✍️ ಶಾಝಿಲ್ ಉಸ್ಮಾನ್
ಫೆಲೆಸ್ತೀನಿಗೆ ಇಸ್ರೇಲ್ ಮರಣ ದಂಟೆಯನ್ನು ರೂಪಿಸುತ್ತಿದೆ. ಅದರಲ್ಲೊಂದು ಈ ಹಳದಿ ರೇಖೆ. ಇಸ್ರೇಲಿನ ಸೈನಿಕ ನಿಯಂತ್ರಣದ ಪ್ರದೇಶ ಎಂದು ಇಸ್ರೇಲ್ ಅಕ್ರಮವಾಗಿ ನಿರ್ಧರಿಸಿದ ಯೆಲ್ಲೊ ಲೈನ್ ಇದು. ಟ್ರಂಪ್ ನೇತೃತ್ವದಲ್ಲಿ ಗಾಝಾದಲ್ಲಿ ಯುದ್ಧ ವಿರಾಮ ಜಾರಿಯಲ್ಲಿದ್ದರೂ ಇಸ್ರೇಲ್ ಫೆಲಸ್ತೀನಿಯರನ್ನು ಬೇಟೆಯಾಡುವುದನ್ನು ಈ ರೀತಿಯಿಂದಲೂ ಮುಂದುವರಿಸುತ್ತಿದೆ. ಕಳೆದ ಒಂದೇ ದಿನದಲ್ಲಿ ಫೆಬ್ರುವರಿ ಹದಿನಾಲ್ಕಕ್ಕೆ. ಗಾಝಾಪಟ್ಟಿಯಾದ್ಯಂತ ಇಸ್ರೇಲ್ ಸುರಿಸಿದ ಬಾಂಬ್ಗೆ 23 ಮಂದಿ ಮೃತಪಟ್ಟಿದ್ದಾರೆ. ಎಲ್ಲಿಯ ಯುದ್ಧ ವಿರಾಮ ಇದು? ಟ್ರಂಪ್ ಇರಾನನ್ನು ಮಣಿಸಬೇಕಲ್ಲ.
ಮಿತ್ರ ನೆತನ್ಯಾಹುರನ್ನೇ ಹದ್ದು ಬಸ್ತಿನಲ್ಲಿಡಲು ಟ್ರಂಪ್ಗೆ ಸಾಧ್ಯವಾಗುತ್ತಿಲ್ಲ. ಎಫಿಸ್ಟೆನ್ ಫೈಲ್ ಮೂಲಕ ಲಿಂಗ ಶೋಷಣೆ ಮಾಡಿದ ಮೃಗೀಯ ಮನಸ್ಥಿತಿಯ ಟ್ರಂಪ್ ಎಲ್ಲೆಡೆ ಟೀಕೆಗೆ ಒಳಗಾಗಿದ್ದಾರೆ. ಈಗ ಟ್ರಂಪ್ಗೆ ಇಸ್ರೇಲ್ ಇನ್ನಷ್ಟು ತಲೆನೋವು ಕೊಡುತ್ತಿದೆ. ಇಸ್ರೇಲಿನದ್ದು ಫೆಲಸ್ತೀನ್ ಜನಾಂಗ ನಿರ್ಮೂಲನ ದೌತ್ಯ. ಆದ್ದರಿಂದ ಇಸ್ರೇಲ್ ಮಕ್ಕಳನ್ನೇ ಗುರಿಯಾಗಿಟ್ಟು ದಾಳಿ ಮಾಡುವುದು ಹೆಚ್ಚುತ್ತಿದೆ. ಮನೆ ಮಠ ಕಳಕೊಂಡ ಫೆಲಸ್ತೀನಿಯರು ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಫೆಲಸ್ತೀನಿ ಜನರನ್ನು ನಿರ್ನಾಮಗೊಳಿಸಲು ಅದು ಹುಚ್ಚು ಹುಚ್ಚಾಗಿ ವರ್ತಿಸುತ್ತಿದೆ.
