕಾರಿ; ಪಾರದರ್ಶಕ ತನಿಖೆಗೆ ಆಗ್ರಹಿಸಿದ ಎಸ್ಐಓ(SIO)

0
814

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 15 ವರ್ಷದ ಸುಮಂತ್ ಎಂಬ ಬಾಲಕನು ಧನುಪೂಜೆಗೆಂದು ತೆರಳಿ, ಬಳಿಕ ತನ್ನ ಮನೆಯ ಸಮೀಪದ ಕೆರೆಯಲ್ಲಿ ಸಂದೇಹಾಸ್ಪದ ರೀತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವುದು ಅತ್ಯಂತ ಆಘಾತಕಾರಿ ಹಾಗೂ ಹೃದಯ ವಿದ್ರಾವಕವಾಗಿದೆ. ಈ ದುರ್ಘಟನೆಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO), ದಕ್ಷಿಣ ಕನ್ನಡ ಜಿಲ್ಲೆ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ.

ಈ ಘಟನೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಮೃತ್ಯುವಿನ ಸುತ್ತಲಿನ ಪರಿಸ್ಥಿತಿಗಳು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದು, ಪೂರ್ಣ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಅಗತ್ಯವಾಗಿದೆ ಎಂದು SIO ಆಗ್ರಹಿಸಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ಮೃತ ಬಾಲಕನ ಕುಟುಂಬಕ್ಕೆ SIO ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಯಾವುದೇ ಒತ್ತಡವಿಲ್ಲದೆ, ತ್ವರಿತ ಹಾಗೂ ನ್ಯಾಯ ಸಮ್ಮತ ತನಿಖೆ ನಡೆಸಿ, ಸತ್ಯವನ್ನು ಶೀಘ್ರವಾಗಿ ಸಾರ್ವಜನಿಕರ ಮುಂದೆ ತರಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಾವು ಬಲವಾಗಿ ಆಗ್ರಹಿಸುತ್ತೇವೆ.

ಮಕ್ಕಳು ಮತ್ತು ಅಪ್ರಾಪ್ತರ ಸುರಕ್ಷತೆ ಸಮಾಜದ ಸಮೂಹ ಜವಾಬ್ದಾರಿಯಾಗಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯ ವಿಳಂಬವಾಗುವುದು ಅಥವಾ ವಿಫಲವಾಗುವುದು ಸಾರ್ವಜನಿಕ ನಂಬಿಕೆಗೆ ಗಂಭೀರ ಧಕ್ಕೆ ಉಂಟು ಮಾಡುತ್ತದೆ. ಸಾರ್ವಜನಿಕರು ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಂಡು, ಊಹಾಪೋಹಗಳಿಗೆ ಒಳಗಾಗದೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ SIO ಮನವಿ ಮಾಡುತ್ತದೆ.

ಮೃತ ಸುಮಂತ್ ಸಾಮಾನ್ಯ ಬಾಲಕನಲ್ಲ; ಆತ ಅತ್ಯಂತ ಪ್ರತಿಭಾವಂತ, ಚುರುಕು ಹಾಗೂ ವಿಜ್ಞಾನಾಸಕ್ತ ವಿದ್ಯಾರ್ಥಿ ಆಗಿದ್ದ. ತನ್ನ ವಿಜ್ಞಾನ ಮಾದರಿಯ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತನಾಗಿದ್ದು, ಫೆಬ್ರವರಿಯಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಸಿದ್ಧತೆ ನಡೆಸುತ್ತಿದ್ದ. ಮುಂದಿನ ಹಂತದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅವಕಾಶಗಳೂ ಅವನ ಮುಂದಿದ್ದವು.

ತನಿಖೆಯ ವೇಳೆ ಪತ್ತೆಯಾದ ಟಾರ್ಚ್‌ನ್ನು ಆತನೇ ವಿವಿಧ ಸಾಮಾಗ್ರಿಗಳನ್ನು ಬಳಸಿ ಸ್ವಯಂ ರೂಪಿಸಿದ್ದಾನೆಂಬುದು, ಅವನ ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆಯ ಪ್ರತಿಬಿಂಬವಾಗಿದೆ. ಸಮಾಜವು ಇಂತಹ ಪ್ರತಿಭಾವಂತ ಬಾಲಕನನ್ನು ಗೌರವಿಸಿ ಸನ್ಮಾನಿಸಬೇಕಿದ್ದ ಸಮಯದಲ್ಲಿ, ಅವನನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ.

ಈ ದುರ್ಘಟನೆಗೆ ಕೆಲವೇ ದಿನಗಳ ಮೊದಲು, ಅವನ ತಂದೆ ಸುಮಂತ್‌ಗೆ ಅಭಿನಂದನೆ ಸಲ್ಲಿಸಿ, “ನಾನು ಇಂತಹ ವೇದಿಕೆಗಳನ್ನು ನೋಡಲು ಸಾಧ್ಯವಾಗಲಿಲ್ಲ. ನೀನು ಮುಂದೆ ಹೋಗಿ, ನಿನ್ನ ಕನಸುಗಳನ್ನು ನನಸಾಗಿಸು, ಜಗತ್ತನ್ನು ನೋಡು” ಎಂದು ಪ್ರೋತ್ಸಾಹಿಸಿದ್ದರು. ಮುಂದಿನ ಸ್ಪರ್ಧೆಗೆಂದು ಮಗನಿಗಾಗಿ ಹೊಸ ಬಟ್ಟೆಗಳನ್ನೂ ಖರೀದಿಸಲಾಗಿತ್ತು. ಸಂಭ್ರಮ ಮತ್ತು ಕನಸುಗಳಿಂದ ತುಂಬಿದ್ದ ಆ ಮನೆಯಲ್ಲೀಗ ಶೋಕದ ಛಾಯೆ ಆವರಿಸಿರುವುದು ಅತೀವ ವೇದನಕಾರಿ. ಇಂತಹ ಪ್ರತಿಭಾವಂತ ಬಾಲಕನ ಕಳೆವು ಕುಟುಂಬಕ್ಕೆ ಮಾತ್ರವಲ್ಲ, ಸಂಪೂರ್ಣ ಸಮಾಜಕ್ಕೆ ಆಗಿರುವ ಅಪಾರ ನಷ್ಟವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮೊಹಮ್ಮದ್ ಮುಸ್ತಫಾ ಪತ್ರಿಕಾ ಪ್ರಕಟಣೆಯಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.