ಏನಿದು ಇಸ್ರೇಲಿನ ಹಳದಿ ಲೈನ್:
ಈ ಲೈನಿನ ನೂರು ಮೀಟರ್ ಆಚೆ ಇಸ್ರೇಲಿನ ಸೈನಿಕರು ಇದ್ದಾರೆ. ಕಳೆದ ಡಿಸೆಂಬರ್ನಲ್ಲಿ ಗಾಝಾಕ್ಕೆ ಭೇಟಿ ನೀಡಿದ್ದ ಲೆಫ್ಟಿನೆಂಟ್ ಜನರಲ್ ಇಯಾದ್ ಝಮೀರ್ ಯೆಲ್ಲೊ ಲೈನ್ ಹೊಸ ಗಡಿಯಾಗಿದೆ ಎಂದು ಹೇಳಿದ್ದರು. ದುರಂತ ಅಂದರೆ ಈ ಲೈನ್ ದಿನದಿನಕ್ಕೆ ಬೆಳೆಯುತ್ತಾ ಸಾಗುವುದು. ದಕ್ಷಿಣ ರಫಾದ ನಗರಗಳು ಮತ್ತು ಉತ್ತರ ಬೈತ್ ಹನೂನ್ ಸಹಿತ ಧ್ವಂಸಗೊಳಿಸಲಾದ ಎನ್ಕ್ಲೇವ್ಗಳು ಬಹುತೇಕ ಹೆಚ್ಚಿನೆಲ್ಲ ಭಾಗಗಳ ಸಂಪೂರ್ಣ ನಿಯಂತ್ರಣವನ್ನು ಈ ಯೆಲ್ಲೊ ಲೈನ್ ಇಸ್ರೇಲಿಗೆ ಕೊಡುತ್ತಿದೆ. ಎಲ್ಲೋ ಲೈನ್ ಗಾಝಾದೊಳಗೆ 1.5 ಕಿಲೊ ಮೀಟರ್ನಿಂದ 6.5 ಕಿಲೊ ಮೀಟರ್ ವ್ಯಾಪಿಯನ್ನು ಹೊಂದಿದ ವಾಸ ಪ್ರದೇಶವಾಗಿದೆ. ಕೆಲವು ಕಡೆ ಈ ಯೆಲ್ಲೊ ಲೈನ್ನ ಗುರುತು ಹಿಡಿಯಲು ಆಗುವುದಿಲ್ಲ. ಕೆಲವು ಕಡೆ ಹಳದಿ ಗುರುತುಪಟ್ಟಿ ಇವೆ. ಕೆಲವು ಕಡೆ ನೇರವಾದೊಂದು ಹಳದಿ ಗೀಟು ಇರುತ್ತದೆ. ಇದು ಗಾಝಾದ ದೈನಂದಿನ ಜೀವನಕ್ಕೆ ಕೊಳ್ಳಿ ಇಡುತ್ತಿದೆ. ಇಲ್ಲಿ ಫೆಲಸ್ತೀನಿಯರು ಬರುವಂತಿಲ್ಲ. ಬಂದರೆ ಗುಂಡಿಟ್ಟು ಸಾಯಿಸಲಾಗುತ್ತದೆ.
ಫೆಲಸ್ತೀನಿಯರನ್ನು ಕೊಲ್ಲುವುದಕ್ಕೆ ಅವರ ಭೂಮಿಯನ್ನು ಒಳಗೆ ಹಾಕಲು ಕಂಡು ಹಿಡಿದ ಲೈನ್ ಇದು. ಹೀಗೆ ಯೆಲ್ಲೊ ಲೈನ್ ಕಾರ್ಯಾಚರಣೆಯಲ್ಲಿ ಫೆಲಸ್ತೀನಿಯರನ್ನು ಕೊಂದು ಹಾಕಲಾಗುತ್ತಿದೆ. ಈ ಲೈನ್ನಲ್ಲಿ ಇಸ್ರೇಲ್ ಕಾರ್ಯಾಚರಣೆ ನಡೆಸಿದರೆ ಟ್ರಂಪ್ ಮಾತಾಡುವುದಿಲ್ಲ. ಅದು ಯುದ್ಧ ವಿರಾಮದ ವ್ಯಾಪ್ತಿಯಲ್ಲಿಲ್ಲ ಎಂಬಂತೆ ಅವರು ವರ್ತಿಸುವುದು. ಇಸ್ರೇಲಿನ ಮೃಗೀಯ ನರಮೇಧಕ್ಕೆ ವೈಟ್ ಸರ್ಟಿ ಫಿಕೆಟನ್ನು ವೈಟ್ ಹೌಸ್ ನೀಡುತ್ತಿದೆ ಎಂದರ್ಥ.
ಆದುದರಿಂದ ಈ ಯೆಲ್ಲೊ ಲೈನಿನ ಆಚೆ ಮತ್ತು ಈಚೆ ರಾತ್ರೆಗಳಲ್ಲಿ ಸ್ಫೋಟದ ಸದ್ದುಗಳು ಕೇಳುತ್ತಿವೆ. ಹೀಗೆ ಫೆಲಸ್ತೀನಿಯರ ಮನೆ ಕೆಡವುತ್ತಾರೆ. ಆಕಾಶದಿಂದ ಗುಂಡು ಸುರಿದು ಜನರನ್ನು ಸಾಯಿಸುತ್ತಾರೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಫೆಲಸ್ತೀನಿಯರ ಮನೆ ಕೆಡವಿ ಹಾಕಲಾಗುತ್ತಿದೆ. ಇದನ್ನು ಇಸ್ರೇಲ್ ಯೆಲ್ಲೋ ಲೈನ್ ಕಾರ್ಯಾಚರಣೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಹೀಗೆ ಟ್ರಂಪ್ ಕೇಂದ್ರಿತ ಯುದ್ಧ ವಿರಾಮ ಜಾರಿಗೆ ಬಂದ ನಂತರ ಇಸ್ರೇಲ್ 484 ಮಂದಿಯನ್ನು ಕೊಂದಿದೆ. ಫೆಲಸ್ತೀನಿಯರನ್ನು ನಿರ್ನಾಮ ಮಾಡುವುದಕ್ಕೆ ಇಸ್ರೇಲ್ನ ಏನೆಲ್ಲ ಪ್ಲಾನುಗಳು ವಿವಿಧ ರೂಪದಲ್ಲಿದೆ.
ಫೆಲಸ್ತೀನಿಯರನ್ನು ಕೊಲ್ಲುವುದಕ್ಕಾಗಿ ಇಸ್ರೇಲಿನಲ್ಲಿ ಹೊಸ ಗಲ್ಲು ಶಿಕ್ಷೆ ಮಸೂದೆ:
ಹೀಗೆಂದು ಫೆಲಸ್ತೀನ್ ಕಟು ವಿರೋಧಿಗಳಾದ ಬಲಪಂಥೀಯ ಝಿಯೊನಿಸ್ಟರು ನಂಬಿದ್ದಾರೆ. ಅವರ ಪ್ರಕಾರ ಫೆಲಸ್ತೀನ್ ನಿರ್ನಾಮವಾಗಿ ಅಖಂಡ ಇಸ್ರೇಲ್ ಭೂಮುಖದಲ್ಲಿ ಅಸ್ತಿತ್ವಕ್ಕೆ ಬರುತ್ತದೆ. ಅದಕ್ಕೆ ಹತ್ತಿರದ ಮುಳ್ಳು ಗಾಝ. ದೂರದಲ್ಲಿ ಇರಾನ್ ಮಾತ್ರ ಇರುವುದು. ಟ್ರಂಪ್ರನ್ನು ಕಳುಹಿಸಿ ಇರಾನಿನಲ್ಲಿ ಆಡಳಿತ ಬದಲಿ ಸುವುದು. ಅಲ್ಲಿಗೆ ಹಳೆಯ ಶಾ ಆಡಳಿತ ತರುವುದು. ಇರಾನಿಯರನ್ನು ತುಂಡುಡುಗೆಯ ಲಿಬರಿಸ್ಟ್ಗಳನ್ನಾಗಿ ಬದಲಿಸುವುದು ಇಸ್ರೇಲ್ ಪ್ಲಾನ್ ಆಗಿದೆ. ಏನಿದ್ದರೂ ಇಸ್ರೇಲಿನ ನೆಸೆಟ್ ನಲ್ಲಿ ಅಂದರೆ ಈಗ ಅವರ ಸಂಸತ್ತಿನಲ್ಲಿ ಗಲ್ಲು ಶಿಕ್ಷೆ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದೆ. ತೀವ್ರ ಬಲಪಂಥೀಯರು ಗಲ್ಲು ಶಿಕ್ಷೆ ಬೇಕು ಎಂದು ವಾದಿಸುತ್ತಿದ್ದಾರೆ. ಫೆಲಸ್ತೀನಿ ಕೈದಿಗಳನ್ನು ಗುರಿಯಾಗಿಸಿ ಮಸೂದೆ ಮಂಡನೆಯಾಗಿದೆ ಎಂದು ಅವರು ಹೇಳುತ್ತಿದ್ದಾರೆ.
ಲಿಬರಲ್ಗಳು ಜನಾಂಗೀಯವಾದಿ ವಾಸನೆಯಿರುವ ಈ ಮಸೂದೆ ಖಂಡಿತ ಇಸ್ರೇಲಿಗೆ ಬೇಡ ಎಂದು ಹೇಳುತ್ತಿದ್ದಾರೆ. ಮೃಗೀಯ ಸಂತತಿಗಳು ಇದು ಫೆಲಸ್ತೀನಿಯರನ್ನು ಮುಗಿಸಲು ತರಲಾಗುತ್ತಿದೆ ಎಂಬ ಕಾರಣದಿಂದ ಸಂಭ್ರಮಿಸಿ ಸ್ವಾಗತಿಸಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು. ಜೂಯಿಷ್ ಪವರ್ ಪಾರ್ಟಿ ನೆಸೆಟ್ನಲ್ಲಿ ಮಸೂದೆ ಮಂಡಿಸಿದ್ದು. ಇಸ್ರೇಲಿನ ಅತ್ಯಂತ ಕಟು ಜನಾಂಗೀಯವಾದಿ ಪಾರ್ಟಿ ಎಂದು ಇದು ಗುರುತಿಸಲ್ಪಡುತ್ತಿದೆ.
ವೆಸ್ಟ್ ಬ್ಯಾಂಕಿನಲ್ಲಿರುವ ಸೈನಿಕ ಕೋರ್ಟಿಗೆ ಗಲ್ಲು ಶಿಕ್ಷೆ ನೀಡುವ ಅಧಿಕಾರ ನೀಡಲಾಗುತ್ತಿದೆ. ಕೇವಲ ಬಹುಮತ ಇದ್ದರೆ ಇಸ್ರೇಲಿನ ಪ್ರಜೆಗಳು ಅಥವಾ ಅಲ್ಲಿ ವಾಸಿಸುವವರಿಗೆ ಹಾನಿ ಮಾಡಿದರೆ ಗಲ್ಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಈ ಮಸೂದೆ ಕೊಡುತ್ತಿದೆ. ಎಂತಹದೇ ಕಾನೂನು ತಂದರೂ ಫೆಲಸ್ತೀನಿಯರ ಸ್ವಾತಂತ್ರ್ಯ ಹೋರಾಟವನ್ನು ದಮನಿಸಲು ಈ ಕಳೆದ ಎಪ್ಪತ್ತೈದು ವರ್ಷಗಳಿಂದ ಸಾಧ್ಯವಾಗಿಲ್ಲ ಎಂಬ ಸತ್ಯ ಲಿಬರ್ಗಳಿಗೆ ಅರ್ಥವಾಗಿದೆ. ತೀವ್ರವಾದಿಗಳ ಬುದ್ಧಿಗೆ ಮಂಕು ಕವಿದಿದೆ. ಅವರಿಗೆ ಫೆಲಸ್ತೀನಿಯರನ್ನು ಕೊಂದು ಮುಗಿಸಬೇಕು. ಈ ಮರಣದಂಡನೆ ಶಿಕ್ಷೆಯಿಂದ ಅದು ಸಾಧ್ಯವಾಗಬಹುದಾ? ಖಂಡಿತ ಇದಕ್ಕಿಂತ ಮೂರ್ಖತನ ಬೇರಿಲ್ಲ. ಮನುಷ್ಯರಿಂದ ಮನುಷ್ಯರನ್ನು ಕೊಂದು ಮುಗಿಸಲು ಸಾಧ್ಯವಾಗಿದ್ದರೆ ಒಂದು ನರಹುಳು ಜಗತ್ತಿನಲ್ಲಿ ಉಳಿಯುತ್ತಿರಲಿಲ್ಲ.
ಈಗ ಗಲ್ಲು ಶಿಕ್ಷೆ ಬಗ್ಗೆ:
ಇಸ್ರೇಲಿನ ಕಾನೂನು ತಜ್ಞರು ರಬ್ಬೀಸ್ಗಳು ವೈದ್ಯರು ಮುಂತಾದವರೊಡನೆ ಅಭಿಪ್ರಾಯ ಕೇಳಲಾಗುತ್ತಿದೆ. ಆದರೆ ಇಸ್ರೇಲಿನ ಇತಿಹಾಸದಲ್ಲಿಯೇ ಈ ವರೆಗೆ ಇಬ್ಬರಿಗೆ ಮಾತ್ರ ಮರಣದಂಡನೆ ಆಗಿದೆ. ಒಬ್ಬರು ನಾಝಿ ಅಡಾಲ್ಫ್ ಐಕ್ಮೆನ್ ಹೊಲೊಕಾಸ್ಟ್ಗೆ ಬೆಂಬಲ ನೀಡಿದ ಆರೋಪದಲ್ಲಿ 1960ರಲ್ಲಿ ಮರಣದಂಡನೆ ನೀಡಲಾಗಿತ್ತು. ಅಡಾಲ್ಫ್ ಐಕ್ಮೆನ್ ಅರ್ಜೆಂಟೀನದಲ್ಲಿ ತಲೆ ಮರೆಸಿಕೊಂಡಿದ್ದ. ಮೊಸಾದ್ ಅಲ್ಲಿಂದ ಬಂಧಿಸಿದ ನಂತರ ಇಸ್ರೇಲಿಗೆ ಕರೆ ತರಲಾಗಿತ್ತು. ಇನ್ನೊಬ್ಬರು ಇಸ್ರೇಲಿನಲ್ಲಿ 1948ರಲ್ಲಿ ಕ್ಯಾಪ್ಟನ್ ಆಗಿದ್ದ ಮೇಯ್ರ್ ತೊಬಿಯಾನ್ಸಿಕಿ. ಈತನನ್ನು ದೇಶದ್ರೋಹ ಆರೋಪದಲ್ಲಿ ಮರಣ ದಂಡನೆಗೆ ಗುರಿಮಾಡಲಾಗಿತ್ತು. ಮಿಕ್ಕಂತೆ ಈವರೆಗೂ ಇಸ್ರೇಲಿನ ಮರಣ ದಂಡನೆ ಜಾರಿಯಾಗಿಲ್ಲ. ಹೊಸ ಮರಣದಂಡನೆ ಮಸೂದೆ ಮೊದಲೇ ಪ್ರಸ್ತಾಪದಲ್ಲಿತ್ತು. ಫೆಲಸ್ತೀನ್ ಕೈದಿಗಳ ಹಸ್ತಾಂತರ ಮುಗಿಯುವವರೆಗೆ ಮಸೂದೆ ಮೇಲಿನ ಚರ್ಚೆಯನ್ನು ತಡೆಹಿಡಿಯಲಾಗಿತ್ತು. ಈಗ ಫೆಲಸ್ತೀನಿಯರ ವಿರುದ್ಧ ಮರಣ ದಂಡನೆ ಪ್ರಯೋಗಿಸುವುದಕ್ಕೆ ಸೂಕ್ತ ಸಮಯ ಅಂತ ಇಸ್ರೇಲಿನ ಬಲ ಪಂಥೀಯರು ತೀರ್ಮಾನಿಸಿರಬಹುದು.
ಆದರೆ ಇರಾನ್ ವಿರುದ್ಧ ಅಲ್ಲಿನ ಪ್ರತಿಭಟನಾಕಾರರ ವಿರುದ್ಧ ಮರಣ ದಂಡನೆ ಜಾರಿಗೆ ಬರದಂತೆ ತಡೆಯಲು ಫಾರಸ್ ಕೊಲ್ಲಿಗೆ ಯುದ್ಧ ಹಡಗನ್ನು ಕಳುಹಿಸಿದ ಡೊನಾಲ್ಡ್ ಟ್ರಂಪ್ ಅವರ ಮಿತ್ರ ನೆತನ್ಯಾಹುರ ದೇಶದಲ್ಲಿ ಹೊಸ ಮರಣದಂಡನೆ ಸಂಚಿನಂತೆ ರೂಪುಗೊಳ್ಳುವಾಗ ಮೌನವಾಗಿದ್ದಾರೆ. ಇರಾನ್ ಮರಣದಂಡೆ ಶಿಕ್ಷೆಯನ್ನು ಜಾರಿಗೆ ತರಬಾರದು. ಇಸ್ರೇಲ್ ಏನು ಮಾಡಬಹುದು? ಈ ಇಬ್ಬಂದಿತನಗಳಲ್ಲೇ ವಿಫಲತೆಯ ಬಿಂದು ಇರುವುದು. ಕುಣಿದು ಕುಪ್ಪಳಿಸಿದ ಟ್ರಂಪ್ ಇರಾನ್ನೊಂದಿಗೆ ಮಾತುಕತೆಯ ಟೇಬಲ್ಗೆ ಬಂದು ನಿಂತಿದ್ದಾರೆ. ಇದಕ್ಕಿಂತ ದೊಡ್ಡ ಮುಖ ಭಂಗ ಟ್ರಂಪ್ಗೆ ಏನಿದೆ ಬೇರೆ? ಝಿಯೊನಿಸ್ಟರ ತಾಳಕ್ಕೆ ಕುಣಿದರೆ ಅಮೆರಿಕನ್ ಆಡಳಿತಗಾರರಿಗೆ ಆಗಿದ್ದಿಷ್ಟೇ.
ಗಾಝಾದ ಜನರ ಸ್ಥಿತಿ:
ಯೆಲ್ಲೊ ಲೈನ್ ಬಂದ ಮೇಲೆ ಗಾಝದ ಜನರ ಜೀವನ ಇನ್ನೂ ದುಸ್ತರವಾಗಿದೆ. ಯುದ್ಧದಲ್ಲಿ ಮನೆ ಮಠ ಕಳಕೊಂಡ ವ್ಯಕ್ತಿಗಳು ಇವರು. ಈಗ ಇಸ್ರೇಲ್ ಯೆಲ್ಲೊ ಲೈನ್ ವಿಸ್ತಾರಗೊಳಿಸುತ್ತಿರುವುದರಿಂದ ಅವರಿರುವಲ್ಲಿಂದ ಬೇರೆಲ್ಲಿಗೋ ಹೋಗ ಬೇಕಾಗುತ್ತದೆ. ಗಾಝಾದ ಶೇ. 80ರಷ್ಟು ಜನರು ಒಂದಕ್ಕಿಂತ ಹೆಚ್ಚು ಸಲ ವಾಸ್ತವ್ಯ ಬದಲಿಸಿದ್ದಾರೆ. ಅಧ್ಯಯನಗಳು ತಿಳಿಸುವ ಪ್ರಕಾರ ಹೀಗೆ ಹಲವರು ಈ ಯೆಲ್ಲೊ ಲೈನ್ನಿನ ತಂಟೆಯಿದಾಗಿ ನಾಲ್ಕೈದು ಬಾರಿ ವಾಸ್ತವ್ಯ ಬದಲಿಸಿದ್ದಾರೆ.
ಇಸ್ರೇಲ್ ಹೊಸ ಪೀಳಿಗೆಯ ಮೇಲೆ ಮುಗಿಬೀಳುತ್ತಿದೆ. ಇತ್ತೀಚೆಗೆ ದಕ್ಷಿಣ ಗಾಝಾದ ಕಿಜಾಬ್ ಅಬು ರಶ್ವಾನ್ನಲ್ಲಿ ಸ್ಥಳಾಂತರಗೊಂಡಿದ್ದ ಜನರಿಗೆ ಆಶ್ರಯ ನೀಡಿದ್ದ ಡೇರೆಗಳ ಮೇಲೆ ಇಸ್ರೆಲ್ ಯೆಲ್ಲೊ ಲೈನ್ ಕಾರ್ಯಾಚರಣೆ ಮಾಡಿ ಮಕ್ಕಳನ್ನು ಟಾರ್ಗೆಟ್ ಮಾಡಿತು. ಟ್ರಂಪ್ ಗಾಝಾದಲ್ಲಿ ಯುದ್ಧ ವಿರಾಮ ತಂದೆ ಎಂದು ಹೇಳುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಯುದ್ಧಕ್ಕಿಂತ ಭೀಕರವಾಗಿ ಈಗಲೂ ಮುಂದುವರಿಯುತ್ತಿದೆ. ಒಂದು ಕಡೆ ವಿಶ್ರಾಂತಿ ಪಡೆಯದಂತೆ ಅಲ್ಲಿಂದ ಇಲ್ಲಿಗೆ ಅಟ್ಟಲಾಗುತ್ತದೆ. ಕೊನೆಗೆ ಬಾಂಬು ಸುರಿಸಲಾಗುತ್ತಿದೆ.
ಎರಡು ವರ್ಷಗಳಿಂದ ಫೆಲಸ್ತೀನಿಯರು ಅಪಾರ ಸಂಖ್ಯೆಯಲ್ಲಿ ತಮ್ಮವರನ್ನು ಕಳಕೊಂಡಿದ್ದಾರೆ. ಈವರೆಗೆ ಯುದ್ಧವು 71,657 ಫೆಲಸ್ತೀನಿಯರನ್ನು ಬಲಿ ಪಡೆದುಕೊಂಡಿದೆ.












